ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘರಾಜನ ಅದ್ಭುತ ದರ್ಶನ

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭೂತಾಪಮಾನದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ವಾತಾವರಣ ವಿಜ್ಞಾನಿಗಳು ಮೋಡಗಳತ್ತ ಮುಖ ಮಾಡಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ಇಂದಿನ ಸಂಕಟಗಳಿಗೂ ಮೋಡಗಳಿಗೂ ಇರುವ ಸಂಬಂಧ ಅರಿಯಲು ಮೋಡದೊಳಗಿನ ವಿದ್ಯಮಾನಗಳ ಅಧ್ಯಯನ ನಡೆಸಿದ್ದಾರೆ.

ನೀಲಾಗಸ, ಅದರ ಮೇಲೆ ಸುಂದರ ಚಿತ್ತಾರ ಬರೆದಂತೆ ಹರಡಿಕೊಂಡ ಮೇಘಗಳ ರಾಶಿ. ಅವು ಬರಿಗಣ್ಣಿಗೆ ಕಾಣುವ ಕೇವಲ ಮೂರ್ತರೂಪದ ಧೂಮ ಗುಚ್ಛಗಳಲ್ಲ. ಬೆಳ್ಳಿಯ ಹಿಂಡೂ ಅಲ್ಲ. ಧರೆಯ ಸಕಲ ಜೀವಿರಾಶಿಗೆ ಚೈತನ್ಯವನ್ನು ಧಾರೆ ಎರೆಯುವ ಅವ್ಯಕ್ತ ಮೂಲ ಧಾತು.

ಸಾಮಾನ್ಯವಾಗಿ ಮಕ್ಕಳಿಗೆ ಆಗಸದ ವಿಶಾಲ ಹರವಿನಲ್ಲಿ ಒಮ್ಮೊಮ್ಮೆ ಪರ್ವತ ಶ್ರೇಣಿಯಂತೆ, ಕಡಲ ರಾಶಿ ನೊರೆಯಂತೆ ಕಾಣುವ ಮೋಡಗಳಿಗೆ ಏಣಿ ಹಾಕಿ ಅದರೊಳಗೆ ಏನಿದೆ ಎಂಬುದನ್ನು ಇಣುಕಿ ನೋಡುವ ಬಯಕೆ ಇದ್ದೇ ಇರುತ್ತದೆ. ಕವಿಗಳಿಗಂತೂ ಮುಗಿಲಿಗೆ ಮಾಲೆಯಂತೆ ತೋರುವ ಮುಂಗಾರ ಮೇಘ ರಾಶಿಯನ್ನು ನೋಡುತ್ತಿದ್ದಂತೆ ಭಾವನೆಗಳ ಲಹರಿಯನ್ನೇ ಬಡಿದೆಬ್ಬಿಸಿದಂತಾಗುತ್ತದೆ. ಕಾವ್ಯದ ಪ್ರವಾಹವೇ ಹರಿಯುತ್ತದೆ. ಅದಕ್ಕೆ ಕಾಳಿದಾಸನ ‘ಮೇಘದೂತ’ಕ್ಕಿಂತ ಬೇರೆ ಉದಾಹರಣೆ ಬೇಕೇ?

ಇನ್ನು ರೈತರಿಗೊ ಮಳೆಯನ್ನು ಹೊತ್ತು ತರುವ ಮೋಡಗಳು ಆಪ್ತ ಬಂಧುಗಳೇ ಸರಿ. ಮಳೆ ಸುರಿಸದೇ ಇದ್ದರೆ ಆತನ ಸಂವಾದ ನಡೆಯುವುದೇ ಮೋಡಣ್ಣನ ಜತೆಗೆ. ವಿಜ್ಞಾನಿಗಳಿಗೆ ಮೋಡದ ರಹಸ್ಯ, ಅದರ ತತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವ ತವಕ. ವಿಜ್ಞಾನಿಗಳ ಈ ತವಕಕ್ಕೆ ಕಾರಣ ಇಲ್ಲದಿಲ್ಲ. ಹವಾಮಾನ ಬದಲಾವಣೆಯಿಂದ ವಿಶ್ವದಲ್ಲಿ ಆಗುತ್ತಿರುವ ಪ್ರಾಕೃತಿಕ ಅವಘಡಗಳು ಅವರ ಸುಪ್ತಪ್ರಜ್ಞೆಯನ್ನೇ ಬಡಿದ್ದೆಬ್ಬಿಸಿವೆ. ಮನುಕುಲದ ಉಳಿವಿಗೇ  ದೊಡ್ಡ ಸವಾಲು ಎಸೆದಿವೆ.

ನಮ್ಮ ಕರ್ನಾಟಕದ ವಿಷಯಕ್ಕೇ ಬರೋಣ. ನಾಲ್ಕು ವರ್ಷಗಳಿಂದ ನಿರಂತರ ಬರ ಕಾಡುತ್ತಿದೆ. ಜಲಾಶಯಗಳು ನೀರಿಲ್ಲದೆ ಬರಿದಾಗಿವೆ. ರೈತ ಬೆಳೆಗಳನ್ನು ಬೆಳೆಯಲಾಗದೇ ಕೈಚೆಲ್ಲಿ ಕೂತಿದ್ದಾನೆ. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ರೈತರನ್ನು ಎತ್ತಿ ಕಟ್ಟಿದರೆ, ಕೇಂದ್ರ ರಾಜ್ಯದತ್ತ ಬೆಟ್ಟು ತೋರಿಸುತ್ತಿದೆ.

ಒಂದು ಕಾಲಕ್ಕೆ ಉದ್ಯಾನಗಳ ನಂದನವನ ಎನಿಸಿಕೊಂಡಿದ್ದ ಬೆಂಗಳೂರು ಈಗ ಸಿಲಿಕಾನ್‌ ವ್ಯಾಲಿ. ಜಗತ್ತಿನ ಈ ಬೃಹತ್‌ ನಗರದಲ್ಲಿ ನಟ್ಟ ನಡುವಿನ ರಾತ್ರಿ ಜನ ಸುಖ ನಿದ್ದೆಯಲ್ಲಿರುವಾಗ ಮೇಘಸ್ಫೋಟವಾಗಿ, ಭಾರಿ ಮಳೆಗೆ ಅರ್ಧದಷ್ಟು ಬೆಂಗಳೂರೇ ನೀರಿನಲ್ಲಿ ಮುಳುಗಿತು.

ಇವೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅಂತರರಾಷ್ಟ್ರೀಯ ವೈಮಾನಿಕ ಹಾಗೂ ವಾತಾವರಣ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ಎದುರು ಕುಳಿತೆ. ‘ಮೇಘ ದಿವ್ಯ ದರ್ಶನ’ವನ್ನೇ ಮಾಡಿಸಿದರು. ಮೋಡಗಳ ಕುರಿತ 20–25 ವರ್ಷಗಳ ಅವರ ತಪಸ್ಸು ಸಿದ್ಧಿಯ ಹಂತವನ್ನು ತಲುಪಿದೆ.

ಸ್ಪರ್ಶಿಸಲಾಗದ, ಹಿಡಿಯಲಾಗದ, ಮನಃಪಟಕ್ಕೆ ದರ್ಶನ ನೀಡಿ ಮರೆಯಾಗುವ; ಆದರೆ, ಭೂಮಂಡಲಕ್ಕೆ ಜೀವ ಧಾತುವಾಗಿರುವ ಮೋಡಗಳ ಬಗ್ಗೆ ಪ್ರಶ್ನಿಸಿದಾಗ, ಪುಟ್ಟ ಮಕ್ಕಳ ನಗೆ ಹೊಮ್ಮಿತು. ಅದರ ಬಗ್ಗೆ ಹೇಳಲಾರಂಭಿಸಿದರು. ಆಗ ಅನ್ನಿಸಿದ್ದು ಮೋಡ ನಾವಂದುಕೊಂಡಷ್ಟು ಸರಳ ಅಲ್ಲ, ಅದೊಂದು ಸಂಕೀರ್ಣ ಮತ್ತು ಸುಲಭಕ್ಕೆ ದಕ್ಕುವ ‘ಸತ್ಯ’ವಲ್ಲ. ಸಿಲ್ವರ್‌ ಐಯೋಡೈಡ್‌ ಬೀಜಗಳನ್ನು ಬಿತ್ತಿ ಮಳೆ ಸುರಿಸಬಹುದಾದಷ್ಟು ಸರಳವೂ ಅಲ್ಲ.

‘ಮೋಡಗಳನ್ನು ನಿತ್ಯ ಆಕಾಶದಲ್ಲಿ ನೋಡುತ್ತೇವೆ. ಏನೇನೊ ಆಕಾರಗಳು. ಚಿಕ್ಕಂದಿನಲ್ಲಿ ಅವುಗಳನ್ನು ನೋಡಿ ಬೆರಗಾಗುತ್ತಿದ್ದೆವು. ಬೆರಗು ಹುಟ್ಟಿಸಿದರೂ ಆಗ ಅದು ಸಾಧಾರಣ ಸಂಗತಿ ಎನ್ನಿಸುತ್ತಿತ್ತು. ವಿಜ್ಞಾನ ಮೋಡಗಳನ್ನು ಎಷ್ಟು ಅರ್ಥ ಮಾಡಿಕೊಂಡಿದೆ ಎಂದರೆ ಏನೂ ಅರ್ಥ ಮಾಡಿಕೊಂಡಿಲ್ಲ ಎಂದೇ ಹೇಳಬಹುದು. ಅದೇ ನಮ್ಮ ದೊಡ್ಡ ಸಮಸ್ಯೆ.

ನಮ್ಮ ದೇಶ ಮಾತ್ರ ಅಲ್ಲ, ವಿಶ್ವದ ದೊಡ್ಡ ದೊಡ್ಡ ದೇಶಗಳ ವಿಜ್ಞಾನಿಗಳಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಮೋಡಗಳು ನಿಜಕ್ಕೂ ಸಂಕೀರ್ಣ ಸಮಸ್ಯೆ. ಹೀಗಾಗಿ ವಿಶ್ವದೆಲ್ಲೆಡೆ ಸಂಶೋಧನೆಗಳು ನಡೆಯುತ್ತಲೇ ಇವೆ. ನಮ್ಮಲ್ಲಿ ಮುಂಗಾರು– ಹಿಂಗಾರು ಸರಿಯಾಗಿ ಆಗ್ತಾ ಇಲ್ಲ.

ಹವಾಮಾನ ಇಲಾಖೆಗಳು ಭಾರಿ ಮಳೆ ಸುರಿಯುತ್ತದೆ ಎಂದು ಹೇಳಿದಾಗಲೆಲ್ಲ ಮಳೆ ಬರುವುದಿಲ್ಲ. ಇದು ನಮ್ಮ ದೇಶದಲ್ಲಿ ಮಾತ್ರ ಅಲ್ಲ,  ವಿಶ್ವದ ಯಾವುದೇ ದೇಶಗಳಲ್ಲೂ ಹವಾಮಾನ ಮುನ್ಸೂಚನೆಗಳು ನಿಜ ಆಗುತ್ತಿಲ್ಲ. ಅವು ಕರಾರುವಾಕ್ಕಾಗಿ ಇರೋಲ್ಲ’ ಎಂದು ರೊದ್ದಂ ನಕ್ಕರು.

ನಂತರ ಗಂಭೀರವಾದರು...‘ಒಂದು ಸಂಗತಿ ಹೇಳ್ತೇನೆ. ಬದಲಾಗುವ ಹವಾಮಾನ  ಇದೆಯಲ್ಲ, ಅದೇ ಇದಕ್ಕೆಲ್ಲ ಕಾರಣ. ಸಾಕಷ್ಟು ಜನ ಹವಾಮಾನ ಬದಲಾವಣೆ ಆಗುತ್ತಿದೆ ಎನ್ನುತ್ತಾರೆ. ಆಗ್ತಾ ಇಲ್ಲ ಎನ್ನುವವರೂ ಇದ್ದಾರೆ. ಆ ರೀತಿ ಹೇಳುವವರು ಬುಷ್‌ ಅಥವಾ ಟ್ರಂಪ್‌ ಅಲ್ಲ. ಕೆಲವು ವಿಜ್ಞಾನಿಗಳೂ ಇದ್ದಾರೆ. ಪ್ರಶ್ನೆ ಇಷ್ಟೆ, ಮುಂದಿನ ಹತ್ತು ವರ್ಷಗಳಲ್ಲಿ ಏನೇನೊ ಹವಾಮಾನ ಬದಲಾವಣೆ ಆಗುತ್ತದೆ ಎಂದು ಹೇಳಿದ್ದು ಎಷ್ಟೊ ಸಲ ಹಾಗೆ ಆಗಿಲ್ಲ. ಈ ಹತ್ತು ವರ್ಷಗಳಲ್ಲಿ ಏನೂ ಆಗಿಲ್ಲವಲ್ಲ ಎಂದು ಅವರು ಪ್ರಶ್ನೆ ಮಾಡುತ್ತಾರೆ. ನನ್ನ ಪ್ರಕಾರ, ಇವರಿಗೆ ಈ ಸಬ್ಜೆಕ್ಟೇ ಪೂರ್ತಿ ಅರ್ಥವಾಗಿಲ್ಲ. ನನ್ನ ಪ್ರಕಾರ ಕ್ಲೈಮೇಟ್‌ ಚೇಂಜ್‌ ಆಗ್ತಾ ಇದೆ. ಹಿಂದೆಯೂ ಆಗಿತ್ತು, ಮುಂದೆಯೂ ಆಗುತ್ತದೆ. ಅಚ್ಚರಿಪಡಬೇಕಾಗಿಲ್ಲ’ ಎಂದು ಹೇಳುತ್ತಲೇ ಅವರು ಮೌನವಾದರು.

ಮೆಲ್ಲಗೆ ನಕ್ಕು ಮಾತು ಮುಂದುವರಿಸಿದರು. ‘ಹೌದು ಕೆಲವು ಕಡೆ ಜಾಸ್ತಿ ಆಗ್ತಾ ಇದೆ. ಕೆಲವು ಕಡೆ ಕಡಿಮೆ. ಆರ್ಟಿಕ್‌ನಲ್ಲಿ ಭಾರಿ ಗಾತ್ರಗಳ ಮಂಜುಗಡ್ಡೆಗಳು ಕರುಗುತ್ತಿವೆ. ಇತ್ತ ಹಿಮಾಲಯದಲ್ಲಿ ನೀರ್ಗಲ್ಲುಗಳೂ ಕರಗಿ ಹೋಗುತ್ತಿವೆ. ಇಂತಹ ದೊಡ್ಡ ಮಟ್ಟದ ಅವಘಡಗಳನ್ನು ನಾವು ಕಂಡೂ ಕಾಣದಂತೆ ಕಣ್ಣು ಮುಚ್ಚಿಕೊಂಡು ಇರಲು ಸಾಧ್ಯವಿಲ್ಲ. ನಿರಂತರ ಬರ, ಮೇಘ ಸ್ಫೋಟ, ಪ್ರವಾಹ, ಮಳೆ ಕೊರತೆ ನಮ್ಮನ್ನು ಬಾಧಿಸುತ್ತಿವೆ. ಅಕಾಲಿಕ ವರ್ಷಾಧಾರೆಯಾಗಬಹುದು. ಚಂಡಮಾರುತ, ಪ್ರವಾಹ ನಿರಂತರ ಮತ್ತು ಸಾಮಾನ್ಯ ಎನಿಸಿಬಿಡುತ್ತದೆ’.

ಧರೆಯಲ್ಲಿ ಆಗುತ್ತಿರುವ ನೈಸರ್ಗಿಕ ತಲ್ಲಣಗಳ ಹಿನ್ನೆಲೆಯಲ್ಲಿ ಕಳೆದ ವರ್ಷ ಲಂಡನ್ನಿನ ಪ್ರಖ್ಯಾತ ಜರ್ನಲ್‌ ‘ನೇಚರ್‌’ ಮುಖಪುಟದಲ್ಲಿ ದಪ್ಪ ಅಕ್ಷರಗಳಲ್ಲಿ ಒಂದು ಮನವಿಯನ್ನು ಮಾಡಿತ್ತು. ಅದು ಹೀಗಿತ್ತು; ‘Physicist of the world the plante needs you’. ಈ ಮನವಿಗೆ ಕಾರಣವಿಷ್ಟೇ ಮೋಡವನ್ನು ಅರ್ಥ ಮಾಡಿಕೊಂಡು ಅದರ ರಹಸ್ಯವನ್ನು ಅನಾವರಣಗೊಳಿಸಿ ಎಂಬುದೇ ಆಗಿತ್ತು.

‘ಬಹಳಷ್ಟು ಜನಕ್ಕೆ ಅದರ ಮೂಲ ತತ್ವಗಳೇ ಅರ್ಥವಾಗಿಲ್ಲ. ನಾವೂ 25 ವರ್ಷಗಳಿಂದ ಮೋಡಗಳ ಸತ್ಯ ಮತ್ತು ಸೌಂದರ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದೇವೆ. ಸಂಶೋಧನೆಗೆ ತೊಡಗಿದಾಗ ಮೋಡಗಳು ಇಷ್ಟೆಲ್ಲಾ ಪ್ರಭಾವ ಬೀರುತ್ತವೆ ಎನ್ನುವುದು ಗೊತ್ತಾಗಿರಲಿಲ್ಲ. ನಮಗೆ ಮಾತ್ರ ಅಲ್ಲ ವಿಶ್ವದ ಬಹಳಷ್ಟು ವಿಜ್ಞಾನಿಗಳಿಗೆ ಅರ್ಥವಾಗಿರಲಿಲ್ಲ’.

ಶಾಲಾ ದಿನಗಳಲ್ಲಿ ಮೋಡದ ಬಗ್ಗೆ ಕೇಳಿದ ಸರಳ ಪಾಠ ಎಂದರೆ, ಸಮುದ್ರ ಅಥವಾ ನೆಲದಿಂದ ನೀರು ಆವಿಯಾಗಿ ಮೇಲಕ್ಕೆ ಹೋಗುತ್ತದೆ. ಮೋಡವಾಗಿ ಮಳೆ ಸುರಿಸುತ್ತದೆ ಎಂಬುದು.

ನೂರಾರು ಬಗೆಯ ಮೋಡಗಳಿವೆ. ವಿಶ್ವ ಹವಾಮಾನ ಸಂಸ್ಥೆ ವರ್ಗೀಕರಣ ಮಾಡಿದೆ. ಒಂದೊಂದು ಜಾತಿಯ ಮೋಡ ಒಂದೊಂದು ರೀತಿ, ಪ್ರತಿಯೊಂದರ ಪರಿಣಾಮ ಬೇರೆ ಬೇರೆ. ನಮ್ಮ ದೇಶದ ಮಟ್ಟಿಗೆ cumulous cloud ಅಥವಾ ಅರಳೇ ಹಿಂಜಿದಂತೆ ದಟ್ಟ ಹಾಗೂ ಗುಂಪು ಗುಂಪಾದ ಮೋಡಗಳು ಅತಿ ಮುಖ್ಯವಾದವು. ಇದರ ಬಗ್ಗೆ ಪ್ರಯೋಗಾಲಯದಲ್ಲಿ ಸಂಶೋಧನೆ ಮಾಡಲು ಮುಂದಾದೆವು.

ಈ ಮೋಡಗಳು ಮಳೆಗೆ ಬಹುಮುಖ್ಯವಾದವು. ಮೋಡದಲ್ಲಿ ಏನೇನು ಆಗುತ್ತದೆ. ಅದರೊಳಗೆ ಗಾಳಿ ಚಲನೆಯಿಂದ ಏನಾಗುತ್ತದೆ ಎಂಬುದು ತಿಳಿದುಕೊಳ್ಳುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿತ್ತು. ಗಾಳಿ ಹೇಗೆ ಮೋಡದೊಳಗೆ ಹೋಗುತ್ತದೆ ಎಂಬುದು ಅರ್ಥ ಆಗಿರಲಿಲ್ಲ. ಅರ್ಥ ಆಗದೇ ಇರಲು ಕಾರಣವೆಂದರೆ, ವಾಯುಮಂಡಲದಲ್ಲಿ ಮೇಲಕ್ಕೆ ಹೋದಂತೆ ಶಾಖ ಕಡಿಮೆ ಆಗುತ್ತಾ ಹೋಗುತ್ತದೆ. ಆದ್ದರಿಂದಲೇ ಬೆಂಗಳೂರು, ಊಟಿ ತಂಪಾಗಿರೋದು ಎಂದು ರೊದ್ದಂ ನಗೆ ಬೀರಿದರು.

ಮೋಡದ ಬಗ್ಗೆ ಮಕ್ಕಳಿಗೆ ಪಾಠ ಹೇಳುವ ಹಾಗೆ ವಿವರಿಸಲಾರಂಭಿಸಿದರು. ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಸಿದ ಮೋಡಗಳ ಚಿತ್ರಗಳನ್ನು ಹರವಿಟ್ಟುಕೊಂಡರು. ಎರಡು ಮೂರು ಬಗೆಯಲ್ಲಿ ನಡೆಸಿದ ಪ್ರಯೋಗಗಳ ಬಗ್ಗೆ ಹೇಳಿದರು. ಮೋಡದೊಳಗೆ ಏನಾಗುತ್ತದೆ ಎಂಬುದನ್ನು ವಿವರಿಸಲಾರಂಭಿಸಿದರು.

ನೆಲದಿಂದ ಮೇಲಕ್ಕೆ ಹೋದ ಹಬೆ ತಣ್ಣಗಾಗುತ್ತಾ ಹೋಗುತ್ತದೆ. ಅನಿಲ ಸ್ವರೂಪ ಅಥವಾ ಮಂಜಿನ ರೂಪ ತಾಳುವುದಕ್ಕೆ ಬದಲು ತುಂತುರಿನಂತಾಗುತ್ತದೆ. ಇದಕ್ಕೆ ಗಾಳಿ ಸ್ಪರ್ಶವಾಗುತ್ತಿದ್ದಂತೆ ನೀರಾಗುತ್ತದೆ. ಆಗ ಶಾಖ ಬಿಡುಗಡೆ ಆಗುತ್ತದೆ. ಇದು ಜನಕ್ಕೆ ಗೊತ್ತಿತ್ತು ಪ್ರಯೋಗ ಮಾಡಿರಲಿಲ್ಲ.

ನಾವು ಮೋಡದ ಆಕಾರವನ್ನು ಸೃಷ್ಟಿಸಿ ಪ್ರಯೋಗ ಮಾಡಿದೆವು. ಒಂದೊ ಎರಡೊ ಐಡಿಯಾಗಳನ್ನು ಮುಂದಿಟ್ಟುಕೊಂಡು ಪ್ರಯತ್ನ ಮಾಡಿದೆವು. ನನ್ನ ಜತೆ ವಿಜ್ಞಾನಿ ಜಿ.ಎಸ್‌.ಭಟ್‌ ಕೂಡಾ ಇದ್ದರು. ಭಾರತೀಯ ವಿಜ್ಞಾನ ಸಂಸ್ಥೆಯ ಸಮೀಪದಲ್ಲಿದ್ದ ಸೆಂಟ್ರಲ್‌ ಪವರ್‌ ಸ್ಟೇಷನ್‌ಗೆ ಹೋಗಿ ಅಲ್ಲಿ ಬರುತ್ತಿದ್ದ ಹಬೆಯನ್ನೇ ಬಳಸಿ ಅದನ್ನು ಸಾಂದ್ರೀಕರಿಸಲು ಪ್ರಯತ್ನ ಮಾಡಿದೆವು. ಹೆಚ್ಚಿನ ಪ್ರಯೋಜನ ಆಗಲಿಲ್ಲ. ನಂತರ ನಮ್ಮ ಏರೋಸ್ಪೇಸ್‌ ವಿಭಾಗದಲ್ಲಿದ್ದ ಸೂಪರ್‌ ಸಾನಿಕ್‌ ಟನೆಲ್‌ನಲ್ಲಿ ಹೊರಬರುವ ಗಾಳಿ ತುಂಬಾ ತಣ್ಣಗೆ ಇರುತ್ತದೆ. ಅಲ್ಲಿ ಪ್ರಯತ್ನ ಮಾಡಿದೆವು.

ಕೊನೆಗೆ ನೀರಿನ ಟ್ಯಾಂಕ್‌ನಲ್ಲಿ ಮೋಡದ ಆಕಾರವನ್ನು ಸೃಷ್ಟಿಸಲು ಸಾಧ್ಯವಾಯಿತು. ಫ್ಲೂಯಿಡ್‌ ಮೆಕ್ಯಾನಿಕ್ ವಿಧಾನ ಬಳಸಿ ಮಾಡಿದೆವು. ನೀರು ವಿದ್ಯುತ್ ವಾಹಕವಲ್ಲ. ಆದರೆ, ಅದಕ್ಕೆ ಹೈಡ್ರೋಕ್ಲೋರಿಕ್‌ ಆಸಿಡ್‌ ಹಾಕಿದರೆ ವಾಹಕವಾಗಿ ಪರಿವರ್ತನೆಗೊಳ್ಳುತ್ತದೆ. ನಮ್ಮ ಪ್ರಯೋಗದಲ್ಲಿ ಅದಕ್ಕೆ ಎಲೆಕ್ಟ್ರೋಡ್‌ ಹಾಕಿದೆವು.

20 ವೋಲ್ಟ್‌ ವಿದ್ಯುತ್‌ ಪ್ರವಹಿಸಿತು. ಅಂದರೆ ಮೋಡಕ್ಕೆ ಶಾಖವನ್ನು ಸೇರಿಸುವುದು ಅಗತ್ಯ. ಆದರೆ, ಎಷ್ಟು ಸಾಂದ್ರತೆಯ ಮೋಡಕ್ಕೆ ಎಷ್ಟು ಪ್ರಮಾಣದ ಶಾಖ ಸೇರಿಸಬೇಕು ಎನ್ನುವುದು ಮುಖ್ಯವಾಗುತ್ತದೆ. ಪ್ರಯೋಗಾಲಯದಲ್ಲಿ ನಾವು ಅದನ್ನು ಕಂಡುಕೊಳ್ಳಲು ಸಾಧ್ಯ.

ಇದನ್ನು ನಾವು ಮಾಡಿದಾಗ ಜನ ನಂಬಲಿಲ್ಲ. ಮೋಡಕ್ಕೆ ಶಾಖ ಬಿಡುಗಡೆ ಮಾಡಿದರೆ ಏನು ಆಗುತ್ತದೆ ಎಂಬುದನ್ನು ಅಂತರರಾಷ್ಟ್ರೀಯ ಜರ್ನಲ್‌ಗೆ ಬರೆಯಬೇಕಾಯಿತು. ಆಗ ‘ಇನ್ನಷ್ಟು ವಿವರಿಸಿ’ ಎಂದರು. ಅದನ್ನು ಮಾಡಿದಾಗ. ‘ಕಗ್ಗಂಟಿನ ಸಮಸ್ಯೆ ಬಿಡಿಸಿದಿರಿ’ ಎಂದು ಹೇಳಿದರು.

‘ಕ್ಯುಮ್ಯುಲಸ್‌ ಕ್ಲೌಡ್‌ ಅನ್ನು ನಮಗೆ ಇಷ್ಟ ಬಂದಂತೆ ಸೃಷ್ಟಿಸಬಹುದು. ಆಕಾಶದಲ್ಲಿ ಯಾವ ರೀತಿಯ ಮೋಡಗಳು ಕಾಣಿಸಿಕೊಳ್ಳುತ್ತವೆಯೋ ಅದೇ ರೀತಿ ವಿವಿಧ ಬಗೆಯ ಮೋಡಗಳ ಆಕಾರವನ್ನು ಸೃಷ್ಟಿಸಬಹುದು. ಪ್ರಯೋಗಾಲಯದಲ್ಲಿ ಮೋಡಗಳನ್ನು ನಾವೇ ಮೊದಲು ಸೃಷ್ಟಿ ಮಾಡಿದ್ದು’!

ಅದೇ ರೀತಿ ಮಳೆ ಹನಿಗಳನ್ನು ಹೊಂದಿರದ ಶುಷ್ಕ ಮೋಡಗಳ ರಹಸ್ಯವನ್ನು ಅರಿಯುವ ಪ್ರಯತ್ನ ಮಾಡಿದೆವು. ಇದರ ಮೇಲೆ ಗಾಳಿ ಸರಿ ಪ್ರಮಾಣದಲ್ಲಿ ಹಾದು ಹೋದರೆ ಆಗುವ ಪರಿಣಾಮ. ಗಾಳಿ ಹರಿವಿನ ಪ್ರಮಾಣ ಕಡಿಮೆ ಆದಾಗ ಆಗುವ ಪರಿಣಾಮಗಳ ಬಗ್ಗೆ ಮತ್ತು ಕಾರಣಗಳನ್ನು ಹೇಳಿದಾಗ ವಿಶ್ವದ ವಿಜ್ಞಾನಿಗಳು ತಲೆದೂಗಿ ಹೌದೆಂದರು. ‘you are made a breakthrough’ ಎಂದು ಹೊಗಳಿಕೆಯ ಸುರಿಮಳೆಗರೆದರು.

ಮೋಡದೊಳಗೆ ಇನ್ನಷ್ಟು ಸೂಕ್ಷ್ಮತೆಯನ್ನು ಕಂಡುಕೊಳ್ಳಲು ಕಂಪ್ಯೂಟರ್‌ ಮೊರೆ ಹೋಗಬೇಕಾಯಿತು. ಕಂಪ್ಯೂಟರ್‌ನಲ್ಲಿ ಸಮೀಕರಣ ಹಾಕಿಕೊಂಡೆವು. ಇದರಿಂದ ಮೋಡದೊಳಗೆ ಗಾಳಿಯ ವೇಗ, ಮೋಡ ಹಿಂಜಿದಂತೆ ಆಗುವ ಸೂಕ್ಷ್ಮ ವ್ಯತ್ಯಾಸಗಳು, ಗಾಳಿಯ ವೇಗದಿಂದ ಅದರಲ್ಲಿ ಉಂಟಾಗುವ ಅಸಂಖ್ಯಾ ಸೂಕ್ಷ್ಮಾತಿಸೂಕ್ಷ್ಮ ಸುಳಿಗಳು ಬೆಳಕಿಗೆ ಬಂದವು. ನಾವು ಶಾಖ ಉತ್ಪತ್ತಿ ಮಾಡಿದಾಗ ನೀರು ಸುಳಿಯೊಳಗೆ ಹೋಗುವುದೂ ಗೊತ್ತಾಯಿತು. ಕಂಪ್ಯೂಟರ್‌ನಲ್ಲಿ ಕಂಡುಕೊಂಡಿದ್ದನ್ನು ಈಗ ಲ್ಯಾಬ್‌ನಲ್ಲಿ ಮಾಡಬಹುದು.

ಮಳೆ ಕಡಿಮೆ ಆದಾಗ ಮೋಡದಲ್ಲಿ ಮಾರ್ಪಾಡು ಮಾಡಿ ಹೇಗೆ ಹೆಚ್ಚಿಸಬಹುದು. ಸಾಕಷ್ಟು ಸಂದರ್ಭದಲ್ಲಿ ಮೋಡದಲ್ಲಿ ನೀರು ಇದ್ದರೂ ಭಾರದಿಂದ ಕೆಳಗೆ ಬೀಳದಿರುವ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬುದನ್ನು ನಿವಾರಿಸಲು ಸಾಧ್ಯ. ಮೋಡದೊಳಗೆ ನ್ಯೂಕ್ಲಿಯಿಕ್‌ ಅಥವಾ ಸಿಲ್ವರ್‌ ಅಯೋಡೈಡ್‌ ಸೇರಿಸಿದಾಗ ಸಾಂದ್ರೀಕರಣ ಹೇಗೆ ಹೆಚ್ಚಿಸಬಹುದು ಎಂಬ ಪ್ರಯೋಗ ನಡೆದಿದೆ. ಇನ್ನು ಎರಡು ಮೂರು ವರ್ಷಗಳಲ್ಲಿ ನಮ್ಮೆಲ್ಲ ಸಂಶೋಧನೆಯನ್ನು ಒಟ್ಟಿಗೆ ಹಾಕಿದರೆ, ಮೋಡದ ಪರಿಪೂರ್ಣ ದರ್ಶನ ಸಿಗುತ್ತದೆ. ಬಳಿಕ ಅದರ ಅನ್ವಯ ಸಾಧ್ಯ.

ನಮ್ಮ ಸಂಶೋಧನೆಯಿಂದ ಭವಿಷ್ಯದಲ್ಲಿ ಮಳೆಯ ಮುನ್ಸೂಚನೆಯನ್ನು ಕರಾರುವಾಕ್ಕಾಗಿ ಹೇಳಬಹುದು. ಕೃತಕ ಮಳೆಯನ್ನು ಇನ್ನೂ ಯಶಸ್ವಿಯಾಗಿ ತರಿಸಬಹುದು.

ಮೋಡಗಳ ಬಗ್ಗೆ ಇನ್ನಷ್ಟು ಆಳಕ್ಕೆ ಹೋಗಿ ರೊದ್ದಂ ವಿವರಿಸಲಾರಂಭಿಸಿದರು. ಅಷ್ಟರಲ್ಲಿ ಜಲರ್ದಶಿನಿ ಬಡಾವಣೆಯ ಅವರ ಮನೆಯಿಂದ ಹೊರಗೆ ಬಂದರೆ ದಟ್ಟವಾಗಿ ಕವಿದಿದ್ದ ಮೋಡದಿಂದ ಸಣ್ಣಗೆ ಹನಿಯಲಾರಂಭಿಸಿತ್ತು. 

ನೀರಿನ ತೊಟ್ಟಿಯಲ್ಲಿ ಮೋಡ ಸೃಷ್ಟಿ
ಮೋಡಗಳನ್ನು ಅಧ್ಯಯನ ಮಾಡಬೇಕಿದ್ದರೆ, ಕೃತಕ ಮೋಡಗಳನ್ನೇ ಸೃಷ್ಟಿಸಬೇಕು. ಅದಕ್ಕಾಗಿ ನೀರಿನ ತೊಟ್ಟಿ ನಿರ್ಮಿಸಲಾಯಿತು. ನೀರಿನಿಂದ ಮೋಡಗಳನ್ನು ಸೃಷ್ಟಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟೆವು. ಫ್ಲೂಯಿಡ್‌ ಮೆಕ್ಯಾನಿಸಂ ಪ್ರಕಾರ, ಅದು ಸಾಧ್ಯ. ನೀರನ್ನು ತೊಟ್ಟಿಯ ಕೆಳಗಿನಿಂದ ಜೆಟ್‌ ಮೂಲಕ ಚಿಮ್ಮುವಂತೆ ಮಾಡಲಾಯಿತು.

ಹೀಗೆ ಚಿಮ್ಮುವ ನೀರಿಗೆ ಹೈಡ್ರೋಕ್ಲೋರಿಕ್‌ ಆ್ಯಸಿಡ್‌ ಹಾಕಲಾಯಿತು. ಇದರಿಂದಾಗಿ ನೀರು ವಿದ್ಯುತ್‌ ವಾಹಕ ಸ್ವರೂಪ ಪಡೆದು ಮೇಲಕ್ಕೆ ಹೋದಾಗ ಅದಕ್ಕೆ ಎಲೆಕ್ಟ್ರೋಡ್‌ ಸೇರಿಸಲಾಯಿತು. ಇದರ ಪರಿಣಾಮ ತೊಟ್ಟಿಯಲ್ಲಿ ಸೃಷ್ಟಿಸಲಾದ ಮೋಡದಲ್ಲಿ ಉಷ್ಣ ಬಿಡುಗಡೆ ಆಗುತ್ತದೆ. ಆದರೆ, ಅಷ್ಟು ಪ್ರಮಾಣದ ಶಾಖ ಸಾಕಾಗುವುದಿಲ್ಲ.

ಆಕಾಶದಲ್ಲಿ ಮೋಡದಿಂದ ಎಷ್ಟು ಪ್ರಮಾಣ ಶಾಖ ಬಿಡುಗಡೆ ಆಗುತ್ತದೆ ಎಂಬುದರ ಮಾಹಿತಿ (ಡೈಮೆನ್ಷನಲ್‌ ಅನಾಲಿಸಿಸ್‌)ಪಡೆಯಲಾಯಿತು. ನಿರ್ದಿಷ್ಟ ಸಾಂದ್ರತೆ ಮತ್ತು ವಿಸ್ತೀರ್ಣದ ಮೋಡಕ್ಕೆ ಎಷ್ಟು ಶಾಖ ಹಾಕಬೇಕಾಗುತ್ತದೆ ಎಂಬುದು ಮುಖ್ಯ.

ನೀರಿನಲ್ಲಿ ಎಷ್ಟು ಪ್ರಮಾಣದ ಶಾಖ ಹಾಕಿದಾಗ ಯಾವ ಪರಿಣಾಮ ಆಗುತ್ತದೆಯೊ ಅದೇ ಪರಿಣಾಮ ಮೋಡಕ್ಕೆ ಶಾಖ ಪ್ರವಹಿಸಿದಾಗಲೂ ಆಗುತ್ತದೆ ಎಂಬುದನ್ನು ಕಂಡುಕೊಂಡೆವು. ಇದರಿಂದ ಮಳೆ ಸುರಿಯಲು ಸಾಧ್ಯ. ಅಷ್ಟೇ ಅಲ್ಲ ಪ್ರಯೋಗದಲ್ಲಿ ನಮ್ಮ ಇಷ್ಟದ ಆಕಾರದ ಮೋಡವನ್ನು ಪಡೆಯಲು ಕೂಡ ಸಾಧ್ಯವಾಗಿದ್ದು ವಿಶೇಷವೆನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT