ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 27–8–1967

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸೇನೆ ಹತೋಟಿಯಲ್ಲಿ ಜಮ್ಮು ನಗರ ಗಲಭೆ, ದುಷ್ಕೃತ್ಯಗಳು; ಪೋಲೀಸರ ಮೇಲೆ ಕಲ್ಲು, ಅಶ್ರುವಾಯು ಪ್ರಯೋಗ

ಜಮ್ಮು, ಆ. 26– ಈ ನಗರದಲ್ಲಿ ಉದ್ರಿಕ್ತ ಜನರ ಗುಂಪುಗಳು ಪೊಲೀಸರೊಡನೆ ಪದೇ ಪದೇ ಘರ್ಷಿಸಿ, ಅಗ್ನಿಸ್ಪರ್ಶ ಮತ್ತು ಲೂಟಿಯಲ್ಲಿ ತೊಡಗಿದ ಬಳಿಕ ಕಾನೂನು ಮತ್ತು ನೆಮ್ಮದಿಯ ಪಾಲನೆಯಲ್ಲಿ ಸಿವಿಲ್ ಅಧಿಕಾರಿಗಳಿಗೆ ನೆರವು ನೀಡಲು ಇಂದು ಸೇನೆಯನ್ನು ಕರೆಸಲಾಯಿತು.

ಇಂದು ಸಂಜೆಯ ಹೊತ್ತಿಗೆ ಪರಿಸ್ಥಿತಿಯು ಹತೋಟಿಯಲ್ಲಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾಕೃತ್ಯಗಳಲ್ಲಿ ತೊಡಗಿದ್ದ ಗುಂಪೊಂದು ತಮ್ಮನ್ನು ಸುತ್ತುಗಟ್ಟಿದಾಗ ಆತ್ಮರಕ್ಷಣೆಗಾಗಿ ಪೊಲೀಸಿನವರು ಹುಸಿಗುಂಡು ಹಾರಿಸಿದರು.

ಕಾಲೇಜು ಶಿಕ್ಷಕರಿಗೆ ಶೀಘ್ರವೇ ಯು.ಜಿ.ಸಿ. ವೇತನ ನೀಡಿಕೆ

(ಪ್ರಜಾವಾಣಿ ಪ್ರತಿನಿಧಿಯಿಂದ)

ಮೈಸೂರು, ಆ. 26– ಕಾಲೇಜು ಶಿಕ್ಷರಿಗೆ ಶೀಘ್ರದಲ್ಲಿಯೇ ಯು.ಜಿ.ಸಿ. ವೇತನಗಳನ್ನು ನೀಡುವುದಾಗಿ ರಾಜ್ಯದ ಶಿಕ್ಷಣ ಮಂತ್ರಿ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ಆಶ್ವಾಸನೆ ನೀಡಿದರು.

ಸಂಜೆ ಇಲ್ಲಿನ ಮಹಾರಾಣಿ ಕಾಲೇಜು ಸಂಘದ ಉದ್ಘಾಟನಾ ಭಾಷಣ ಮಾಡಿದ ಶಿಕ್ಷಣ ಸಚಿವರು, ಸಮಾಜದಲ್ಲಿ ಶಿಕ್ಷಕರ ವೇತನ ಮಟ್ಟ ಮತ್ತು ಅವರ ಸ್ಥಾನಮಾನ ತೃಪ್ತಿಕರವಾಗಿಲ್ಲ ಎಂಬುದು ತಮಗೆ ತಿಳಿದಿರುವುದಾಗಿಯೂ, ಇದೇ ಕಾರಣಕ್ಕಾಗಿ ಶಿಕ್ಷಕ ವರ್ಗ ಅಸಮಾಧಾನ ಗೊಂಡಿರುವುದಾಗಿಯೂ, ಅಧ್ಯಾಪಕರ ಈ ಅತೃಪ್ತಿಯನ್ನು ಹೆಚ್ಚು ಕಾಲಾದವರೆಗೆ ಮುಂದುವರಿಯಲು ಅವಕಾಶ ಕೊಡುವುದಿಲ್ಲವೆಂದೂ ಹೇಳಿದರು.

ಪಾವಟೆ: ಪಂಜಾಬ್ ಗೌರ‍್ನರ್

ನವದೆಹಲಿ, ಆ. 26– ಕರ್ನಾಟಕ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿರುವ ಡಾ. ದಾದಾ ಸಾಹೇಬ್ ಚಿಂತಾಮಣಿ ಪಾವಟೆ ಅವರನ್ನು ಪಂಜಾಬ್ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.

ಶ್ರೀ ಬಿರೇಂದ್ರ ನಾರಾಯಣ್ ಚಕ್ರವರ್ತಿ ಅವರನ್ನು ಹರಿಯಾನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.. ಎಂದು ಇಂದು ಇಲ್ಲಿ ರಾಷ್ಟ್ರಪತಿ ಭವನವು ಪ್ರಕಟಿಸಿದೆ.

ಮಾಸ್ಟರ್ ಹಿರಣ್ಣಯ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿ

ಚಿತ್ರದುರ್ಗ, ಆ. 26– ಹಿರಿಯೂರಿನಲ್ಲಿ ಮೊಕ್ಕಾಂ ಮಾಡಿರುವ ಹಿರಣ್ಣಯ್ಯ ಮಿತ್ರಮಂಡಳಿಯ ಮಾಲಿಕರಾದ ಶ್ರೀ ಕೆ. ನರಸಿಂಹಮೂರ್ತಿಯವರನ್ನು (ಮಾಸ್ಟರ್ ಹಿರಣ್ಣಯ್ಯ) ಪ್ರಜ್ಞಾಹೀನ ಸ್ಥಿತಿಯಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು.

ವೇತನ ಮಂಡಳಿ ವ್ಯವಸ್ಥೆ ಮಾರ್ಪಾಡು: ಸೆಪ್ಟೆಂಬರ್‌ ಅಂತ್ಯಕ್ಕೆ ತ್ರಿಪಕ್ಷ ಸಭೆ

ಮುಂಬೈ, ಆ.26– ವೇತನ ಮಂಡಳಿ ವ್ಯವಸ್ಥೆಯಲ್ಲಿ ಮತ್ತು ಕಾರ್ಮಿಕರ ಸಾಮಾಜಿಕ ಭದ್ರತೆ ಕ್ರಮಗಳಲ್ಲಿ ಬದಲಾವಣೆಗಳನ್ನು ಚರ್ಚಿಸಲು ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಸರ್ಕಾರ, ಮಾಲೀಕರು ಹಾಗೂ ನೌಕರರ ಪ್ರತಿನಿಧಿಗಳ ತ್ರಿಪಕ್ಷೀಯ ಸಭೆಯನ್ನು ಕೇಂದ್ರ ಸರ್ಕಾರ ಕರೆಯಲಿದೆ.

ಇಂದು ಇಲ್ಲಿ ಅಖಿಲ ಭಾರತ ತಯಾರಿಕೆಗಾರರ ಸಂಸ್ಥೆಯನ್ನು ಕೇಂದ್ರ ಸಮಿತಿಯ ಪ್ರಥಮ ತ್ರೈಮಾಸಿಕ ಸಭೆಯನ್ನು ಉದ್ಘಾಟಿಸಿದ ಕೇಂದ್ರ ಕಾರ್ಮಿಕ ಸಚಿವ ಶ್ರೀ ಜೈಸುಖ್‌ಲಾಲ್‌ ಹಾಥಿ ಅವರು ಈ ವಿಷಯವನ್ನು ಪ್ರಕಟಿಸಿದರು.

ಕಾರ್ಖಾನೆಗಳಲ್ಲಿ ಪ್ರಾವಿಡೆಂಟ್‌ ಫಂಡ್‌ ಯೋಜನೆಯ ಭಾಗವಾಗಿ ಕಾರ್ಮಿಕರ ರಾಷ್ಟ್ರೀಯ ನಿರುದ್ಯೋಗ ಯೋಜನೆಯ ಕುರಿತು ಸಹ ತ್ರೀಪಕ್ಷೀಯ
ಸಭೆಯು ಚರ್ಚಿಸಲಿದೆಯಂದೂ ಶ್ರೀ ಹಾಥಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT