ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರತ್ತಹಳ್ಳಿ ಸುತ್ತಮುತ್ತ ಪ್ರವಾಹ

ಭಾರಿ ಗಾಳಿ ಸಹಿತ ಮಳೆ , ಮನೆಗಳ ಒಳಗೆ ನೀರು
Last Updated 23 ಆಗಸ್ಟ್ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆ ಭಾರೀ ಗಾಳಿ ಸಹಿತ ಮಳೆ ಸುರಿದಿದೆ. ಮಾರತ್ತಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಪ್ರವಾಹದ ಸ್ಥಿತಿ ಉಂಟಾಯಿತು.

ಬೆಳಿಗ್ಗೆಯಿಂದ ನಗರದಲ್ಲಿ ಬಿಸಿಲು ಇತ್ತು. ಸಂಜೆ ಮೋಡ ಕವಿದ ವಾತಾವರಣ ಕಂಡುಬಂದು ಜಿಟಿ ಜಿಟಿಯಾಗಿ ಮಳೆ ಆರಂಭವಾಯಿತು. ಕೆಲ ನಿಮಿಷದಲ್ಲೇ ಮಳೆ ಜೋರಾಗಿ ಸುರಿಯಲಾರಂಭಿಸಿತು.

ಮಾರತ್ತಹಳ್ಳಿ  ಪ್ರದೇಶಗಳಲ್ಲಿ  ಎರಡು ಗಂಟೆ ನಿರಂತರವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲವೂ ಹೊಳೆಯಂತಾದವು. ಅವುಗಳಲ್ಲೇ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ರಸ್ತೆ ಮಧ್ಯೆ ಕೆಟ್ಟು ನಿಂತವು.

ದೊಡ್ಡನೆಕ್ಕುಂದಿ, ಗುರುರಾಜ್ ಲೇಔಟ್‌, ಬಸವನಗರ, ವಿಜ್ಞಾನನಗರ, ಮಾರುತಿನಗರ, ಸರಸ್ವತಿನಗರ, ಎಚ್‌.ಬಿ.ಆರ್‌ ಲೇಔಟ್‌, ಬಾಣಸವಾಡಿಯ ಚೇರ್ಮನ್ ಲೇಔಟ್, ಕೋಡಿ ಚಿಕ್ಕನಹಳ್ಳಿ, ಎಚ್‌.ಎಸ್‌.ಆರ್‌ ಲೇಔಟ್‌, ಬಾಲಾಜಿ ಲೇಔಟ್‌ಗಳಲ್ಲಿರುವ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಕೆಲವು ಮನೆಗಳಲ್ಲಿ 1ಅಡಿಯಿಂದ 3 ಅಡಿಗಳಷ್ಟು ನೀರು ನಿಂತಿತ್ತು.

‘ಮಳೆ ಜೋರಾಗಿ ಸುರಿಯುತ್ತಿದ್ದ ವೇಳೆ ನೀರು ಮನೆಯೊಳಗೆ ನುಗ್ಗಲಾರಂಭಿಸಿತು. ಮಳೆ ಕಡಿಮೆಯಾದಾಗ ಮನೆಯೊಳಗೆ ಮೂರು ಅಡಿಗಳಷ್ಟು ನೀರು ಇತ್ತು. ಅಡುಗೆ ಮನೆ, ಮಲಗುವ ಕೊಠಡಿಗೂ ನೀರು ನುಗ್ಗಿದೆ. ಪೀಠೋಪಕರಣಗಳು ಹಾಗೂ ಬೆಲೆಬಾಳುವ ವಸ್ತುಗಳಿಗೆ ಹಾನಿಯಾಗಿದೆ’ ಎಂದು ಬಾಲಾಜಿ ಬಡಾವಣೆಯ ನಿವಾಸಿಯೊಬ್ಬರು ತಿಳಿಸಿದರು.

‘ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದೆ. ವಿದ್ಯುತ್‌ ಸಂಪರ್ಕ ಕಡಿತವಾಗಿತ್ತು. ಅದೇ ವೇಳೆ ಮಳೆ ಬಂದು, ನೀರು ಮನೆಯೊಳಗೆ ನುಗ್ಗಿತು. ತಡರಾತ್ರಿಯವರೆಗೂ ನೀರು ಕಡಿಮೆಯಾಗಲಿಲ್ಲ. ಕುಟುಂಬದವರೆಲ್ಲ ನಿದ್ದೆ ಮಾಡುವುದನ್ನು ಬಿಟ್ಟು ನೀರು ಹೊರಹಾಕುವುದರಲ್ಲೇ ನಿರತರಾದೆವು’ ಎಂದು ನಿವಾಸಿ ಬಿ. ಸತೀಶ್‌ ಹೇಳಿದರು.

ಬಿಬಿಎಂಪಿ ಸಿಬ್ಬಂದಿಯಿಂದ ಕಾರ್ಯಾಚರಣೆ:

ಬಿಬಿಎಂಪಿ ಸಹಾಯವಾಣಿಗೆ ಮಹದೇವಪುರ ವಲಯದಿಂದ ಬುಧವಾರ ರಾತ್ರಿ 50ಕ್ಕೂ ಹೆಚ್ಚು ಕರೆಗಳು ಬಂದಿವೆ. ಇದೇ ವಲಯದ ಮಾರತ್ತಹಳ್ಳಿಗೆ ಧಾವಿಸಿದ್ದ ಬಿಬಿಎಂಪಿ ಸಿಬ್ಬಂದಿಯು ಮನೆಯೊಳಗೆ ನುಗ್ಗಿದ ನೀರನ್ನು ತೆರವುಗೊಳಿಸಲು ನೆರವಾದರು.

‘ಮಾರತ್ತಹಳ್ಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ದೂರು ಬಂದ ಕೂಡಲೇ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಎಲ್ಲೆಲ್ಲಿ ಎಷ್ಟು ಹಾನಿಯಾಗಿದೆ ಎಂಬುದು ಗುರುವಾರ ಬೆಳಿಗ್ಗೆಯೇ ಗೊತ್ತಾಗಲಿದೆ’ ಎಂದು ಬಿಬಿಎಂಪಿ ಅಧಿಕಾರಿ ಹೇಳಿದರು.

‘ಹಲವೆಡೆ ಒಳಚರಂಡಿ ಹಾಗೂ ಕಾಲುವೆ ದುರಸ್ತಿ ಕೆಲಸ ನಡೆಯುತ್ತಿತ್ತು. ಏಕಾಏಕಿ ಮಳೆ ಬಂದಿದ್ದರಿಂದ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲೆಲ್ಲ ನೀರು ತುಂಬಿಕೊಂಡಿತು. ಆ ಜಾಗದಲ್ಲಿ ಹೆಚ್ಚಾದ ನೀರು, ರಸ್ತೆಯಲ್ಲಿ ಹರಿದು ಮನೆಗಳಿಗೆ ನುಗ್ಗಿದೆ’ ಎಂದು ಅವರು ವಿವರಿಸಿದರು.

ರಾಜಕಾಲುವೆ ಒತ್ತುವರಿ ಕಾರಣ:

‘ಬಾಲಾಜಿ ಲೇಔಟ್‌ ಪಕ್ಕವೇ ರಾಜಕಾಲುವೆ ಇದೆ. ಅದರ ಅಕ್ಕ–ಪಕ್ಕದ ಬಹುಪಾಲು ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಅದರಿಂದ ನೀರು ಸರಾಗವಾಗಿ ಹರಿದುಹೋಗಲು ಜಾಗ ಇಲ್ಲದಂತಾಗಿದೆ. ಮಳೆ ಬಂದಾಗಲೆಲ್ಲ ಆ ನೀರು ರಸ್ತೆಯಲ್ಲಿ ಹರಿದು ಮನೆಗಳಿಗೆ ನುಗ್ಗುತ್ತಿದೆ’ ಎಂದು ನಿವಾಸಿಗಳು ದೂರಿದರು.

‘ಒತ್ತುವರಿ ತೆರವಿಗೆ ಈ ಹಿಂದೆಯೇ ಅಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

3 ಕಡೆ ನೆಲಕ್ಕುರುಳಿದ ಮರಗಳು:

ಹೆಬ್ಬಾಳ, ಆರ್‌.ಟಿ.ನಗರ, ಬೈಯಪ್ಪನಹಳ್ಳಿ, ರಾಜಾಜಿನಗರ, ಮಲ್ಲೇಶ್ವರ, ಪೀಣ್ಯ, ಯಶವಂತಪುರ, ಬಸವನಗುಡಿ, ವಿಜಯನಗರ, ಯಲಹಂಕ, ಜಯನಗರ, ವೈಟ್‌ಫೀಲ್ಡ್‌ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆಯಾಗಿದೆ. ಮಳೆ ವೇಳೆ ಜೋರಾದ ಗಾಳಿ ಬೀಸಿದ್ದರಿಂದ ಪಾದರಾಯಪುರ, ಜಯನಗರದ ಆರ್.ವಿ.ಕಾಲೇಜು ಹಾಗೂ ದೇವಯ್ಯ ಪಾರ್ಕ್‌ ಬಳಿ ಮೂರು ಮರಗಳು ನೆಲಕ್ಕುರುಳಿವೆ.

ಮರ ಬಿದ್ದ ಪ್ರದೇಶಗಳಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸ್ಥಳಕ್ಕೆ ಹೋದ ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ, ಮರ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ದೊಡ್ಡನೆಕ್ಕುಂದಿಯಲ್ಲಿ 85 ಮಿ.ಮೀ ಮಳೆ

‘ಬುಧವಾರ ಸಂಜೆ 5ರಿಂದ ರಾತ್ರಿ 10ರವರೆಗೆ ದೊಡ್ಡನೆಕ್ಕುಂದಿ ಸುತ್ತಮುತ್ತ 85 ಮಿಲಿ ಮೀಟರ್ ಮಳೆ ಸುರಿದಿದೆ. ಮಾರತ್ತಹಳ್ಳಿ ಸುತ್ತಮುತ್ತ 55 ಮಿ.ಮೀ ಮಳೆಯಾಗಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿ ತಿಳಿಸಿದರು.

ವಿದ್ಯುತ್‌ ಸಂಪರ್ಕ ಕಡಿತ

ಮಳೆಯಿಂದಾಗಿ ಮಾರತ್ತಹಳ್ಳಿ, ವೈಟ್‌ಫೀಲ್ಡ್‌, ರಾಜಾಜಿನಗರ, ಮಲ್ಲೇಶ್ವರ, ಬೈಯಪ್ಪನಹಳ್ಳಿ, ಬಾಣಸವಾಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT