ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಮೀನುಗಳ ಜಾಡು–ಪಾಡು

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಈ ಹಾದಿಯಲ್ಲಿ ಸ್ವಲ್ಪವೇ ಏರುಪೇರಾದರೂ ಸಾಕಷ್ಟು ಅನರ್ಥಗಳು ಮತ್ತು ಊಹಿಸಲು ಸಾಧ್ಯವಾಗದಂತಹ ಪರಿವರ್ತನೆಗಳು ಜರುಗುತ್ತವೆ. ಹಾಗಾಗಿ, ಹರಿಯುವ ನದಿಗೆ ಅಣೆಕಟ್ಟು ಕಟ್ಟಿದಾಗ ಸ್ಥಳೀಯ ಮೀನುಗಳ ರಕ್ತಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ.

ಹಳ್ಳದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಅಳಿದುಳಿದ ಜಲಚರಗಳನ್ನು ಹೆಕ್ಕಿ ಹಾರಿಹೋದ ಹಕ್ಕಿಗಳ ಹೆಜ್ಜೆಗುರುತು ಇನ್ನೂ ಹಸಿಯಾಗಿತ್ತು. ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಮಗಳು ಎಂ.ಪಿ. ಸಾಗರಿಕಾಳಿಗೆ ಸ್ಥಳೀಯ ಮೀನುಗಳನ್ನು ತೋರಿಸಲು ಹಳ್ಳದ ದಂಡೆಗೆ ಬಂದಿದ್ದ ಪ್ರಕಾಶ್‌ ಅವರ ಮನದಲ್ಲಿ ಬೇಸರ ಮಡುಗಟ್ಟಿತು.

ಮಳೆಗಾಲ ಆರಂಭವಾಗಿ ಕೆರೆ, ಕಟ್ಟೆಗಳು ತುಂಬಿದಾಗ ಅವರೊಳಗೆ ಜಾಗೃತನಾಗುತ್ತಿದ್ದ ಮೀನುಗಾರ ಬರಿದಾಗಿದ್ದ ಹಳ್ಳದ ಮುಂದೆ ಮೂಕನಾಗಿ ನಿಂತಿದ್ದ. ಬಳಸಿ ಬಿಸಾಡಿದ ಹರಿದ ಬಲೆಗಳು, ಸೊಳ್ಳೆಪರದೆ ಬಳಸಿ ಹೈಸ್ಕೂಲ್‌ನಲ್ಲಿದ್ದಾಗ ಮೀನು ಶಿಕಾರಿ ಮಾಡುತ್ತಿದ್ದ ದೃಶ್ಯಗಳು ಒಮ್ಮೆಲೆ ಅವರ ಸ್ಮೃತಿಪಟಲದಲ್ಲಿ ಮಿಂಚಿ ಮರೆಯಾದವು.

ಪ್ರಕಾಶ್‌ ವೃತ್ತಿಯಲ್ಲಿ ಕೃಷಿಕರು. ಮೂರು ದಶಕಗಳಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹುಟ್ಟೂರು ಚಿಕ್ಕಮಗಳೂರು ತಾಲ್ಲೂಕಿನ ಮಾಡ್ಲ. ದಶಕದ ಹಿಂದೆ ಸ್ಥಳೀಯ ಮೀನುಗಳ ಸಂತತಿ ಹೇರಳವಾಗಿತ್ತು. ನಿಧಾನಗತಿಯಲ್ಲಿ ಈ ಜೀವಸಂಕುಲ ಅವಸಾನದತ್ತ ಸಾಗುತ್ತಿರುವುದಕ್ಕೆ ಅವರಲ್ಲಿ ಆತಂಕ ಹೆಚ್ಚಿತ್ತು. 

ಹಿಂದಿನ ವರ್ಷವೂ ಉತ್ತಮವಾಗಿ ಮಳೆ ಸುರಿಯಲಿಲ್ಲ. ಇದರಿಂದ ಮುತ್ತೋಡಿ ಅರಣ್ಯದ ಹಳ್ಳಕೊಳ್ಳಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗತೊಡಗಿತ್ತು. ಮಗಳಿಗೆ ಸ್ಥಳೀಯ ಮೀನುಗಳನ್ನು ತೋರಿಸಲಿಲ್ಲವಲ್ಲ ಎಂಬ ನಿರಾಸೆ ಅವರಿಗೆ ಕಾಡುತ್ತಿತ್ತು. ಮಡುವುಗಳಲ್ಲಿದ್ದ ನೀರು ಕೂಡ ಬಸಿಯತೊಡಗಿತ್ತು. ಅಲ್ಲಿದ್ದ ಬಾಳೆಮೀನು, ಕೊರವ, ಮಳ್ಳೆಮೀನು ಸೇರಿದಂತೆ ಆರು ಸಾವಿರಕ್ಕೂ ಹೆಚ್ಚು ಮೀನುಗಳನ್ನು ಸಂಗ್ರಹಿಸಿದರು. ಅವುಗಳ ಪೋಷಣೆಗಾಗಿ ಮನೆಯ ಮುಂಭಾಗದಲ್ಲಿ ನೀರಿನ ತೊಟ್ಟಿ ಕಟ್ಟಿದರು. ಎಂಟು ತಿಂಗಳ ಕಾಲ ಅವುಗಳ ಪೋಷಣೆ ಮಾಡಿದರು.

ತೂಕದಲ್ಲಿ ಕಡಿಮೆ ಇರುವ ಈ ಮೀನುಗಳ ರುಚಿಯೇ ಬೇರೆ. ಇವುಗಳನ್ನು ಚಪ್ಪರಿಸುವ ಆಸೆಯೂ ಅವರಿಗೆ ಕಾಡಿತು. ಆಗ ಅವರಲ್ಲಿ ಜಾಗೃತನಾಗುತ್ತಿದ್ದ ಮೀನುಗಾರ ಸ್ಥಳೀಯ ಮೀನುಗಳನ್ನು ಸಂರಕ್ಷಿಸಬೇಕು ಎಂದು ಎಚ್ಚರಿಸುತ್ತಿದ್ದ. ಈ ಬಾರಿಯ ಮುಂಗಾರು ಆರಂಭದ ವೇಳೆ ಅರಣ್ಯದಲ್ಲಿ ಮಳೆ ಸುರಿಯಿತು. ಬತ್ತಿಹೋಗಿದ್ದ ಹಳ್ಳಗಳಿಗೆ ಜೀವಕಳೆ ಬಂತು. ಕಾಡಿಗೆ ತೆರಳಿದ ಅವರು ಮಳೆಗಾಲದಲ್ಲಿ ನಿರಂತರವಾಗಿ ಹರಿಯುವ ಹಳ್ಳಗಳಲ್ಲಿ ತಾವು ಸಂಗ್ರಹಿಸಿಟ್ಟಿದ್ದ ಮೀನುಗಳನ್ನು ಬಿಟ್ಟುಬಂದರು.

ಸ‌್ಥಳೀಯ ಮೀನುಗಳಿಗೆ ಆಪತ್ತು
ಮನುಷ್ಯ ನಾಗರಿಕನಾದಂತೆ ಹಲವು ಜೀವಿಗಳು ನಾಮಾ‌ವಶೇಷವಾಗಿವೆ. ಮಾನವನ ಮೂಲಭೂತ ಅಗತ್ಯ, ವೈಭವದ ಬದುಕಿನ ಖಯಾಲಿಗೆ ಪ್ರಕೃತಿ ಬೆತ್ತಲಾಗಿದೆ. ಹಲವಾರು ಜೀವಿಗಳು ನೆಲೆ ಕಳೆದುಕೊಂಡಿವೆ. ಈಗ ಸ್ಥಳೀಯ ಮೀನುಗಳ ಸರದಿ. ಹೇರಳವಾಗಿ ಸಿಗುತ್ತಿದ್ದ ಬಾಳೆಮೀನು, ಕೊರವ, ಗಿರ್ಲು, ಕುಚ್ಚು, ಮಳ್ಳೆಮೀನು, ಚೇಳುಮೀನು, ಗಾಜುಮೀನು, ಬೆಳಚುಮೀನು, ಸುರಗಿ, ಅವುಲು, ಪಕ್ಕೆಮೀನು, ಹಾವು ಮೀನು ಸೇರಿದಂತೆ ಹಲವು ಸ್ಥಳೀಯ ಮೀನುಗಳು ಅಪಾಯದ ಅಂಚಿಗೆ ಸಿಲುಕಿವೆ. ಅದರಲ್ಲೂ ಬಾಯಲ್ಲಿ ನೀರೂರಿಸುತ್ತಿದ್ದ ಬಾಳೆಮೀನು ನದಿಗಳಲ್ಲಿ ಹುಡುಕಿದರೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶ್ವದಾದ್ಯಂತ ಇದಕ್ಕೆ ಹಲವು ಕಾರಣಗಳಿವೆ. ನಾಗರಿಕತೆ ಬೆಳೆದಂತೆ ಮಾನವ ಹರಿಯುವ ನದಿಗಳಿಗೆ ಅಣೆಕಟ್ಟು ಕಟ್ಟಿದ. ಪ್ರಸ್ತುತ ವಿಶ್ವದ ಯಾವ ದೊಡ್ಡ ನದಿಗಳೂ ಇಂದು ಸ್ವತಂತ್ರವಾಗಿ ಹರಿಯುತ್ತಿಲ್ಲ. ನದಿಪಾತ್ರದುದ್ದಕ್ಕೂ ಔದ್ಯೋಗಿಕ ಕೃಷಿ ಚಟುವಟಿಕೆ ಮತ್ತು ಉದ್ದಿಮೆಗಳ ಹೆಸರಿನಡಿ ಯಥೇಚ್ಛವಾಗಿ ನೀರಿನ ಬಳಕೆ ನಡೆದಿದೆ. ಅವೈಜ್ಞಾನಿಕ ಕೃಷಿ ಪದ್ಧತಿ, ಮಾಲಿನ್ಯದಿಂದ ನದಿಗಳ ಮೂಲಸ್ವರೂಪ ಬದಲಾಗಿದೆ.

ಅಣೆಕಟ್ಟು ನಿರ್ಮಿಸಿದರೆ ಮೀನುಗಳಿಗೆ ತಾಪತ್ರಯವೇನು? ಅವು ಬೇರೆಡೆ ವಾಸಿಸಬಹುದಲ್ಲವೇ? ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ, ಸ್ಥಳೀಯ ಮೀನುಗಳ ಜೀವ ಪರಿಸರ ಅಷ್ಟೊಂದು ಸರಳವಾಗಿಲ್ಲ. ಇದಕ್ಕೆ ಹಾವು ಮೀನುಗಳ ಬದುಕು ಉತ್ತಮ ನಿದರ್ಶನ. ವಿಶ್ವದಲ್ಲಿ ಹಲವು ಬಗೆಯ ಹಾವು ಮೀನುಗಳಿವೆ.

ನದಿಗಳಲ್ಲಿ ವಾಸಿಸುವ ಹಾವು ಮೀನುಗಳು ಸಂತಾನೋತ್ಪತ್ತಿಗಾಗಿ ಸಾಗರದ ತೀರಕ್ಕೆ ಹೋಗುತ್ತವೆ. ಅಲ್ಲಿ ಮೊಟ್ಟೆ ಇಟ್ಟು ಮರಳಿ ನದಿಗೆ ಬರುತ್ತವೆ. ಸಮುದ್ರದಲ್ಲಿರುವ ಹಾವು ಮೀನುಗಳು ನದಿ ತೀರಗಳಿಗೆ ಬಂದು ಮೊಟ್ಟೆ ಇಡುತ್ತವೆ. ಇದು ಹಾವು ಮೀನುಗಳ ಬದುಕಿನ ಸಂಕೀರ್ಣ ಚಿತ್ರಣ.

ಇದೇ ರೀತಿ ದೇಶದ ನದಿಗಳಲ್ಲಿರುವ ವಿವಿಧ ಜಾತಿಯ ಮೀನುಗಳು, ಜಲಚರಗಳ ಬಗ್ಗೆ ನಮಗೆ ತಿಳಿವಳಿಕೆ ಅತ್ಯಲ್ಪ. ವಿಶ್ವದಾದ್ಯಂತ ಜಲಚರ ಜೀವಿಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿಲ್ಲ. ಅವುಗಳ ಬದುಕಿನ ಸಂಕೀರ್ಣತೆಯು ನಮ್ಮ ಅರಿವಿಗೆ ದಕ್ಕಿಲ್ಲ. ಹಾಗಾಗಿ, ಬಾಳೆಮೀನು ಕಣ್ಮರೆಯಾಗುತ್ತಿರುವುದು ಎಚ್ಚರಿಕೆಯ ಸುದ್ದಿ. ಜತೆಗೆ, ಅಪಾಯದ ಮುನ್ಸೂಚನೆಯೂ ಹೌದು.

ಇದಕ್ಕೆ ಮುಖ್ಯಕಾರಣ ನದಿಗಳ ಪರಿಸ್ಥಿತಿ. ನದಿಗಳು ಎಂದಾಕ್ಷಣ ಕೇವಲ ನೀರು, ಮರಳು, ಕಲ್ಲುಬಂಡೆಗಳಲ್ಲ. ನಾವು ಮೂರ್ತ ಸ್ವರೂಪದಲ್ಲಿಯೇ ನದಿಗಳನ್ನು ನೋಡುತ್ತೇವೆ. ಆದರೆ, ಅದೊಂದು ವಿಶಿಷ್ಟವಾದ ಜೀವಪರಿಸರ. ಅಲ್ಲಿರುವ ಸಸ್ಯಗಳು, ಜೀವಿಸುತ್ತಿರುವ ಅನೇಕಾನೇಕ ಜೀವಿಗಳ ನಡುವೆ ಹೊಂದಾಣಿಕೆ, ಸಮನ್ವಯ ಇರುತ್ತದೆ.

ಇದು ಕ್ರಮಬದ್ಧವಾದ ಮತ್ತು ನಿರ್ದಿಷ್ಟ ದಿಕ್ಕಿನಲ್ಲಿ ಸಾಗುವ ಪ್ರಕ್ರಿಯೆ. ಈ ಹಾದಿಯಲ್ಲಿ ಸ್ವಲ್ಪವೇ ಏರುಪೇರಾದರೂ ಸಾಕಷ್ಟು ಅನರ್ಥಗಳು ಮತ್ತು ಊಹಿಸಲು ಸಾಧ್ಯವಾಗದಂತಹ ಪರಿವರ್ತನೆಗಳು ಜರುಗುತ್ತವೆ. ಹಾಗಾಗಿ, ಹರಿಯುವ ನದಿಗೆ ಅಣೆಕಟ್ಟು ಕಟ್ಟಿದಾಗ ಮೀನುಗಳ ರಕ್ತಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ.

ಭಾರತದಲ್ಲಿ ಧಾರ್ಮಿಕವಾಗಿ ಮೀನುಗಳಿಗೆ ಪೂಜನೀಯ ಸ್ಥಾನವಿದೆ. ಆದರೆ, ಅವುಗಳ ಸಂರಕ್ಷಣೆ ಬಗ್ಗೆ ನಮಗೆ ಕಳಕಳಿ ಕಡಿಮೆ. ಅವುಗಳ ಸ್ಥಿತಿಗತಿ ಕುರಿತು ಲಕ್ಷ್ಯ ಇಲ್ಲದಿರುವುದು ನೋವಿನ ಸಂಗತಿ. ನಾವು ಅಭಿವೃದ್ಧಿಯ ಹಣೆಪಟ್ಟಿ ಅಂಟಿಸಿಕೊಂಡಿದ್ದೇವೆ. ಅಭಿವೃದ್ಧಿ ಹೆಸರಿನಡಿ ಎಲ್ಲವನ್ನೂ ಧ್ವಂಸ ಮಾಡುತ್ತಿದ್ದೇವೆ. ಒಂದೆಡೆ ಎಗ್ಗಿಲ್ಲದೆ ಮರಳು ಗಣಿಗಾರಿಕೆ ನಡೆದಿದೆ. ಅವೈಜ್ಞಾನಿಕವಾಗಿ ಅಣೆಕಟ್ಟುಗಳ‌ ನಿರ್ಮಾಣ ಸಾಗಿದೆ. ಮತ್ತೊಂದೆಡೆ ನದಿಗಳು, ಕೆರೆಗಳು, ಜಲಾಶಯಗಳಿಗೆ ಮಾಂಸಾಹಾರಿ ಪರದೇಶಿ ಮೀನುಗಳನ್ನು ಪರಿಚಯಿಸುತ್ತಿದ್ದೇವೆ. ಇದು ಅಪಾಯಕಾರಿ ಬೆಳವಣಿಗೆ.

ನದಿಗಳಲ್ಲಿ ಜೀವಿಸುವ ಮೀನುಗಳಲ್ಲಿ ಮಾಂಸಾಹಾರಿ ಮತ್ತು ಸಸ್ಯಾಹಾರಿ ಮೀನುಗಳಿರುತ್ತವೆ. ಹೊಸದಾಗಿ ಪರಿಚಯಿಸುತ್ತಿರುವ ಮೀನುಗಳು ಮಾಂಸಾಹಾರಿ ಮೀನುಗಳಾಗಿವೆ. ಇವುಗಳದ್ದು ಅಪಾಯಕಾರಿ ಗುಣ. ದಕ್ಷಿಣ ಅಮೆರಿಕ, ಆಫ್ರಿಕ, ಈಜಿಪ್ಟ್‌, ಥಾಯ್ಲೆಂಡ್‌ ದೇಶದ ಮೀನುಗಳು ಸ್ಥಳೀಯ ಕೆರೆ, ಕಟ್ಟೆ, ಬಾವಿ, ಹಳ್ಳ, ನದಿ, ಜಲಾಶಯಗಳಲ್ಲಿ ನೆಲೆಯೂರಿವೆ. ಇದಕ್ಕೆ ಆಫ್ರಿಕನ್‌ ಕ್ಯಾಟ್‌ಫಿಷ್‌ ಉತ್ತಮ ಉದಾಹರಣೆ.

ಆಫ್ರಿಕನ್‌ ಕ್ಯಾಟ್‌ಫಿಷ್‌ ಅತ್ಯಂತ ಅಪಾಯಕಾರಿ ಮೀನು. ಜತೆಗೆ, ಆಕ್ರಮಣಕಾರಿ ಬೇಟೆಗಾರ. ಇದರ ವೈಜ್ಞಾನಿಕ ಹೆಸರು ಕ್ಲೇರಿಯಸ್‌ ಗ್ಯಾರಿಪಿನಸ್‌. ಸಿಕ್ಕಿದ್ದನ್ನು ಭಕ್ಷಿಸುವ ಮಾಂಸಾಹಾರಿ ಮತ್ಸ್ಯ. ಅಲ್ಪಾವಧಿಯಲ್ಲಿ ದೊಡ್ಡದಾಗಿ ಬೆಳೆಯುತ್ತದೆ. ದೇಸಿ ಸಸ್ಯಗಳು, ಸ್ಥಳೀಯ ಮೀನುಗಳೇ ಇದರ ಆಹಾರ. ಜೀವವೈವಿಧ್ಯಕ್ಕೆ ಕಂಟಕ ತರುವ ಈ ಮೀನು ಸಾಕಾಣಿಕೆ ನಿಷಿದ್ಧ. ಆದರೂ, ಅಕ್ರಮವಾಗಿ ಸಾಕಾಣಿಕೆ ಮಾಡಿ ಮಾರಾಟ ಮಾಡುವ ದಂಧೆ ಅವ್ಯಾಹತವಾಗಿದೆ. ಅಲ್ಲದೆ ನದಿ, ಹಳ್ಳಕೊಳ್ಳಗಳಲ್ಲಿ ಈ ಮೀನು ಸೇರಿಕೊಂಡಿದೆ.

ಕರಾವಳಿ ಭಾಗದಲ್ಲಿ ಥಾಯ್‌ ಕ್ಯಾಟ್‌ಫಿಷ್‌ ಕೂಡ ಲಭಿಸುತ್ತದೆ. ರಾಜ್ಯದಲ್ಲಿ ಸಿಗುವ ಇನ್ನೊಂದು ವಿದೇಶಿ ತಳಿಯೆಂದರೆ ‘ತಿಲಾಪಿಯ’ ಮೀನು. ಇದಕ್ಕೆ ಸ್ಥಳೀಯವಾಗಿ ಜಿಲೇಬಿ ಮೀನು ಎನ್ನುತ್ತಾರೆ. ಇದರ ಮೂಲ ಆಫ್ರಿಕದ ಮೊಜಾಂಬಿಕಾ. ಇವು ತೀವ್ರ ಪೈಪೋಟಿ ನೀಡಿ ಸ್ಥಳೀಯ ಮೀನುಗಳು, ಮರಿಗಳಿಗೆ ಅಪಾಯ ತರಬಲ್ಲವು. ಆಫ್ರಿಕನ್‌ ಕ್ಯಾಟ್‌ಫಿಷ್‌ ಹೊರತುಪಡಿಸಿದರೆ ಉಳಿದ ಪರದೇಶಿ ಮೀನುಗಳಿಗೆ ಭಾರತದಲ್ಲಿ ನಿಷೇಧ ಹೇರಿಲ್ಲ.

ಪರದೇಶಿ ಮೀನುಗಳಿಗೆ ಸ್ಥಳೀಯ ಮೀನುಗಳನ್ನು ಮುಗಿಸಿಬಿಡುವ ಶಕ್ತಿ ಇದೆ. ಈಗಾಗಲೇ, ಮಾಂಸಾಹಾರಿ ಮೀನುಗಳು ಸ್ಥಳೀಯವಾಗಿ ಜೀವಿಸುತ್ತಿವೆಯಲ್ಲಾ ಎನಿಸಬಹುದು. ಆದರೆ, ಒಂದು ನದಿಯಲ್ಲಿ ಜೀವಿಸುತ್ತಿರುವ ಬೇಟೆಯಾಡುವ ಮೀನುಗಳ ಪರಿಚಯ ಉಳಿದ ಮೀನುಗಳಿಗೆ ತಿಳಿದಿರುತ್ತದೆ. ಅದು ಜೀವವಿನಾಶದ ಪ್ರಕ್ರಿಯೆಯಲ್ಲಿ ಕಲಿತ ವಿದ್ಯೆ. ಆದರೆ, ಹೊಸದಾಗಿ ಆಗಮಿಸುವ ವಿದೇಶಿ ಮೀನುಗಳ ತಂತ್ರಗಾರಿಕೆ ಸ್ಥಳೀಯ ಮೀನುಗಳಿಗೆ ಸಿದ್ಧಿಸಿರುವುದಿಲ್ಲ. ಸಹಜವಾಗಿ ಅಸ್ತಿತ್ವ ಕಳೆದುಕೊಳ್ಳುತ್ತವೆ.

ಈ ಬದಲಾವಣೆ ಕೇವಲ ಸ್ಥಳೀಯ ಮೀನುಗಳ ಮೇಲೆ ಪರಿಣಾಮ ಬೀರುವುದಿಲ್ಲ. ನದಿಗಳಲ್ಲಿ ಜೀವಿಸುತ್ತಿರುವ ಮೊಸಳೆಗಳು, ನೀರುನಾಯಿಗಳು ಸೇರಿದಂತೆ ಉಳಿದ ಜಲಚರಗಳ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಅವುಗಳ ವಿನಾಶಕ್ಕೂ ಮುನ್ನುಡಿ ಬರೆಯುವ ಸಾಧ್ಯತೆ ಹೆಚ್ಚು.

ಆಫ್ರಿಕದ ವಿಕ್ಟೋರಿಯಾ ಸರೋವರದಲ್ಲಿ ಆಗಿರುವ ಅಧ್ವಾನ ಇನ್ನೂ ಹಸಿರಾಗಿಯೇ ಇದೆ. 1950ರಲ್ಲಿ ಈ ಸರೋವರದಲ್ಲಿ ನೈಲ್‌ ಪರ್ಚ್‌(Nile perch) ಎಂಬ ಮಾಂಸಾಹಾರಿ ತಳಿಯ ಮೀನು ಪರಿಚಯಿಸಲಾಯಿತು. ನಿಧಾನವಾಗಿ ಸ್ಥಳೀಯ ಮೀನುಗಳಿಗೆ ಇದು ಕಂಟಕ ತರಲಾರಂಭಿತು. ಈಗ ಅಲ್ಲಿದ್ದ ಅನನ್ಯ ಜಾತಿಯ ಮೀನುಗಳು ಆಪತ್ತಿಗೆ ಸಿಲುಕಿವೆ. ಅಲ್ಲಿನ ಸ್ಥಳೀಯ ಮೀನುಗಳು ಸತ್ತ ಬಳಿಕ ನೈಲ್‌ ಪರ್ಚ್‌ ಕೂಡ ತನ್ನ ಬದುಕಿಗೆ ವಿದಾಯ ಹೇಳಬೇಕಾಗುತ್ತದೆ. ಇದು ಜೀವಪರಿಸರದ ಸರಳ ನಿಯಮ.

ಸಾಲ್ಮನ್‌ಗಳ ದಾರುಣ ಕಥನ
ಹರಿಯುವ ನದಿಗಳಿಗೆ ಅಣೆಕಟ್ಟು ನಿರ್ಮಿಸಿ ನೀರಾವರಿ ಪ್ರದೇಶ ಅಭಿವೃದ್ಧಿಪಡಿಸಬೇಕು ಎಂಬುದು ಆಳುವವರ ಹಂಬಲ. ಆದರೆ, ಅದರಿಂದ ಜೀವವೈವಿಧ್ಯದ ಮೇಲೆ ಆಗುವ ಗಂಭೀರ ಪರಿಣಾಮ ಕುರಿತು ಅವರಿಗೆ ಅರಿವು ಇಲ್ಲ. ಇದಕ್ಕೆ ಅಮೆರಿಕದ ಸಾಲ್ಮನ್ ಮೀನುಗಳ ಜೀವನವೇ ಸಾಕ್ಷಿ. ಸಿಹಿನೀರಿನಲ್ಲಿ ಬದುಕುವ ಜೀವಿಗಳು ಸಾಗರದಲ್ಲಿ ಬದುಕಲಾರವು. ಸಮುದ್ರದಲ್ಲಿ ಜೀವಿಸುವ ಜೀವಿಗಳಿಗೆ ಸಿಹಿನೀರಿನ ಬದುಕು ಸಹನೀಯವಾಗುವುದಿಲ್ಲ. ಸಾಲ್ಮನ್‌ ಮೀನುಗಳ ಬದುಕು ಇದಕ್ಕೆ ತದ್ವಿರುದ್ಧ. ಇವು ಉಪ್ಪುನೀರಿನ ಜೀವಿಗಳೋ ಅಥವಾ ಸಿಹಿನೀರಿನ ಜೀವಿಗಳೋ ಎಂದು ವರ್ಗೀಕರಿಸುವುದೇ ಕಷ್ಟಕರ.

ಸಿಹಿನೀರಿನಲ್ಲಿ ಹುಟ್ಟುವ ಇವು ಬದುಕಿನ ನೆಲೆ ಕಂಡುಕೊಳ್ಳುವುದು ಸಾಗರದಲ್ಲಿ. ಆದರೆ, ಸಂತಾನೋತ್ಪತ್ತಿಗಾಗಿ ಸಿಹಿನೀರನ್ನು ಆಶ್ರಯಿಸುತ್ತವೆ. ಅವುಗಳ ಹುಟ್ಟು–ಸಾವಿನ ನಡುವಿನ ಅಂತರದಲ್ಲಿ ವಲಸೆ ಬಹುಮುಖ್ಯ ಪಾತ್ರವಹಿಸುತ್ತದೆ. ಸಿಹಿನೀರಿನಲ್ಲಿ ಹುಟ್ಟಿ ಒಂದು ವರ್ಷದ ಬಳಿಕ ಸಮುದ್ರಕ್ಕೆ ಬರುವ ಸಾಲ್ಮನ್‌ಗಳು ಶಾಂತಿಸಾಗರದಲ್ಲಿ ವಾಸಿಸುತ್ತವೆ. ನಾಲ್ಕು ವರ್ಷದ ಪ್ರಾಯಕ್ಕೆ ಬರುವ ವೇಳೆಗೆ ಇವುಗಳಿಗೆ ಹರೆಯ ಪ್ರಾಪ್ತಿಯಾಗುತ್ತದೆ.

ಸಂತಾನೋತ್ಪತ್ತಿ ವೇಳೆ ತವರಿನ ಬಯಕೆ ಅವುಗಳಿಗೆ ಕಾಡುತ್ತದೆ. ಆಗ ಅವು ಜಾಗೃತವಾಗುತ್ತವೆ. ಸಂತಾನಾಭಿವೃದ್ಧಿಗಾಗಿ ಬೇಕಾಬಿಟ್ಟಿಯಾಗಿ ನದಿಗಳನ್ನು ಆರಿಸಿಕೊಳ್ಳುವುದಿಲ್ಲ. ತಾವು ಜನಿಸಿದ ನದಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಸಾವಿರಾರು ಕಿಲೋಮೀಟರ್‌ವರೆಗೆ ಅವುಗಳ ವಲಸೆ ಆರಂಭವಾಗುತ್ತದೆ. ಕರಾರುವಾಕ್ಕಾಗಿ ಪಯಣಿಸಿ ಮೂಲ ನದಿಯತ್ತ ಬರುತ್ತವೆ.

ವಲಸೆ ವೇಳೆ ಸಾಲ್ಮನ್‌ಗಳು ಸಾಕಷ್ಟು ತೊಂದರೆ ಎದುರಿಸುತ್ತವೆ. ಜಲಪಾತಗಳನ್ನು ಎದುರಿಸಿ ಈಜುವ ಅವುಗಳ ಸಾಮರ್ಥ್ಯ ಊಹೆಗೆ ಸಿಲುಕುವುದಿಲ್ಲ. ಈ ವೇಳೆ ಮನುಷ್ಯರ ಬೇಟೆ, ಕಂದು ಕರಡಿಗಳಿಂದ ತಪ್ಪಿಸಿಕೊಂಡು ಯಾತ್ರೆ ಮುಂದುವರಿಸುತ್ತವೆ. ಎಲ್ಲ ಅಡೆತಡೆ ದಾಟಿ ಮೂಲ ಸ್ಥಳಕ್ಕೆ ಬರುವ ವೇಳೆಗೆ ಹೈರಾಣಾಗುತ್ತವೆ.

ಈ ವೇಳೆ ಗಂಡು ಸಾಲ್ಮನ್‌ಗಳ ದೇಹದಲ್ಲಿ ಬದಲಾವಣೆ ಕಾಣುತ್ತದೆ. ಗಂಡು ಮೀನುಗಳು ಪರಸ್ಪರ ಕಾದಾಟಕ್ಕೆ ಇಳಿಯುತ್ತವೆ. ಜಯಶಾಲಿಯಾದ ಗಂಡು ಮರಳಿನಲ್ಲಿ ಗೂಡು ತೋಡುತ್ತದೆ. ಹೆಣ್ಣು ಬಂದು ಅಲ್ಲಿ ಸೇರಿಕೊಳ್ಳುತ್ತದೆ. ಬಳಿಕ ಹೆಣ್ಣು ಸ್ರವಿಸಿದ ಅಂಡಕಗಳ ಮೇಲೆ ಗಂಡು ತನ್ನ ಶುಕ್ಲ ಬಿಟ್ಟು ಉಸುಕನ್ನು ಮುಚ್ಚುತ್ತದೆ.

ವಲಸೆಯ ಆರಂಭದಲ್ಲಿ ಎದುರಾದ ಅಡೆತಡೆ ಎದುರಿಸಿ ಯಶಸ್ವಿಯಾಗಿ ಸಂತಾನೋತ್ಪತ್ತಿ ಪ್ರಕ್ರಿಯೆ ಪೂರ್ಣಗೊಳಿಸಿದ ಗಂಡು ಸಾಲ್ಮನ್‌ಗಳು ಶಕ್ತಿ ಕಳೆದುಕೊಂಡಿರುತ್ತವೆ. ಮತ್ತೆ ಅವು ಸಾಗರದತ್ತ ತೆರಳಲಾರದೆ ಸಾಯುತ್ತವೆ. ಆದರೆ, ಕೆಲವು ಹೆಣ್ಣು ಸಾಲ್ಮನ್‌ಗಳು ಮಾತ್ರ ಮತ್ತೆ ಸಮುದ್ರಕ್ಕೆ ವಾಪಸ್‌ ಹೋಗುತ್ತವೆ. ಉಸುಕಿನಲ್ಲಿದ್ದ ಮೊಟ್ಟೆಗಳಲ್ಲಿ ವಸಂತ ಕಾಲಕ್ಕೆ ಜೀವಾಂಕುರವಾಗುತ್ತದೆ. ನದಿಯಲ್ಲಿ ಒಂದು ವರ್ಷಕಾಲ ಜೀವಿಸುವ ಮರಿಗಳು ಮತ್ತೆ ಸಮುದ್ರದತ್ತ ಮುಖ ಮಾಡುತ್ತವೆ. ಯೌವನದ ಕಾಲಕ್ಕೆ ಪುನಃ ನದಿಯತ್ತ ವಲಸೆ ಶುರುವಾಗುತ್ತದೆ. 

ಸಾಲ್ಮನ್‌ಗಳದ್ದು ಅಸ್ತಿತ್ವಕ್ಕಾಗಿ ನಿರಂತರ ಹೋರಾಟ. ಆದರೆ, ಅಮೆರಿಕದಲ್ಲಿ ಕೋಟ್ಯಂತರ ಡಾಲರ್‌ ವ್ಯಯಿಸಿ ನಿರ್ಮಿಸಿದ ಗ್ಲೇನ್‌ ಕ್ಯಯೋನ್‌ ಅಣೆಕಟ್ಟು ಮತ್ತು ಎಲ್ವಾ ಅಣೆಕಟ್ಟುಗಳಿಂದ ಅವುಗಳ ಬದುಕಿನ ಹೋರಾಟಕ್ಕೆ ಅಡಚಣೆ ಎದುರಾಯಿತು. ಅವುಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗತೊಡಗಿತು.

ಇದು ಅಲ್ಲಿನ ಜೀವಿವಿಜ್ಞಾನಿಗಳಲ್ಲಿ ಆತಂಕ ಹೆಚ್ಚಿಸಿತು. ಕೊನೆಗೆ, ಸರ್ಕಾರ ಅಣೆಕಟ್ಟುಗಳನ್ನು ಕೆಡವಿ ಹಾಕಿತು. ಈಗ ಅವುಗಳ ಬದುಕಿನಲ್ಲಿ ಚೇತರಿಕೆ ಕಂಡಿದೆ. ಭಾರತಕ್ಕೆ ಈ ಉದಾಹರಣೆ ಅನ್ವಯಿಸಲು ಸಾಧ್ಯವಿಲ್ಲ. ಆದರೆ, ಒಂದು ಇತಿಮಿತಿಯೊಳಗೆ ಸ್ಥಳೀಯ ಮೀನುಗಳ ಸಂರಕ್ಷಣೆಗೆ ಒತ್ತು ನೀಡುವ ತುರ್ತಂತೂ ಇದೆ.


ಮಾಡ್ಲ ಪ್ರಕಾಶ್‌ ಅವರ ಬೊಗಸೆಯಲ್ಲಿ ಕೊರವ ಮೀನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT