ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃದು ಮನಸಿನ ‘ಸಾಹೇಬ’

Last Updated 24 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದ ಹಲವು ಮೊದಲುಗಳಲ್ಲಿ ತಮ್ಮ ರುಜು ಒತ್ತಿರುವ ನಟ, ನಿರ್ದೇಶಕ ರವಿಚಂದ್ರನ್‌. ಇದೀಗ ಅವರ ಮಗ ಮನೋರಂಜನ್‌ ಕೂಡ ಬಣ್ಣದ ಜಗತ್ತಿನಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಭರತ್‌ ಗೋಪಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಮನೋರಂಜನ್‌ಗೆ ಮುದ್ದು ಮುಖದ ಬೆಡಗಿ ಶಾನ್ವಿ ಶ್ರೀವಾಸ್ತವ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

ತಂದೆಯ ಜನಪ್ರಿಯತೆಯ ಭಾರ ಮತ್ತು ತಮ್ಮೊಳಗಿನ ನಟನೆಯ ತುಡಿತ ಎರಡನ್ನೂ ಮನೋರಂಜನ್‌ ಸವಾಲಾಗಿಯೇ ಸ್ವೀಕರಿಸಿದ್ದಾರೆ. ತಮ್ಮೊಳಗೆ ತಮಗೇ ಗೊತ್ತಿಲ್ಲದೇ ಹುಟ್ಟಿಕೊಂಡ ನಟನೆಯ ವ್ಯಾಮೋಹ ಅವರನ್ನು ‘ಸಾಹೇಬ’ನನ್ನಾಗಿಸುತ್ತಿದೆ. ಮೃದು ಮನಸ್ಸಿನ ಹುಡುಗನಾಗಿಯೇ ಪ್ರೇಕ್ಷಕರ ಮನಸ್ಸಿನೊಳಗೆ ಅಡಿಯಿಟ್ಟು ನಂತರ ಭಿನ್ನ ಪಾತ್ರಗಳಲ್ಲಿ ಅಬ್ಬರಿಸುವ ಆಲೋಚನೆ ಅವರದ್ದು.

* ‘ಸಾಹೇಬ’ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದೀರಿ. ಹೇಗನಿಸುತ್ತಿದೆ?
ತುಂಬಾ ರೋಮಾಂಚಿತನಾಗಿದ್ದೇನೆ. ಈ ಚಿತ್ರ ಮೊದಲೇ ಬಿಡುಗಡೆಯಾಗಬೇಕಿತ್ತು. ತಡವಾಗಿದ್ದಕ್ಕೆ ಸ್ವಲ್ಪ ಜನಕ್ಕೆ ಕೋಪವೂ ಇದೆ. ಇಂದು ಸಿನಿಮಾ ಬಿಡುಗಡೆಯಾಗಿ ನೋಡಿದ ಮೇಲೆ ಅವರ ಕೋಪ ಮರೆತು ಖುಷಿಪಡುತ್ತಾರೆ ಎಂಬ ನಂಬಿಕೆ ಇದೆ.

* ನಟನೆಗೆ ಬರುವುದು ನಿಮ್ಮ ಆಸಕ್ತಿಯೇ ಆಗಿತ್ತಾ? ಅಥವಾ ತಂದೆಯ ಪ್ರಭಾವವಾ?
ಈ ಪ್ರಶ್ನೆಗೆ ನನ್ನ ಬಳಿಯೂ ಉತ್ತರವಿಲ್ಲ. ನಾನು ಮೊದಲಿನಿಂದ ಕ್ರಿಕೆಟಿಗ ಆಗಬೇಕು ಅಂತಲೇ ಅಂದುಕೊಂಡಿದ್ದವನು. ಕಾಲೇಜಿನಲ್ಲಿರುವಾಗ ಸಿನಿಮಾ ಕಡೆಗೆ ಆಸಕ್ತಿ ಹುಟ್ಟಿತು. ಅದು ಹೇಗೆ? ಅದಕ್ಕೆ ಕಾರಣ ಏನು? ಯಾವ ಪ್ರಭಾವ ಎನ್ನುವುದೆಲ್ಲ ನನಗೂ ಗೊತ್ತಿಲ್ಲ. ಆ ಪ್ರಶ್ನೆಗಳಿಗೆ ನಾನೂ  ಇನ್ನು ಮೇಲೆ ಉತ್ತರ ಕಂಡುಕೊಳ್ಳಬೇಕು. 

* ನಟನೆಗೆ ಬರಲು ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದೀರಿ?
ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಬಂದಿದ್ದೇನೆ. ನಟನಾ ತರಗತಿಗೆ ಹೋಗಿದ್ದೇನೆ. ‘ಅಭಿನಯ ತರಂಗ’ ರಂಗತಂಡದಲ್ಲಿ ಮೂರು ನಾಲ್ಕು ನಾಟಕ ಮಾಡಿದ್ದೇನೆ. ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಚೆನ್ನೈಗೆ ಹೋಗಿ ಡಾನ್ಸ್‌ ತರಬೇತಿ ಪಡೆದುಕೊಂಡು ಬಂದಿದ್ದೇನೆ. ಹಾಗೆಯೇ ಫೈಟ್‌ ಕುರಿತೂ ತರಬೇತಿ ಪಡೆದುಕೊಂಡಿದ್ದೀನಿ. ಸಿನಿಮಾ ನಟನೆಗೆ ಅವಶ್ಯವಿರುವ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡೇ ಸಿನಿಮಾ ರಂಗಕ್ಕಿಳಿದಿದ್ದೇನೆ.

* ಇಷ್ಟೊಂದು ಸಿದ್ಧತೆ ಮಾಡಿಕೊಳ್ಳುವುದು ಯಾಕೆ ಅವಶ್ಯ ಅನಿಸಿತು?
ಸಿದ್ಧತೆ ಇಲ್ಲದೆ ಯಾವ ಕೆಲಸವನ್ನೂ ಮಾಡಬಾರದು ಎಂಬುದು ನನ್ನ ನಂಬಿಕೆ. ನನ್ನ ತಂದೆಯೂ ಅದನ್ನೇ ಹೇಳಿದರು. ನಾನು ನಟನೆ ಮಾಡುತ್ತೇನೆ ಎಂದಾಗ ‘ಈಗ ಚಿತ್ರರಂಗ ಮೊದಲಿನ ರೀತಿ ಇಲ್ಲ. ಪೈಪೋಟಿ ಸಾಕಷ್ಟಿದೆ. ಎಲ್ಲರೂ ಸಾಕಷ್ಟು ಪರಿಣತಿ ಗಳಿಸಿಯೇ ಬಂದಿರುತ್ತಾರೆ. ಒಬ್ಬ ನಟ ಡಾನ್ಸ್‌ ಚೆನ್ನಾಗಿ ಮಾಡುತ್ತಾನೆ, ಇನ್ನೊಬ್ಬ ಫೈಟ್‌, ಇನ್ನೊಬ್ಬ ಆ್ಯಕ್ಟಿಂಗ್‌ ಹೀಗೆ ಒಬ್ಬೊಬ್ಬರೂ ಒಂದೊಂದುವ ವಿಷಯದಲ್ಲಿ ಪರಿಣತಿ ಸಾಧಿಸಿರುತ್ತಾರೆ. ಅವರ ಮಧ್ಯೆಯೂ ನೀನು ಗೆಲ್ಲಬೇಕು ಎಂದರೆ ಈ ಎಲ್ಲ ವಿಭಾಗಗಳಲ್ಲಿಯೂ ಸಮರ್ಥನಾಗಿರಬೇಕು’ ಎಂದು ಹೇಳಿದರು. ನನಗೂ ಅದು ನಿಜ ಅನ್ನಿಸಿತು. ಆದ್ದರಿಂದ ಯಾವುದಕ್ಕೂ ಅವಸರ ಮಾಡದೆ ಎಲ್ಲ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಂಡೇ ಚಿತ್ರರಂಗಕ್ಕೆ ಬಂದಿದ್ದೇನೆ.

* ತಂದೆಯ ಜನಪ್ರಯತೆ ನಿಮಗೆ ಭಾರ ಅನಿಸಿದೆಯೇ?
ಖಂಡಿತ ಇಲ್ಲ. ನಾನು ತುಂಬ ಕಡೆಗಳಲ್ಲಿ ನಾನು ರವಿಚಂದ್ರನ್‌ ಮಗ ಎಂದು ಹೇಳಿಕೊಳ್ಳುವುದೇ ಅಲ್ಲ. ತಂದೆಯ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳುವುದಿಲ್ಲ. ಈಗ ಸಾಹೇಬ ಸಿನಿಮಾ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿಯೇ ನನ್ನನ್ನು ರವಿಚಂದ್ರನ್‌ ಮಗ ಎಂದು ಜನರು ಗುರ್ತು ಹಿಡಿಯುತ್ತಿದ್ದಾರೆ. ಸಿನಿಮಾ ವಿಷಯಕ್ಕೆ ಬಂದರೆ, ಜನರ ನಿರೀಕ್ಷೆಯಂತೂ ಇದ್ದೇ ಇರುತ್ತದೆ. ಚಿತ್ರಮಂದಿರಲ್ಲಿ ಜನರು ನನ್ನನ್ನೇ ಬಹುಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಾನು ಸಣ್ಣ ತಪ್ಪು ಮಾಡಿದರೂ ‘ರವಿಚಂದ್ರನ್‌ ಮಗ ಚೆನ್ನಾಗಿ ನಟಿಸಲ್ಲ’ ಅಂದು ಬೈದುಬಿಡುತ್ತಾರೆ. ಆ ಭಯವಂತೂ ಇದ್ದೇ ಇದೆ. ನಟನೆಯ ಮೂಲಕವೇ ಅದನ್ನು ಮೀರುವ ಪ್ರಯತ್ನವನ್ನೂ ಮಾಡಿದ್ದೇನೆ.

* ನಿಮ್ಮ ನಟನಾಜೀವನದ ಮೊದಲ ಸಿನಿಮಾ ಆಗಿ ‘ಸಾಹೇಬ’ವನ್ನೇ ಆಯ್ದುಕೊಳ್ಳಲು ಏನು ಕಾರಣ?
ಈ ಚಿತ್ರದಲ್ಲಿ ತುಂಬ ಮೃದು ಸ್ವಭಾವದ ಹುಡುಗನ ಪಾತ್ರ ನನ್ನದು. ಮಾಮೂಲಿ ಹೀರೊ ರೀತಿ ಹೊಡೆಯುವುದು ಬಡಿಯುವುದು, ರೌಡಿಗಳನ್ನು ಅಟ್ಟಿಸಿಕೊಂಡು ಹೋಗುವುದು ಏನೂ ಇಲ್ಲ. ಅಂಥ ಹೀರೊಯಿಸಂ ಸಿನಿಮಾ ಬೇಡ ಎಂದೇ ನಾನೂ ಅಂದುಕೊಂಡಿದ್ದೆ. ತಂದೆಯೂ ‘ಮೊದಲು ನೀನು ಕೌಟುಂಬಿಕ ಕಥೆಯ ಮೂಲಕವೇ ಚಿತ್ರರಂಗ ಪ್ರವೇಶ ಮಾಡು. ನಂತರ ಬೇರೆ ರೀತಿ ಸಿನಿಮಾ ಮಾಡು’ ಎಂದು ಸಲಹೆ ಕೊಟ್ಟಿದ್ದರು. ಅದೇ ಸಮಯಕ್ಕೆ ಸರಿಯಾಗಿ ‘ಸಾಹೇಬ’ದ ಕಥೆ ನಮ್ಮ ನಿರೀಕ್ಷೆಗೆ ಸರಿಯಾಗಿ ಹೊಂದುತ್ತಿತ್ತು. ಈ ಸಿನಿಮಾದಲ್ಲಿ ಕಥೆಯೇ ಹೀರೊ. ಅದರಲ್ಲಿ ನಾನೂ ಒಂದು ಪಾತ್ರ ಮಾಡಿದ್ದೀನಿ ಅಷ್ಟೆ.

* ಇನ್ನು ಮುಂದೆ ಯಾವ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೀರಾ?
ನಾನು ಎಲ್ಲ ರೀತಿಯ ಜನರಿಗೂ ತಲುಪಬೇಕು. ’ಕನಸುಗಾರ’, ‘ಯಾರೇ ನೀನು ಚೆಲುವೆ’ಗಳಂಥ ದೊಡ್ಡ ಹಿಟ್‌ ಆದ ಸಿನಿಮಾಗಳ ಸಾಲಿನಲ್ಲಿಯೇ ‘ಸಾಹೇಬ’ ಕೂಡ ನಿಲ್ಲುತ್ತದೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಹಿಡಿದಿಡುವ ಶಕ್ತಿ ಈ ಸಿನಿಮಾದಲ್ಲಿದೆ. ಇನ್ನು ಮುಂದೆಯೂ ಭಿನ್ನ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ನನ್ನ ಆಸೆ. ‘ಸಾಹೇಬ’ದ ನಂತರ ಬರುತ್ತಿರುವ ನಂದಕಿಶೋರ್‌ ನಿರ್ದೇಶನದ ‘ವಿಐಪಿ’ ಚಿತ್ರದ ರೀಮೇಕ್‌ನಲ್ಲಿ ಇದಕ್ಕಿಂತ ಪೂರ್ತಿ ಬೇರೆಯದೇ ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅದರ ನಂತರ ಇನ್ನೊಂದು ಸಿನಿಮಾದ ಚರ್ಚೆ ನಡೆಯುತ್ತಿದೆ. ಅದು ಈ ಎರಡೂ ಸಿನಿಮಾಗಳಲ್ಲಿನ ಪಾತ್ರಗಳಿಗಿಂತ ಬೇರೆಯದೇ ಬಗೆಯದ್ದು. ಹೀಗೆ ವೈವಿಧ್ಯ ಪಾತ್ರಗಳ ಮೂಲಕವೇ ಗುರ್ತಿಸಿಕೊಳ್ಳುತ್ತೇನೆ.

* ನಿರ್ದೇಶನ, ಅಥವಾ ಬೇರೆ ವಿಭಾಗಗಳಲ್ಲಿ ತೊಡಗಿಕೊಳ್ಳುವ ಆಲೋಚನೆ ಇದೆಯಾ?
ಇಲ್ಲ ಇಲ್ಲ. ನಾನು ನಟನೆ ಮಾಡಿಕೊಂಡೇ ಇರುತ್ತೇನೆ. ನನಗೆ ಅಷ್ಟೊಂದು ಬುದ್ಧಿಯೂ ಇಲ್ಲ, ತಾಳ್ಮೆಯೂ ಇಲ್ಲ. ನಟನೆಯಲ್ಲಿಯೇ ಗಟ್ಟಿಯಾಗಿ ನೆಲೆಯೂರುತ್ತೇನೆ.

*
ಈಗ ನಾನು ಎಲ್ಲಿಯೇ ಹೋದರು ಜನರು ನನ್ನನ್ನು ರವಿಚಂದ್ರನ್‌ ಮಗ ಅಂತಲೇ ಗುರುತು ಹಿಡಿಯುತ್ತಾರೆ. ನಿಧಾನವಾಗಿ ಅದನ್ನು ಬದಲಿಸಲು ಪ್ರಯತ್ನ ಪಡುತ್ತೇನೆ. ನನ್ನದೇ ಆದ ಗುರುತು ಗಳಿಸಿಕೊಂಡು. ‘ಮನೋರಂಜನ್‌ನ ಅಪ್ಪ ರವಿಚಂದ್ರನ್‌’ ಎಂದು ಹೇಳುವಷ್ಟು ಮೇಲಕ್ಕೇರಲು ಪ್ರಯತ್ನ ಮಾಡುತ್ತೇನೆ.
–ಮನೋರಂಜನ್‌ ರವಿಚಂದ್ರನ್‌, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT