ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರ ಬದಲು ಇವರಿದ್ದಾಗ ಕಾದಿತ್ತು ಗ್ರಹಚಾರ...!

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹಲವು ವರ್ಷಗಳ ಹಿಂದಿನ ಘಟನೆ. ನ್ಯಾಯಾಲಯದಲ್ಲಿ ಪ್ರಕರಣವೊಂದನ್ನು ನಡೆಸುತ್ತಿದ್ದೆ.  ನನ್ನ ಮೊಬೈಲ್‌ ಫೋನ್‌ ‘ಸೈಲೆಂಟ್‌ ಮೋಡ್‌’ನಲ್ಲಿತ್ತು. ಕೇಸು ಮುಗಿಸಿ ಹೊರಬಂದು ಮೊಬೈಲ್‌ ನೋಡಿದರೆ ಅದರಲ್ಲಿ ಹತ್ತಾರು ಮಿಸ್ಡ್‌ ಕಾಲ್‌ಗಳು ಇದ್ದವು. ಒಬ್ಬನೇ ವ್ಯಕ್ತಿ ಈ ಪರಿಯಲ್ಲಿ ಕರೆ ಮಾಡಿದ್ದರಿಂದ ಯಾರೋ ಬಹಳ ತೊಂದರೆಯಲ್ಲಿ ಇದ್ದ ಹಾಗೆ ತೋರಿತು.

ವಾಪಸ್‌ ನಾನು ಆ ಸಂಖ್ಯೆಗೆ ಕರೆ ಮಾಡಿದಾಗ, ಆ ಕಡೆಯಿಂದ ವ್ಯಕ್ತಿಯೊಬ್ಬ ತನ್ನ ಹೆಸರು ಮುಖೇಶ್ ಎಂದು ಪರಿಚಯಿಸಿಕೊಂಡ. ತಾನು ಮುಂಬೈನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ. ‘ನಾನು ತಮ್ಮೊಂದಿಗೆ ತುರ್ತಾಗಿ ಮಾತನಾಡಬೇಕು’ ಎಂದ. ವಿಷಯವೇನು ಎಂದು ನಾನು ಕೇಳಿದಾಗ ಆತ, ಬನ್ಸಾಲ್ ಎಂಬ ತನ್ನ ಸ್ನೇಹಿತನೊಬ್ಬ ಬಹಳ ತೊಂದರೆಯಲ್ಲಿದ್ದು, ಅವನಿಗೆ ಸಹಾಯ ಮಾಡಬೇಕು ಎಂದು ಕೇಳಿಕೊಂಡ. ಪೋನ್ ನಂಬರ್ ಒಂದನ್ನು ಕೊಟ್ಟು ದಯವಿಟ್ಟು ಕರೆ ಮಾಡಿ ಅವರಿಂದ ವಿಷಯ ತಿಳಿದುಕೊಳ್ಳಬೇಕು ಎಂದು ಪ್ರಾರ್ಥಿಸಿಕೊಂಡ. ವಿಷಯ ಏನು ಎಂದು ಕೇಳಿದೆ. ಆದರೆ ಆತ ತನಗೆ ಏನೂ ಅರಿವಿಲ್ಲ. ಬೆಂಗಳೂರಿನಲ್ಲಿರುವ ಸ್ನೇಹಿತ ಬನ್ಸಾಲ್‌ ಸಂಕಷ್ಟದಲ್ಲಿ ಇರುವುದು ಮಾತ್ರ ತಿಳಿದಿದೆ, ಹೆಚ್ಚಿನ ಮಾಹಿತಿ ಇಲ್ಲ. ಆದ್ದರಿಂದ ಈ ದೂರವಾಣಿಗೆ ಕರೆ ಮಾಡಿದರೆ ವಿಷಯ ತಿಳಿಯುತ್ತದೆ. ಬನ್ಸಾಲ್‌ ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳಿ ನನ್ನ ಬಳಿ ನೆರವು ಕೋರುವಂತೆ ಹೇಳಿದ ಕೆಲ ವಕೀಲರ ಬಗ್ಗೆ ವಿವರಿಸಿದ.

ನಾನು ನನ್ನ ಕಿರಿಯ ಸಹೋದ್ಯೊಗಿಯೊಬ್ಬನಿಗೆ ಆ ನಂಬರ್‌ ಕೊಟ್ಟು ಕರೆ ಮಾಡಿ ವಿವರಗಳನ್ನು ಪಡೆದುಕೊಳ್ಳುವಂತೆ ತಿಳಿಸಿದೆ. ಆ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ, ನನ್ನ ಕಿರಿಯ ಸಹೊದ್ಯೋಗಿಗೆ ಯಾವ ವಿಷಯವನ್ನೂ ತಿಳಿಸದೆ, ನನ್ನ ಬಳಿಯೇ ಖುದ್ದಾಗಿ ಮಾತನಾಡಬೇಕು ಎಂದು ಹೇಳಿದ.

ನಂತರ ನಾನು ಮಾತನಾಡಿದಾಗ ಆತ ತನ್ನ ಪರಿಚಯ ಮಾಡಿಕೊಂಡ. ತಾನೊಬ್ಬ ಪ್ರಾಮಾಣಿಕ ವ್ಯಕ್ತಿ ಎಂಬುದನ್ನು ಮೊದಲು ನನಗೆ ಮನವರಿಕೆ ಮಾಡಿಸಿದ. ನಂತರ, ‘ನಾನೊಂದು ವಿಷಯವನ್ನು ಹೇಳುತ್ತೇನೆ. ಅದು ಬಹಳ ರಹಸ್ಯವಾದದ್ದು. ಈ ವಿಷಯವು ಬೇರೆ ಯಾರಿಗೂ ತಿಳಿಯಬಾರದು. ಒಂದು ವೇಳೆ ನಾನೇ ಕರೆ ಮಾಡಿದ್ದು ಎಂದು ಇಲ್ಲಿ ಯಾರಿಗಾದರೂ ಗೊತ್ತಾದರೆ ನನ್ನ ಕೆಲಸಕ್ಕೆ ಕುತ್ತು ಬರುತ್ತದೆ’ ಎಂದ. ನಾನು ವಿಷಯ ಗೌಪ್ಯವಾಗಿಯೇ ಇರುತ್ತದೆ ಎಂದು ಭರವಸೆ ನೀಡಿದ ಮೇಲೆ ಆತ, ಬೆಂಗಳೂರಿನ ಪೊಲೀಸ್‌ ಠಾಣೆಯೊಂದರ ವಿವರ ನೀಡಿ, ‘ನಾನು ಇಲ್ಲಿಯ ಕಾನ್‌ಸ್ಟೆಬಲ್‌. ಬನ್ಸಾಲ್‌ ಎಂಬ ಅಮಾಯಕರೊಬ್ಬರನ್ನು ನಮ್ಮ ಠಾಣೆಯ ಪೊಲೀಸರು ಯಾವುದೋ ಕೇಸ್‌ನಲ್ಲಿ ಸಿಕ್ಕಿಸಿ ಕರೆತಂದಿದ್ದಾರೆ. ಇಲ್ಲಿ ಅವರಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ಬನ್ಸಾಲ್‌ ತುಂಬಾ ಒಳ್ಳೆಯ ವ್ಯಕ್ತಿಯ ಹಾಗೆ ಕಾಣಿಸುತ್ತಿದ್ದಾರೆ. ನಾನು ಮುಂಬೈನಲ್ಲಿರುವ ಅವರ ಸ್ನೇಹಿತರ ಬಳಿ ಮಾತನಾಡಿದ್ದೇನೆ. ಅವರು ನಿಮ್ಮ ಬಳಿ ಮಾತನಾಡಲು ಹೇಳಿದರು. ನಾಳೆ ಬನ್ಸಾಲ್‌ ಅವರನ್ನು ಮೇಯೋಹಾಲ್‌ ಬಳಿ ಇರುವ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರು ಪಡಿಸುತ್ತಿದ್ದಾರೆ. ಇಷ್ಟು ಬಿಟ್ಟರೆ ಬೇರೆ ಏನೂ ನಾನು ಹೇಳುವ ಸ್ಥಿತಿಯಲ್ಲಿ ಇಲ್ಲ’ ಎಂದು ಹೇಳಿ ಕರೆಯನ್ನು ಸ್ಥಗಿತಗೊಳಿಸಿದ.

ಒಟ್ಟಿನಲ್ಲಿ ಎಲ್ಲವೂ ಗೋಜಲುಗೋಜಲಾಗಿತ್ತು. ಏನು ಕೇಸು, ಯಾರೀ ಬನ್ಸಾಲ್‌, ಯಾಕೆ ಯಾರಿಗೂ ಏನೂ ವಿಷಯ ತಿಳಿದಿಲ್ಲ... ತಿಳಿದಿದ್ದರೂ ಏಕೆ ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದೆಲ್ಲಾ ಅನ್ನಿಸತೊಡಗಿತು. ಆದರೆ ಎಲ್ಲರೂ ಇಷ್ಟೊಂದು ಗೋಗರೆಯುತ್ತಿದ್ದುದರಿಂದ ವಿಷಯವನ್ನು ತಿಳಿದುಕೊಳ್ಳುವ ಮನಸ್ಸಾಯಿತು. ಮಾರನೆಯ ದಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಪ್ರಕರಣವೊಂದರ ವಾದ ಮಂಡನೆಗೆ ನಾನು ಹೋಗಬೇಕಿತ್ತು. ಅದೇ ನ್ಯಾಯಾಲಯದ ಮುಂದೆಯೇ ಬನ್ಸಾಲ್‌ನನ್ನು ಹಾಜರು ಪಡಿಸುತ್ತಿದ್ದುದರಿಂದ ಅಲ್ಲಿಯೇ ಮಾಹಿತಿಯನ್ನು ಪಡೆದುಕೊಳ್ಳೋಣ ಎಂದುಕೊಂಡೆ. ಆದ್ದರಿಂದ ಬೆಳಿಗ್ಗೆ ಸ್ವಲ್ಪ ಮುಂಚೆಯೇ ನ್ಯಾಯಾಲಯಕ್ಕೆ ಹೋದೆ.
ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲು ವ್ಯಕ್ತಿಯೊಬ್ಬನನ್ನು ಕರೆದುಕೊಂಡು ಬರುತ್ತಿದ್ದರು. ವಿಚಾರಿಸಿದಾಗ ಅವರೇ ಬನ್ಸಾಲ್‌ ಎಂದು ತಿಳಿಯಿತು. ಅವರ ಬಳಿ ಮಾತನಾಡಿ, ಏನು ಸಮಸ್ಯೆ, ಯಾವ ಆರೋಪದ ಮೇಲೆ ಬಂಧಿಸಲಾಗಿದೆ ಎಂದೆಲ್ಲಾ ಕೇಳಿದಾಗ, ಅವರು ಬಿಕ್ಕಿಬಿಕ್ಕಿ ಅಳುವುದನ್ನು ಬಿಟ್ಟರೆ ಏನನ್ನೂ ಹೇಳಲಿಲ್ಲ. ಮುಂಬೈನಿಂದ ಮುಖೇಶ್‌ ಎಂಬಾತ ಪೋನ್ ಮಾಡಿದ್ದು, ಧೈರ್ಯವಾಗಿ ವಿಷಯವನ್ನು ತಿಳಿಸಿದರೆ ನನ್ನಿಂದಾಗುವ ಸಹಾಯ ಮಾಡುವುದಾಗಿಯೂ ಹೇಳಿದೆ. ನಂತರ ಪೊಲೀಸರಲ್ಲಿ ವಿಚಾರಿಸಿ, ಅವರ ಮೇಲೆ ಇರುವ ಆರೋಪದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡೆ.

ಪ್ರಕರಣದ ಬಗ್ಗೆ ನನಗೆ ಸಿಕ್ಕ ಮಾಹಿತಿ ಇಷ್ಟು: ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ನಡೆದ ವೇಶ್ಯಾವಾಟಿಕೆ ಪ್ರಕರಣದಲ್ಲಿ ಬನ್ಸಾಲ್‌ ಅವರನ್ನು ಬಂಧಿಸಲಾಗಿತ್ತು. ಘಟನೆ ಏನೆಂದರೆ- ರಾಮಲಾಲ್ ಎಂಬ ವ್ಯಕ್ತಿ ಮುಂಬೈನಿಂದ ಬಂದು ಐಷರಾಮಿ ಹೋಟೆಲ್ ಒಂದರಲ್ಲಿ ಕೊಠಡಿಯನ್ನು ಉಳಿಯಲು ಪಡೆದುಕೊಂಡಿದ್ದ. ಕೆಲವು ತಾರಾ ಹೋಟೆಲ್‌ಗಳಲ್ಲಿ ವೇಶ್ಯಾವಾಟಿಕೆ ಮಾಮೂಲು. ಅಂಥದ್ದೇ ಒಂದು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ರಾಮಲಾಲ್‌ ಅಂದು ಹೆಣ್ಣೊಬ್ಬಳನ್ನು ಕರೆಸಿಕೊಂಡಿದ್ದ. ಆಕೆ ರಾತ್ರಿಯಿಡೀ ಅವನ ಜೊತೆ ಉಳಿದು ಬೆಳಗಿನ ಜಾವ ಹೊರಟುಹೋಗಿದ್ದಳು.

ಅಂದು ಸಂಜೆ ರಾಮ್‌ಲಾಲ್‌ ಹೋಟೆಲ್‌ನಿಂದ ತೆರಳಬೇಕಿತ್ತು. ಆದರೆ ಬೆಳಿಗ್ಗೆ ಕೆಲಸದ ನಿಮಿತ್ತ ಹೊರ ಹೋಗಿದ್ದಾಗ, ಅವನಿಗೆ ಮುಂಬೈನಿಂದ ತುರ್ತಾಗಿ ಕರೆ ಬಂತು. ವಾಪಸ್‌ ಹೋಟೆಲ್‌ಗೆ ಹೋಗಿ ಚೆಕ್‌ಔಟ್‌ ಮಾಡಿ ಬರುವಷ್ಟು ವೇಳೆ ಇರಲಿಲ್ಲ. ಈಗಾಗಲೇ ಹೋಟೆಲ್‌ ಬಾಡಿಗೆಯನ್ನು ಪೂರ್ತಿ ತುಂಬಿದ್ದರಿಂದ ಅಲ್ಲಿಂದಲೇ ಮುಂಬೈಗೆ ಹೋಗುವ ನಿರ್ಧಾರ ಮಾಡಿದ. ಆದರೆ ಕೊಠಡಿಯ ಕೀಲಿ ಅವನ ಬಳಿಯೇ ಇತ್ತು. ಅದನ್ನು ಏನು ಮಾಡುವುದು ಎಂದು ಯೋಚಿಸುವಷ್ಟರದಲ್ಲಿ ಅವನಿಗೆ ಪರಿಚಯಸ್ಥ ಬನ್ಸಾಲ್‌ ಎದುರಾದರು.

ಬನ್ಸಾಲ್‌ ಕೆಲಸದ ನಿಮಿತ್ತ ಮುಂಬೈನಿಂದ ಆಗತಾನೇ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದರು.
ಇಬ್ಬರೂ ಮಾತನಾಡುವಾಗ, ರಾಮ್‌ಲಾಲ್‌, ತಾನು ಹೋಟೆಲ್‌ ಅನ್ನು ಇನ್ನೂ ಚೆಕ್‌ಔಟ್‌ ಮಾಡಿಲ್ಲ. ಕೀಲಿ ತನ್ನ ಬಳಿಯೇ ಇರುವ ಕಾರಣ, ಹೋಟೆಲ್‌ನಲ್ಲಿಯೇ ಫ್ರೆಷ್‌ಅಪ್‌ ಆಗಿ ಕೀಲಿಯನ್ನು ಹೋಟೆಲ್‌ಗೆ ಮರಳಿಸಿ ಹೋಗುವಂತೆ ಹೇಳಿದ. ಹೇಗೂ ಬನ್ಸಾಲ್‌ ಹೋಟೆಲ್‌ ಬುಕ್‌ ಮಾಡಬೇಕಿತ್ತು. ಆದ್ದರಿಂದ ರಾಮ್‌ಲಾಲ್‌ ಹೇಳಿದಂತೆಯೇ ಮಾಡುವುದು ಸರಿ ಎನಿಸಿ ಕೀಲಿ ಪಡೆದರು. ವಿಮಾನ ನಿಲ್ದಾಣದಿಂದ ಅವರು ನೇರವಾಗಿ ಹೋಟೆಲ್‍ಗೆ ಬಂದರು.

ರಾಮ್‌ಲಾಲ್‌ ಉಳಿದುಕೊಂಡಿದ್ದ ಕೊಠಡಿಗೆ ಹೋಗಿ ಫ್ರೆಷ್‌ ಆಗಿ ಇನ್ನೇನು ಹೊರಗೆ ಬರಬೇಕು ಎನ್ನುವಷ್ಟರಲ್ಲಿ ಯಾರೋ ಹೊರಗಡೆಯಿಂದ ಬಾಗಿಲು ತಟ್ಟಿದ ಶಬ್ದವಾಯಿತು. ಹೊರಬಂದು ನೋಡಿದಾಗ ಎದುರಿಗೆ ಪೊಲೀಸ್‌ ಕಾನ್‌ಸ್ಟೆಬಲ್‌ ನಿಂತಿದ್ದ. ಪೊಲೀಸ್‌ನನ್ನು ನೋಡಿ ಗಾಬರಿಗೊಂಡ ಬನ್ಸಾಲ್‌ ವಿಷಯ ಏನೆಂದು ಕೇಳಿದಾಗ, ನಿಮ್ಮ ಹೆಸರೇನು ಎಂದು ಕೇಳುತ್ತಾನೆ. ಗಾಬರಿಯಿಂದ ಬನ್ಸಾಲ್‌, ‘ನನ್ನ ಹೆಸರು ರಾಮ್‌ಲಾಲ್‌’ ಎನ್ನುತ್ತಾರೆ. ಆಗ ಕಾನ್‌ಸ್ಟೆಬಲ್‌ ‘ಹಿಂದಿನ ರಾತ್ರಿ ನೀವು ಇಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆದ್ದರಿಂದ ನಿಮ್ಮನ್ನು ಬಂಧಿಸಿ ಠಾಣೆಗೆ ಹಾಜರು ಪಡಿಸಲು ಕರೆದೊಯ್ಯಲು ಬಂದಿದ್ದೇನೆ’ ಎನ್ನುತ್ತಾನೆ. ಹಿಂದೆ ಮುಂದೆ ಏನೂ ಅರಿಯದ ಬನ್ಸಾಲ್‌ ತಬ್ಬಿಬ್ಬಾಗಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಎಷ್ಟೇ ಗೋಗರೆದರೂ ಆತ ಕೇಳದೇ ಠಾಣೆಗೆ ಕರೆದೊಯ್ಯುತ್ತಾನೆ.
ಠಾಣೆಯಲ್ಲಿ ಕೆಳಹಂತದ ಪೊಲೀಸರು ಬನ್ಸಾಲ್‌ನ ಗುರುತಿನ ಚೀಟಿಯೆಲ್ಲ ನೋಡಿದಾಗ ಅವರ ನಿಜವಾದ ಹೆಸರು ರಾಮ್‌ಲಾಲ್‌ ಅಲ್ಲ, ಬನ್ಸಾಲ್‌ ಎಂದು ತಿಳಿಯುತ್ತದೆ. ರಾಮ್‌ಲಾಲ್‌ ಎಂಬ ಸುಳ್ಳು ಹೆಸರಿನಲ್ಲಿ ಹೋಟೆಲ್‌ ಕೊಠಡಿಯನ್ನು ಬುಕ್‌ ಮಾಡಿರುವುದಾಗಿ ಹೇಳಿ ಅವರ ವಿರುದ್ಧ ಕೇಸು ದಾಖಲು ಮಾಡುತ್ತಾರೆ.

ಬನ್ಸಾಲ್‌ನನ್ನು ನೋಡುತ್ತಲೇ ಅವರೊಬ್ಬ ಶ್ರೀಮಂತ ವ್ಯಕ್ತಿ ಎಂದು ಗೊತ್ತಾಗಿ ಅವರ ಬಳಿಯಿದ್ದ ಹಣ, ಒಡವೆ ಎಲ್ಲವನ್ನೂ ದೋಚುವ ಪೊಲೀಸರು ಅವರ ವಿರುದ್ಧ ಚಿಕ್ಕದೊಂದು ಕೇಸು ದಾಖಲು ಮಾಡುತ್ತಾರೆ. (ಒಂದು ವೇಳೆ ಬನ್ಸಾಲ್‌ ವಿರುದ್ಧ ವೇಶ್ಯಾವಾಟಿಕೆ ಕೇಸು ದಾಖಲು ಮಾಡಿದ್ದರೆ ಅದು ಜಾಮೀನು ರಹಿತ ಅಪರಾಧವಾಗಿ ಅವರು ಕೋರ್ಟ್‌ಗೆ ಅಲೆಯಬೇಕಿತ್ತು. ಆದರೆ ಅದಾಗಲೇ ಅವರ ಹಣವನ್ನೆಲ್ಲಾ ದೋಚಿದ್ದರಿಂದ ಪೊಲೀಸರು ದಂಡ ಮಾತ್ರ ಕಟ್ಟುವಂಥ ಚಿಕ್ಕದೊಂದು ಕೇಸು ದಾಖಲಿಸಿರುತ್ತಾರೆ!).
ತಮ್ಮ ವಿರುದ್ಧ ಚಿಕ್ಕದೊಂದು ಕೇಸು ದಾಖಲು ಆಗಿದೆ ಎನ್ನುವ ವಿಷಯವೂ ತಿಳಿದಿರುವುದಿಲ್ಲ. ತಾವು ಇನ್ನೇನು ಜೈಲಿಗೆ ಹೋಗುವುದು ಖಚಿತ ಎಂದುಕೊಂಡು ಬನ್ಸಾಲ್‌ ಆತಂಕಕ್ಕೆ ಒಳಗಾಗಿರುತ್ತಾರೆ....
ಇಷ್ಟು ವಿಷಯ ನನಗೆ ತಿಳಿಯಿತು...

ಪ್ರಕರಣದ ಬಗ್ಗೆ ಅವರಲ್ಲಿ ಮಾತನಾಡಿದಾಗ ಅವರು, ‘ದಯವಿಟ್ಟು ನನ್ನ ವಿಷಯವನ್ನು ಯಾರಿಗೂ ಹೇಳಬೇಡಿ. ಮುಖೇಶ ನನ್ನ ಸ್ನೇಹಿತ. ಅವನಿಗೆ ಕೂಡ ನಾನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿದ್ದೇನೆ ಎಂಬ ವಿಷಯ ಗೊತ್ತಿಲ್ಲ. ನನ್ನ ತಂದೆ-ತಾಯಿ ಗಣ್ಯವ್ಯಕ್ತಿಗಳು. ಇಂಥ ಕೀಳು ಅಪರಾಧದಲ್ಲಿ ನಾನು ಸಿಲುಕಿರುವ ವಿಷಯ ಅವರಿಗೇನಾದರೂ ತಿಳಿದುಬಿಟ್ಟರೆ, ನನ್ನ ತಂದೆ-ತಾಯಿ, ಹೆಂಡತಿ ಎಲ್ಲರ ಜೀವನವೂ ಅಲ್ಲೋಲಕಲ್ಲೋಲವಾಗುತ್ತದೆ. ಯಾರಿಗೂ ಏನೂ ತಿಳಿಯದ ಹಾಗೆ ನನ್ನನ್ನು ದಯವಿಟ್ಟು ಪಾರು ಮಾಡಿ. ಈಗ ನನಗೆ ನೀವೇ ಎಲ್ಲ...’ ಎಂದರು.

ಅವರಿಗೆ ಭರವಸೆ ನೀಡಿ, ಅವರ ವಿರುದ್ಧ ಪೊಲೀಸರು ದಾಖಲಿಸಿದ ದೋಷಾರೋಪ ಪಟ್ಟಿಯನ್ನು ಗಮನಿಸಿದೆ. ವೇಶ್ಯಾವಾಟಿಕೆ ಕೇಸನ್ನು ಅವರ ಮೇಲೆ ಹಾಕಿಲ್ಲ ಎನ್ನುವುದು ಖಾತರಿಯಾಯಿತು. ಚಿಕ್ಕದೊಂದು ಕೇಸು ದಾಖಲಾಗಿತ್ತು. ಇದು ಕೇವಲ ದಂಡ ಕಟ್ಟಿ ಬಿಡುಗಡೆ ಮಾಡಬಹುದಾದ ಕೇಸು ಆಗಿದ್ದರಿಂದ ಅವರನ್ನು ಪಾರು ಮಾಡಲು ನನಗೇನೂ ಹೆಚ್ಚು ಸಮಯ ಹಿಡಿಯಲಿಲ್ಲ. ಕಾನೂನಿನ ಮುಂದಿನ ಪ್ರಕ್ರಿಯೆ ನಾನು ನಡೆಸುವಂತೆ ನನ್ನ ಕಿರಿಯ ಸಹೊದ್ಯೋಗಿಗೆ ಹೇಳಿದೆ.

ಸಮಯ ಹೇಗಿರುತ್ತದೆ ನೋಡಿ, ಆಗರ್ಭ ಶ್ರೀಮಂತ ಬನ್ಸಾಲ್‌ ಬಳಿ ದಂಡ ಕಟ್ಟಲು ₹ 500 ಕೂಡ ಇರಲಿಲ್ಲ, ನನ್ನ ಕಿರಿಯ ಸಹೊದ್ಯೋಗಿಯೇ ಹಣವನ್ನು ಕೋರ್ಟ್‌ಗೆ ಕಟ್ಟಿ ಬನ್ಸಾಲ್‌ ಅವರನ್ನು ಕರೆದುಕೊಂಡು ಬಂದರು.

ಇನ್ನೇನು ತಮಗೆ ಜೈಲೇ ಕಟ್ಟಿಟ್ಟ ಬುತ್ತಿ ಎಂದುಕೊಂಡಿದ್ದ ಬನ್ಸಾಲ್‌ ಅವರಿಗೆ ಮರುಜೀವ ಸಿಕ್ಕಷ್ಟು ಖುಷಿಯಾಗಿತ್ತು. ಕೊಲೆ ಕೇಸೊಂದರಲ್ಲಿ ಸಿಲುಕಿ ಪಾರಾದಷ್ಟು ಸಂತಸ ಅವರ ಮುಖದಲ್ಲಿ ಕಾಣುತ್ತಿತ್ತು. ವಾಪಸ್‌ ಮುಂಬೈಗೆ ಹೋಗುವ ತವಕದಲ್ಲಿದ್ದರು. ಆದರೆ ಅವರ ಬಳಿ ಹಣ ಇರಲಿಲ್ಲ. ನಾನೇ ಹೋಟೆಲ್‌ಗೆ ಕರೆದುಕೊಂಡು ಹೋಗಿ ತಿಂಡಿ ತಿನ್ನಿಸಿದೆ. ವಿಮಾನದ ಟಿಕೆಟ್‌ ಕೂಡ ಖರೀದಿಸಿ ಮುಂಬೈಗೆ ಹೋಗುವ ವ್ಯವಸ್ಥೆ ಮಾಡಿದೆ. ಅಲ್ಲಿಗೆ ಹೋದ ಮೇಲೆ ನನ್ನ ಫೀಸ್‌ ಹಾಗೂ ಇತರ ಖರ್ಚು ನೀಡುವುದಾಗಿ ಅವರು ಹೇಳಿ ಹೋದರು.

ಆದರೆ ನನ್ನ ನಿರೀಕ್ಷೆ ಸುಳ್ಳಾಯಿತು. ಮರುದಿನ ಎಂದಿನಂತೆ ಬೆಳಿಗ್ಗೆ ನನ್ನ ಕಚೇರಿಗೆ ಹೋದಾಗ ಅತ್ಯಾಶ್ಚರ್ಯವಾಗಿತ್ತು. ಬೆಳಗ್ಗಿನ ವಿಮಾನದಲ್ಲಿಯೇ ತಮ್ಮ ಹೆಂಡತಿ ಸಮೇತ ಬನ್ಸಾಲ್‌ ಕಚೇರಿಗೆ ಬಂದಿದ್ದರು. ಇಬ್ಬರೂ ತುಂಬಾ ಭಾವುಕರಾಗಿದ್ದರು. ದಂಪತಿ ನನ್ನ ಕಾಲಿಗೆ ಬಿದ್ದು ದೊಡ್ಡ ನರಕದಿಂದ ಪಾರು ಮಾಡಿದ್ದೀರಿ ಎಂದರು. ನನ್ನ ಫೀಸ್‌ ನನಗೆ ಕೊಟ್ಟರು. ಅಷ್ಟೇ ಅಲ್ಲ... ಒಂದು ಚಿನ್ನದ ಸರವನ್ನೂ ಕಾಣಿಕೆಯಾಗಿ ನೀಡಿದರು!

ಘಟನೆ ನಡೆದು ಹಲವು ವರ್ಷ ಕಳೆದರೂ ಈಗಲೂ ನನ್ನ ಕುಟುಂಬದವರು ಮುಂಬೈಗೆ ಹೋದರೆ ಅವರು ನೀಡುವ ಆತಿಥ್ಯ ಅಷ್ಟಿಷ್ಟಲ್ಲ. ಹೋಟೆಲ್‌ನಲ್ಲಿ ಯಾರದ್ದೋ ಹೆಸರಿನಲ್ಲಿ ಇರುವ ಕೊಠಡಿಗೆ ಪ್ರವೇಶ ಮಾಡುವ ಮುನ್ನ ಎಷ್ಟೆಲ್ಲಾ ಎಚ್ಚರಿಕೆಯಿಂದ ಇರಬೇಕು ಎಂಬ ಬಗ್ಗೆ ಈ ಪ್ರಕರಣ ಪಾಠ ಕಲಿಸುತ್ತದೆ. ಗ್ರಹಚಾರ ಕೆಟ್ಟರೆ, ಕೈಯಲ್ಲಿ ದುಡ್ಡು ಇಲ್ಲದಿದ್ದರೆ ಪೊಲೀಸರು ಹಾಕುವ ಎಲ್ಲ ಕೇಸುಗಳನ್ನೂ ಎದುರಿಸಬೇಕಾದೀತು...!

⇒ಲೇಖಕರು ಹೈಕೋರ್ಟ್‌ ವಕೀಲರು

(ಹೆಸರುಗಳನ್ನು ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT