ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗಟ್ಟಿದ ಗೌರಿ ಹಬ್ಬದ ಸಂಭ್ರಮ

Last Updated 24 ಆಗಸ್ಟ್ 2017, 20:05 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಮುಂದೆ ಕಂಗೊಳಿಸುವ ಚಿತ್ತಾಕರ್ಷಕ ರಂಗೋಲಿ, ಬಾಗಿಲಲ್ಲಿ ಬರಸೆಳೆಯುವ ಬಗೆಬಗೆಯ ತೋರಣ, ಹೂವಿನ ಶೃಂಗಾರ, ಸಾಂಪ್ರದಾಯಿಕ ಉಡುಗೆಯಲ್ಲಿ ನಗುಮೊಗದಿ ಸ್ವಾಗತಿಸುವ ಮಹಿಳೆಯರು....

ಹೀಗೆ, ನಗರದಲ್ಲಿ ಗುರುವಾರ ಕಂಡು ಬಂದ ಗೌರಿ ಹಬ್ಬದ ಸಂಭ್ರಮವಿದು. ತವರಿನ ನೆನಪು ಮತ್ತು ಬಾಂಧವ್ಯದ ಹಬ್ಬವಾಗಿ ಹಲವರು ಹಬ್ಬವನ್ನು ಆಚರಿಸಿದರು. ವರ್ಷಕ್ಕೊಮ್ಮೆ ತವರಿಗೆ ಮರಳುವ ಪಾರ್ವತಿಗೆ ಬಾಗಿನ ನೀಡಿ ಆಶೀರ್ವಾದ ಪಡೆಯುವ ನಂಬಿಕೆಯೊಂದಿಗೆ ಮತ್ತೆ ಕೆಲವರು ಗೌರಿಯನ್ನು ಪೂಜಿಸಿದರು.

ಮಹಿಳೆಯರು ಮನೆಯ ದೇವರ ಕೋಣೆಯ ಮಂಟಪದ ಕಳಶದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿದರು. ಕೆಲವರು ತೆಂಗಿನ ಕಾಯಿಗೆ ಶೃಂಗಾರ ಮಾಡಿ ಗೌರಿ ಎಂದು ಪೂಜಿಸಿದರೆ, ಇನ್ನೂ ಅನೇಕರು ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಬಣ್ಣ ಬಣ್ಣದ ಸೀರೆ, ಚಿನ್ನಾಭರಣ, ಹಣ, ನಾಣ್ಯ, ಅರಿಶಿಣ, ಕುಂಕುಮ ಹಾಗೂ ದೀಪಾಲಂಕಾರಗಳಿಂದ ದೇವಿಯನ್ನು ಸಿಂಗರಿಸಿದರು. ಬಾಳೆ ಗಿಡ, ವಿವಿಧ ಬಗೆಯ ಹೂವು, ಹಣ್ಣುಗಳಿಂದ ಅಲಂಕರಿಸಿದರು. ಹೀಗೆ ಪ್ರತಿಷ್ಠಾಪಿಸಿದ ಗೌರಿಗೆ ಮಹಿಳೆಯರು ಆರತಿ ಬೆಳಗಿ ಬಾಗಿನ ನೀಡಿ ಆರಾಧಿಸಿದರು. ಬಳಿಕ ಆಕೆಗೆ ಪ್ರಿಯವಾಗುವ ಹೋಳಿಗೆ, ಕರ್ಜಿಕಾಯಿ, ರವೆ ಉಂಡೆಗಳನ್ನು, ಬಗೆಬಗೆಯ ಪಾಯಸವನ್ನು ನೈವೇದ್ಯ ಮಾಡಿದರು.

‘ಈ ಹಬ್ಬ ನನಗೆ ಇತರ ಎಲ್ಲ ಹಬ್ಬಗಳಿಗಿಂತ ಭಿನ್ನ ಮತ್ತು ಮಹತ್ವದ್ದು. ಇದರ ಪ್ರಮುಖ ಸಂಭ್ರಮ ಎಂದರೆ, ತವರಿನಿಂದ ಬರುವ ಬಾಗಿನ. ತವರಿನ ಬೆಸುಗೆಯನ್ನು ಗಟ್ಟಿಗೊಳಿಸುವ ಹಬ್ಬವಿದು’ ಎನ್ನುತ್ತಾರೆ ಪ್ಯಾಲೇಸ್‌ ಗುಟ್ಟಹಳ್ಳಿಯ ಸುಲೋಚನಾ ಎಂ. ಆರ್.

‘ಕುಟುಂಬದವರೆಲ್ಲ ಸೇರಿ ಗೌರಿಗೆ ವಿಶೇಷ ಪೂಜೆ ಸಲ್ಲಿಸುತ್ತೇವೆ. ಹಬ್ಬದಡುಗೆ, ಊಟದ ಬಳಿಕ ಸುತ್ತಲಿನ ಮನೆಯ ಮಹಿಳೆಯರನ್ನು ಕರೆದು ಅವರಿಗೆ ಬಾಗಿನ ನೀಡುತ್ತೇವೆ’ ಎಂದು ಮಲ್ಲೇಶ್ವರದ ಶ್ವೇತಾಗೌಡ ತಿಳಿಸಿದರು.‌

‘ಎಲ್ಲ ವರ್ಷಗಳಿಗಿಂತ ಈ ಬಾರಿಯ ಗೌರಿ ಹಬ್ಬ ಹೆಚ್ಚು ವಿಶಿಷ್ಟ. ನವವಿವಾಹಿತ ಮಗಳಿಗಿದು ಇದು ಮೊದಲ ವರ್ಷದ ಗೌರಿ ಹಬ್ಬ. ಹಬ್ಬದ ಹಿಂದಿನ ದಿನವೇ ನವಧಾನ್ಯಗಳು, ಸೀರೆ, ಬಳೆ, ಅರಿಶಿನ, ಕುಂಕುಮ ಹಾಗೂ ಫಲ ಪುಷ್ಪಗಳ ಬಾಗಿನ ನೀಡಿ ಮಗಳನ್ನು ತವರಿಗೆ ಕರೆತಂದಿದ್ದೇವೆ. ಗುರುವಾರ ಆಕೆಗೆ ತಾಂಬೂಲ ನೀಡಿ ಉಡಿ ತುಂಬಿ ಹರಸಿದ್ದೇವೆ’ ಎಂದು ವೈಯಾಲಿ ಕಾವಲ್‌ನ ಪದ್ಮಾವತಿ ತಿಳಿಸಿದರು.

‘ಹಬ್ಬವನ್ನು ಉತ್ಸಾಹದಿಂದ ಸಂಭ್ರಮದಿಂದ ಆಚರಿಸುವ ದಿನಗಳು ಈಗ ಮರೆಯಾಗಿವೆ. ಹಿಂದೆಲ್ಲಾ ಕುಟುಂಬ ವರ್ಗವೇ ಸೇರಿ ಸಂಭ್ರಮಿಸುತ್ತಿದ್ದೆವು. ಈಗ ವಿದೇಶದಲ್ಲಿರುವ ಮಕ್ಕಳು ಬರುವುದಿಲ್ಲ. ಯಾಂತ್ರಿಕವಾಗಿ ಹಬ್ಬ ಆಚರಿಸುವಂತಾಗಿದೆ. ಹಾಗಾಗಿ ಹಬ್ಬದ
ಡುಗೆ ಮಾಡುವುದಿಲ್ಲ. ದೇವಿಯನ್ನು ಸರಳವಾಗಿ ಸಿಂಗರಿಸಿ ಬಾಗಿನ ಸಲ್ಲಿಸುತ್ತೇನೆ’ ಎಂದು ಮಲ್ಲೇಶ್ವರದ ಪುಷ್ಪಲತಾ ಹೇಳಿಕೊಂಡರು.

ನಗರದ ಬಹುತೇಕ ದೇವಾಲಯಗಳಲ್ಲಿ ಗೌರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಿಳೆಯುರು ದೇವಾಲಯಗಳಿಗೆ ತೆರಳಿ ಬಾಗಿನ ಪಡೆದರು. ರಾಗೀಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಯನಗರದ ವಿನಾಯಕ ದೇವಾಲಯದಲ್ಲಿ ಸ್ವರ್ಣ ಗೌರಿ ಹಾಗೂ ವರಸಿದ್ದಿ ವಿನಾಯಕ ಮಹೋತ್ಸವ ಆಚರಿಸಿದರು. ಬಸವನ ಗುಡಿಯ ಗವಿಗಂಗಾಧರ ದೇವಾಲಯದಲ್ಲಿ ಮಹಿಳೆಯರು ಬಾಗಿನ ಸಲ್ಲಿಸಿ ಸ್ವರ್ಣಗೌರಿಯನ್ನು ಆರಾಧಿಸಿದರು. ವೈಯಾಲಿ ಕಾವಲ್‌ನ ದತ್ತಾತ್ರೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಿಳೆಯರಿಗೆ ಬಾಗಿನ ನೀಡಿ ಹರಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT