ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಶುಕ್ರವಾರ, 25–8–1967

Last Updated 24 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಮಾಧ್ಯಮ–ಪ್ರದೇಶ ಭಾಷೆ: ಕೇಂದ್ರ ಮಂಡಳಿ ಒಪ್ಪಿಗೆ

ನವದೆಹಲಿ, ಆ. 24– ವಿಶ್ವವಿದ್ಯಾನಿಲಯಗಳಲ್ಲಿ ಪ್ರಾದೇಶಿಕ ಭಾಷೆಗಳೇ ಶಿಕ್ಷಣ ಮಾಧ್ಯಮವಾಗಬೇಕು ಎನ್ನುವ ರಾಜ್ಯ ಶಿಕ್ಷಣ ಸಚಿವರುಗಳ ಅಭಿಪ್ರಾಯವನ್ನು ನಿನ್ನೆ ಕೇಂದ್ರ ಶಿಕ್ಷಣ ಸಲಹಾ ಮಂಡಳಿಯ ಸದಸ್ಯರು ಒಪ್ಪಿಕೊಂಡರು.

ಕೆಲವು ಮಂದಿ ಶಿಕ್ಷಣ ತಜ್ಞರು, ಅದರಲ್ಲಿಯೂ ಮದ್ರಾಸ್‌ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎ.ಎಲ್‌. ಮೊದಲಿಯಾರ್‌ ಅವರು ಶಿಕ್ಷಣ ಮಾಧ್ಯಮವನ್ನು ಅವಸರವಾಗಿ ಬದಲಾಯಿಸುವುದರ ವಿರುದ್ಧ ಎಚ್ಚರಿಕೆ ನೀಡಿದರು. ಪ್ರಾದೇಶಿಕ ಭಾಷೆಗಳನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಮಾಡುವುದಕ್ಕೆ ಐದು ಅಥವಾ ಹತ್ತು ವರ್ಷಗಳ ಅವಧಿ ಸಾಕು ಎನ್ನುವುದನ್ನು ಇವರು ಒಪ್ಪುವುದಿಲ್ಲ.

ಕೃಷ್ಣಾ ನೀರಿನ ವ್ಯಾಜ್ಯ ಪಂಚಾಯ್ತಿಗೆ ಒಪ್ಪಿಸುವುದೇ ಉಳಿದಿರುವ ಮಾರ್ಗ

ಬೆಂಗಳೂರು, ಆ. 24– ಕೃಷ್ಣಾ ನೀರಿನ ವಿವಾದದಲ್ಲಿ ಮೈಸೂರಿನ ಹಕ್ಕನ್ನು ಉಳಿಸಿಕೊಳ್ಳಲು ಪಂಚಾಯಿತಿಗೆ ಒಪ್ಪಿಸುವುದೊಂದೇ ಉಳಿದಿರುವ ಮಾರ್ಗವೆಂದು ವಿರೋಧಪಕ್ಷದ ನಾಯಕ ಶ್ರೀ ಎಸ್‌. ಶಿವಪ್ಪನವರು ಇಂದು ಇಲ್ಲಿ ನುಡಿದು ‘ಆ ರೀತಿ ಮಾಡದಿದ್ದರೆ ಅದು ಮೈಸೂರಿನ ಭಾರೀ ತಪ್ಪಾದೀತು’ ಎಂದು ಎಚ್ಚರಿಕೆ ನೀಡಿದರು.

ಭಾರತಕ್ಕೆ ಮತ್ತೆ 10 ಲಕ್ಷ ಟನ್  ಅಮೆರಿಕದ ಗೋಧಿ: ಶೀಘ್ರವೇ ಒಡಂಬಡಿಕೆ

ವಾಷಿಂಗ್‌ಟನ್‌, ಆ. 24–  ಶಾಂತಿಗಾಗಿ ಆಹಾರ ಕಾರ‍್ಯಕ್ರಮದಂತೆ ಅಮೆರಿಕ ಮತ್ತು ಭಾರತ ಸರ್ಕಾರಗಳು ಶೀಘ್ರವೇ ಪ್ರಾಯಶಃ ಈ ವಾರ ಒಪ್ಪಂದವೊಂದಕ್ಕೆ ಸಹಿ ಹಾಕುತ್ತವೆ. ಈ ಒಪ್ಪಂದದಂತೆ ಮತ್ತೆ ಹತ್ತು ಲಕ್ಷ ಟನ್‌ ಅಥವ ಇನ್ನೂ ಹೆಚ್ಚು ಗೋಧಿಯನ್ನು ಭಾರತಕ್ಕೆ ಸರಬರಾಜು ಮಾಡಲಾಗುವುದೆಂದು ಅಧಿಕೃತ ಮೂಲಗಳು ಇಂದು ಇಲ್ಲಿ ತಿಳಿಸಿದುವು.

ಬ್ಯಾಂಕುಗಳ ಮೇಲೆ ಸಾಮಾಜಿಕ ಹತೋಟಿ: ಶೀಘ್ರ ನಿರ್ಧಾರ

ನವದೆಹಲಿ, ಆ. 24– ಬ್ಯಾಂಕುಗಳ ಮೇಲೆ ಸಾಮಾಜಿಕ ಹತೋಟಿ ಮತ್ತು ಸಾಮಾನ್ಯ ವಿಮೆಯ ರಾಷ್ಟ್ರೀಕರಣ ವಿಷಯದಲ್ಲಿ ಸರ್ಕಾರವು ‘ಇನ್ನು ಕೆಲವೇ ದಿನಗಳಲ್ಲಿ’ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದೆಂದು ಕೇಂದ್ರ ಅರ್ಥ ಸಚಿವ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಸೂಚನೆಯಿತ್ತರು.

ಕೇಂದ್ರದ ಅಧಿಕಾರ ವಿಕೇಂದ್ರೀಕರಣ ಸಲಹೆ ಅಸಾಧು: ಪ್ರಧಾನಿ ವಿವರಣೆ

ಮದ್ರಾಸ್‌, ಆ. 24– ಕೇಂದ್ರ ಸರ್ಕಾರವು ವಿದೇಶಾಂಗ ನೀತಿ ಮತ್ತು ರಕ್ಷಣೆ ಇವೆರಡು ಕರ್ತವ್ಯಗಳನ್ನು ಮಾತ್ರ ವಹಿಸಿಕೊಂಡು ಉಳಿದೆಲ್ಲಾ ವಿಷಯಗಳನ್ನು ರಾಜ್ಯ ಸರ್ಕಾರಗಳಿಗೆ ವಹಿಸಿಕೊಡಬೇಕೆಂಬ ನಿರೀಕ್ಷೆ ಯಾವುದೇ ದೃಷ್ಟಿಕೋನದಿಂದಲೂ ‘ಅಸಾಧುವಾದುದೆಂದು’ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಲ್ಲಿ ತಿಳಿಸಿದರು.

ಅವರು ಇಲ್ಲಿಂದ ಮಧುರೆಗೆ ವಿಮಾನ ಹತ್ತುವುದಕ್ಕೆ ಮುಂಚೆ ಪತ್ರಕರ್ತರೊಡನೆ ಮಾತನಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT