ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲೇಕಣಿ ಪರ ಹೆಚ್ಚಿದ ಒಲವು

ಇನ್ಫೊಸಿಸ್‌ ಮಂಡಳಿಗೆ 12 ನಿಧಿ ನಿರ್ವಾಹಕ ಸಂಸ್ಥೆಗಳ ಸಲಹೆ
Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸಹ ಸ್ಥಾಪಕ ಮತ್ತು ಮಾಜಿ ಸಿಇಒ ನಂದನ್‌ ನಿಲೇಕಣಿ ಅವರನ್ನು ಇನ್ಫೊಸಿಸ್‌ನ ನಿರ್ದೇಶಕ ಮಂಡಳಿಗೆ ಮರಳಿ ಕರೆತರಬೇಕು ಎಂದು ದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಪ್ರತಿನಿಧಿಸುವ 12 ನಿಧಿ ನಿರ್ವಾಹಕ ಸಂಸ್ಥೆಗಳು ಸಲಹೆ ನೀಡಿವೆ.

ಐ.ಟಿ ದೈತ್ಯ ಸಂಸ್ಥೆಯಲ್ಲಿ ಸದ್ಯಕ್ಕೆ ಉದ್ಭವಿಸಿರುವ ಬಿಕ್ಕಟ್ಟು ಬಗೆಹರಿಸಲು ಮತ್ತು ಷೇರುದಾರರ ವಿಶ್ವಾಸ ಮರಳಿ ಸ್ಥಾಪಿಸಲು ನಿಲೇಕಣಿ ಅವರನ್ನು ಮರಳಿ ಕರೆತರಬೇಕೆನ್ನುವ ಬೇಡಿಕೆಗೆ ಇದರಿಂದ ಇನ್ನಷ್ಟು ಬಲ ಬಂದಂತಾಗಿದೆ.

ನಿಲೇಕಣಿ ಅವರನ್ನು ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷರನ್ನಾಗಿ ಮರಳಿ ಕರೆತರಬೇಕು ಎಂದು ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್‌ ಅಡ್ವಿಸರಿ ಸರ್ವಿಸಸ್‌ (ಐಐಎಎಸ್‌) ಕಳೆದ ವಾರವೇ ಸಲಹೆ ನೀಡಿತ್ತು.  ಸಿಕ್ಕಾ ಅವರ ಉತ್ತರಾಧಿಕಾರಿ ನೇಮಕ ವಿಷಯದಲ್ಲಿ ನಿರ್ದೇಶಕ ಮಂಡಳಿಯ ಧೋರಣೆಯು ಸಂಪೂರ್ಣ  ಬದಲಾಗಬೇಕು ಎಂದೂ ಹೇಳಿತ್ತು.

‘ಸಂಸ್ಥೆಯಲ್ಲಿನ ಇತ್ತೀಚಿನ ಬೆಳವಣಿಗೆಗಳು ನಮ್ಮೆಲ್ಲರಿಗೂ ತೀವ್ರ ಕಳವಳ ಉಂಟು ಮಾಡಿವೆ’ ಎಂದು 12 ನಿಧಿ ನಿರ್ವಾಹಕರು, ಸಂಸ್ಥೆಯ ಅಧ್ಯಕ್ಷರನ್ನು ಉದ್ದೇಶಿಸಿ ಬರೆದ ಜಂಟಿ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ನಾವು ದೇಶದ ಹಲವಾರು ಪ್ರಮುಖ ಸಾಂಸ್ಥಿಕ ಹೂಡಿಕೆದಾರರನ್ನು ಪ್ರತಿ
ನಿಧಿಸುತ್ತಿದ್ದು,  ಈ ಎಲ್ಲ ಹೂಡಿಕೆದಾರರು ಇನ್ಫೊಸಿಸ್‌ನಲ್ಲಿ ಷೇರುಗಳನ್ನು ಹೊಂದಿದ್ದಾರೆ. ಸೂಕ್ತ ಹುದ್ದೆ ಒಪ್ಪಿಕೊಳ್ಳಲು ಮಂಡಳಿಯು ನಿಲೇಕಣಿ ಅವರಿಗೆ ಆಹ್ವಾನ ನೀಡಬೇಕು ಎನ್ನುವುದು ನಮ್ಮೆಲ್ಲರ ಬಲವಾದ ಆಶಯವಾಗಿದೆ. ಸಾಕಷ್ಟು ವಿಚಾರ ವಿಮರ್ಶೆ ಮತ್ತು ಪರಸ್ಪರ ಚರ್ಚೆ ನಂತರ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ನಿಲೇಕಣಿ ಅವರು ಗ್ರಾಹಕರು, ಷೇರುದಾರರು ಮತ್ತು ಉದ್ಯೋಗಿಗಳು ಸೇರಿದಂತೆ ಎಲ್ಲ ಭಾಗಿದಾರರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಈ ಹಂತದಲ್ಲಿ ನಿರ್ದೇಶಕ ಮಂಡಳಿಗೆ ನಿಲೇಕಣಿ ಅವರು ಸೇರ್ಪಡೆಯಾಗುವುದರಿಂದ  ಎಲ್ಲ ಭಾಗಿದಾರರಲ್ಲಿ  ಸಂಸ್ಥೆ ಬಗೆಗಿನ ವಿಶ್ವಾಸ ದೃಢಗೊಳ್ಳುತ್ತದೆ.

'ಸಂಸ್ಥೆಯು ಈಗ ಎದರಿಸುತ್ತಿರುವ ವಿವಾದಾತ್ಮಕ ವಿಷಯಗಳನ್ನು ಬಗೆಹರಿಸಿಕೊಳ್ಳಲೂನೆವಾಗಲಿದೆ. ನೀವು ನಮ್ಮೆಲ್ಲರ ಭಾವನೆ
ಗಳನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ’ ಎಂದೂ ನಿಧಿ ನಿರ್ವಾಹಕರು ಅಭಿಪ್ರಾಯ ಪಟ್ಟಿದ್ದಾರೆ.

ಐಸಿಐಸಿಐ ‍ಪ್ರುಡೆನ್ಶಿಯಲ್‌ನ ಎಸ್‌. ನರೇನ್‌, ಎಚ್‌ಡಿಎಫ್‌ಸಿ ಎಂಎಫ್‌ನ ಪ್ರಶಾಂತ್‌ ಜೈನ್‌, ರಿಲಯನ್ಸ್‌ ನಿಪ್ಪೊನ್‌ ಲೈಫ್‌ನ ಸುನೀಲ್‌ ಸಿಂಘಾನಿಯಾ, ಎಸ್‌ಬಿಐ ಫಂಡ್ಸ್‌ ಮ್ಯಾನೇಜ್‌ಮೆಂಟ್ಸ್‌ನ  ನವನೀತ್‌ ಮುನೋತ್‌ ಅವರು ಜಂಟಿ ಪತ್ರಕ್ಕೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.

ನಿಲೇಕಣಿ ಅವರು ಸಂಸ್ಥೆಯ ಏಳು ಸಹ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. 2002ರ ಮಾರ್ಚ್‌ನಿಂದ 2007ರ  ಏಪ್ರಿಲ್‌ವರೆಗೆ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಆನಂತರ ಅವರು ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಹಠಾತ್ತಾಗಿ ರಾಜೀನಾಮೆ ನಿರ್ಧಾರ ಪ್ರಕಟಿಸಿರುವ ವಿಶಾಲ್‌ ಸಿಕ್ಕಾ 2014ರ ಜೂನ್‌ನಲ್ಲಿ ಸಂಸ್ಥೆಯ ಪ್ರವರ್ತಕರಲ್ಲದ ಮೊದಲ ಸಿಇಒ ಆಗಿ ಅಧಿಕಾರ
ವಹಿಸಿಕೊಂಡಿದ್ದರು.

ಮಾಜಿ ಸಿಎಫ್‌ಒ ಬಾಲಕೃಷ್ಣನ್‌ ಬೆಂಬಲ

ನಂದನ್‌ ನಿಲೇಕಣಿ ಅವರನ್ನು ಇನ್ಫೊಸಿಸ್‌ ಅಧ್ಯಕ್ಷರನ್ನಾಗಿ ನೇಮಕ ಮಾಡುವುದಕ್ಕೆ ವಿವಿಧ ವಲಯಗಳಲ್ಲಿ ಒಲವು ಹೆಚ್ಚುತ್ತಿರುವಾಗಲೇ, ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ವಿ. ಬಾಲಕೃಷ್ಣನ್‌ ಅವರೂ  ಇದಕ್ಕೆ ದನಿಗೂಡಿಸಿದ್ದಾರೆ.

‘ಗ್ರಾಹಕರ ಕುರಿತ ಅವರ ಅಪಾರ ತಿಳಿವಳಿಕೆ ಮತ್ತು ಅನುಭವವು ಸದ್ಯದ ಪರಿಸ್ಥಿತಿಯಲ್ಲಿ ಸಂಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ನೆರವಾಗಲಿದೆ. ನಿಲೇಕಣಿ ಅವರು ಸಂಸ್ಥೆಗೆ ಮರಳುವುದಾದರೆ ಅಧ್ಯಕ್ಷರಾಗಿಯೇ ಬರಬೇಕು. ಅವರೇ ಅರ್ಹ ಸಿಇಒ ಗುರುತಿಸಬೇಕು. ಸದ್ಯಕ್ಕೆ ಇದೇ ಹೆಚ್ಚು ಸೂಕ್ತವಾದ ಪರಿಹಾರವಾಗಿದೆ’ ಎಂದು ಹೇಳಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಅಧ್ಯಕ್ಷ ಆರ್‌. ಶೇಷಸಾಯಿ ಮತ್ತು ಸಹ ಅಧ್ಯಕ್ಷ ರವಿ ವೆಂಕಟೇಶನ್‌ ಅವರು ಪದತ್ಯಾಗ ಮಾಡಬೇಕು. ನಿಲೇಕಣಿ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಜಾಣ ನಿರ್ಧಾರವಾಗಿರಲಿದೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸಂಸ್ಥೆಯಲ್ಲಿದ್ದಾಗ ನಿಲೇಕಣಿ ತಮ್ಮ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಿದ್ದಾರೆ. ಮಂಡಳಿಗೆ ವಾಪಸ್‌ ಬರಲು ಅವರಿಗೆ ಎಲ್ಲ ಅರ್ಹತೆಗಳಿವೆ’ ಎಂದು ಹೇಳಿರುವ ಅವರು, ‘ಸದ್ಯಕ್ಕೆ  ಸಂಸ್ಥೆಗೆ ನಂದನ್‌ ಮರಳುವುದು ಊಹಾತ್ಮಕವಾಗಿದೆ’ ಎನ್ನುವುದನ್ನು ಸೇರಿಸಲು ಮರೆಯಲಿಲ್ಲ.

8.95 % –ಮ್ಯೂಚುವಲ್‌ ಫಂಡ್‌ಗಳ ಪಾಲು

11.05 % – ವಿಮೆ ಸಂಸ್ಥೆಗಳ ಪಾಲು

1.12 %–ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT