ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯಕ್ಕೆ ಸಿಕ್ಕ ಮನ್ನಣೆ ಸಂಗೀತ, ನೃತ್ಯಕ್ಕೇಕಿಲ್ಲ?

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸಾಹಿತ್ಯ ಬದುಕಿನ ಕೈಗನ್ನಡಿ. ಜನಜೀವನದ ಪ್ರತಿಬಿಂಬ. ಒಂದು ಪ್ರದೇಶವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅಲ್ಲಿನ ಸಾಹಿತ್ಯ ಅಭ್ಯಾಸ ಮಾಡಬೇಕು ಎಂಬ ಮಾತಿದೆ. ಕತೆ, ಕಾದಂಬರಿ, ಕಾವ್ಯ, ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳು ಒಂದು ಪ್ರದೇಶದ ಆತ್ಯಂತಿಕ ಚಿತ್ರ ಕಟ್ಟಿಕೊಡುವಷ್ಟು ಶಕ್ತಿಸಾಮರ್ಥ್ಯ ಪಡೆದಿವೆ.

ಭಾಷೆ ಜನಜೀವನದ ನಾಡಿ. ಮನುಷ್ಯ ಒಂದು ಸಮಾಜವಾಗಿ ಬದುಕಲು ಸಾಧನವಾಗಿರುವುದೇ ಭಾಷೆ. ಇಂತಹ ಭಾಷೆಯನ್ನೇ ಆಕರವಾಗಿ ಪಡೆದಿರುವ ಸಾಹಿತ್ಯಕ್ಕೆ ಸಮಾಜದಲ್ಲಿ ಮನ್ನಣೆ ಇದೆ. ಸಾಹಿತ್ಯ ಎಂದರೆ ಸಾಹಚರ್ಯ, ಸಂಬಂಧ ಎಂಬ ಅರ್ಥವೂ ಇದೆ. ಕತೆ, ಕಾವ್ಯ, ನಾಟಕ ಮುಂತಾದ ಸೃಜನಾತ್ಮಕ ಬರವಣಿಗೆ ಮಾತ್ರವಲ್ಲ. ಸಾಮಗ್ರಿ, ಸಲಕರಣೆ ಎಂಬ ಮುಂದುವರಿದ ಅರ್ಥವೂ ಸಾಹಿತ್ಯಕ್ಕಿದೆ.

ಆದರೆ ಸಾಹಿತ್ಯ ಒಂದು ಸಮಾಜದ ಜನಜೀವನವನ್ನು ಹಿಡಿದಿಟ್ಟರೆ ಸಾಕೆ? ಸಮಾಜ ಬದಲಾವಣೆಗೆ ಪೂರಕವಾಗಿರಬೇಡವೆ? ಕಲೆ ಕಲೆಗಾಗಿ ಮಾತ್ರ ಇರಬೇಕೆ? ಅಥವಾ ಸಮಾಜದ ಬದಲಾವಣೆ ಪರವಾಗಿರಬೇಕೆ? ಎಂಬ ಪ್ರದರ್ಶನ ಕಲೆಗಳ ಕುರಿತಾದ ಚರ್ಚೆಗಳು ಸಾಹಿತ್ಯದಲ್ಲೂ ಇವೆ.

ಎಡ, ಬಲ ಚಿಂತನೆಗಳೂ ಇವೆ. ಸಾಹಿತ್ಯ ಸಹೃದಯನ ಮನಸ್ಸನ್ನು ತಣಿಸಿದರೆ ಸಾಕು. ಘೋಷಣೆಯಾಗಬೇಕಿಲ್ಲ ಎಂಬ ಚರ್ಚೆಗಳಿವೆ, ಏನೇ ಇರಲಿ. ಸಾಹಿತ್ಯವಂತೂ ಒಂದು ಸಮಾಜದ ಕನ್ನಡಿ. ಅದರದ್ದೇ ಆದ ಮಹತ್ವ ಇದ್ದೇಇದೆ.

ಸಾಹಿತ್ಯ ಎರಡು ರೀತಿಯಲ್ಲಿ ಸಂವಹನವಾಗುತ್ತದೆ. ಒಂದು ಮೌಖಿಕ ಮತ್ತೊಂದು ಶಾಬ್ದಿಕ. ಅಕ್ಷರಸ್ಥ ಅನಕ್ಷರಸ್ಥ ಎಂಬ ಭೇದ ಮೌಖಿಕ ಸಾಹಿತ್ಯಕ್ಕೆ ಇಲ್ಲ. ಅನುಭವ, ಕಲ್ಪನೆ- ಮತ್ತದನ್ನು ಕತೆ ಕಟ್ಟಿಹೇಳಬಲ್ಲ ಸೃಜನಾತ್ಮಕ ಗುಣ ಇರುವ ಯಾರೇ ಆಗಲಿ ಮೌಖಿಕ ಕವಿಯಾಗಬಲ್ಲ. ಮನ್ನಣೆ ಸಿಕ್ಕಷ್ಟು ಕಾಲ ಮೌಖಿಕ ಕಾವ್ಯ ಚಲಾವಣೆಯಲ್ಲಿರುತ್ತದೆ. ಆದರೆ ಶಬ್ದಗಳಲ್ಲಿ ದಾಖಲಾಗುವ ಸಾಹಿತ್ಯ ಹಾಗಲ್ಲ. ಅದಕ್ಕೆ ಒಂದು ರೀತಿ ಶಾಶ್ವತತೆ ಲಭಿಸಿಬಿಟ್ಟಿದೆ. ಸಾಹಿತ್ಯ ಒಂದು ಸಮಾಜದ ಆಕರ, ಒಂದು ಸಮಾಜದ ಇತಿಹಾಸ ಎಂಬಷ್ಟು ಪ್ರತೀತಿಯಾಗಿದೆ.

ಸಾಹಿತ್ಯಕ್ಕೆ ಸಿಕ್ಕಿರುವ ಮನ್ನಣೆಯೇನೋ ಸರಿ. ಆದರೆ ಸಂಗೀತ, ನೃತ್ಯ, ಚಿತ್ರಕಲೆ, ಅಭಿನಯ ಮುಂತಾದ ಪ್ರದರ್ಶನ ಕಲೆಗಳಿಗೆ- ಸಾಹಿತ್ಯಕ್ಕೆ ಸಿಕ್ಕಷ್ಟು ಮನ್ನಣೆ ಸಿಕ್ಕಿಲ್ಲ ಎಂಬುದು ಅಚ್ಚರಿಯಾದರೂ ವಾಸ್ತವ ಸಂಗತಿ. ಸಾಹಿತ್ಯ ಒಂದು ಸಮಾಜದ ಕೈಗನ್ನಡಿಯಾದರೆ- ಸಂಗೀತ, ಚಿತ್ರಕಲೆ, ನಾಟಕ, ನೃತ್ಯ ಮತ್ತಿನ್ನೇನು? ಅವೂ ಸಮಾಜದ ಪ್ರತಿಬಿಂಬ.

ಒಂದು ಸಮಾಜದ ಅಂತಃಸಾಕ್ಷಿ. ಇದೊಂದು ಸುಸಂಸ್ಕೃತ ಸಮಾಜ ಎಂದು ಹೇಳುವಾಗ ಅಲ್ಲಿನ ಸಾಹಿತ್ಯದ ಸಾಧನೆಯನ್ನು ಹೇಳುತ್ತೇವಲ್ಲವೆ? ಹಾಗೆಯೇ ಸಂಗೀತ ನೃತ್ಯ ಮುಂತಾದ ಕಲೆಗಳ ಸಾಧನೆ ಕೂಡ ಮುಖ್ಯವಾಗಿ ಪರಿಗಣಿತವಾಗುತ್ತದೆ. ಈ ಅಂಶಗಳನ್ನು ಯಾರೇನು ಅಲ್ಲಗಳೆಯುವುದಿಲ್ಲ.

ಆದರೆ ಕನ್ನಡ ನಾಡಿನ ಸಾಧನೆ, ಹೆಮ್ಮೆಯ ಬಗ್ಗೆ ಹೇಳುವಾಗ ಸಾಮಾನ್ಯವಾಗಿ ಸಾಹಿತ್ಯವನ್ನೇ ಮೊದಲು ಪ್ರಸ್ತಾಪಿಸುತ್ತೇವೆ. ಸಾಹಿತ್ಯದ ಹಿರಿಮೆ ಗರಿಮೆಗಳೇ ಭಾಷಣದ ಪ್ರಧಾನ ವಸ್ತುವಾಗಿರುತ್ತವೆ. ಕಾವೇರಿಯಿಂದ ಮಾ ಗೋದಾವರಿಯವರೆಗಿನ... ಎಂಬ ಹೆಗ್ಗಳಿಕೆಯ ಬಣ್ಣನೆಗಳು ಸಾಹಿತ್ಯವನ್ನೇ ಆವರಿಸಿರುತ್ತವೆ. ಒಬ್ಬರು ಹೇಳಿದ್ದೇ ಮತ್ತೊಬ್ಬರಲ್ಲಿ ಪುನರಾವರ್ತನೆಯಾಗುತ್ತದೆ, ಬರಬರುತ್ತಾ ಇದು ಕ್ಲೀಷೆಯಾಗುತ್ತದೆ.

ಬಹುಭಾಷಾ ಒಕ್ಕೂಟದಲ್ಲಿ ಕನ್ನಡ ಸಾಹಿತ್ಯ ಯಾವ ಭಾಷೆಗಿಂತಲೂ ಕಡಿಮೆಯಲ್ಲ. ಅದರ ಸಾಧನೆ ಬಹುದೊಡ್ಡದು. ಎಂಟು ಜ್ಞಾನಪೀಠ ಪ್ರಶಸ್ತಿ ಸಿಕ್ಕಿರುವುದೇ ಅದಕ್ಕೆ ಸಾಕ್ಷಿ. ಭಾರತದ ಹೆಚ್ಚಿನ ಭೌಗೋಳಿಕ ಪರಿಸರದ ಆಡುಭಾಷೆಯಾದ ಹಿಂದಿಗಿಂತ ಕನ್ನಡ ಕಡಿಮೆ ಎಂಬ ಮಾತಿಲ್ಲ.

ಬಂಗಾಳಿ, ಮರಾಠಿ, ಮಲಯಾಳ, ತಮಿಳು ಮುಂತಾದ ಭಾಷೆಗಳ ಸಾಹಿತ್ಯದ ಸಾಧನೆಗೆ ಸರಿಸಾಟಿಯಾಗಿ ಅಥವಾ ಅದಕ್ಕಿಂತ ಹೆಚ್ಚಿನ ಸಾಧನೆಯನ್ನು ಕನ್ನಡ ಮಾಡಿದೆ ಎಂದು ಹೇಳುತ್ತೇವೆ. ಅದೇನೋ ಸರಿ. ಯಾರೇ ಆಗಲಿ ಹಾಗೆ ಹೇಳಿಕೊಳ್ಳುವುದು, ವಾದ ಮಾಡುವುದು ಸಮರ್ಥನೀಯವೇ ಆಗಿದೆ.

ಆದರೆ ಸಾಹಿತ್ಯದ ಭರದಲ್ಲಿ ಸಂಗೀತ, ನಾಟಕ, ಚಿತ್ರಕಲೆ ಸಾಧನೆಗಳನ್ನು ಮರೆತೇ ಬಿಡುತ್ತೇವೆ. ಸಂಗೀತ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಮನ್ಸೂರು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಆರ್.ಕೆ.ಶ್ರೀಕಂಠನ್, ಸವಾಯಿ ಗಂಧರ್ವ ಮುಂತಾದ ಕನ್ನಡಿಗರ ಸಾಧನೆ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ವಿಶ್ವಮಟ್ಟದಲ್ಲೇ ಗಮನ ಸೆಳೆದಿರುವಂತಹದು.

ವಾದ್ಯಸಂಗೀತದಲ್ಲಿ ಪಿಟೀಲು ಚೌಡಯ್ಯ, ಕೊಳಲು ವಾದಕ ಮಹಾಲಿಂಗಂ, ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್; ನೃತ್ಯದಲ್ಲಿ ಮಾಯಾರಾವ್, ಚಂದ್ರಭಾಗಾದೇವಿ- ಯುಎಸ್.ಕೃಷ್ಣರಾವ್; ಚಿತ್ರಕಲೆಯಲ್ಲಿ ಕೆ.ಕೆ.ಹೆಬ್ಬಾರ್, ಆರ್.ಎಂ. ಹಡಪದ, ಎಸ್.ಎಂ.ಪಂಡಿತ್ ಮುಂತಾದ ಕನ್ನಡಿಗರ ಸಾಧನೆ ವಿಶ್ವದ ಯಾವುದೇ ಸಾಧಕರಿಗಿಂತ ಕಡಿಮೆಯಲ್ಲ.

ದೆಹಲಿಯಲ್ಲಿರುವ ರಾಷ್ಟ್ರೀಯ ನಾಟಕ ಶಾಲೆ ಆರಂಭಕ್ಕೆ ಒಬ್ಬ ಕನ್ನಡತಿ ಕಾರಣ. ಕಮಲಾದೇವಿ ಚಟ್ಟೋಪಾದ್ಯಾಯ ಆ ಮಹಾತಾಯಿ. ಕರಾವಳಿ ಕನ್ನಡದ ಕಮಲಾದೇವಿ- ಬಂಗಾಳಿಯ ಚಟ್ಟೋಪಾದ್ಯಾಯರನ್ನು ವರಿಸಿ ದೇಶದಾದ್ಯಂತ ಸಾಂಸ್ಕೃತಿಕ ಪರಿಚಾರಿಕೆ ಮಾಡಿದವರು. ಪ್ರಧಾನಿ ನೆಹರೂ ಅವರಿಗೆ ರಂಗಭೂಮಿಯ ಸಂಸ್ಥೆಯೊಂದನ್ನು ಸ್ಥಾಪಿಸುವಂತೆ ಸಲಹೆ ನೀಡಿದವರು ಅವರು. ಇದರ ಪರಿಣಾಮವಾಗಿ ಏಷಿಯನ್ ಥಿಯೇಟರ್ ಇನ್ಸ್‌ಟಿಟ್ಯೂಟ್ ಆರಂಭವಾಯಿತು. ಇದೇ ಮುಂದೆ ರಾಷ್ಟ್ರೀಯ ನಾಟಕ ಶಾಲೆಯಾಯಿತು.

ರಂಗಜಂಗಮನಾಗಿ ದೇಶವನ್ನೇ ಸುತ್ತಿದವರು ಬಿ.ವಿ.ಕಾರಂತರು. ದಕ್ಷಿಣ ಭಾರತ ಪ್ರಮುಖವಾಗಿ ಸೇರಿದಂತೆ ದೇಶದ ವಿವಿಧೆಡೆ ತಮ್ಮ ನಾಟಕ ಕಂಪನಿ ಕ್ಯಾಂಪ್ ಮಾಡಿದವರು ಗುಬ್ಬಿ ವೀರಣ್ಣನವರು. ಶ್ರೀರಂಗ, ಕೈಲಾಸಂ, ಕಂದಗಲ್ಲ ಹಣಮಂತರಾಯ ಮುಂತಾದವರಿಗೆ ನಾಟಕ ಎಂದರೆ ಅದು ‘ರಚನೆ’ ಮಾತ್ರವಾಗಿರಲಿಲ್ಲ; ರಂಗಚಳವಳಿಯನ್ನು ಕಟ್ಟುವುದು ಅವರ ಧ್ಯೇಯವಾಗಿತ್ತು.

ಹಂದಿಗನೂರು ಸಿದ್ದರಾಮಪ್ಪ, ಗೋಕಾಕ ಬಸವಣ್ಣೆಪ್ಪ, ವರದಾಚಾರ್ಯ, ಸುಬ್ಬಯ್ಯನಾಯ್ಡು, ಹಿರಣ್ಣಯ್ಯ, ಏಣಗಿ ಬಾಳಪ್ಪ, ಸುಭದ್ರಮ್ಮ ಮನ್ಸೂರು ಮುಂತಾದವರಿಗೆ ರಾಷ್ಟ್ರಮನ್ನಣೆ ಸಿಕ್ಕಿರದೇ ಇರಬಹುದು. ಆದರೆ ಯಾವ ರಾಷ್ಟ್ರಪ್ರಶಸ್ತಿ ಪುರಸ್ಕೃತರಿಗಿಂತ ಅವರು ಕಡಿಮೆ?

ಆದರೆ ನಮ್ಮ ಬಣ್ಣನೆಗಳು ಸಾಹಿತ್ಯವನ್ನು ಮೀರಿ ಹೋಗುವುದೇ ಇಲ್ಲ. ಅದರಲ್ಲೂ ಜ್ಞಾನಪೀಠದ ವರ್ಣನೆಗೆ ನಿಂತುಬಿಡುತ್ತವೆ. ಅಷ್ಟೇ ಪ್ರಮುಖವಾದ ಸರಸ್ವತಿ ಸಮ್ಮಾನ್ ನಮ್ಮ ನೆನಪಿಗೆ ಬರುವುದಿಲ್ಲ! ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಸಾಧನೆ ಅಮೋಘವಾದುದು. ಕನ್ನಡ ಸಾಹಿತ್ಯಕ್ಕೆ ಅವರುಗಳೆಲ್ಲ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ.

ಡಿ.ವಿ.ಜಿ, ಕೆ.ಎಸ್‌.ನ, ತೇಜಸ್ವಿ ಮುಂತಾದ ಇನ್ನೂ ನಾಲ್ಕಾರು ಸಾಹಿತಿಗಳಿಗೆ ಜ್ಞಾನಪೀಠ ಬರಬಹುದಿತ್ತು. ಪ್ರಶಸ್ತಿ ಬರಲಿಲ್ಲವೆಂಬ ಕಾರಣಕ್ಕೆ ಅವರ ಸಾಧನೆಯೂ ಕಡಿಮೆಯದಲ್ಲ. ಸಾಹಿತ್ಯದ ರಾಜಕಾರಣ ಏನೇ ಇರಲಿ. ಸಾಹಿತ್ಯಕ್ಕೆ ಅಗ್ರಮನ್ನಣೆ ಸಿಕ್ಕಿರುವುದಂತೂ ಸುಳ್ಳಲ್ಲ. ಸಿಕ್ಕಲಿ, ಸಂತೋಷವೇ. ಆದರೆ ಅದರ ಜತೆಗೆ ಪ್ರದರ್ಶನ ಕಲೆಗಳಲ್ಲಿ ಕನ್ನಡಿಗರ ಸಾಧನೆ ಕಡಿಮೆ ಇಲ್ಲ.

ದೇಶ, ವಿದೇಶಗಳು ಹೆಮ್ಮೆ ಪಡುವಂತಹ ಸಾಧನೆ ಕನ್ನಡಿಗರದು. ಸಂಗೀತ ಕ್ಷೇತ್ರದಲ್ಲಿ ತಾನ್‌ಸೇನ್ ಪ್ರಶಸ್ತಿಯಂತಹ ಅತ್ಯುನ್ನತ ಪ್ರಶಸ್ತಿ ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿದೆ.

ಸಾಹಿತ್ಯದ ಹಾಗೆಯೇ ಪ್ರದರ್ಶನ ಕಲೆಗಳಿಗೆ ಮನ್ನಣೆ ಸಿಗಲಿ ಎಂಬುದಕ್ಕೆ ಯಾರೂ ಅಡ್ಡಿ ಏನಾಗಿಲ್ಲ. ಆದರೆ ಹಲವು ಬಾರಿ ಕ್ಲೀಷೆಗಳೇ ನಮ್ಮನ್ನು ಆಳುತ್ತವೆ. ಒಮ್ಮೆ ಯಾರೋ ಒಂದು ಹೇಳಿಬಿಡುತ್ತಾರೆ. ಅದು ಗಿಳಿಪಾಠವಾಗಿಬಿಡುತ್ತದೆ. ಇಂತಹ ಕ್ಲೀಷೆಗಳಿಗೆ ಅನೇಕ ಉದಾಹರಣೆ ನೀಡಬಹುದು. ಎದ್ದುಕಾಣುವ ಒಂದು ಉದಾಹರಣೆ ನೀಡುವುದಾದರೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ.

ಕರ್ನಾಟಕ ರಾಜ್ಯ ಸರ್ಕಾರ ಪ್ರತಿವರ್ಷ ಅರವತ್ತರಿಂದ ಎಪ್ಪತ್ತು ಸಾಧಕರಿಗೆ ಪ್ರಶಸ್ತಿ ನೀಡುತ್ತ ಬಂದಿರುವುದು ಸರಿಯಷ್ಟೆ. ಕೃಷಿ, ವಿಜ್ಞಾನ, ಲಲಿತಕಲೆ, ನೃತ್ಯ, ಪತ್ರಿಕೋದ್ಯಮ, ಸಮಾಜಸೇವೆ, ರಂಗಭೂಮಿ, ಸಾಹಿತ್ಯ -ಹೀಗೆ ವಿವಿಧ ರಂಗಗಳಲ್ಲಿ ಸೇವೆಸಲ್ಲಿಸಿದ ತಲಾ ಐದಾರು ಮಂದಿಯನ್ನು ರಾಜ್ಯೋತ್ಸವಕ್ಕೆ ಆಯ್ಕೆ ಮಾಡಲಾಗಿರುತ್ತದೆ. ಆ ಅರವತ್ತು ಸಾಧಕರಲ್ಲಿ ಸಾಹಿತಿಗಳನ್ನೇ ಮೊದಲ ಸಾಲಿನಲ್ಲಿ ಕೂಡಿಸಲಾಗಿರುತ್ತದೆ.

ಒಂದು ವರ್ಷ ಕೃಷಿಯಲ್ಲಿ ಸಾಧನೆ, ಮತ್ತೊಂದು ವರ್ಷ ಲಲಿತಕಲೆ ಸಾಧಕರಿಗೆ, ಮುಗದೊಂದು ವರ್ಷ ಸಮಾಜಸೇವೆಯ ಸಾಧಕರಿಗೆ ಮೊದಲ ಸಾಲಿನಲ್ಲಿ ಯಾಕೆ ಕೂಡಿಸಬಾರದು? ಪ್ರಶಸ್ತಿ ಪುರಸ್ಕೃತರನ್ನು ಪ್ರತಿನಿಧಿಸಿ ಒಬ್ಬಿಬ್ಬರು ಮಾತನಾಡಬೇಕೆಂದರೆ ಅಲ್ಲೂ ಸಂಘಟಕರಿಗೆ ತಕ್ಷಣಕ್ಕೆ ನೆನಪಿಗೆ ಬರುವುದು ಸಾಹಿತಿಗಳ ಹೆಸರು. ಇವಕ್ಕೆ ಅಪವಾದ ಇಲ್ಲವೆಂದಲ್ಲ. ಇಂತಹ ಅವಗಢಗಳಿಗೆ ಗಿಳಿಪಾಠಗಳೇ ಕಾರಣ.

ಕ್ಲೀಷೆಗಳು, ಗಿಳಿಪಾಠಗಳನ್ನು ಕೈಬಿಟ್ಟು ಸಾಹಿತ್ಯದ ಹಾಗೆಯೇ ಸಂಗೀತ, ನೃತ್ಯ, ನಾಟಕಗಳಿಂದಲೂ ಕನ್ನಡನಾಡು ಸಂಪನ್ನವಾಗಿದೆ, ಸುಸಂಪನ್ನವಾಗಿದೆ ಎಂದು ಒತ್ತಿಹೇಳಬೇಕಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT