ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ,ಪ್ರಣೀತ್‌ ಪ್ರೀ ಕ್ವಾರ್ಟರ್‌ಗೆ

ಸಬ್ರಿನಾ, ಆ್ಯಂಟನಿ ಎದುರು ಗೆದ್ದ ಭಾರತದ ಆಟಗಾರರು
Last Updated 23 ಆಗಸ್ಟ್ 2017, 20:10 IST
ಅಕ್ಷರ ಗಾತ್ರ

ಗ್ಲಾಸ್ಗೊ: ಸ್ವಿಟ್ಜರ್‌ಲೆಂಡ್‌ನ ಸಬ್ರಿನಾ ಜಾಕ್ವೆಟ್‌ ಅವರನ್ನು ನೇರ ಗೇಮ್‌ಗಳಿಂದ ಮಣಿಸಿದ ಭಾರತದ ಸೈನಾ ನೆಹ್ವಾಲ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರೀಕ್ವಾರ್ಟರ್‌ ಫೈನಲ್‌ ಹಂತ ಪ್ರವೇಶಿಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸಾಯಿಪ್ರಣೀತ್‌ ಇಂಡೊನೇಷ್ಯಾದ ಆ್ಯಂಟನಿ ಸಿನಿಸುಕಾ ಅವರನ್ನು ಮಣಿಸಿ 16ರ ಘಟ್ಟ ಪ್ರವೇಶಿಸಿದರು.

ಕಿದಂಬಿ ಶ್ರೀಕಾಂತ್ ಕೂಡ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಲೂಕಾಸ್ ಕೊರ್ವಿ ಅವರನ್ನು 21–9, 21–17ರಿಂದ ಸೋಲಿಸಿದರು.

ಸೈನಾ ನೆಹ್ವಾಲ್ ಅವರಿಗೆ ಪಂದ್ಯದ ಯಾವುದೇ ಹಂತದಲ್ಲೂ ಸಬ್ರಿನಾ ಸರಿಸಾಟಿಯಾಗಲಿಲ್ಲ. ಆರಂಭದಿಂದಲೇ ಎದುರಾಳಿ ಮೇಲೆ ಆಧಿಪತ್ಯ ಸ್ಥಾಪಿಸಿದ ಸೈನಾ 21–11, 21–12ರಲ್ಲಿ ಜಯ ಸಾಧಿಸಿದರು. ಪಂದ್ಯ ಕೇವಲ 33 ನಿಮಿಷಗಳಲ್ಲಿ ಮುಗಿಯಿತು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲೂ ಸಬ್ರಿನಾ ವಿರುದ್ಧ ಸೈನಾ ಜಯಿಸಿದ್ದರು. ಸೈನಾ ಅವರು ಕಳೆದ ಬಾರಿ ಜಕಾರ್ತದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಸಬ್ರಿನಾ ಅವರು ಯೂರೊಪಿಯನ್‌

ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗಳಿಸಿದ್ದರು. ಇವರಿಬ್ಬರ ನಡುವಣ ಎಮಿರೇಟ್ಸ್ ಅರೇನಾದಲ್ಲಿ ನಡೆದ ಪಂದ್ಯ ಕುತೂಹಲ ಕೆರಳಿಸಿತ್ತು. ಸೈನಾ ಅವರ ಅಮೋಘ ಆಟಕ್ಕೆ ಉತ್ತರ ನೀಡಲು ವಿಫಲರಾದ ಸಬ್ರಿನಾ ಸುಲಭವಾಗಿ ಸೋಲು ಒಪ್ಪಿಕೊಂಡರು.

ಸೈನಾ ಆರಂಭದಲ್ಲಿ 4–0ಯಿಂದ ಮುನ್ನಡೆ ಸಾಧಿಸಿ ಎದುರಾಳಿ ಮೇಲೆ ಒತ್ತಡ ಹೇರಲು ಯಶಸ್ವಿಯಾದರು. ಈ ಸಂದರ್ಭದಲ್ಲಿ ಪ್ರತಿ ಹೋರಾಟ ನಡೆಸಿದ ಸಬ್ರಿನಾ ಆರು ಪಾಯಿಂಟ್‌ ಕಲೆ ಹಾಕಿದರು. ಆದರೆ ಅಷ್ಟರಲ್ಲಿ ಸೈನಾ ಅವರ ಖಾತೆಗೆ 11 ಪಾಯಿಂಟ್‌ಗಳು ಸೇರಿದ್ದವು. ಅಂತಿಮ ಕ್ಷಣಗಳಲ್ಲಿ ನಿರಂತರ ಐದು ಪಾಯಿಂಟ್ ಕಲೆ ಹಾಕಿದ ಸೈನಾ ಇನ್ನಷ್ಟು ಮಿಂಚಿದರು. 14 ನಿಮಿಷಗಳಲ್ಲಿ ಗೇಮ್‌ಗೆ ಕೊನೆ ಹಾಡಿದರು.

ಎರಡನೇ ಗೇಮ್‌ನ ಆರಂಭದಲ್ಲೂ ಸೈನಾ ಅಮೋಘ ಆಟ ಆಡಿ 5–2ರ ಮುನ್ನಡೆ ಗಳಿಸಿದರು. ವಿರಾಮದ ವೇಳೆಗೆ ಇದು 11–7ಕ್ಕೆ ಏರಿತು. ಪ್ರಬಲ ಸ್ಮ್ಯಾಷ್‌ಗಳನ್ನು ಸಿಡಿಸಿದ ಅವರು ಸುಲಭವಾಗಿ ಗೇಮ್‌ ಹಾಗೂ ಪಂದ್ಯವನ್ನು ಗೆದ್ದರು. ಮುಂದಿನ ಸುತ್ತಿನಲ್ಲಿ ಸೈನಾ ನೆಹ್ವಾಲ್‌ ಅವರಿಗೆ ಎರಡನೇ ಶ್ರೇಯಾಂಕದ ಕೊರಿಯಾ ಆಟಗಾರ್ತಿ ಸಂಗ್ ಜಿ ಹ್ಯೂನ್‌ ಅವರ ಸವಾಲು ಎದುರಾಗಲಿದೆ.

(ಸಾಯ್ ಪ್ರಣೀತ್ ಅವರ ಆಟದ ಶೈಲಿ)

ಪ್ರಣೀತ್‌ಗೆ ಆರಂಭಿಕ ಆಘಾತ

ಸಾಯಿಪ್ರಣೀತ್ ಅವರಿಗೆ ಜಯ ಸುಲಭವಾಗಿ ಒಲಿಯಲಿಲ್ಲ. ಮೊದಲ ಗೇಮ್‌ನಲ್ಲಿ ಅವರನ್ನು ಹಿಂದಿಕ್ಕಿದ ಆ್ಯಂಟನಿ ಉಳಿದೆರಡು ಗೇಮ್‌ಗಳಲ್ಲೂ ಪ್ರಬಲ ಸ್ಪರ್ಧೆ ಒಡ್ಡಿದರು. ಒಂದು ತಾಸು 12 ನಿಮಿಷ ನಡೆದ ಪಂದ್ಯದಲ್ಲಿ ಪ್ರಣೀತ್‌ 14–21, 21–18, 21–19ರಿಂದ ಜಯ ಸಾಧಿಸಿದರು.

ಮೊದಲ ಗೇಮ್‌ನಲ್ಲಿ ಪ್ರಣೀತ್ ಅವರನ್ನು ದಂಗುಬಡಿಸಿದ ಆ್ಯಂಟನಿ ಆರಂಭದಲ್ಲೇ 8–0ಯಿಂದ ಮುನ್ನಡೆ ಸಾಧಿಸಿದರು. ನಂತರ ಇದನ್ನು 16–6ಕ್ಕೆ ಏರಿಸಿದರು. ಈ ಅಂತರವನ್ನು ಸರಿದೂಗಿಸಲು ಪರದಾಡಿದ ಪ್ರಣೀತ್‌ ಸೋಲೊಪ್ಪಿಕೊಂಡರು. ಆದರೆ ಎರಡನೇ ಗೇಮ್‌ನಲ್ಲಿ ಅವರು ತಮ್ಮ ನೈಜ ಆಟವಾಡಿದರು. 14–12ರಿಂದ ಮುನ್ನಡೆ ಗಳಿಸಿದ್ದಾಗ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಾಯಿತು. ನಾಲ್ಕು ಪಾಯಿಂಟ್‌ಗಳನ್ನು ಕಲೆ ಹಾಕಿದ ಆ್ಯಂಟನಿ 16–15ರ ಮುನ್ನಡೆ ಸಾಧಿಸಿ ಬೀಗಿದರು. ಇದರಿಂದ ಕಂಗೆಡದ ಪ್ರಣೀತ್‌ ವೀರೋಚಿತ ಆಟವಾಡಿ ಪಂದ್ಯವನ್ನು ನಿರ್ಣಾಯಕ್ಕೆ ಘಟ್ಟಕ್ಕೆ ಕೊಂಡೊಯ್ದರು.

ಅಂತಿಮ ಗೇಮ್‌ನ ಆರಂಭದಲ್ಲಿ ಪ್ರಣೀತ್‌ಗೆ 6–2ರ ಮುನ್ನಡೆ ಲಭಿಸಿತು. ನಂತರ ಈ ಮುನ್ನಡೆ 11–9ಕ್ಕೆ ಏರಿತು. ಆದರೆ ವಿರಾಮದ ನಂತರ ಆ್ಯಂಟನಿ 18–12ರ ಮುನ್ನಡೆ ಗಳಿಸಿ ಪಂದ್ಯ ಗೆಲ್ಲುವತ್ತ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಅಮೋಘ ಆಟವಾಡಿದ ಪ್ರಣೀತ್ 20–18ರ ಮುನ್ನಡೆ ಗಳಿಸಿದರು. ನಂತರ ಪಂದ್ಯ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT