ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರರ್ಥಕ ವೇಗೋತ್ಕರ್ಷ

ಸಿನಿಮಾ ವಿಮರ್ಶೆ
Last Updated 26 ಆಗಸ್ಟ್ 2017, 11:18 IST
ಅಕ್ಷರ ಗಾತ್ರ

ಚಿತ್ರ: ವಿವೇಗಂ (ತಮಿಳು)
ನಿರ್ಮಾಣ: ಸೆಂದಿಲ್ ತ್ಯಾಗರಾಜನ್, ಅರ್ಜುನ್ ತ್ಯಾಗರಾಜನ್, ಟಿ.ಜಿ. ತ್ಯಾಗರಾಜನ್
ನಿರ್ದೇಶನ: ಶಿವ
ತಾರಾಗಣ: ಅಜಿತ್ ಕುಮಾರ್, ಕಾಜಲ್ ಅಗರ್ ವಾಲ್, ವಿವೇಕ್ ಒಬೆರಾಯ್, ಅಕ್ಷರಾ ಹಾಸನ್

ನಾಯಕ ಹಾಗೂ ಪ್ರತಿನಾಯಕನ ನಡುವೆ ಕೊನೆಯ ಕಾದಾಟ. ಅದನ್ನು ರೋಚಕಗೊಳಿಸಲು ಭಾರತೀಯ ಚಿತ್ರರಂಗ ದಶಕಗಳಿಂದ ಸೂತ್ರವೊಂದನ್ನು ದಯಪಾಲಿಸಿದೆ. ಅದನ್ನು ಕಣ್ಣಿಗೊತ್ತಿಕೊಂಡಿರುವ ನಿರ್ದೇಶಕ ಶಿವ, ಗರ್ಭಿಣಿ ನಾಯಕಿಯನ್ನು ಕಾದಾಟದ ಜಾಗಕ್ಕೆ ತಂದು ನಿಲ್ಲಿಸಿದ್ದಾರೆ. ನಾಯಕಿ ಸುಮ್ಮನೆ ನಿಲ್ಲುವುದಿಲ್ಲ; ವೀರಗಾಯನ ಪಾಡುತ್ತಾಳೆ. ಅದನ್ನು ಕೇಳಿ ನಾಯಕನಿಗೆ ಹುಮ್ಮಸ್ಸು ಬರುತ್ತದೋ ಇಲ್ಲವೋ ಬೇರೆ ಮಾತು, ನೋಡುಗರಿಗೆ ನಗುವಂತೂ ಬರುತ್ತದೆ.

ನಾಯಕ ಸೂಪರ್ ಬೈಕ್ ಮೇಲೆ ಕುಳಿತು ಅತಿ ವೇಗವಾಗಿ ಸಾಗುತ್ತಿದ್ದಾನೆ. ಭಯಂಕರ ಚೇಸಿಂಗ್ ಸನ್ನಿವೇಶ. ಅವನ ಹಿಂದೆ ಕುಳಿತ ಹುಡುಗಿ ಬರುವ ಫೋನ್ ಕಾಲ್ ಸ್ವೀಕರಿಸಿ, ಸ್ಪೀಕರ್ ಆನ್ ಮಾಡುತ್ತಾಳೆ. ಅತ್ತ ಅದೇ ನಾಯಕನ ಗರ್ಭಿಣಿ ಪತ್ನಿ. ಆಸ್ಪತ್ರೆಗೆ ಪರೀಕ್ಷೆ ಮಾಡಿಸಿಕೊಳ್ಳಲು ಹೋಗಿರುವ ಅವಳು ಹೊಟ್ಟೆಯೊಳಗಿನ ಮಗುವಿನ ಹೃದಯಬಡಿತ ಕೇಳಿಸಿಕೊಳ್ಳುವಂತೆ ಕೋರುತ್ತಾಳೆ. ಅಂಥ ಸನ್ನಿವೇಶದಲ್ಲೂ ನಾಯಕ ಹೃದಯದ ಬಡಿತ ಕೇಳಿಸಿಕೊಂಡು ನಿಡುಸುಯ್ಯುತ್ತಾನೆ. ಮತ್ತೆ ನಗುವ ಅವಕಾಶ ಪ್ರೇಕ್ಷಕನಿಗೆ.

ಅಜಿತ್ ಅವರಿಗಿರುವ ಸ್ಟಾರ್ ಇಮೇಜಿನ ಹಂಗು ನೆಚ್ಚಿಕೊಂಡಿರುವ ಸಿನಿಮಾ 'ವಿವೇಗಂ'. ಚಿತ್ರುದುದ್ದಕ್ಕೂ ಅವರಿಗೆ ಬಿಲ್ಡಪ್‌ಗಳ ಮೆರವಣಿಗೆ. ನರೆತ ಕೂದಲಿನ, ಹುರಿಗಟ್ಟಿದ ದೇಹದ ಅವರು ಮಧ್ಯಮ ವಯಸ್ಸಿನಲ್ಲೂ ಸ್ಟಂಟ್‌ಗಳಿಗೆ ಎದೆಗೊಟ್ಟಿರುವುದಕ್ಕೆ ಶಹಬ್ಬಾಸ್. ಆದರೆ, ಶೀರ್ಷಿಕೆಗೆ ಅರ್ಥ ದಕ್ಕಿಸಿಕೊಡುವಷ್ಟು ವಿವೇಕ ಚಿತ್ರಕಥೆಯಲ್ಲಿ ಇಲ್ಲ.

ಭಯೋತ್ಪಾದನೆ, ನ್ಯೂಕ್ಲಿಯಾರ್ ದಾಳಿಯ ವಿರುದ್ಧ ನಾಯಕನ ಏಕವ್ಯಕ್ತಿ ಹೋರಾಟ ಚಿತ್ರಕಥನದ ಬಿಂದು. ಆ ಬಿಂದುವಿನಿಂದ ಹೊರಟ ಗೆರೆಗಳಲ್ಲಿ ಸರಳವಾದವು ಕಡಿಮೆ; ವಕ್ರವಾದವೇ ಹೆಚ್ಚು. ತಾಂತ್ರಿಕ ಶ್ರೀಮಂತಿಕೆ, ಅತಿ ವೇಗದ ನಿರೂಪಣೆ ಚಿತ್ರವನ್ನು ಕಣ್ಣು ಕೀಲಿಸಿ ನೋಡಲು ಬಿಡುವುದೇ ಇಲ್ಲ.

ನಾಯಕನ ಅಂಗಚಲನೆಗಿಂತ ಕ್ಯಾಮೆರಾ ಚಲನೆಯೇ ವೇಗವಾಗಿದೆ. ಚಲನಚಿತ್ರ ಎನ್ನುವುದೇ ಚಲನಶೀಲತೆಯ ವ್ಯಾಖ್ಯಾನವನ್ನು ಒಳಗೊಂಡಿದೆ. ಹೀಗಾಗಿ ಈ ಸಿನಿಮಾವನ್ನು 'ಅತಿ ಚಲನಚಿತ್ರ' ಎಂದು ಕರೆಯಬೇಕು, ಹಾಗಿದೆ ಸಿನಿಮಾಟೊಗ್ರಫಿ (ಈ ಚಿತ್ರದ ಸಿನಿಮಾಟೊಗ್ರಾಫರ್ ವೆಟ್ರಿ). ಆಂಥೋನಿ ಎಲ್. ರುಬೆನ್ ಸಂಕಲನ ಕೌಶಲ ಅತಿ ವೇಗಕ್ಕೆ ಇಂಧನವಾಗಿ ಪರಿಣಮಿಸಿದೆ.

ಆಧುನಿಕ ತಂತ್ರಜ್ಞಾನದ ಶ್ರೀಮಂತಿಕೆ ನೆಚ್ಚಿಕೊಂಡರೂ, ನಿರ್ದೇಶಕರಿಗೆ ಭಾರತೀಯ ಮಸಾಲೆ ಅರೆಯುವ ಮೋಹ. ಅದಕ್ಕೇ ಅವರು ಥ್ರಿಲ್ಲರ್‌ನಲ್ಲಿಯೂ ಭಾವನಾತ್ಮಕ ದೃಶ್ಯಗಳನ್ನು ಅನಗತ್ಯವಾಗಿ ಎಳೆದು ತಂದಿದ್ದಾರೆ. ಅವಕ್ಕೆ ಸಿನಿಮೀಯ ತರ್ಕವಿಲ್ಲದಿರುವುದು ಎದ್ದುಕಾಣುವ ಲೋಪ.

ಹ್ಯಾಕರ್ ಪಾತ್ರಧಾರಿಯನ್ನು ಪತ್ತೆಮಾಡುವುದು ಚಿತ್ರದಲ್ಲಿ ಮೆಚ್ಚಿಕೊಳ್ಳಬಹುದಾದ ಏಕೈಕ ಪ್ರಸಂಗ. ಅಜಿತ್ ಕುಮಾರ್ ಅಭಿನಯದಲ್ಲಿ ಹಳೆಯ ಹದವೇನೋ ಇದೆ. ಅದಕ್ಕೆ ಪೂರಕವಾದ ಹರಿತ ಸಂಭಾಷಣೆ ಇಲ್ಲ. ಹೊಡೆದಾಟಗಳೂ ಯಃಕಶ್ಚಿತ್ ಶಬ್ದದಲೆಗಳಾಗಿ ದಾಟುತ್ತವೆಯಷ್ಟೆ (ಸಂಗೀತ: ಅನಿರುದ್ಧ್ ರವಿಚಂದರ್). ನಾಯಕಿ ಕಾಜಲ್ ಅಗರ್ ವಾಲ್ ನಯನ ಮನೋಹರಿ. ಸಣ್ಣ ಪಾತ್ರದಲ್ಲಿ ಅಕ್ಷರಾ ಹಾಸನ್ ಕಾಣಿಸಿಕೊಂಡಿದ್ದಾರೆ.

ವಿವೇಕ್ ಒಬೆರಾಯ್ ಕ್ಲೋಸಪ್ ದೃಶ್ಯಗಳಲ್ಲಿ ಸಪ್ಪೆ ಸಂಭಾಷಣೆಗಳನ್ನು ಹೇಳುತ್ತಾ 'ಜೋಕರ್' ಆಗಿ ಭಾಸವಾಗುತ್ತಾರೆ. ವೇಗೋತ್ಕರ್ಷ ಮಾತ್ರ ಒಳ್ಳೆಯ ಸಿನಿಮಾ ಆಗಲಾರದು ಎಂಬುದಕ್ಕೆ 'ವಿವೇಗಂ' ತಾಜಾ ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT