ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಪದಾಧಿಕಾರಿಗಳಿಗೆ ಷೋಕಾಸ್ ನೋಟಿಸ್

ಲೋಧಾ ಸಮಿತಿ ಶಿಫಾರಸು ಜಾರಿ ವಿಳಂಬ
Last Updated 23 ಆಗಸ್ಟ್ 2017, 20:25 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರ ಶಿಫಾರಸುಗಳನ್ನು ಜಾರಿ ಮಾಡಲು ವಿಳಂಬವಾಗಿರುವ ಕಾರಣವನ್ನು ನೀಡುವಂತೆ ಪದಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ ಷೋಕಾಸ್ ನೋಟಿಸ್ ನೀಡಿದೆ.

ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ, ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಖಜಾಂಚಿ ಅನಿರುದ್ಧ ಚೌಧರಿ ಅವರಿಗೆ ನ್ಯಾಯಾಲಯವು ನೋಟಿಸ್ ನೀಡಿದೆ. ಸೆಪ್ಟೆಂಬರ್ 19ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಬುಧವಾರ ಈ ಆದೇಶ ನೀಡಿದ. ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರು ಈ ಪೀಠದಲ್ಲಿದ್ದಾರೆ.

‘ಕ್ರಿಕೆಟ್ ಆಡಳಿತ ಸುಧಾರಣೆಗಾಗಿ ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿ ಮಾಡಲು ನಿರ್ದೇಶಿಸಲಾಗಿತ್ತು. ಆದರೆ ನಿಗದಿಪಡಿಸಿದ ಅವಧಿಯೊಳಗೆ  ಶಿಫಾರಸುಗಳನ್ನು ಜಾರಿ ಮಾಡಿಲ್ಲ.ಆದ್ದರಿಂದ  ಮೂವರು ಉನ್ನತ ಪದಾಧಿಕಾರಿಗಳಿಗೆ ಷೋಕಾಸ್ ನೋಟಿಸ್ ನೀಡಲಾಗುವುದು’ ಎಂದು ಪೀಠವು ತಿಳಿಸಿದೆ. ಅನರ್ಹ ಮತ್ತು ಪದಚ್ಯುತ ಪದಾಧಿಕಾರಿಗಳಿಗೆ ಬಿಸಿಸಿಐ ಸಾಮಾನ್ಯ ಸಭೆಗಳಲ್ಲಿ ಭಾಗವಹಿಸಲು ಅವಕಾಶ ನೀಡಿದ್ದನ್ನು ವಿರೋಧಿಸಿ ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಆದಿತ್ಯಕುಮಾರ್ ವರ್ಮಾ ಅವರು ದಾಖಲಿಸಿರುವ ದೂರಿನ ವಿಚಾರಣೆ ನಡೆಸಲಾಗುವುದು. ಈ ವಿಷಯದ ಬಗ್ಗೆಯೂ ಪದಾಧಿಕಾರಿಗಳು ವಿವರಣೆ ನೀಡಬೇಕು ಎಂದು  ನ್ಯಾಯಪೀಠವು ನಿರ್ದೇಶನ ನೀಡಿದೆ.

ಲೋಧಾ ಸಮಿತಿಯ ಪರ ವಾದ ಮಂಡಿಸಿದ ಅಮಿಕಸ್ ಕ್ಯೂರಿ ಗೋಪಾಲ್ ಸುಬ್ರಮಣಿಯನ್ ಅವರು, ‘ಬಿಸಿಸಿಐ ಪದಾಧಿಕಾರಿಗಳು ಶಿಫಾರಸುಗಳನ್ನು ಜಾರಿ ಮಾಡುವುದರಲ್ಲಿ ವಿಫಲರಾಗಿದ್ದಾರೆ’ ಎಂದರು.

‘ಕ್ರಿಕೆಟ್ ಆಡಳಿತ ಸಮಿತಿಯು ಬಿಸಿಸಿಐಗೆ ನಿಯಮಾವಳಿ ಸಿದ್ಧಪಡಿಸಬೇಕು. ಕಳೆದ ಜುಲೈ 24ರಂದು ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆಯೇ ನಿಯಮಾವಳಿ ಸಿದ್ಧವಾಗಬೇಕು’ ಎಂದು ನ್ಯಾಯಪೀಠವು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT