ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಟ್ರಿ ಬಳಗಕ್ಕೆ ಗೆಲುವು

ಫುಟ್‌ಬಾಲ್‌ ಎಎಫ್‌ಸಿ ಕಪ್‌ ಅಂತರ ವಲಯ ಸೆಮಿಫೈನಲ್‌
Last Updated 23 ಆಗಸ್ಟ್ 2017, 20:05 IST
ಅಕ್ಷರ ಗಾತ್ರ

ಬೆಂಗಳೂರು: ನಾಯಕ ಸುನಿಲ್ ಚೆಟ್ರಿ ನಿರಾಸೆ ಮೂಡಿಸಲಿಲ್ಲ. ಅಮೋಘ ಸಾಮರ್ಥ್ಯ ತೋರಿದ ಅವರಿಗೆ ಉದಾಂತ ಸಿಂಗ್ ಮತ್ತು ಲೆನಿ ರಾಡ್ರಿಗಸ್‌ ಉತ್ತಮ ಬೆಂಬಲ ನೀಡಿದರು. ಇದರ ಪರಿಣಾಮ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಜಯದ ನಗೆ ಸೂಸಿತು.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಎಎಫ್‌ಸಿ ಕಪ್‌ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಅಂತರ ವಲಯ ಮೊದಲ ಹಂತದ ಸೆಮಿಫೈನಲ್ ಪಂದ್ಯದಲ್ಲಿ ಚೆಟ್ರಿ ಬಳಗ ಉತ್ತರ ಕೊರಿಯಾದ ‘ಏಪ್ರಿಲ್‌ 25’ ತಂಡವನ್ನು ಏಕಪಕ್ಷೀಯವಾಗಿ (3–0) ಮಣಿಸಿತು. ಸುನಿಲ್ ಚೆಟ್ರಿ ತಂದುಕೊಟ್ಟ ಮೊದಲ ಗೋಲಿನ ಬೆಂಬಲದಲ್ಲಿ ಉದಾಂತ ಸಿಂಗ್‌ ಮತ್ತು ಲೆನಿ ರಾಡ್ರಿಗಸ್‌ ಗಳಿಸಿದ ತಲಾ ಒಂದೊಂದು ಗೋಲು ಬಿಎಫ್‌ಸಿಯ ಸುಲಭ ಜಯಕ್ಕೆ ಕಾರಣವಾಯಿತು.

ಮಳೆ ಮೋಡಗಳು ದಟ್ಟೈಸಿದ್ದರೂ ಗ್ಯಾಲರಿ ಫುಟ್‌ಬಾಲ್ ಪ್ರೇಮಿಗಳಿಂದ ತುಂಬಿತ್ತು. ಪಂದ್ಯ ಆರಂಭಗೊಂಡ ನಂತರ ಮಳೆಯೂ ಸುರಿಯಿತು. ಆದರೂ ಪ್ರೇಕ್ಷಕರು ಕದಲಲಿಲ್ಲ. ಅವರಿಗೆ ಬಿಎಫ್‌ಸಿ ಆಟಗಾರರು ಭರಪೂರ ಮನರಂಜನೆ ನೀಡಿದರು. ಕಂಠೀರವ ಕ್ರೀಡಾಂಗಣದಲ್ಲಿ ಈ ಹಿಂದೆ ಆಡಿದ ಒಟ್ಟು 11 ಪಂದ್ಯಗಳ ಪೈಕಿ ಒಂಬತ್ತರಲ್ಲಿ ಗೆಲುವು ಸಾಧಿಸಿದ್ದ ಬಿಎಫ್‌ಸಿ ಬುಧವಾರವೂ ಭವರವಸೆಯಿಂದಲೇ ಏಪ್ರಿಲ್‌ 25 ತಂಡವನ್ನು ಎದುರಿಸಿತು.

ಆರಂಭದಿಂದಲೇ ಏ.25 ತಂಡದ ಮೇಲೆ ಬಿಗಿ ಹಿಡಿತ ಸಾಧಿಸಿದ ಬಿಎಫ್‌ಸಿ ತಂಡದವರು 32ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಸಂಭ್ರಮಿಸಿದರು. ಪೆನಾಲ್ಟಿ ಕಿಕ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಚೆಟ್ರಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 42ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಲು ಅವರಿಗೆ ಅವಕಾಶ ಇತ್ತು. ಆದರೆ ಇದನ್ನು ಎದುರಾಳಿ ತಂಡದ ಗೋಲ್ ಕೀಪರ್‌ ವಿಫಲಗೊಳಿಸಿದರು.51ನೇ ನಿಮಿಷದಲ್ಲಿ ಉದಾಂತ ಎರಡನೇ ಗೋಲು ಗಳಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಬಲಭಾಗದಲ್ಲಿ ಉತ್ತರ ಕೊರಿಯಾ ತಂಡದ ರಕ್ಷಣಾ ವಿಭಾಗದವರು ಇಲ್ಲದ್ದನ್ನು ಕಂಡ ಉದಾಂತ ಸಿಂಗ್‌ ಚೆಂಡನ್ನು ಡ್ರಿಬಲ್‌ ಮಾಡುತ್ತ ನುಗ್ಗಿದರು. ಎಡಗಾಲಿನಲ್ಲಿ ಮೋಹಕವಾಗಿ ಒದ್ದ ಚೆಂಡು ಎದುರಾಳಿ ತಂಡದ ಗೋಲ್ ಪೆಟ್ಟಿಗೆ ಒಳಗೆ ಸೇರಿತು. 78ನೇ ನಿಮಿಷದಲ್ಲಿ ಲೆನಿ ರಾಡ್ರಿಗಸ್ ಗೋಲು ಗಳಿಸುವುದರೊಂದಿಗೆ ಕೊರಿಯಾ ಆಟಗಾರರ ಸಂಕಟ ಹೆಚ್ಚಿತು. ದೂರದಿಂದ ಚೆಟ್ರಿ ನೀಡಿದ ಕ್ರಾಸ್ ಅನ್ನು ಪಡೆದುಕೊಂಡು ರಾಡ್ರಿಗಸ್‌ ಗೋಲು ಗಳಿಸಿದ ನೋಟ ಮನಮೋಹಕವಾಗಿತ್ತು. ಕೊನೆಯ ನಿಮಿಷಗಳಲ್ಲಿ ಸಮಾಧಾನಕರ ಗೋಲು ಗಳಿಸಲು ಎದುರಾಳಿಗಳು ನಡೆಸಿದ ಶ್ರಮವನ್ನು ಬೆಂಗಳೂರು ತಂಡದವರು ವಿಫಲಗೊಳಿಸಿದರು.

ಅವಕಾಶ ಕೈಚೆಲ್ಲಿದ ಹ್ಯೊಂಗ್‌ ಜಿನ್‌

ಏಪ್ರಿಲ್‌ 25 ತಂಡಕ್ಕೆ 23, 49 ಮತ್ತು 71ನೇ ನಿಮಿಷದಲ್ಲಿ ಗೋಲು ಗಳಿಸುವ ಅವಕಾಶ ಲಭಿಸಿತ್ತು. 23ನೇ ನಿಮಿಷದಲ್ಲಿ ಫ್ರೀ ಕಿಕ್‌ ಮಾಡಿದ ರಿ ಹ್ಯೊಂಗ್ ಜಿನ್‌ ಅವರು ಚೆಂಡನ್ನು ನಿಖರವಾಗಿ ಗೋಲು ಪೆಟ್ಟಿಗೆಯ ಕಡೆಗೆ ತೂರಿಬಿಟ್ಟರು. ಆದರೆ ಹೆಡ್‌ ಮಾಡಲು ಪ್ರಯತ್ನಿಸಿದ ಸಾಂಗ್ ಐ ಎಡವಿದರು. ಚೆಂಡು ಗೋಲುಪೆಟ್ಟಿಗೆಯ ಕ್ರಾಸ್‌ ಬಾರ್‌ಗೆ ಮುತ್ತಿಕ್ಕಿ ವಾಪಸಾಯಿತು.

49ನೇ ನಿಮಿಷದಲ್ಲಿ ಕಿಮ್‌ ಯು ಸಾಂಗ್ ಬೆಂಗಳೂರು ಎಫ್‌ಸಿಯ ರಕ್ಷಣಾ ವಿಭಾಗದ ಮೂವರು ಆಟಗಾರರನ್ನು ವಂಚಿಸಿ ಮುನ್ನುಗ್ಗಿ ಗೋಲು ಗಳಿಸಲು ಯತ್ನಿಸಿದರು. ಆದರೆ ಗೋಲ್‌ ಕೀಪರ್‌ ಗುರ್‌ಪ್ರೀತ್ ಸಿಂಗ್ ಸಂಧು ಎದುರಾಳಿ ತಂಡದ ಆಸೆಗೆ ತಣ್ಣೀರೆರಚಿದರು. 71ನೇ ನಿಮಿಷದಲ್ಲಿ ಕ್ವಾನ್ ಚಿ ಅವರು ಕರಾರುವಾಕ್‌ ಆಗಿ ಪಾಸ್‌ ನೀಡಿದರು. ಆದನ್ನು ಸರಿಯಾಗಿ ಪಡೆದು ಗೋಲು ಪೆಟ್ಟಿಗೆಯೊಳಗೆ ಸೇರಿಸುವಲ್ಲಿ ಬಾಮ್‌ ಅವರು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT