ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ನೂತನ ಅಫ್ಗನ್ ನೀತಿ ಬದಲಾದ ಟ್ರಂಪ್ ದೃಷ್ಟಿಕೋನ

Last Updated 24 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಅಫ್ಗಾನಿಸ್ತಾನದ ಬಗ್ಗೆ ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಕಾರ್ಯತಂತ್ರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ದಕ್ಷಿಣ ಏಷ್ಯಾ ನೀತಿ ಎಂದು ಇದನ್ನು ಕರೆದಿರುವುದು ಹೊಸ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಅಫ್ಗಾನಿಸ್ತಾನಕ್ಕೆ ಹೆಚ್ಚಿನ ಸೇನಾಪಡೆಗಳನ್ನು ನಿಯೋಜಿಸಲಾಗುವುದು ಎಂದು ಟ್ರಂಪ್‍‍ ಹೇಳಿರುವುದು ಅವರಲ್ಲಾಗಿರುವ ಬದಲಾವಣೆಗೆ ದ್ಯೋತಕ. ಇದೇ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗುವ ಮೊದಲು ಚುನಾವಣಾ ಪ್ರಚಾರ ಭಾಷಣಗಳಲ್ಲಿ ಅಫ್ಗಾನಿಸ್ತಾನದಿಂದ ಸೇನೆ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಲೇ ಇದ್ದರು. ಅಫ್ಗನ್ ನೆಲದಲ್ಲಿ ಯುದ್ಧದಲ್ಲಿ ತೊಡಗಿಕೊಳ್ಳುವ ಮೂಲಕ ಅಮೆರಿಕದ ಹಣ ವ್ಯರ್ಥವಾಗುತ್ತಿದೆ ಎಂಬಂಥ ಟೀಕೆಗಳನ್ನೂ ಆಗ ಅವರು ಮಾಡಿದ್ದರು. ಆದರೆ ಅಧಿಕಾರ ಸೂತ್ರ ಹಿಡಿದ ನಂತರ ಅವರ ನಿಲುವು ಬದಲಾಗಿದೆ. ಟ್ರಂಪ್ ಅವರ ದಕ್ಷಿಣ ಏಷ್ಯಾ ನೀತಿ, ಈ ವಿಚಾರದಲ್ಲಾಗಿರುವ ದೊಡ್ಡ ಬದಲಾವಣೆಗೆ ದ್ಯೋತಕ. ಆದರೆ ಅಮೆರಿಕಕ್ಕೆ ಬೇರೆ ವಿಧಿ ಇಲ್ಲ ಎಂಬ ಸ್ಥಿತಿಯೂ ನಿರ್ಮಾಣವಾಗಿದೆ. ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಅಮೆರಿಕ ತೊಡಗಿಕೊಂಡು 16 ವರ್ಷಗಳೇ ಕಳೆದುಹೋಗಿವೆ. ಆದರೆ, ಅಫ್ಗಾನಿಸ್ತಾನದಲ್ಲಿ ಈಗಲೂ ಸ್ಥಿರತೆ ಎನ್ನುವುದು ಮರೀಚಿಕೆಯೇ ಆಗಿದೆ ಎಂಬುದು ವಿಷಾದನೀಯ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಅಮೆರಿಕ ನೇತೃತ್ವದ ಮಿಲಿಟರಿ ಕಾರ್ಯಾಚರಣೆಯಲ್ಲಿ ಉರುಳಿಸಿದ ನಂತರ ಅಲ್ಲಿ ಉಗ್ರರ ಪ್ರಭಾವ ಹೆಚ್ಚಾಗುತ್ತಲೇ ಇರುವುದು ವಿಪರ್ಯಾಸ. ರಾಷ್ಟ್ರದ ಅರ್ಧಕ್ಕೂ ಹೆಚ್ಚು ಭಾಗಗಳಲ್ಲಿನ ನೆಲೆಗಳು ಈಗಲೂ ತಾಲಿಬಾನ್ ನಿಯಂತ್ರಣದಲ್ಲಿವೆ. ಜೊತೆಗೆ ಇಸ್ಲಾಮಿಕ್ ಸ್ಟೇಟ್ ಉಗ್ರರೂ ಅಫ್ಗಾನಿಸ್ತಾನದಲ್ಲಿದ್ದಾರೆ. ಅನೇಕ ಭಯೋತ್ಪಾದನಾ ದಾಳಿಗಳೂ ಅಫ್ಗಾನಿಸ್ತಾನದಲ್ಲಿ ನಡೆದಿವೆ. ಇಂತಹ ಸಂದರ್ಭದಲ್ಲಿ ಜಾರ್ಜ್ ಬುಷ್, ಬರಾಕ್‍ ಒಬಾಮ ನಂತರ ಅಫ್ಗಾನಿಸ್ತಾನಕ್ಕೆ ಸೇನೆ ಕಳುಹಿಸುತ್ತಿರುವ ಮೂರನೇ ಅಮೆರಿಕ ಅಧ್ಯಕ್ಷರಾಗಲಿದ್ದಾರೆ ಟ್ರಂಪ್. ಭಯೋತ್ಪಾದಕರ ವಿರುದ್ಧದ ಹೋರಾಟವಷ್ಟೇ ಈಗಿನ ಗುರಿ; ಅಫ್ಗಾನಿಸ್ತಾನ ಮರು ನಿರ್ಮಾಣ ಮುಖ್ಯ ಉದ್ದೇಶವಲ್ಲ ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಇದೇ ಸಂದರ್ಭದಲ್ಲಿ ಟ್ರಂಪ್‌ ಕಿಡಿ ಕಾರಿರುವುದೂ ವಿಶೇಷ. ‘ಹಿಂಸಾಚಾರ, ಭೀತಿ ಮತ್ತು ಗೊಂದಲಗಳನ್ನು ಸೃಷ್ಟಿಸುತ್ತಿರುವ ಉಗ್ರರಿಗೆ ಬೆಂಬಲ ಮತ್ತು ಸುರಕ್ಷಿತ ನೆಲೆಗಳನ್ನು ಒದಗಿಸುವುದನ್ನು ಮುಂದುವರಿಸಿದರೆ ಪಾಕಿಸ್ತಾನ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ’ಪಾಕಿಸ್ತಾನವು ಅಮೆರಿಕದಿಂದ ಕೋಟ್ಯಂತರ ರೂಪಾಯಿ ಆರ್ಥಿಕ ನೆರವು ಪಡೆಯುತ್ತಿದೆ. ಆದರೆ, ಯಾರ ವಿರುದ್ಧ ಅಮೆರಿಕ ಹೋರಾಟ ನಡೆಸುತ್ತಿದೆಯೋ ಅವರಿಗೇ ಪಾಕಿಸ್ತಾನ ಆಶ್ರಯ ನೀಡುತ್ತಿದೆ’ ಎಂಬಂಥ ಕಟು ಮಾತುಗಳನ್ನಾಡಿದ್ದಾರೆ ಅವರು. ಆದರೆ ಟ್ರಂಪ್ ಎಚ್ಚರಿಕೆ ಪಾಕಿಸ್ತಾನದ ಅಫ್ಗನ್ ನೀತಿಯಲ್ಲಿ ಎಷ್ಟು ಬದಲಾವಣೆ ತರಲಿದೆ ಎಂಬುದನ್ನು ಕಾದುನೋಡಬೇಕು. ಪಾಕಿಸ್ತಾನಕ್ಕೆ ರಷ್ಯಾ, ಚೀನಾ ಹತ್ತಿರವಾಗುತ್ತಿರುವ ದಿನಗಳು ಇವು ಎಂಬುದನ್ನು ಮರೆಯಲಾಗದು.

ಭಾರತದ ಬಗ್ಗೆ ಟ್ರಂಪ್ ಅವರು ಬಹಿರಂಗವಾಗಿ ಸಕಾರಾತ್ಮಕ ಮಾತುಗಳನ್ನಾಡಿರುವುದು ಹೊಸತು. ಭಾರತದೊಂದಿಗೆ ಆಯಕಟ್ಟಿನ ಸಹಭಾಗಿತ್ವ ಅಭಿವೃದ್ಧಿ ಪಡಿಸಿಕೊಳ್ಳುವುದು ಹೊಸ ದಕ್ಷಿಣ ಏಷ್ಯಾ ನೀತಿಯ ಮುಖ್ಯ ಆಶಯವೂ ಆಗಿದೆ. ಟ್ರಂಪ್ ಕಾರ್ಯತಂತ್ರವನ್ನು ಭಾರತ ಸ್ವಾಗತಿಸಿದೆ. ಸ್ಥಿರ ಅಫ್ಗಾನಿಸ್ತಾನ ನಿರ್ಮಾಣ ಹಾಗೂ ಪಾಕಿಸ್ತಾನದ ಭಯೋತ್ಪಾದನೆ ಪ್ರಾಯೋಜಕ ಚಟುವಟಿಕೆಗಳನ್ನು ಅಂತ್ಯ ಮಾಡುವ ಅಮೆರಿಕದ ಗುರಿ ಭಾರತದ ದೃಷ್ಟಿಕೋನಗಳಿಗೆ ಪೂರಕವಾಗಿಯೇ ಇದೆ. ಆದರೆ, ಅಮೆರಿಕ ಜೊತೆ ವ್ಯಾಪಾರದಲ್ಲಿ ಕೋಟ್ಯಂತರ ಡಾಲರ್ ಹಣ ಗಳಿಸುವ ಭಾರತ, ಅಫ್ಗಾನಿಸ್ತಾನದಲ್ಲಿ ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೆಚ್ಚು ಕೆಲಸ ಮಾಡಬೇಕು ಎಂದು ಟ್ರಂಪ್ ಹೇಳಿರುವ ರೀತಿ ಒರಟಾದುದು. ಭಾರತಕ್ಕೆ ಅದರದೇ ಅಫ್ಗನ್ ನೀತಿ ಇದ್ದೇ ಇದೆ ಎಂಬುದನ್ನು ‘ದೊಡ್ಡಣ್ಣ’ ಅಮೆರಿಕ ಅರಿಯಬೇಕು.

* ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಅಮೆರಿಕ ತೊಡಗಿಕೊಂಡು 16 ವರ್ಷಗಳೇ ಕಳೆದುಹೋಗಿವೆ. ಆದರೆ, ಅಫ್ಗಾನಿಸ್ತಾನದಲ್ಲಿ ಈಗಲೂ ಸ್ಥಿರತೆ ಎನ್ನುವುದು ಮರೀಚಿಕೆಯೇ ಆಗಿದೆ ಎಂಬುದು ವಿಷಾದನೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT