ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝೆನ್ ಶೈಲಿಯ ಶಾಂತಿಧಾಮ

Last Updated 24 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬದುಕು ತೀರಾ ಯಾಂತ್ರಿಕವಾಗಿ ಬಿಟ್ಟಿದೆ ಅಂತ ಒಮ್ಮೊಮ್ಮೆ ಅನ್ನಿಸಿಬಿಡುತ್ತದೆ. ಕಚೇರಿಯಲ್ಲಿ ಕೆಲಸದ ಒತ್ತಡ, ಮನೆಯಲ್ಲಿ ಸಾಂಸಾರಿಕ ಹೊಣೆಗಾರಿಕೆಗಳ ಒತ್ತಡ. ಮನಸ್ಸಿಗೆ ನೆಮ್ಮದಿ ಎಲ್ಲಿ ಎನ್ನುವ ಜಿಗುಪ್ಸೆಯೂ ಕಾಡುತ್ತದೆ.

ಅರೆ! ನಿಮ್ಮ ಮನೆ, ನಿಮ್ಮ ಜೀವನ, ನಿಮ್ಮದೇ ಬದುಕು, ನೆಮ್ಮದಿಯನ್ನೂ ಅಲ್ಲೇ ಹುಡುಕಿಕೊಳ್ಳಬಾರದೇ ಎನ್ನುತ್ತದೆ ಒಳಾಂಗಣ ವಿನ್ಯಾಸದ ಈ ಹೊಸ ಪರಿಕಲ್ಪನೆ. ಇದೇ ಝೆನ್ ಶೈಲಿಯ ವೈಶಿಷ್ಟ್ಯ.

ಮನೆಯ ಮೂಲಕ ಪ್ರತಿಷ್ಠೆಯನ್ನು ಸಾರಲು ಹೋಗುತ್ತೇವೆ. ಆಡಂಬರ, ದೊಡ್ಡಸ್ತಿಕೆಗಾಗಿ ನೂತನ ಮನೆಯಲ್ಲಿ ಸಾಮಾನುಗಳ ಸಂದಣಿ ಹೆಚ್ಚುತ್ತದೆ. ಸಾಮಾನು-ಸೌಕರ್ಯಗಳು ಹೆಚ್ಚಿದಷ್ಟು ಘನತೆಯೂ ಹೆಚ್ಚುತ್ತದೆ ಎನ್ನುವುದು ನಂಬಿಕೆಯಷ್ಟೇ. ಮನೆಯಲ್ಲಿ ಸಂದಣಿ ಹೆಚ್ಚಿದಂತೆ ಘನತೆ ಹೆಚ್ಚುತ್ತದೊ ಇಲ್ವೋ ಗೊತ್ತಿಲ್ಲ, ಪ್ರಶಾಂತತೆ ಮಾತ್ರ ಕದಡುತ್ತದೆ ಎನ್ನುತ್ತದೆ ಒಳಾಂಗಣ ವಿನ್ಯಾಸದ ತತ್ವ.

ಏನಿದು ಝೆನ್ ಶೈಲಿ: ಝೆನ್ ಶೈಲಿಗೆ ನಿರ್ದಿಷ್ಟವಾದ ವ್ಯಾಖ್ಯಾನವಿಲ್ಲ. ಒಳಾಂಗಣ ವಿನ್ಯಾಸ ಸಾಂಪ್ರದಾಯಿಕ ಶೈಲಿಗಳಿಗೆ ಇದು ಒಳಪಡುವುದೂ ಇಲ್ಲ. ಇದಕ್ಕೆಂದೇ ಕಟ್ಟುನಿಟ್ಟಾದ ನಿಯಮಗಳಾವೂ ಇಲ್ಲ. ನಿಮ್ಮ ಮನಸು, ನಿಮ್ಮ ಮನೆ, ನಿಮ್ಮ ಆಸಕ್ತಿ-ಅಭಿರುಚಿ, ನಿಮ್ಮಿಚ್ಚೆಗೆ ಅನುಗುಣವಾಗಿ, ಆದರೆ ಸರಳವೂ, ಪ್ರಶಾಂತವೂ ಆದ ಶುದ್ಧ ಪ್ರಭಾವಳಿಯೊಂದನ್ನು ತುಂಬುವುದೇ ಝೆನ್ ಶೈಲಿಯ ವಿಶೇಷತೆ. ‘ಝೆನ್’ ಎಂದರೆ ಜಪಾನ್ ಭಾಷೆಯಲ್ಲಿ ‘ಧ್ಯಾನ’ ಎಂದರ್ಥ.

ದಿನನಿತ್ಯದ ಒತ್ತಡವನ್ನು ಹೊಸ್ತಿಲ ಹೊರಗೇ ಉಳಿಸುವ, ಒಂದು ಪ್ರಕಾರದ ನಿರಾಳತೆಯೊಂದು ಅಲ್ಲಿಂದಲೇ ನಮ್ಮೊಳಗೆ ಪ್ರವೇಶ ಪಡೆಯುವ, ಮನವನ್ನು ಧ್ಯಾನಸ್ಥ ಸ್ಥಿತಿಗೆ ತಂದು ನಿಲ್ಲಿಸುವ ವಾತಾವರಣವನ್ನು ಮನೆಯಲ್ಲಿ ಹರಡುವುದೇ ಝೆನ್ ಶೈಲಿ. ಸಮತೋಲನ, ಸಾಮರಸ್ಯ ಮತ್ತು ವಿಶ್ರಾಂತಿಗಳನ್ನು ಇದು ಪ್ರತಿಬಿಂಬಿಸುತ್ತದೆ. ಹಾಗೆಂದ ಮಾತ್ರಕ್ಕೆ ಇದನ್ನು ಮಂದವಾದ ಮತ್ತು ನೀರಸವಾದ ವಾತಾವರಣ ಎಂದು ಅರ್ಥೈಸಿಕೊಳ್ಳಬೇಕಾಗಿಯೂ ಇಲ್ಲ. ಜೀವನಪ್ರೀತಿ, ಚೈತನ್ಯ, ರಮ್ಯತೆಯನ್ನು ತುಳುಕಿಸುವ ಗುಣವೂ ಇದರೊಳಗೆ ಸೇರಿರುತ್ತದೆ.

ಝೆನ್ ಶೈಲಿ ಮನೆಯ ಸೋಫಾಗಳು, ಕುರ್ಚಿಗಳು, ಗೋಡೆ, ವಾರ್ಡರೋಬ್‌ಗಳಲ್ಲಿ ಕಾಣುವಂಥದ್ದಲ್ಲ. ಆದರೆ ನಿಮ್ಮ ಮನೆಯಲ್ಲಿ ಎಷ್ಟು ಕಡಿಮೆ ಸಾಮಗ್ರಿಗಳನ್ನು ಬಳಸುತ್ತೀರಿ ಮತ್ತು ಅವನ್ನು ಎಷ್ಟು ಮೋಹಕವಾಗಿ, ಕಲಾತ್ಮಕವಾಗಿ ಜೋಡಿಸುವಿರಿ ಎನ್ನುವುದನ್ನು ಇದು ಪ್ರತಿಪಾದಿಸುತ್ತದೆ.
ಝೆನ್ ಶೈಲಿಯ ಮೂಲಕ ನೆಮ್ಮದಿ-ನಿರಾಳತೆಯನ್ನು ಮನೆಯಲ್ಲಿ ತುಂಬಿಕೊಳ್ಳಲು ಈ ಅಂಶಗಳನ್ನು ಗಮನಿಸಬಹುದು.

ನೈಸರ್ಗಿಕ ಬಣ್ಣಗಲಿರಲಿ: ಬಿಳಿ, ಬೂದುಬಣ್ಣ, ಅಥವಾ ಗುಲಾಬಿ ಬಣ್ಣದ ಛಾಯೆಗಳಂಥ ಬಣ್ಣಗಳಿರಲಿ. ಇವು ಶಾಂತ ಪ್ರಜ್ಞೆಯನ್ನು ಉಂಟುಮಾಡುತ್ತವೆ. ವಿವಿಧ ಅಂಶಗಳ ನಡುವೆ ವರ್ಣ ಸಾಮರಸ್ಯವಿರಲಿ. ಅಂದರೆ ಗೋಡೆಗಳು, ಪೀಠೋಪಕರಣಗಳು ಮತ್ತು ನೆಲದ ಬಣ್ಣಗಳಲ್ಲಿ ನಿರಂತರತೆ ಇರಲಿ. ಮೃದುತ್ವದ ಅನುಭವ ಸಿಗಲಿ: ಉಣ್ಣೆಯ ಕಂಬಳಿಗಳು ಮೃದುತ್ವದ ಅನುಭವನ್ನು ನೀಡುತ್ತವೆ. ಆದರೆ ನಿರ್ವಹಣೆ ಕಠಿಣ. ಒಂದು ವೇಳೆ ಕಾರ್ಪೆಟ್ ಅನ್ನು ಆರಿಸಿದರೆ, ಅದರ ಮೇಲೆ ಉಣ್ಣೆ ಅಥವಾ ಶುದ್ಧ ಹತ್ತಿಯ ಮ್ಯಾಟುಗಳನ್ನು ಸಂಯೋಜಿಸಿ.

ನೈಸರ್ಗಿಕ ಬಣ್ಣದ ಪರದೆ: ಬಾಗಿಲು-ಕಿಟಕಿಗಳಿಗೆ ಹಾಕುವ ಪರದೆಗಳ ಬಟ್ಟೆ ಹಾಗೂ ಅವುಗಳ ಬಣ್ಣದಲ್ಲೂ ಇದೇ ನಿಯಮವಿರಲಿ. ಪರದೆಗಳ ಬಣ್ಣ ಸಾಧ್ಯವಾದಷ್ಟು ನೈಸರ್ಗಿಕವಾಗಿರಲಿ, ತಿಳಿಯಾಗಿರಲಿ ಆದರೆ ಗೋಡೆ ಹಾಗೂ ನೆಲದ ಬಣ್ಣದೊಂದಿಗೆ ಸಾಮ್ಯತೆ ಇರಲಿ. ಪರದೆಗಳನ್ನು ಜೋಡಿಸುವ ವಿಧಾನವೂ ಕಲಾತ್ಮಕವಾಗಿರಲಿ.

ಕಣ್ಣಿಗೆ ರಾಚುವ ಬೆಳಕು ಬೇಡ: ಶಾಂತವಾದ ಬೆಳಕನ್ನು ಸೂಸುವ ಬಲ್ಬುಗಳಿರಲಿ. ಕೆಲವೊಮ್ಮೆ ನಾಲ್ಕಾರು ಮೂಲೆಗಳಲ್ಲಿ ನಾಲ್ಕಾರು ಮೊಂಬತ್ತಿಗಳಾದರೂ ಆದೀತು.

ಸರಳ ಪೀಠೋಪಕರಣ: ಪೀಠೋಪಕರಣಗಳು ಸಾಧ್ಯವಾದಷ್ಟು ಸರಳವೂ ಮತ್ತು ನೈಸರ್ಗಿಕವೂ ಆಗಿರಲಿ. ಉತ್ತಮ ಗುಣಮಟ್ಟದ, ನೈಸರ್ಗಿಕ ವಸ್ತುಗಳಿಂದ ಮಾಡಲ್ಪಟ್ಟ ವಸ್ತುಗಳನ್ನೇ ಆಯ್ಕೆ ಮಾಡಿ.

ಅತಿಯಾದ ಅಲಂಕಾರ ಬೇಡ: ಗೋಡೆಯನ್ನು ಸಾಧ್ಯವಾದಷ್ಟು ಸರಳವಾಗಿಡಿ. ಅತಿಯಾದ ವರ್ಣಚಿತ್ರಗಳು, ಫೋಟೊಗಳು, ಆಲಂಕಾರಿಕ ವಸ್ತುಗಳು ಬೇಡ. ವಿಶೇಷವಾಗಿ ನಿಮಗೆ ಪ್ರಿಯವಾದ ಒಂದೆರಡು ವರ್ಣಚಿತ್ರಗಳು ಅಥವಾ ಫೋಟೊಗಳು ಮಾತ್ರ ಇರಲಿ.

ಒಳಾಂಗಣ ಗಿಡಗಳಿರಲಿ: ಮನೆಯೊಳಗೆ ಕೃತಕ ಹೂವು ಅಥವಾ ಗಿಡಗಳನ್ನು ಇಡುವ ಬದಲು ನೈಜವಾದ ಒಳಾಂಗಣ ಗಿಡಗಳನ್ನು ಇಡುವುದು ನೋಟಕ್ಕೂ, ನೆಮ್ಮದಿಗೂ, ಆರೋಗ್ಯಕ್ಕೂ ಉತ್ತಮ. ಹೆಚ್ಚು ನಿರ್ವಹಣೆಯ ಅಗತ್ಯವಿರದ, ಸಣ್ಣ ಜಾಗ ಹಿಡಿಯುವ, ಸುವಾಸನೆ ಬೀರುವ ಗಿಡಗಳನ್ನು
ಮನೆಯೊಳಗೆ ಇರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT