ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಹರೂಪಿಯಾ...

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

–ಚಲಂ ಹಾಡ್ಲಹಳ್ಳಿ

ರೋಷನಿ ಕೂಡ ಚಿತ್ರದುರ್ಗಕ್ಕೆ ಬರುತ್ತಾಳೆ ಎಂದು ಗೊತ್ತಾದಾಗ ಅನಂತನಿಗೆ ತುಂಬಾನೇ ಬೇಸರವಾಯಿತು. ನಾನು ಬೆಂಗಳೂರಿಗೆ ಬರದೇ ಹೋಗಿದ್ದರೆ ಅವಳ ಜೊತೆಯಲ್ಲೇ ದುರ್ಗದವರೆಗೂ ಪ್ರಯಾಣಿಸಬಹುದಿತ್ತು, ಅವಳ ಪಕ್ಕದಲ್ಲಿ ಕುಳಿತು ಅವಳನ್ನು ಮಾತನಾಡಲು ಬಿಟ್ಟು ಅವಳ ಸಾನ್ನಿಧ್ಯವನ್ನು ಸವಿಯಬಹುದಿತ್ತು ಅಂದುಕೊಂಡು ಕೈ ಹಿಸುಕಿಕೊಂಡ.

ಅವಳದ್ದು ದಿಢೀರ್ ಪ್ಲ್ಯಾನ್ ಆಗಿರಬಹುದು ಅಥವಾ ನಾನೂ ಬರುತ್ತೇನೆ ಅಂತ ಗೊತ್ತಿದ್ದರಿಂದ ಕಡೆಯ ಕ್ಷಣದಲ್ಲಿ ತನ್ನ ಬರುವಿಕೆಯನ್ನು ಘೋಷಿಸಿ ಅವಾಯ್ಡ್ ಮಾಡಿದಳಾ ಎಂಬ ಅನುಮಾನವೂ ಕಾಡಿತು. ತನ್ನನ್ನು ಅವಾಯ್ಡ್ ಮಾಡಲಿಕ್ಕಾಗಿಯೇ ಅವಳು ಹಾಗೆ ದಿಢೀರ್ ದುರ್ಗಕ್ಕೆ ಬರುವ ಪ್ಲಾನ್ ಮಾಡಿದ್ದಾಳೆ ಅಂತ ಅನ್ನಿಸಿದ ಕ್ಷಣವೇ ಅನಂತ ತಾನು ದುರ್ಗಕ್ಕೆ ಹೋಗುವುದರಲ್ಲಿ ಯಾವ ಪ್ರಯೋಜನವೂ ಇಲ್ಲ ಅಂದುಕೊಂಡು ಪ್ಲ್ಯಾನ್ ಬದಲಾಯಿಸಿ ನೆನ್ನೆಯಿಂದ ಗೆಳೆಯರು ಒತ್ತಾಯಿಸುತ್ತಿದ್ದ ‘ಬಹುರೂಪಿಯಾ’ ನಾಟಕ ನೋಡುವ ಕಡೆಗೆ ಮನಸ್ಸನ್ನು ಹೊರಳಿಸಿದ.

ಯಾಕೋ ಯಾವಾಗಲೂ ಆಗುವಂತೆ ಅನಂತನಿಗೆ ಆಗಲೂ ಆಯಿತು. ಅವನು ಬಹುರೂಪಿಯಾ ನೋಡಿಕೊಂಡು ಬೆಂಗಳೂರಿನಲ್ಲೇ ಇರುವ ಮನಸ್ಸು ಮಾಡಿದ ಮರು ಕ್ಷಣದಲ್ಲೇ ರೋಷನಿ ಮೆಸೇಜ್ ಮಾಡಿದಳು...

‘ ಬರ್ತಾ ಇಲ್ವಾ..?’
‘ ಇಲ್ಲಾ, ಇಲ್ಲಿ ನಾಟಕ ನೋಡಲಿಕ್ಕಿದೆ’
‘ಓಹ್ ಈ ನಾಟಕಕ್ಕೇನೂ ಕಡಿಮೆಯಿಲ್ಲ..’
‘ಇಲ್ಲ ನಿಜವಾಗಿಯೂ... ಆಗಲೇ ಟಿಕೆಟ್ ಬುಕ್ ಆಗಿದೆ... ರಂಗಶಂಕರದಲ್ಲಿ ಬಹಳ ಕಷ್ಟಪಟ್ಟು ಟಿಕೆಟ್ ಅರೆಂಜ್ ಆಗಿದೆ’
‘ಈಗೇನೂ... ಬರಲ್ವಾ..?’
ಅನಂತನಿಗೆ ಇಷ್ಟೇ ಶಕ್ತಿ ಇದ್ದದ್ದು. ರೋಷನಿಯ ಮಾತುಗಳ ಮುಂದೆ ಇದುವರೆಗೆ ಈತನ ಆಟಗಳು ಯಾವುದೂ ನಡೆದಿರಲಿಲ್ಲ.
‘ಈಗ ಹೊರಡ್ತೀನಿ...’ ಅಂತ ಮೆಸೇಜ್ ಹಾಕಿದ.

ಅನಂತ ಚಿತ್ರದುರ್ಗಕ್ಕೆ ಹೋಗಿ ಕಾರ್ಯಕ್ರಮದ ಉದ್ಘಾಟನೆಯ ಭಾಷಣವನ್ನೂ ಕೇಳಿದ. ರೋಷನಿ ಬರುವುದಿನ್ನೂ ತಡವಾಗುತ್ತದೆ ಎಂಬುದು ತಿಳಿದಿತ್ತು. ಅಲ್ಲಿ ಕಾರ್ಯಕ್ರಮ ನಡೆಸುತ್ತಿದ್ದವರು ಅನಂತನಿಗೆ ಆತ್ಮೀಯರಾದವರೇ ಆಗಿದ್ದರು. ರೋಷನಿಗೂ ಕೂಡ. ಆದರೆ ಯಾರೂ ಅನಂತನ ಹತ್ತಿರ ರೋಷನಿಯ ಬಗ್ಗೆ ಕೇಳದೇ ಹೋದದ್ದು ಆತಂಕವಾಯಿತು. ನಾವಿಬ್ಬರೂ ಒಂದೇ ಊರಿನಿಂದ ಬರುವವರು ಅಂತ ಗೊತ್ತಿದ್ದೂ ಅವಳ್ಯಾಕೆ ಬರಲಿಲ್ಲ ಅಂತ ಯಾರಾದರೂ ಯಾಕೆ ಕೇಳಲಿಲ್ಲ.

ನಾನು ಅವಳನ್ನು ಇಷ್ಟ ಪಡುತ್ತಿರುವುದು ಇವರೆಲ್ಲರಿಗೂ ಗೊತ್ತಾಗಿ ಹೋಗಿದೆಯಾ ಅಂದುಕೊಂಡ. ಅಲ್ಲಿ ಒಂದಿಬ್ಬರಿಗೆ ಅನುಮಾನವಿದೆ ಎಂಬುದು ಮಾತ್ರ ಗೊತ್ತಿತ್ತು. ಯಾರಾದರೂ ಕೇಳಿದ್ದರೆ ಚಂದವಿತ್ತು ಅಂದುಕೊಂಡ. ತುಂಬಾ ಹೊತ್ತಾದರೂ ಯಾರೂ ಕೇಳಲಿಲ್ಲ. ‘ಅನಂತ ಸರ್ ನಾನು ಗೊತ್ತಾಯ್ತಾ... ರಾಜು ಅಂತ’ ಪೋಟೋ ಹೊಡೆಯುತ್ತಿದ್ದ ರಾಜೇಶ ಬಂದು ಪಕ್ಕ ಕುಳಿತರು.

ಅವರನ್ನು ಅನಂತ ಅಲ್ಲಿಯವರೆಗೆ ಫೇಸ್‌ಬುಕ್ಕಿನಲ್ಲಿ ಮಾತ್ರ ನೋಡಿದ್ದ. ಫೇಸ್‌ಬುಕ್ಕಿನ ಪ್ರೊಫೈಲ್ ಫೋಟೋದಲ್ಲಿ ‘ಮೊಹೊಬ್ಬತೇ’ ಸಿನೆಮಾದಲ್ಲಿ ಅಮಿತಾಬ್ ಬಚ್ಚನ್ ಶಾಲು ಹೊದ್ದುಕೊಂಡು ಇರುವಂತೆ ಇರುವ ಒಂದು ಫೋಟೋ ಹಾಕಿಕೊಂಡಿದ್ದ ರಾಜೇಶ್ ಇಲ್ಲಿ ತುಂಬಾ ನಿರಾಸೆ ಹುಟ್ಟಿಸುವಂತೆ ಕಾಣುತ್ತಿದ್ದ.

ಅನಂತ ‘ರೋಷನಿ ಮದ್ಯಾಹ್ನದ ಹೊತ್ತಿಗೆ ಬರಬಹುದು’ ಅಂದ. ರಾಜೇಶ್ ಕೊಂಚ ಗಾಬರಿಗೊಂಡವನಂತಾಗಿ ‘ಓಹ್ ಹೌದಾ...’ ಅಂದ. ‘ನೀವಿಬ್ಬರೂ ಜೊತೇಲೇ ಬರ್ತಿರಿ ಅಂದ್ಕೊಂಡಿದ್ವಿ...’ ಅಂದ ರಾಜೇಶ ಈಗ ಫೇಸ್‌ಬುಕ್ಕಿನ ಪ್ರೊಫೈಲ್ ಫೋಟೋದವನ ತರಾನೇ ಕಾಣಿಸತೊಡಗಿದ. ನಮ್ಮ ಬಗ್ಗೆ ಸಿಕ್ಕಾಪಟ್ಟೆ ಮಾತಾಗಿದೆ ಅಂದುಕೊಂಡು ಒಂಥರಾ ಕಸಿವಿಸಿ ಅನುಭವಿಸಿದ ಅನಂತ.

ನಮ್ಮ ಬಗ್ಗೆ ಈ ರೀತಿಯಾಗಿ ಯಾರಾದರೂ ಮಾತನಾಡುತ್ತಾರೆ ಎಂಬುದು ಖುಷಿಯ ವಿಚಾರವೋ, ಮುಜುಗರದ ವಿಚಾರವೊ ಅಂತ ಕೊಂಚ ಹೊತ್ತು ಯೋಚಿಸುತ್ತಾ ಕುಳಿತಿದ್ದ. ವೇದಿಕೆಯ ಮೇಲೆ ಯಾರು ಮಾತನಾಡಿದರೋ ಬಿಟ್ಟರೋ ಗೊತ್ತಿಲ್ಲ... ಇವನು ಮಾತ್ರ ಯಾಂತ್ರಿಕವಾಗಿ ಚಪ್ಪಾಳೆ ಹೊಡೆಯುತ್ತಾ ಕುಳಿತ.

ಸ್ವಲ್ಪ ಹೊತ್ತಿನ ನಂತರ ಇಡೀ ಹಾಲಿನ ತುಂಬಾ ಸಂಭ್ರಮ ಮನೆ ಮಾಡಿದಂತೆ ಭಾಸವಾಯಿತು. ಎಲ್ಲರೂ ವೇದಿಕೆ ಬಿಟ್ಟು ಬೇರೆಡೆಗೆ ಗಮನ ನೆಟ್ಟಿದ್ದಾರೆ ಅನ್ನಿಸಿತು. ರೋಷನಿ ಬಂದು ಗೌರಿಯ ಜೊತೆ ಮಾತನಾಡುತ್ತಾ ಕುಳಿತಿದ್ದಳು. ಕೊಂಚ ದೂರದಲ್ಲಿದ್ದ ಅವಳು ಬಿಳಿ ಬಣ್ಣದ ಚೂಡಿದಾರ್ ಧರಿಸಿ ಬಂದಿದ್ದಳು. ಅಲ್ಲಿಗೆ ಬಂದವರಲ್ಲಿ ಯಾರೂ ಬಿಳಿ ಬಣ್ಣದ ಡ್ರೆಸ್ ಹಾಕಿರಲಿಲ್ಲ ಎಂಬುದು ವಿಶೇಷವಲ್ಲದೆ ಮತ್ತೇನು ಅಂತ ಅಚ್ಚರಿಗೊಂಡ.

ಬೆಳಗಿನ ಗೋಷ್ಠಿ ಮುಗಿದು ಎಲ್ಲರೂ ಊಟಕ್ಕೆ ಹೊರಟರು. ಒಂದೇ ಕುಟುಂಬದವರಂತಿದ್ದ ಎಲ್ಲರೂ ಊಟದ ನೆಪದಲ್ಲಿ ಒಟ್ಟಿಗೆ ಕುಳಿತು ಪರಿಚಯ ಮಾಡಿಕೊಳ್ಳುತ್ತಾ ಹರಟತೊಡಗಿದರು. ಅಲ್ಲಿ ರೋಷನಿಯೂ ಎಲ್ಲರಿಂದ ಹೊಗಳಿಸಿಕೊಳ್ಳುತ್ತಾ ಕುಳಿತಳು. ಹೊಗಳಿಕೆ ನನಗೆ ಮಾಮೂಲಿ ಆದರೆ ಮುಜುಗರ ಮಾತ್ರ ಹೊಸದು ಎಂಬಂಥ ಭಾವದಲ್ಲಿ ರೋಷನಿ ಮುಜುಗರ ಪಡುತ್ತಾ ಎಲ್ಲರನ್ನೂ ಮುದಗೊಳಿಸುತ್ತಿದ್ದಳು.

ಅನಂತ ಮಾತ್ರ ಘನ ಗಂಭೀರನಾಗಿ ಯಾರೊಟ್ಟಿಗೂ ಅಷ್ಟಾಗಿ ಬೆರೆಯದ, ಅಥವಾ ಬೆರೆಯಲಾಗದೇ ನಿಂತಿದ್ದ ಚೇತನ್ ಜೊತೆ ಮಾತನಾಡುತ್ತಾ ನಿಂತಿದ್ದ. ಅವನ ಜೊತೆ ಮಾತನಾಡುತ್ತಾ ಹೋದಂತೆ ಅವನು ಅಲ್ಲಿ ಯಾವುದೋ ಹುಡುಗಿಯನ್ನು ಕದ್ದು ಕದ್ದು ನೋಡುತ್ತಿರುವುದನ್ನು ಗಮನಿಸಿದ. ಅವನ ಮಾತಿನಲ್ಲೂ ಅಮಾಯಕತೆ ಮನೆ ಮಾಡಿದಂತಿತ್ತು.

ರೋಷನಿ ಅನಂತನನ್ನು ಒಟ್ಟಿಗೆ ಊಟ ಮಾಡುವಂತೆ ಸನ್ನೆ ಮಾಡುತ್ತಾ ಕರೆದಳು. ಅಷ್ಟರಲ್ಲಿ ಅನಂತನ ಊಟ ಮುಗಿಯುವ ಹಂತಕ್ಕೆ ಬಂದಿತ್ತು. ಅವಳೂ ಊಟ ಮುಗಿಸಿ ಬಂದವಳೇ ‘ಎಲ್ಲರೊಟ್ಟಿಗೆ ಕುಳಿತು ಊಟ ಮಾಡಲು ಏನು ದಾಡಿ ನಿಂಗೆ’ ಅಂತ ಗದರಿದಳು. ನಾವೀಗ ಒಟ್ಟಿಗೆ ನಿಂತಿದ್ದೇವೆ ಅನ್ನುವುದು ಅವನ ಪ್ರಜ್ಞಾವಸ್ಥೆಗೆ ಹೋಗಿದ್ದೆ ತಡ ರೋಮಾಂಚಿತನಾದ. ‘ಏ... ಹಿಂಸೆನಪ್ಪಾ. ಪರಿಚಯವೇ ಇಲ್ಲದೇ ಅವರೊಟ್ಟಿಗೆ ಹೇಗೆ ಕುಳಿತುಕೊಳ್ಳುವುದು..?’ ಅಂದ. ‘ಮತ್ಯಾಕೆ ಬಂದೆ..?’ ಎಂದವಳೆ ಅಲ್ಲಿಂದ ಹೋಗಿ ಮತ್ತೆ ಅವರನ್ನು ಸೇರಿಕೊಂಡಳು.

ಈ ಪ್ರಶ್ನೆಗೆ ಅವಳು ಯಾವ ರೀತಿಯ ಉತ್ತರ ಬಯಸಿದ್ದಳು ಅಂತ ಯೋಚಿಸಿದ. ನನಗಾಗಿ ಬಂದೆಯಾ ಅಂತ ಕೇಳಿದಂತಿತ್ತಾದರೂ ಅಲ್ಲಿ ಎಲ್ಲರೂ ಒಟ್ಟಿಗೆ ಸೇರುವ ಉದ್ದೇಶ ಇತ್ತಲ್ಲವಾ ಎಂಬುದನ್ನೂ ಹೇಳಿದ್ದಾಳೆ ಅಂದುಕೊಂಡ. ಇಲ್ಲಾ ನಾನು ಇಲ್ಲಿ ಸಾಹಿತ್ಯದ ವಿಚಾರವಾಗಿ ಮಾತ್ರ ಬಂದಿದ್ದೇನೆ. ಸುಖಾ ಸುಮ್ಮನೆ ಜೀವನದ ಆಸೆಗಳಿಗೆ ಬೆನ್ನು ಮಾಡುತ್ತಾ ಬರೀ ಮಾತಿನಲ್ಲಿ ಸಂಬಂಧ ಹುಡುಕುವ ಇವರನ್ನು ನೋಡಲು ನಾನು ಇಲ್ಲಿಗೆ ಬಂದಿಲ್ಲ ಅಂತ ಹೇಳಲು ಅವಳ ಹತ್ತಿರ ಹೋದ. ಅವಳು ಅಲ್ಲಿಂದ ಎದ್ದು ಹಾಲಿನ ಕಡೆಗೆ ಗೌರಿಯ ಜೊತೆ ಹೋದಳು. ‘ಅದಾನಿ ಹೇಗಿದ್ದಾನೆ’ ಅಂತ ಸಾಗರಿ ಕೇಳಿದ್ದು ಅನಂತನಿಗೆ ಕೇಳಿಸಿತು.

ರೋಷನಿಯ ಪತಿದೇವರನ್ನು ‘ಅದಾನಿ’ ಅಂತ ಗೌರಿ ಕರೆಯುತ್ತಿದ್ದುದು ಅನಂತನಿಗೆ ಗೊತ್ತಿತು. ರೋಷನಿಯ ಗಂಡ ವ್ಯವಹಾರವೇ ಮೊದಲ ಹೆಂಡತಿ ಅಂತ ಘೋಷಿಸಿಕೊಂಡವ. ಇಂತಹಾ ಸುಂದರಿ ರೋಷನಿಯನ್ನು ಎರಡನೇ ಹೆಂಡತಿಯ ಸ್ಥಾನದಲ್ಲಿ ನಿಲ್ಲಿಸಿದ್ದು ತನಗೆ ಮಾತ್ರ ಬೇಸರ ಮೂಡಿಸಿದೆ ಅಂತ ಅನಂತನಿಗೆ ಅನ್ನಿಸಲಿಲ್ಲ.

ಅಸಲಿಗೆ ಅದಾನಿಗೆ ರೋಷನಿ ಎರಡನೇ ಹೆಂಡತಿ ಅಂತ ಕೇಳುವುದು ಒಂಥರಾ ಖುಷಿಯ ವಿಚಾರವಾಗಿದೆಯಲ್ಲಾ ಅಂತ ಬೇಸರಗೊಳ್ಳುತ್ತಿದ್ದ. ರೋಷನಿ ಬಸ್ಸಿನಲ್ಲಿ ಬರುತ್ತಿದ್ದಾಳೆ ಎಂಬುದು ತಿಳಿದಾಗಲೆ ಅವತ್ತು ಅವನು ಬರುತ್ತಿಲ್ಲ ಅಂತ ಗೊತ್ತಾಗಿತ್ತು. ಅವನು ಬರುವುದಾಗಿದ್ದರೆ ಕಾರಿನಲ್ಲಿ ಹಳೆಯ ವಿಷ್ಣುವರ್ಧನ ಹಾಡು ಕೇಳುತ್ತಾ ಬರುತ್ತಿದ್ದ. ಜೊತೆಗಿದ್ದವರೂ ಕೂಡ ಕೇಳಬೇಕಿತ್ತು.

ಹಾಲಿನಲ್ಲಿ ಹೋಗಿ ರೋಷನಿಯ ಹಿಂಬದಿಯ ಕುರ್ಚಿಯಲ್ಲೇ ಕುಳಿತ. ಸ್ವಲ್ಪ ಹೊತ್ತಿನ ನಂತರ ರೋಷನಿ ‘ಇವತ್ತೇ ಬರ್ತೀಯಾ... ಇಲ್ಲಾ ನಾಳೆನಾ’ ಅಂತ ಕೇಳಿದಳು. ಯಾಕೆಂದರೆ ಅಂದು ಅಲ್ಲಿ ದೂರದಿಂದ ಬಂದವರು ಉಳಿದುಕೊಳ್ಳುವುದು ಅಂತ ಮಾತಾಗಿತ್ತು. ‘ನೀನು ಉಳಿಯೋದಿಲ್ಲವಾ’ ಅಂತ ಕೇಳಿದ. ‘ಇಲ್ಲ ಮತ್ತೆ ನಾನು ವಾಪಾಸ್ ಹೋಗಲೇಬೇಕು’ ಅಂದಳು. ‘ಜೊತೆಗೆ ಬರುತ್ತೀಯಾ?’ ಅಂತ ಕೇಳುತ್ತಾಳೆ ಅಂದುಕೊಂಡ. ಆದರೆ ಕೇಳಲಿಲ್ಲ.

ಇದೆಲ್ಲಾ ಅತಿಯಾಯಿತು ಅಂದುಕೊಂಡ ಅನಂತ ಮತ್ತೆ ಗೋಷ್ಠಿಯಲ್ಲಿ ಮುಖ ತೂರಿಸಿಕೊಂಡವನಂತೆ ಕುಳಿತ. ಗೌರಿ ಬಂದವಳೇ ರೋಷನಿಯನ್ನು ಉಳಿದುಕೊಳ್ಳಲು ಒತ್ತಾಯ ಮಾಡುವುದು ಕೇಳಿಸಿತು. ಮನೆಗೆ, ‘ಅದಾನಿ’ಗೆ ತಾನೇ ಫೋನು ಮಾಡಿ ತಿಳಿಸುವುದಾಗಿ ಹೇಳಿದಳು. ಆದರೆ ರೋಷನಿ ಒಪ್ಪಲಿಲ್ಲ. ‘ನೀನು ಹೋಗುವುದರೊಳಗಾಗಿ ಮಧ್ಯರಾತ್ರಿಯಾಗುತ್ತದೆ’ ಅಂದಳು.



ಇಲ್ಲ ನಾನು ಈಗಲೇ ಹೊರಟರೆ ಹತ್ತು ಹತ್ತೂವರೆಗೆಲ್ಲಾ ಊರಿನಲ್ಲಿರುತ್ತೇನೆ ಅಂದಳು. ಅನಂತನ ಕಿವಿ ನೆಟ್ಟಗಾದದ್ದು ಮಾತ್ರ ‘ಹೇಗಿದ್ರೂ ಅನಂತ್ ನನ್ನ ಜೊತೆ ಇರುತ್ತಾರಲ್ಲ..’ ಅಂತ ರೋಷನಿ ಹೇಳಿದಾಗ. ಗೌರಿ ಹಿಂದೆ ತಿರುಗಿ ‘ಅನಂತ್ ನೀವು ಈಗಲೇ ಹೋಗುತ್ತೀರಾ?’ ಅಂತ ಕೇಳಿದಳು. ಅನಂತ್ ಏನು ಹೇಳಬೇಕು ಎಂಬುದು ತಿಳಿಯದೇ ಕಂಗಾಲಾದ. ‘ಇಲ್ಲಾ... ಯಾರೋ ಸ್ನೇಹಿತರು ಬರುತ್ತಾರೆ. ಅವರು ಬಂದ ಮೇಲೆ ಡಿಸೈಡ್ ಮಾಡ್ತೀನಿ’ ಅಂತ ಹೇಳಿದ. ಅವನ ಮಾತಿನಲ್ಲಿ ತೊದಲು ಇದ್ದುದ್ದನ್ನು ಕಂಡು ಗೌರಿ ಆ ಕಡೆ ಮುಖ ಮಾಡಿ ನಕ್ಕಳು. ರೋಷನಿಯೂ ನಕ್ಕಂತಾ ಯಿತು. ಯಾಕಾದರೂ ಬಂದೆನೊ ಅಂದುಕೊಂಡ.

‘ಅನಂತ್ ನೀವು ಉಳಿಯಿರಿ’ ಅಂದಳು ಗೌರಿ...
ಅದ್ಯಾಕೋ ಮಾತಿನಲ್ಲಿ ನೀವು ರೋಷನಿಯ ಜೊತೆ ಹೋಗಿ ಅಂತ ಹೇಳುತ್ತಿರುವುದು ಖಚಿತವಾಗಿ ಕೇಳಿಸುತ್ತಿದೆ ಅನ್ನಿಸಿ ಒಂದು ಮಾತು ಅದರ ವಿರುದ್ದ ದಿಕ್ಕಿನಲ್ಲಿ ದ್ವನಿಸುವ ಪರಿಗೆ ಅಚ್ಚರಿಗೊಂಡ.

ಸರಿ ಅವಳ ಜೊತೆ ಹೋಗುತ್ತೇನೆ ಎಂಬಂತೆ ಉದಾರತೆ ತೋರಿಕೆಯ ನಾಟಕವಾಡಿದ. ಅದು ನಾಟಕ ಎಂಬುದು ಗೌರಿಗೂ ತಿಳಿಯುತ್ತಿದೆ ಎಂಬುದು ರೋಷನಿಗೂ ಗೊತ್ತಾಗಿ ಜೋರಾಗಿ ನಕ್ಕುಬಿಟ್ಟಳು. ಇವರೆಲ್ಲಾ ಮೊದಲೇ ಮಾತನಾಡಿಕೊಂಡು ನನ್ನನ್ನು ಆಟವಾಡಿಸುತ್ತಿದ್ದಾರೆ ಅಂದುಕೊಂಡ ಅನಂತ.

ಬಸ್ಸು ತುಂಬಾ ಜನರಿಲ್ಲದೆ ಇತ್ತು. ಮುಂದಿನ ಸ್ಟಾಪುಗಳಲ್ಲಿ ಜನ ಹತ್ತಿಕೊಳ್ಳಬಹುದು ಅಂದುಕೊಂಡ ಅನಂತ. ಕಿಟಕಿಯ ಜಾಗವೇ ಬೇಕು ಅಂತ ರೋಷನಿ ಕಿಟಕಿಯ ಪಕ್ಕ ಕುಳಿತಳು. ಅವಳನ್ನು ಕಿಟಕಿಯ ಪಕ್ಕ ಕೂರಲು ಬಿಡಬಾರದು ಅನಿಸಿತು ಅನಂತನಿಗೆ. ಕಿಟಕಿಯ ಪಕ್ಕ ಕುಳಿತರೆ ಅವಳು ಕಿಟಕಿಯಾಚೆಗೆ ನೋಡುತ್ತಾಳೆ.

ಅದು ಬಿಟ್ಟು ಇತ್ತ ಕೂರಿಸಿದರೆ ಅವಳು ಅನಿವಾರ್ಯವಾಗಿ ಇನ್ನು ನಾಲ್ಕೂವರೆ ಗಂಟೆ ನನ್ನೆಡೆಗೇ ನೋಡಿ ಮಾತಾನಾಡುವುದು ಅನಿವಾರ್ಯವಾಗುತ್ತದಲ್ಲ ಅಂದುಕೊಂಡ. ಆದರೆ ಇಂತಹಾ ಎಚ್ಚರಿಕೆಯಲ್ಲಿ ಯಾವತ್ತೂ ರೋಷನಿಯೇ ಮುಂದೆ ಎಂಬುದು ಅನಂತನಿಗೂ ಗೊತ್ತಿತ್ತು.

ಕಿಟಕಿ ಎಂಬುದು ಅವಳಿಗೆ ನಮ್ಮ ಮಾತುಗಳ ನಡುವೆ ಬರಬಹುದಾದ ಒಂದು ಅನಿವಾರ್ಯ ವಿರಾಮ ಅನ್ನುವುದು ಅನಂತನಿಗೆ ಗೊತ್ತಿತ್ತು. ಮತ್ತು ಆ ವಿರಾಮ ತೆಗೆದುಕೊಳ್ಳುವ ಆಯ್ಕೆಯನ್ನು ರೋಷನಿಯೇ ಇಟ್ಟುಕೊಂಡಿದ್ದಳು.

‘ಹೀಗೆ ಬಸ್ಸಿನಲ್ಲಿ ಹೋಗಿ ತುಂಬಾ ದಿನಗಳಾದವು. ಎಷ್ಟು ಚೆನ್ನಾಗಿರುತ್ತದೆ ಈ ತರ ಬಸ್ಸಿನಲ್ಲಿ ತಿರುಗಾಡುವುದು..’ ಅಂದಳು.

ಬಸ್ಸು ಈರುಳ್ಳಿ ಹೊಲಗಳ ನಡುವೆ ಹಾದುಹೋಗುತ್ತಿತು. ಬಸ್ಸು ಚಲಿಸಿದಂತೆಲ್ಲಾ ಇಬ್ಬರೂ ತಲ್ಲಣಕ್ಕೊಳಗಾದರು ಎಂಬುದನ್ನು ಇಬ್ಬರೂ ಮುದವಾಗಿಯೇ ಅನುಭವಿಸಿದರು. ಗೋಷ್ಠಿ, ಗೌರಿ ಮುಂತಾದವುಗಳ ಬಗ್ಗೆ ಒಂದಷ್ಟು ಶುಷ್ಕ ಮಾತುಗಳು ಬೇಗನೇ ಮುಗಿದುಹೋದವು. ಅವು ಬೇಗನೇ ಮುಗಿಯಲೇ ಬೇಕಿತ್ತು.

ಅನಂತ ನಡುಗುವ ದನಿಯಲ್ಲಿ ಕೇಳಿದ ‘ರೋಷನಿ ನನ್ನ ಪ್ರೀತಿಯ ಬಗ್ಗೆ ನಿನಗೆ ಅನುಮಾನವಿದೆಯೆ..?’
‘ಇಂತಹಾ ಪ್ರಶ್ನೆ ಹಾಗೂ ಇದಕ್ಕೆ ಉತ್ತರ ಎಲ್ಲವೂ ಅಪ್ರಸ್ತುತ ಅಂತ ನಿನಗನ್ನಿಸಲ್ವಾ..?’

‘ನಿನ್ನನ್ನು ಯಾರಾದರೂ ಹೊಗಳುವುದು ನನಗೆ ಸಹಿಸಲು ಆಗಲ್ಲ...’ ಅಂದವನು ಹಾಗೆ ಹೊಗಳುವವರಿಂದ ನೀನು ಯಾಕೆ ದೂರವಿರಬಾರದು ಅಂತ ಹೇಳಬೇಕೆಂದುಕೊಂಡ. ಆದರೆ ಸುಮ್ಮನಾದ.

‘ನೀನು ತುಂಬಾ ಅಪರೂಪದ ಚೆಲುವೆ ಗೊತ್ತಾ.. ತುಂಬಾ ಜನರಿಗೆ ತಾವೇನೆಂಬುದೇ ಗೊತ್ತಿರುವುದಿಲ್ಲ..’ ಅಂದ. ಪ್ರತಿ ಸಾರಿ ಚಾಟ್ ಮಾಡುವಾಗ ಈ ರೀತಿ ಹೇಳಿದಾಗ ‘ಶಟ್ ಅಪ್..’ ಅನ್ನುತ್ತಿದ್ದವಳು ಹಾಗನ್ನಲಿಲ್ಲ...

ನೀನೊಬ್ಬ ಫ್ಲರ್ಟ್ ಅಂತ ಪ್ರತಿ ಬಾರಿಯೂ ಹೇಳುತ್ತಿದ್ದವಳು ಹಾಗನ್ನಲಿಲ್ಲ. ಅನಂತನಿಗೆ ಅದೆಂತಹಾ ಖುಷಿಯಾಯಿತೆಂದರೆ ರೋಷನಿ ತನ್ನನ್ನು ಒಪ್ಪಿಕೊಳ್ಳುತ್ತಿದ್ದಾಳೆ ಎನಿಸಿತು.

‘ಒಂದು ಕತೆಯಿದೆ ಗೊತ್ತಾ.. ಅವನು ಅವಳು ಮುದುಕಿಯಾಗಿ ಆಕೆಯ ಗಂಡ ಸಾಯುವವರೆಗೂ ಕಾಯ್ದು ನಂತರ ಅವಳನ್ನು ಕರೆದುಕೊಂಡು ದೇಶವೆಲ್ಲ ಸುತ್ತುತ್ತಾನೆ... ಗೊತ್ತಾ..?’

‘ಈಗ ನಾವು ಬಸ್ಸಿಳಿಯಬೇಕು.. ಸುಮ್ಮನೆ ಈ ರಾತ್ರಿಯಲ್ಲಿ ನಡೆದುಕೊಂಡು ಹೋಗಬೇಕು. ಇಬ್ಬರ ಮನಸ್ಸುಗಳು ಮಾತನಾಡುತ್ತಿರಬೇಕು..’

‘ಇಡೀ ಬಸ್ಸಿನಲ್ಲಿ ನಮ್ಮನ್ಯಾರೂ ಕೇಳಿಸಿಕೊಳ್ಳುತ್ತಿಲ್ಲ ಅಲ್ಲವೆ..? ಕೇಳಿಸಿಕೊಂಡರೆ ಕೇಳಿಸಿಕೊಳ್ಳಲಿ ನನಗ್ಯಾವ ಭಯವೂ ಇಲ್ಲ.. ಅನಂತ ನಿನಗೇನಾದರೂ ಭಯವಾ..?’ ಅಂದಳು.

ನಿಜಕ್ಕೂ ಬಸ್ಸು ಜನರೇ ಇಲ್ಲದಂತೆ ಖಾಲಿ ಹೊಡೆಯುತ್ತಿತ್ತು. ಅಥವಾ ಜನರಿದ್ದಾರೊ ಇಲ್ಲವೊ ಗೊತ್ತಾಗುವಂತಿರಲಿಲ್ಲ.

ಕಣ್ಣ ಅಂಚಲ್ಲಿ ಸಣ್ಣಗೆ ನೀರಿನ ಪಸೆ ಇದ್ದದ್ದನ್ನು ಅನಂತ ಆ ಕೊಂಚ ಕತ್ತಲೆಯಲ್ಲೂ ನೋಡಿದ. ಸಮಾಧಾನ ಮಾಡಲು ಕೆನ್ನೆಗೆ ಕೈಯೊಡ್ಡಿ ಹೆಬ್ಬೆರಳಿನಿಂದ ಕಣ್ಣನ್ನು ಮುಟ್ಟಲಾ ಅಂದುಕೊಂಡ. ಆಗಲೇ ಗೊತ್ತಾದದ್ದು ಅನಂತನಿಗೆ ನಾವು ಅದೆಷ್ಟು ದೂರವಿದ್ದೆವೆ...?

ಒಬ್ಬರ ಕಣ್ಣೀರನ್ನು ಇನ್ನೊಬ್ಬರು ಒರೆಸಲು ಅಸಹಾಯಕರಾಗಿದ್ದೇವೆ ಅನ್ನಿಸಿತು. ನಿನಗಾಗಿ ನಾನು ಏನು ಬೇಕಾದರು ಮಾಡುತ್ತೇನೆ ಅಂತ ಹೇಳುವುದು ಎಷ್ಟು ಜೊಳ್ಳಿನ ಮಾತು ಎಂಬುದು ಮನವರಿಕೆಯಾಗುತ್ತಲೇ ಬೆವರತೊಡಗಿದ.

‘ಈ ಸಲ ತುಂಬಾ ಬಿಸಿಲು.. ಅಲ್ವಾ..?’ ಎಂದ.

‘ಯಾವ ಬಿಸಿಲಿನ ಝಳಕ್ಕೂ ನಮ್ಮ ಭಾವನೆಗಳನ್ನು ಕರಕಲಾಗಲು ಬಿಡಬಾರದು.. ಕೆಲವೊಮ್ಮೆ ಅದು ನಮ್ಮ ಹೊಣೆ ಎಂಬುದನ್ನೇ ಮರೆತು ಬಿಡುತ್ತೇವೆ...’

ರೋಷನಿ ಅದೆಷ್ಟೋ ದಿನಗಳ ಮುಚ್ಚಿಟ್ಟ ಮಾತುಗಳನ್ನು ಆಡುತ್ತಿದ್ದಾಳೆ ಎನಿಸಿತು. ಇಂತಹಾ ಮಾತುಗಳನ್ನು ನನ್ನಿಂದ ದಕ್ಕಿಸಿಕೊಳ್ಳಲು ಸಾಧ್ಯವಾ ಅಂತ ಅನಂತ ಗಾಬರಿಯಾದ. ಅನಂತನಿಗೆ ಏನೋ ಹೇಳಬೇಕೆನಿಸಿತು..

‘ನನ್ನ ಮತ್ತು ನಿನ್ನ ವಿಚಾರದಲ್ಲಿ ಯಾವುದೇ ಅಡ್ಡಿಯಿಲ್ಲದಿದ್ದರೂ ನಾವು ಒಂದಾಗುವುದು ಸಾಧ್ಯವಿರಲಿಲ್ಲ.. ಯಾಕೆ ಅಂತ ಕೇಳಿದರೆ ಗೊತ್ತಿಲ್ಲ’ ಎಂದ.

‘ಹೌದು.. ಅದು ನನಗೆ ಗೊತ್ತು’ ಎಂದಳು.

ಅನಂತ ಅವಳ ಕೈ ಹಿಡಿದುಕೊಂಡ. ಪುಟ್ಟಗಿನ, ತಣ್ಣನೆಯ ಕೈ.. ಅನಂತ ಕಂಪಿಸಿದ. ಇದು ದೇವರ ವರ ಕಣ್ಣಿಗೊತ್ತಿಕೊಳ್ಳಲಾ ಅಂದುಕೊಂಡ..

‘ನಿನ್ನ ಕೈ ತುಂಬಾ ಚೆನ್ನಾಗಿದೆ.. ಮೊನ್ನೆ ಕಪ್ಪೆಚಿಪ್ಪಿನೊಳಗೆ ಮುತ್ತು ತೆಗೆಯುವ ವಿಡಿಯೋ ನೋಡಿದೆ.. ಆ ಚಿಪ್ಪನ್ನು ಬಿಡಿಸಿದಾಗ ಇರುತ್ತದಲ್ಲ ಆ ತರ ಕೋಮಲವಾಗಿದೆ ನಿನ್ನ ಕೈ..’ ಎಂದ.

‘ನಾವಿಬ್ಬರೂ ಒಂದೈದು ದಿನ ಎಲ್ಲಿಯಾದರು ಓಡಿಹೋದರೆ ಏನಾಗುತ್ತದೆ..’ ಎಂದ.

ಜೋರಾಗಿ ನಕ್ಕು ಬಿಟ್ಟಳು. ಅವನ ಈ ಪ್ಲ್ಯಾನಿನಿಂದ ನಿಜಕ್ಕೂ ಅವಳಿಗೆ ಖುಷಿಯಾಗಿತ್ತು.

‘ನಮ್ಮ ಮನೆಯಲ್ಲಿ ಏನೂ ಅಂದುಕೊಳ್ಳಲಾರರು... ಬಹುಷಃ ಎಲ್ಲರಿಗೂ ನನ್ನಿಂದ ಬಿಡುಗಡೆ ಬೇಕಾಗಿದೆ ಎನ್ನಿಸುತ್ತಿದೆ...’ ಎಂದಳು.

ಅನಂತ ಅವಳ ಕೈಯನ್ನು ಸಾಂತ್ವನವೆಂಬಂತೆ ಅದುಮಿದ. ಅವಳು ಕೈಯನ್ನು ಕಿತ್ತುಕೊಂಡು ತನ್ನ ತೊಡೆಯ ಮೇಲಿಟ್ಟುಕೊಂಡಳು. ಇದು ಸಾಂತ್ವನ ಹೇಳುವ ಪರಿಯಲ್ಲ ಅಥವಾ ಈಗ ಆಗಿರುವ ಗಾಯಕ್ಕೆ ಇಷ್ಟು ಮಾತ್ರದಿಂದ ಸಾಂತ್ವನ ಸಿಗುವುದಿಲ್ಲ ಎಂಬಂತೆ.

‘ನಿಂಗೊತ್ತಾ ಅನಂತ್. ನನ್ನ ನಿನ್ನ ನಡುವೆ ಪವಿತ್ರ ಅನ್ನುತ್ತಾರಲ್ಲ ಅಂತಹುದೇನೋ ಇದೆ.. ನಾನು ನಿನ್ನನ್ನು ತುಂಬಾ ನಂಬುತ್ತೇನೆ...’

ಅದ್ಯಾಕೋ ಬಸ್ ನಿಂತಿತು. ಎಲ್ಲರೂ ಕೆಳಗಿಳಿದರು. ಅರೇ ಬಸ್ಸಿನಲ್ಲಿ ಇಷ್ಟೊಂದು ಜನರಿದ್ದಾರಾ.. ಎಂದು ಇಬ್ಬರೂ ಒಮ್ಮೆ ಮುಖವನ್ನು ನೋಡಿಕೊಂಡರು. ಬಸ್ಸು ಇನ್ನು ಮುಂದೆ ಹೋಗಲು ಸಾಧ್ಯವೇ ಇಲ್ಲ. ಬೇರೆ ಬಸ್ಸಿಗೆ ಪೋನ್ ಮಾಡುತ್ತೇನೆ ಅಂತ ಕಂಡಕ್ಟರ್ ಹೇಳುತ್ತಿದ್ದ. ಇನ್ನು ಕೇವಲ ಅರವತ್ತು ಎಪ್ಪತ್ತು ಕಿಲೋಮೀಟರುಗಳ ದಾರಿ ಅಷ್ಟೇ ಬಾಕಿಯಿದ್ದದ್ದು.

ರೋಷನಿ ‘ಅದಾನಿ’ಗೆ ಪೋನ್ ಮಾಡಿದಳು. ಇನ್ನರ್ಧ ಗಂಟೆಯಲ್ಲಿ ಬರುತ್ತಾರೆ ಅಂದಳು. ರೋಷನಿಯ ಕಾರು ಬರುವುದು ಖಾತ್ರಿಯಾಯಿತು.

‘ಕೊಂಚ ದೂರ ನಡೆಯೋಣವಾ... ಕೂತು ಕೂತು ಕಾಲು ಊದಿಕೊಂಡಿವೆ’ ಅಂದಳು..

ಇಬ್ಬರೂ ಸುಮ್ಮನೆ ರಸ್ತೆಯಲ್ಲಿ ನಡೆಯುತ್ತಾ ಹೋದರು. ‘ಇನ್ನೂ ನಾವು ಅದೆಷ್ಟು ನಡೆಯಬೇಕಿದೆ ಅಲ್ವಾ..?’ ಅಂದಳು.

‘ಹೂ..ನಾನು ನೀನು ಒಟ್ಟೊಟ್ಟಿಗೇ ನಡೆಯಬೇಕಿದೆ..’ ಎಂದ. ಒಂಥರಾ ಹಿತವಾದ ಗಾಳಿ ಬೀಸಿತು. ಅದೆಷ್ಟು ನಡೆದರೋ... ಕಾರು ಬಂದು ಪಕ್ಕದಲ್ಲೇ ನಿಂತಿತು.

ರೋಷನಿಯ ಗಂಡ ‘ಇದೇನು ಹೀಗೆ ನಡೆದುಕೊಂಡೇ ಹೋಗುತ್ತಿದ್ದೀರಲ್ಲ... ಒಂದು ಕಡೆ ಕೂತ್ಕೊಳೊದಲ್ವಾ...?’ ಅಂದ. ಅನಂತ ಹೊಸದಾಗಿ ನೋಡುವವನಂತೆ ಒಮ್ಮೆ ಅವನನ್ನು ನೋಡಿದ. ನಿಜಕ್ಕೂ ಅದೆಷ್ಟು ಚೆನ್ನಾಗಿದ್ದಾನೆ ಅನ್ನಿಸಿತು. ಕಾರಿನಲ್ಲಿ ಬಂದರೆ ಎಲ್ಲರೂ ಚೆನ್ನಾಗೇ ಕಾಣುತ್ತಾರೆ ಅಂತ ಯಾರೋ ಹೇಳಿದ್ದು ನೆನಪಾಗಲಿಲ್ಲ.

‘ಬನ್ನಿ ಹೋಗೋಣ..’ ಅಂತ ಅವಸರಿಸಿ ಡೋರ್ ತೆಗೆದ. ಅನಂತ ‘ನೀವು ಹೊರಡಿ ನಾನು ಬರುವುದಿಲ್ಲ’ ಎಂದ.

ರೋಷನಿ ‘ಯಾಕೆ..? ಇಷ್ಟೊತ್ತಲ್ಲಿ ಎಲ್ಲಿ ಹೋಗ್ತೀಯಾ..?’ ಅಂದಳು.

ಇಲ್ಲಾ ನಾನು ವಾಪಸ್ ಹೋಗಲು ಅರಸೀಕೆರೆ ಬಸ್ ಸಿಗುತ್ತದೆ. ನಾಳೆ ಮತ್ತೆ ‘ಬೆಹರೂಪಿಯಾ’ ನಾಟಕ ವಿದೆಯಂತೆ.. ನಾನದನ್ನು ನೋಡಲೇ ಬೇಕು ಅಂದು ಟಾಟಾ ಎಂದು ಮುಗುಳು ನಗೆಯೊಂದನ್ನು ಕಾರಿನೊಳಗೆ ಹಾಕಿ ಬೆನ್ನು ಮಾಡಿ ನಡೆಯತೊಡಗಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT