ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ತಯಾರಿಸಿ ಭಿನ್ನ ವಿಭಿನ್ನ ಕುಂಡ

Last Updated 24 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮನೆಯಲ್ಲಿ ಗಿಡ ಬೆಳೆಸುವುದು ಅನೇಕರಿಗೆ ಅಚ್ಚುಮೆಚ್ಚಿನ ಹವ್ಯಾಸ. ಹೆಚ್ಚಾಗಿ ಮನೆಯಲ್ಲಿ ಸುಮ್ಮನೆ ಇರುವ ಬದಲು ಮಹಿಳೆಯರು ಬಿಡುವಿನ ವೇಳೆ ಗಿಡಗಳನ್ನು ಬೆಳೆಸುತ್ತಾರೆ. ಪಟ್ಟಣಗಳಲ್ಲಿ ಕೈತೋಟ ಮಾಡಲು ಸಾಕಷ್ಟು ಸ್ಥಳಾವಕಾಶ ಇಲ್ಲದ ಕಾರಣ ಕುಂಡಗಳಲ್ಲಿ ಗಿಡಗಳನ್ನು ಬೆಳೆಸುತ್ತಾರೆ.

ಬಗೆಬಗೆಯ ಮಣ್ಣು ಹಾಗೂ ಸಿಮೆಂಟ್ ಕುಂಡಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಈ ಕುಂಡಗಳ ಬೆಲೆ ಸ್ವಲ್ಪ ಜಾಸ್ತಿ. ಅಲ್ಲದೇ ನಮಗೆ ಬೇಕಾದ ಆಕಾರದ ಕುಂಡಗಳು ಸಿಗದೇ ಹೋಗಬಹುದು. ಅದಕ್ಕಾಗಿ ಮನೆಯಲ್ಲೇ ಇರುವ ವಸ್ತುಗಳಿಂದ ಕಡಿಮೆ ವೆಚ್ಚದಲ್ಲಿ, ನಮಗೆ ಬೇಕಾದ ಆಕಾರದಲ್ಲಿ ಕುಂಡಗಳನ್ನು ರಚಿಸಿಕೊಳ್ಳಬಹುದು. ಅವುಗಳನ್ನು ಉಡುಗೊರೆಗಳ ರೂಪದಲ್ಲಿ ಕೂಡ ನೀಡಬಹುದು.

ಕುಂಡಗಳನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಮನೆಯಲ್ಲಿ ಬಳಸದೇ ಇರುವ ಪ್ಲಾಸ್ಟಿಕ್ ಡಬ್ಬಗಳು. ಯಾವುದೇ ಆಕಾರ ಹಾಗೂ ಗಾತ್ರದ ಪ್ಲಾಸ್ಟಿಕ್‌ ಡಬ್ಬಗಳನ್ನು ಬಳಸಬಹುದು. ಆದರೆ ಆ ಪ್ಲಾಸ್ಟಿಕ್ ಡಬ್ಬ ಸಿಮೆಂಟ್ ಕಾಂಕ್ರೀಟ್‌ನ ಭಾರವನ್ನು ತಡೆಯುವಂತಿರಬೇಕು. ನೀವು ತೆಗೆದುಕೊಂಡ ಡಬ್ಬದ ತುದಿಗಳು ಹಾಳಾಗಿದ್ದರೆ ಕುಂಡದ ಆಕೃತಿಯೂ ವಿಲಕ್ಷಣ ರೂಪದಲ್ಲಿ ಬರಬಹುದು. (ಕೆಲವೊಮ್ಮೆ ಕಟ್ಟು ಹೋದ ಆಕೃತಿಯೇ ವಿಶೇಷ, ಸುಂದರವಾದ ಆಕೃತಿಯಾಗಿ ಮೂಡಬಹುದು).
* ಅಡಿಗೆ ಎಣ್ಣೆ
* ಬ್ರಷ್‌
* ಕಲಸಿದ ಸಿಮೆಂಟ್ ಕಾಂಕ್ರೀಟ್‌. ಕಟ್ಟಡ ಕಟ್ಟಲು ಬಳಸಿದ ಕಾಂಕ್ರೀಟ್‌ನಲ್ಲಿ ದಪ್ಪ ಜಲ್ಲಿ ಕಲ್ಲುಗಳಿರುತ್ತವೆ. ಅದು ಕುಂಡದ ರೂಪವನ್ನು ಕೆಡಿಸಬಹುದು. ಮೆದುವಾದ ಕಾಂಕ್ರೀಟ್ ಕೇವಲ ಮರಳು ಮಿಶ್ರಿತವಾಗಿರುತ್ತದೆ, ಅಲ್ಲದೇ ಇದರಲ್ಲಿ ಜಲ್ಲಿಕಲ್ಲುಗಳಿರುವುದಿಲ್ಲ. ಹಾಗಾಗಿ ಈ ಕಾಂಕ್ರೀಟ್‌ ಅನ್ನು ಬಳಸಿಕೊಂಡು ಕುಂಡ ರಚಿಸುವುದು ಉತ್ತಮ.
* ಡ್ರಿಲ್ಲಿಂಗ್ ಮೆಷಿನ್‌
* ಕಾಂಕ್ರೀಟ್ ಡ್ರಿಲ್ಲಿಂಗ್ ಕಡ್ಡಿ.

ಡಗಳನ್ನು ತಯಾರಿಸುವ ವಿಧಾನ: ಮೊದಲು ಒಂದು ದೊಡ್ಡ ಪ್ಲಾಸ್ಟಿಕ್ ಡಬ್ಬ ಅಥವಾ ಪಾತ್ರೆಯನ್ನು ತೆಗೆದುಕೊಂಡು ಪಾತ್ರೆಯ ಒಳಮೈಗೆ ಅಡುಗೆ ಎಣ್ಣೆಯನ್ನು ಹಚ್ಚಿ. ಈ ರೀತಿ ಮಾಡುವುದರಿಂದ ಕಾಕ್ರಿಂಟ್ ಪ್ಲಾಸ್ಟಿಕ್ ಡಬ್ಬಕ್ಕೆ ಸುಲಭವಾಗಿ ಅಂಟಿಕೊಳ್ಳುವುದಿಲ್ಲ. ಆ ಡಬ್ಬದೊಳಗೆ ಸಿಮೆಂಟ್ ಕಾಂಕ್ರೀಟ್ ಸುರಿಯಿರಿ.  ಅದರೊಳಗೆ ಮಧ್ಯಮ ಗಾತ್ರದ ಪ್ಲಾಸ್ಟಿಕ್ ಡಬ್ಬಿಯನ್ನು ಇರಿಸಿ. ಅದರೊಳಗೆ ಕಾಂಕ್ರೀಟ್ ಸುರಿಯಬೇಕು.

ನಂತರ ಅದರೊಳಗೆ ಸಣ್ಣ ಡಬ್ಬಿಯನ್ನು ಇರಿಸಿ ಅದರೊಳಗೂ ಕಾಂಕ್ರೀಟ್ ಸುರಿಯಿರಿ. ಆದರೆ ಸಣ್ಣ ಹಾಗೂ ಮಧ್ಯಮ ಗಾತ್ರದ ಡಬ್ಬಿ ಇಳಿಸುವ ಮುನ್ನ ಡಬ್ಬಿಯ ಒಳ ಮೈ ಹಾಗೂ ಹೊರ ಮೈಗೆ ಎಣ್ಣೆ ಸವರಿದ್ದೀರಾ ಎಂದು ಗಮನಿಸಿ. ಇಲ್ಲವಾದಲ್ಲಿ ಕಾಂಕ್ರೀಟ್ ಒಣಗಿದ ಮೇಲೆ ಕುಂಡವನ್ನು ಬೇರ್ಪಡಿಸಲು ಕಷ್ಟವಾಗುತ್ತದೆ. ಕಾಂಕ್ರೀಟ್ ಸುರಿದ ಡಬ್ಬಿಯನ್ನು 24ಗಂಟೆ ಒಣಗಿಸಬೇಕು.

ನಿಧಾನವಾಗಿ ಡಬ್ಬಿಗಳಿಂದ ಕುಂಡವನ್ನು ಹೊರ ತೆಗೆಯಿರಿ. ನೇರವಾಗಿ ಕುಂಡ ಹೊರ ಬರದಿದ್ದರೆ, ಸುತ್ತಲಿನ ಪ್ಲಾಸ್ಟಿಕ್ ಡಬ್ಬಿಯನ್ನು ಕತ್ತರಿಸಬಹುದು. ಆಗ ವಿವಿಧ ಆಕಾರ ದೊಡ್ಡ, ಮಧ್ಯಮ ಹಾಗೂ ಸಣ್ಣ ಗಾತ್ರದ ಕುಂಡಗಳು ರೆಡಿ ಇರುತ್ತದೆ.

ಅದನ್ನು ಒಂದು ವಾರಗಳ ಕಾಲ ಹಾಗೆ ಇಡಿ ಅಥವಾ ಅದು ಡ್ರಿಲ್ ಮಾಡಲು ಸಾಧ್ಯವಾಗುವಷ್ಟು ಒಣಗಿದ್ದರೆ, ಕುಂಡದ ಕೊನೆಯಲ್ಲಿ ಡ್ರಿಲ್ಲಿಂಗ್ ಮೆಷಿನ್ ಹಾಗೂ ಡ್ರಿಲ್ಲಿಂಗ್ ಕಡ್ಡಿಯ ಸಹಾಯದಿಂದ ತೂತು ಮಾಡಿ. ಅಲ್ಲಿಗೆ ಗಿಡಬೆಳೆಸಲು ನಿಮ್ಮ ಕುಂಡ ತಯಾರಾದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT