ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರವಿಲ್ಲದ ಸಾಮಾನ್ಯ ‘ಸಾಹೇಬ’

Last Updated 26 ಆಗಸ್ಟ್ 2017, 11:12 IST
ಅಕ್ಷರ ಗಾತ್ರ

ಚಿತ್ರ: ಸಾಹೇಬ
ನಿರ್ಮಾಣ: ಜಯಣ್ಣ ಮತ್ತು ಬೋಗೇಂದ್ರ
ನಿರ್ದೇಶನ: ಭರತ್‌
ತಾರಾಗಣ: ಮನೋರಂಜನ್‌ ರವಿಚಂದ್ರನ್‌, ಶಾನ್ವಿ ಶ್ರೀವಾಸ್ತವ್‌, ಲಕ್ಷ್ಮೀ, ಚಿದಾನಂದ

ನಸುಗತ್ತಲಿನ ಸಂಜೆ ನಾಯಕ ಅಮ್ಮನ ಮಡಿಲಲ್ಲಿ ಬಂದು ಮಲಗುತ್ತಾನೆ. ಮಗುಮನಸ್ಸಿನ ಮಗನಿಗೆ ಅಮ್ಮ ಅಕ್ಕರೆಯಿಂದ ಲಾಲಿ ಹಾಡುತ್ತಾಳೆ.  ಎದುರಿನ ಗೋಡೆಯ ಮೇಲೆ ಬೆಳದಿಂಗಳು ಮೂಡಿಸಿದ ಕ್ಯಾನ್ವಾಸ್‌ನಲ್ಲಿ ಮಗ ಆ ಹಾಡಿಗೆ ತಕ್ಕ ಹಾಗೆ ಕೈಬೆರಳುಗಳ ಜೋಡಿಸುತ್ತಾ ನೆರಳಿನ ಮೂಲಕ ಚಲಿಸುವ ಚಿತ್ರಗಳನ್ನು ಮೂಡಿಸುತ್ತ ಹೋಗುತ್ತಾನೆ. ಜನಪದ ಸೊಗಡಿನ ಹಾಡು, ಮೋಹಕವೆನ್ನಿಸುವ ನೆರಳು ಬೆಳಕಿನ ವಿನ್ಯಾಸಗಳಿಂದ ಆಪ್ತವೆನಿಸುವ ದೃಶ್ಯವದು. ಆದರೆ ಆ ದೃಶ್ಯ ಅಲ್ಲಿ ಯಾಕೆ ಬಂದು ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ.

ನಾಯಕ ಅಮ್ಮನಿಗೆ ಮುದ್ದೆಹುಳಿ ಮಾಡಿಕೊಡು ಎಂದು ಒತ್ತಾಯ ಮಾಡುತ್ತಾನೆ. ಹಾಗೆ ಮಾಡಿಕೊಟ್ಟ ಮರುದೃಶ್ಯದಲ್ಲಿಯೇ ಅವನು ಇಟಲಿಯಲ್ಲಿರುತ್ತಾನೆ. ಅಲ್ಲಿಂದಲೇ ಅಮ್ಮನಿಗೆ ಕರೆಮಾಡಿ ಅಲ್ಲಿನ ಪ್ರಾಚೀನ ಸ್ಮಾರಕಗಳನ್ನೆಲ್ಲ ತೋರಿಸುತ್ತಾನೆ. ಜತೆಗೆ ಅಮ್ಮ ಮಾಡಿಕೊಟ್ಟ ಮುದ್ದೆಹುಳಿಯನ್ನೂ ಜತೆಗೆ ತಂದಿರುವುದಾಗಿ ಹೇಳುತ್ತಾನೆ. ಅವನು ಯಾಕೆ ಇಟಲಿಗೆ ಹೋಗಬೇಕಿತ್ತು? ಅಲ್ಲಿಗೆ ಯಾಕೆ ಮುದ್ದೆಹುಳಿ ತೆಗೆದುಕೊಂಡು ಹೋದ ಎಂಬ ಪ್ರಶ್ನೆ ಎದ್ದರೆ ಸಿನಿಮಾದಲ್ಲಿ ಸಮರ್ಥ ಉತ್ತರ ಸಿಗುವುದಿಲ್ಲ. ಇಂಥ ಇನ್ನೂ ಕೆಲವು ಸನ್ನಿವೇಶಗಳು ‘ಸಾಹೇಬ’ ಸಿನಿಮಾದಲ್ಲಿದೆ. ಈ ಸಿನಿಮಾದ ಕಥೆಯೂ ತೀರಾ ಹೊಸಥರದ್ದೇನಲ್ಲ.

‘ಸಾಹೇಬ’ ಚಿತ್ರದ ಮೂಲಕ ರವಿಚಂದ್ರನ್‌ ಮಗ ಮನೋರಂಜನ್‌ ಸಿನಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ‘ಸ್ಟಾರ್‌ ಕುಡಿ’ಗಳನ್ನು ಸಿನಿತೆರೆಗೆ ಪರಿಚಯಿಸುವಾಗ ಕಾಣುವ ಅನಗತ್ಯ ಅಬ್ಬರ, ಅತಿರೇಕದ ಪ್ರಭಾವಳಿ ಬಳಕೆ, ಕಥೆಗಿಂತ ‘ಇಮೇಜ್‌’ ಭಾರವೇ ಅತಿಯಾದಾಗ ಉಂಟಾಗುವ  ಎಡಬಿಡಂಗಿತನಗಳು ‘ಸಾಹೇಬ’ನಲ್ಲಿ ಅಷ್ಟಾಗಿ ಕಾಣುವುದಿಲ್ಲ. ಇಲ್ಲಿಯೂ ಎರಡು ಹಾಡುಗಳ ಮೂಲಕ ರವಿಚಂದ್ರನ್‌ ಅವರ ಇಮೇಜ್‌ ಅನ್ನು ಮಗನಿಗೆ ಅಂಟಿಸುವ ಪ್ರಯತ್ನ ಕಾಣುತ್ತದಾದರೂ ಅದೇ ಮುನ್ನೆಲೆಯಾಗಿ ನಿಲ್ಲುವುದಿಲ್ಲ. ಮಾಸ್‌ ಪ್ರೇಕ್ಷಕರ ಶಿಳ್ಳೆಗೆ ಹಪಹಪಿಸದೆ, ಕುಟುಂಬ ಸಮೇತ ಚಿತ್ರ ನೋಡಲು ಬರುವವರ ಮನಸ್ಸಿನ ಮಂದಿರವನ್ನು ಭಾವುಕತೆಯ ಬಾಗಿಲು ತಟ್ಟಿಯೇ ಪ್ರವೇಶಿಸಬೇಕು ಎಂಬ ಸ್ಪಷ್ಟ ಉದ್ದೇಶ ಚಿತ್ರದುದ್ದಕ್ಕೂ ಕಾಣುತ್ತದೆ. 

ನಾಯಕ ಮನು ಶಾಲೆಗೆ ಹೋಗಿ ಓದಿದವನಲ್ಲ. ಬದಲಿಗೆ ಪುಸ್ತಕಗಳೊಟ್ಟಿಗೇ ಬೆಳೆದವನು. ಜಗತ್ತಿನ ಒಳ್ಳೆಯ ಪುಸ್ತಕಗಳನ್ನು ಓದುವುದು, ಸಿನಿಮಾ ನೋಡುವುದು, ಸುತ್ತಾಡುವುದು, ದನ ಕಾಯುವುದು ಇವೆಲ್ಲ ಅವನ ಹವ್ಯಾಸಗಳು. ಇದರಿಂದಾಗಿಯೇ ಅವನಿಗೆ ವಯಸ್ಸಿಗೆ ಮೀರಿದ ತಿಳಿವಳಿಕೆಯೂ, ಪ್ರಬುದ್ಧತೆಯೂ ಬಂದಿದೆ. ಸರಳ ಬದುಕಿನ, ಶ್ರೀಮಂತ ಪ್ರತಿಭೆಯ ಹುಡುಗ ಅವನು. ಅಂಥವನಿಗೆ, ವೈಫಲ್ಯದ ಸುಳಿಯಲ್ಲಿರುವ ನಂದಿನಿ ಎಂಬ ಹುಡುಗಿಯನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಬೇಕು ಎಂದು ಅನಿಸುತ್ತದೆ. ಅದಕ್ಕಾಗಿಯೇ ಅವನು ಅವಳ ಸುತ್ತಲೂ ಒಂದು ಕೃತಕ ಜಗತ್ತನ್ನೇ ಸೃಷ್ಟಿಸುತ್ತಾನೆ. ತಾನು ಮರೆಯಲ್ಲಿದ್ದುಕೊಂಡೇ ಜನಪ್ರಿಯ ನಟಿಯನ್ನಾಗಿಸುತ್ತಾನೆ. ಆದರೆ ತನ್ನ ಸಾಧನೆಗೆ ಜ್ಯೋತಿಷಿಯೇ ಕಾರಣ ಎನ್ನುವ ನಂಬಿಕೆಯಲ್ಲಿರುವ ನಂದಿನಿಗೆ ಮನುವಿನ ಬಗ್ಗೆ ಏನೂ ತಿಳಿದಿರುವುದಿಲ್ಲ.

ಅತಿಯಾದ ಬಿಲ್ಡಪ್‌ಗಳ ಹಂಗಿಲ್ಲದೆ ಕಥೆಯನ್ನು ಹೇಳಿಕೊಂಡು ಹೋಗಿದ್ದಾರೆ ನಿರ್ದೇಶಕ ಭರತ್‌. ಜತೆಗೆ ಚಿತ್ರಜಗತ್ತಿನಲ್ಲಿ ಇಂದು ಢಾಳಾಗಿ ಕಾಣಿಸುವ ಹುಳುಕುಗಳನ್ನು ತೋರಿಸುವ ದಿಟ್ಟತನವನ್ನೂ ಅವರು ಮಾಡಿದ್ದಾರೆ. ಭಾವುಕತೆಯ ಕಥನವನ್ನು ತೀವ್ರತೆಯಿಲ್ಲದ ಸಾವಧಾನದಲ್ಲಿಯೇ ಕಟ್ಟಲಾಗಿದೆ. ಸಡಿಲವಾಗಿರುವ ಚಿತ್ರಕಥೆ ಕೆಲವು ಕಡೆಗಳಲ್ಲಿ ಬೋರ್‌ ಹೊಡೆಸುತ್ತದೆ.

ಮನೋರಂಜನ್‌ ಕೂಡ ಸರಳತೆಯ ಪಾತ್ರಕ್ಕೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ತಾರಾನಟನ ಮಗನ ಪ್ರಭಾವಳಿಯ ಆಚೆಗೂ ಚಿತ್ರರಂಗಕ್ಕೆ ಬರಲು ಅವರು ನಡೆಸಿದ ಸಿದ್ಧತೆ ಡಾನ್ಸ್‌, ಫೈಟ್‌ಗಳಲ್ಲಿ ಎದ್ದು ಕಾಣುತ್ತದೆ. ಆದರೆ ನಟನೆಯಲ್ಲಿ ಅವರಿನ್ನೂ ಕಲಿಯಬೇಕಿರುವುದು ಬಹಳವಿದೆ. ಮುದ್ದು ಮುಖದ ಶಾನ್ವಿಯನ್ನು ನೋಡುತ್ತಲೇ ಮೈಮರೆಯಬಹುದು. ಅದನ್ನು ಬಿಟ್ಟು ಅವರಿಂದ ಉತ್ತಮ ನಟನೆಯನ್ನೂ ಅಪೇಕ್ಷಿಸಿದರೆ ನಿರಾಸೆಯೇ ಗತಿ.

ಸಿನಿಮಾದಲ್ಲಿ ನಿರ್ದೇಶಕರು ನಾಯಕನ ಮೂಲಕ ನಟನೆಯ ಪರಿಣತಿ ಗಳಿಸಿಕೊಳ್ಳುವ ಹಲವು ಟಿಪ್ಸ್‌ಗಳನ್ನು ನೀಡಿದ್ದಾರೆ. ಅವುಗಳನ್ನು ಮನೋರಂಜನ್‌ ಮತ್ತು ಶಾನ್ವಿ  ಇಬ್ಬರೂ ಅಳವಡಿಸಿಕೊಳ್ಳಬೇಕಾದ ಅವಶ್ಯತೆ ಎದ್ದು ಕಾಣುತ್ತದೆ. ಲಕ್ಷ್ಮೀ, ಚಿದಾನಂದ, ಬುಲೆಟ್‌ ಪ್ರಕಾಶ್‌ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT