ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆ ಸಂಖ್ಯೆ ಯುದ್ಧಗಳ ಸಾವಿಗಿಂತ ಹೆಚ್ಚು!

ಸದ್ಗುರು ಜಗ್ಗಿ ವಾಸುದೇವ್, ಈಶಾ ಫೌಂಡೇಷನ್‌
Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದೇಶದ ಪ್ರಮುಖ ನದಿಗಳನ್ನು ಉಳಿಸುವುದಕ್ಕಾಗಿ ಕೊಯಮತ್ತೂರಿನ ಈಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರು ಸೆ.3ರಿಂದ ಜನ ಜಾಗೃತಿ ರ‍್ಯಾಲಿ (ರ‍್ಯಾಲಿ ಫಾರ್ ರಿವರ್) ಆರಂಭಿಸುತ್ತಿದ್ದಾರೆ. ನಶಿಸಿಹೋಗುತ್ತಿರುವ ನದಿಗಳನ್ನು ಉಳಿಸಿದರೆ ಆ ಮೂಲಕ ಪರಿಸರ, ಅರಣ್ಯವನ್ನು ಉಳಿಸಬಹುದು. ದೇಶದ ರೈತರೂ ಕೂಡ ಉಳಿಯುತ್ತಾರೆ. ದೇಶವೂ ಅಭಿವೃದ್ಧಿಯಾಗುತ್ತದೆ ಎನ್ನುವುದು ಅವರ ನಂಬಿಕೆ. ನದಿಗಳು ರಾಜ್ಯಗಳ ಸುಪರ್ದಿಗೆ ಬರುತ್ತವೆಯಾದರೂ ಕೇಂದ್ರ ಸರ್ಕಾರ ಒಂದು ನಿರ್ದಿಷ್ಟ ಸಮಗ್ರ ಯೋಜನೆಯನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಅನುಕೂಲವಗುತ್ತದೆ ಎನ್ನುವುದು ಅವರ ಒತ್ತಾಯ. 16 ರಾಜ್ಯಗಳ ಒಟ್ಟಾರೆ 7000 ಕಿ.ಮೀ. ದೂರ ಅವರು ಸಂಚರಿಸಲಿದ್ದಾರೆ. ಅದಕ್ಕೂ ಮುನ್ನ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

* ಈ ರ‍್ಯಾಲಿಯ ಆಲೋಚನೆ ನಿಮಗೆ ಯಾಕೆ ಬಂತು?

ನಮ್ಮ ನದಿಗಳು ಸಾಯುತ್ತಿವೆ. ನದಿಗಳು ಹರಿಯುವ ದಿನಗಳು ಕಡಿಮೆಯಾಗುತ್ತಿದೆ. ಅವು ಬತ್ತುವ ವೇಗ ಹೆಚ್ಚಾಗುತ್ತಿದೆ. ಇದು ಆತಂಕಕಾರಿ. ಈಗಲೂ ನಾವು ಎಚ್ಚರವಾಗದಿದ್ದರೆ ಅಪಾಯ ಗ್ಯಾರಂಟಿ. ಪರಿಸರ ರಕ್ಷಣೆ ಮತ್ತು ರೈತರಿಗೆ ಆರ್ಥಿಕವಾಗಿ ಅನುಕೂಲವಾಗುವಂತಹ ಯೋಜನೆಯನ್ನು ರೂಪಿಸಬೇಕು. ಈಗ ನಾವು ನದಿ ರಕ್ಷಣೆಗೆ ಮುಂದಾದರೂ ಎಲ್ಲ ನದಿಗಳೂ ವರ್ಷಪೂರ್ತಿ ಹರಿಯುವಂತಾಗಲು 20ರಿಂದ 25 ವರ್ಷ ಬೇಕು.

* ಚುನಾವಣೆಯತ್ತಲೇ ಮುಖಮಾಡಿರುವ ಮತ್ತು ಜನಪ್ರಿಯ ಯೋಜನೆಗಳ ಬಗ್ಗೆಯೇ ಆಲೋಚಿಸುವ ರಾಜಕಾರಣಿಗಳು ನಿಮ್ಮ ಕನಸು ನನಸು ಮಾಡುತ್ತಾರೆ ಎಂದು ನಿಮಗೆ ಅನ್ನಿಸುತ್ತಿದೆಯಾ?

ನದಿಗಳು ಮತ್ತು ಜಲದ ವಿಷಯ ರಾಜ್ಯಗಳಿಗೆ ಸೇರಿದ್ದು. ಅದಕ್ಕಾಗಿಯೇ ನಾವು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಇದರಲ್ಲಿ ಸೇರಿಸಿಕೊಂಡಿದ್ದೇವೆ. ಇದೊಂದು ಚುನಾವಣೆ ಗೆಲ್ಲುವ ವಿಷಯ ಅಲ್ಲ. ಇದಕ್ಕೆ ದೀರ್ಘಕಾಲೀನ ಯೋಜನೆ ಬೇಕು. ಹಣ ಬೇಕು. ಇಚ್ಛಾಶಕ್ತಿ ಬೇಕು. ಅದು ಸುಲಭ ಅಲ್ಲ ಎನ್ನುವುದು ಗೊತ್ತಿದೆ. ಅದಕ್ಕೇ ನಾವು ಮಿಸ್ ಕಾಲ್ ಆಂದೋಲನ ಮಾಡುತ್ತಿದ್ದೇವೆ. 30 ಕೋಟಿ ಮಿಸ್ ಕಾಲ್ ಸಂಗ್ರಹಿಸುವ ಗುರಿ ಇದೆ. ಇದರ ಹಿಂದೆ ಜನ ಇದ್ದಾರೆ ಎನ್ನುವುದನ್ನು ತೋರಿಸಲು ಹೀಗೆ ಮಾಡುತ್ತಿದ್ದೇವೆ.

* ನದಿ ಉಳಿಸಿದರೆ ಸಾಕೇ? ಉಳಿದವುಗಳ ಬಗ್ಗೆ ನಿಮ್ಮ ಗಮನ ಇಲ್ಲವೇ?

ನದಿ ಉಳಿಸುವುದು ಮಾತ್ರ ನಮ್ಮ ಗುರಿ ಅಲ್ಲ. ಎಲ್ಲ ಆಯಾಮಗಳೂ ಇರುತ್ತವೆ. ಭೂಮಿಯ ಫಲವತ್ತತೆ ಹೆಚ್ಚಿಸುವುದು, ಭೂಸವಕಳಿ ತಡೆಯುವುದು, ಅರಣ್ಯ ಪ್ರದೇಶ ಹೆಚ್ಚಿಸುವುದೂ ನಮ್ಮ ಗುರಿ. ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ತಜ್ಞರ ವರದಿ ಸಿದ್ಧ ಇದೆ. ಈಗಿನ ಪರಿಸ್ಥಿತಿಯೇ ಮುಂದುವರಿದರೆ ಇನ್ನು 40 ವರ್ಷಗಳಲ್ಲಿ ಶೇ 60ರಷ್ಟು ಕೃಷಿ ಭೂಮಿ ಬಂಜರಾಗುತ್ತದೆ. ಕಳೆದ 12 ವರ್ಷಗಳಲ್ಲಿ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ನಡೆದ ಯಾವುದೇ ಯುದ್ಧದಲ್ಲಿ ಇಷ್ಟು ಜನ ಸತ್ತಿಲ್ಲ. ಟೊಮೆಟೊ ಬೆಲೆ ಕುಸಿತ, ಬ್ಯಾಂಕ್ ಸಾಲದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾವು ಕಣ್ಣುಮುಚ್ಚಿಕೊಂಡಿರಲು ಸಾಧ್ಯವಿಲ್ಲ. ಇದಕ್ಕಾಗಿಯೇ ಒಂದು ದೂರದೃಷ್ಟಿಯುಳ್ಳ ನೀತಿಯನ್ನು ಜಾರಿಗೊಳಿಸಲು ಒತ್ತಾಯಿಸುತ್ತಿದ್ದೇವೆ. ನಮ್ಮ ಹಿಂದೆ ಜನರೂ ಇದ್ದಾರೆ. ಪರಿಸರ ರಕ್ಷಿಸಲು, ರೈತರನ್ನು ಉಳಿಸಲು, ನದಿಗಳನ್ನು ಪುನರುಜ್ಜೀವನಗೊಳಿಸಲು ದೀರ್ಘಕಾಲೀನ ಯೋಜನೆ ಜಾರಿಗೊಳಿಸಲು ಮುಂದಾದರೆ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಜನರೂ ನಮ್ಮ ನಾಯಕರಿಗೆ ಭರವಸೆ ನೀಡಬೇಕಾಗಿದೆ.

* ನಮ್ಮ ರಾಜಕಾರಣಿಗಳು ಇದನ್ನೆಲ್ಲಾ ಮಾಡುತ್ತಾರೆ ಎನ್ನುತ್ತೀರಾ?

ಖಂಡಿತವಾಗಿಯೂ ಮಾಡುತ್ತಾರೆ. ನಾನು ಈಗಾಗಲೇ 16 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಎಲ್ಲರೂ ಒಪ್ಪಿಕೊಂಡಿದ್ದಾರೆ. ಕೇಂದ್ರದಲ್ಲಿಯಂತೂ ಈಗ ಸಮರ್ಥ ನಾಯಕರಿದ್ದಾರೆ. ಕೇಂದ್ರ ಸರ್ಕಾರ ಕಾನೂನು ಮಾಡಿದರೆ ಎಲ್ಲ ರಾಜ್ಯಗಳು ಅನುಸರಿಸಲೇ ಬೇಕಾಗುತ್ತದೆ.

* ನಿಮಗೆ ಕರ್ನಾಟಕದ ಸ್ಥಿತಿ ಗೊತ್ತಿದ್ದ ಹಾಗೆ ಇಲ್ಲ. ಇಲ್ಲಿ ಈಗ 5 ಲಕ್ಷ ಎಕರೆ ಡೀಮ್ಡ್ ಅರಣ್ಯಭೂಮಿಯನ್ನು ಕಂದಾಯ ಭೂಮಿ ಎಂದು ಘೋಷಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೇನಂತೀರಿ?

ಓಹ್... ರಾಜಕೀಯ ಕಾರಣಗಳಿಗಾಗಿ ಬೇರೆ ಬೇರೆ ರಾಜ್ಯದವರು ಬೇರೆ ಬೇರೆ ರೀತಿಯಲ್ಲಿ ಆಲೋಚಿಸುತ್ತಿರಬಹುದು. ಆದರೆ ಯಾರೂ ಮೂಲ ಕಾನೂನಿನಿಂದ ಬೇರೆ ಹೋಗಲು ಸಾಧ್ಯವಿಲ್ಲ. ಅರಣ್ಯ ಭೂಮಿಯನ್ನು ಕಂದಾಯ ಭೂಮಿ ಮಾಡಲು ಸಾಧ್ಯವಿಲ್ಲ. ದೇಶದಲ್ಲಿರುವ 20 ಸಾವಿರ ಕಿ.ಮೀ. ನದಿ ಪಾತ್ರದಲ್ಲಿ ಶೇ 20ರಿಂದ ಶೇ 25ರಷ್ಟು ಸರ್ಕಾರಿ ಭೂಮಿ ಇದೆ. ಅದನ್ನು ಅರಣ್ಯ ಮಾಡಬಹುದು. ನದಿ ಪಾತ್ರದಲ್ಲಿರುವ ರೈತರೂ ಕೂಡ ತೋಟಗಾರಿಕೆ ಬೆಳೆಗಳನ್ನೇ ಬೆಳೆಯಲು ಉತ್ತೇಜನ ನೀಡಬೇಕು. ಇಂತಹ ಪ್ರಯೋಗವನ್ನು ನಾವು ಸಣ್ಣಮಟ್ಟದಲ್ಲಿ ಮಾಡಿದ್ದೇವೆ. ಇತರರೂ ಮಾಡಿದ್ದಾರೆ. ಇದರಿಂದ ರೈತರ ಆದಾಯದಲ್ಲಿ 3ರಿಂದ 8 ಪಟ್ಟು ಹೆಚ್ಚಳವಾಗಿದೆ.

*ಇದಕ್ಕೆ ರೈತರನ್ನು ಹೇಗೆ ಮನವೊಲಿಸುತ್ತೀರಿ?

ನಾವು ಚಂದ್ರಭಾಗಾ ನದಿಯ ದಡದಲ್ಲಿ ಈ ಪ್ರಯೋಗ ಮಾಡಿದ್ದೇವೆ. ಇದು ಆರ್ಥಿಕವಾಗಿ ಲಾಭದಾಯಕ ಎನ್ನುವುದು ಸಾಬೀತಾಗಿದೆ. ಇದನ್ನು ಒಂದೇ ಬಾರಿಗೆ ಮಾಡಬೇಕು ಎಂದೇನೂ ಇಲ್ಲ. ಹಂತಹಂತವಾಗಿ ಮಾಡಬಹುದು. ಕಾವೇರಿ ನದಿ ಕರ್ನಾಟಕದಲ್ಲಿ 470 ಕಿ.ಮೀ. ಹರಿಯುತ್ತದೆ. ಮೊದಲ 50 ಕಿ.ಮೀ. ಪ್ರದೇಶದಲ್ಲಿ ರೈತರು ತೋಟಗಾರಿಕೆ ಅಥವಾ ಮರಗಳನ್ನು ಆಧರಿಸಿದ ಕೃಷಿ ಮಾಡುವಂತೆ ರಾಜ್ಯ ಸರ್ಕಾರ ಉತ್ತೇಜಿಸಬೇಕು. ತಜ್ಞರು ಮೊದಲೇ ಈ ಪ್ರದೇಶಗಳಿಗೆ ತೆರಳಿ ಅಧ್ಯಯನ ನಡೆಸಿ ಯಾವ ಮರಗಳನ್ನು ಬೆಳೆದರೆ ಇಲ್ಲಿ ಲಾಭದಾಯಕ ಎನ್ನುವುದನ್ನು ನಿರ್ಧರಿಸಬೇಕು. ಇಲ್ಲಿ ಬೆಳೆದ ಬೆಳೆಗಳನ್ನು ಸಂಸ್ಕರಿಸಲು ಕೈಗಾರಿಕೆಗಳಿಗೂ ಅವಕಾಶ ನೀಡಬೇಕು. ಮೊದಲು ಕೈಗಾರಿಕೆಗಳು ಬರಬೇಕು. ರೈತರಿಗೆ ತಾವು ಬೆಳೆದ ಬೆಳೆಯನ್ನು ಕೊಳ್ಳುವವರು ಇದ್ದಾರೆ ಎನ್ನುವ ಭರವಸೆ ಬರಬೇಕು. ಹನಿ ನೀರಾವರಿಯನ್ನು ಉತ್ತೇಜಿಸಬೇಕು. ನೀರನ್ನು ನಾಲೆಗಳಲ್ಲಿ ಹರಿಸುವ ಬದಲು ಬೃಹತ್ ಮಟ್ಟದಲ್ಲಿ ಹನಿ ನೀರಾವರಿಗೆ ಉತ್ತೇಜನ ನೀಡಬೇಕು. ಇದಕ್ಕೆ ಸೂಕ್ತ ಸಾಲ, ಸಬ್ಸಿಡಿ ನೀಡಬೇಕು. 8–10 ವರ್ಷದ ನಂತರ ಸಾಲ ವಸೂಲಿ ಪ್ರಕ್ರಿಯೆ ಆರಂಭಿಸಬೇಕು. 100 ಎಚ್.ಪಿ ಪಂಪ್ ಸೆಟ್ ಹಾಕಿ ನೂರು ಎಕರೆಗೆ ಹನಿ ನೀರಾವರಿ ಸೌಲಭ್ಯ ಒದಗಿಸುವ ಬಗ್ಗೆಯೂ ಆಲೋಚಿಸಬೇಕು. ರೈತರ ಜೀವನ ಮಟ್ಟ ಸುಧಾರಿಸುವ ಬಗ್ಗೆ ಗಮನ ಕೊಡಬೇಕು. ಆರ್ಥಿಕವಾಗಿ ಲಾಭದಾಯಕ ಎನ್ನುವುದು ಗೊತ್ತಾದರೆ ರೈತರೇ ಇಂತಹ ಕಾರ್ಯಕ್ಕೆ ಮುಂದಾಗುತ್ತಾರೆ. ಹೊಲದಲ್ಲಿ ಮರಗಳಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.

*ಇವೆಲ್ಲಾ ಕೇವಲ ನಿಮ್ಮ ಕನಸಿನ ಯೋಜನೆಗಳಾ ಅಥವಾ ನೀವು ಮಾಡಿ ನೋಡಿದ್ದೀರಾ?

ಹೌದು ನಾವು ಈಶ ಫೌಂಡೇಷನ್ ನಿಂದ ತಮಿಳುನಾಡಿನಲ್ಲಿ ಇಂತಹ ಪ್ರಯತ್ನ ಮಾಡಿದ್ದೇವೆ. 3 ಸಾವಿರ ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ಅವರ ಜಮೀನುಗಳಲ್ಲಿ ಮರಗಳೂ ಇವೆ. ಹಿಂದೆಲ್ಲಾ ರೈತರ ಜಮೀನುಗಳಲ್ಲಿ 10–20 ಮರಗಳು ಕಡ್ಡಾಯವಾಗಿ ಇರುತ್ತಿದ್ದವು. ಒಂದು ಮರ ಕಡಿದರೆ ಮಗಳ ಮದುವೆಯಾಗುತ್ತಿತ್ತು. ಇನ್ನೊಂದು ಮರ ಕಡಿದರೆ ಮಗನ ವಿದ್ಯಾಭ್ಯಾಸವಾಗುತ್ತಿತ್ತು. ಮರಗಳನ್ನು ವಿಮೆಯಂತೆ ಬಳಸುತ್ತಿದ್ದರು. ಆದರೆ ಈಗ ಮರಗಳು ಇಲ್ಲ. ಇದರಲ್ಲಿ ರಸಗೊಬ್ಬರ ಕಂಪೆನಿಗಳ ಹುನ್ನಾರವೂ ಇದೆ. ಜಮೀನಿನಲ್ಲಿ ಮರಗಳು ಇದ್ದರೆ ನೀವು ಹಾಕಿದ ಗೊಬ್ಬರವನ್ನೆಲ್ಲಾ ಅವೇ ತಿಂದುಬಿಡುತ್ತವೆ ಎಂದು ಪ್ರಚಾರ ಮಾಡಿ ಮರ ಕಡಿಸಿದರು. ಮರಗಳ ಬುಡದಲ್ಲಿ ಯಾವುದೇ ಬೆಳೆ ಬರುವುದಿಲ್ಲ ಎಂದೂ ಹೇಳಿದರು. ಅದಕ್ಕೇ ಈಗ ಹೊಲಗಳಲ್ಲಿ ಮರಗಳಿಲ್ಲ. ಒಂದು ಬೆಳೆ ಕೈಕೊಟ್ಟರೆ ರೈತನ ಬದುಕೇ ಮುಗಿದು ಹೋಗುತ್ತಿದೆ.

* ಹಿಂದೆ ಮನುಷ್ಯ ನೀರಿದ್ದಲ್ಲಿಗೇ ಹೋಗುತ್ತಿದ್ದ. ನಮ್ಮ ನಾಗರೀಕತೆಗಳು ಬೆಳೆದಿದ್ದು ಹಾಗೆ. ಆದರೆ ಈಗ ಮನುಷ್ಯ ತಾನಿದ್ದಲ್ಲಿಗೇ ನೀರು ಬರಬೇಕು ಎಂದು ಬಯಸುತ್ತಿದ್ದಾನೆ. ಮನುಷ್ಯ ಮತ್ತೆ ನೀರಿದ್ದಲ್ಲಿಯೇ ಹೋಗುವಂತೆ ಮಾಡುವುದು ಹೇಗೆ?

ಈಗ ಕಾಲ ಬದಲಾಗಿದೆ. ಮನುಷ್ಯ ಮತ್ತೆ ನೀರಿದ್ದಲ್ಲಿಗೆ ಹೋದರೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಹೋಗುತ್ತದೆ. ನೀರನ್ನು ಹೇಗೆ ಬಳಸಬೇಕು ಎನ್ನುವುದನ್ನು ಅವನು ತಿಳಿದುಕೊಂಡರೆ ಸಾಕು. ನೀರಿಗೆ ಗೌರವ ಕೊಡುವುದನ್ನು ಕಲಿತರೆ ಸಾಕು.

* ಈಗಾಗಲೇ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ನೀರಿನ ಬಗ್ಗೆ ಕೆಲಸ ಮಾಡುತ್ತಿವೆ. ಅವುಗಳನ್ನೂ ನಿಮ್ಮ ಜೊತೆಗೆ ಕರೆದುಕೊಂಡು ಹೋಗುತ್ತೀರಾ?

ಹೌದು ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಒಳ್ಳೆಯ ಕೆಲಸ ಮಾಡುತ್ತಿವೆ. ಅವರೂ ನಮ್ಮ ಜೊತೆ ಬರುತ್ತಿದ್ದಾರೆ. ಆದರೆ ಈಗ ಅಷ್ಟೇ ಸಾಕಾಗುವುದಿಲ್ಲ. ನೀರಿನೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ನಿರ್ದಿಷ್ಟ ಕಾನೂನು ಜಾರಿಗೊಳಿಸಬೇಕು. ನದಿಗಳಿಗೆ ಸಂಬಂಧಿಸಿದಂತೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ನೀತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಬೇಕು. ಎಲ್ಲ ರಾಜ್ಯಗಳಿಗೆ ಮತ್ತು ಎಲ್ಲ ನಾಗರಿಕರಿಗೆ ನದಿಗಳನ್ನು ಬಳಸುವ ಹಕ್ಕು ಇದೆ. ಆದರೆ ನದಿಗಳನ್ನು ನಾಶ ಮಾಡುವ ಹಕ್ಕು ಯಾರಿಗೂ ಇಲ್ಲ.

* ಮಳೆ ಬರುವ ರೀತಿ ಬದಲಾಗಿದೆಯೇ ವಿನಾ ಮಳೆ ಕಡಿಮೆಯಾಗಿಲ್ಲ. ಒಂದೇ ದಿನ 10–15 ಸೆಂ.ಮೀ ಮಳೆಯಾಗುತ್ತದೆ. ಮಳೆ ಇಲ್ಲ ಎಂದರೆ ತಿಂಗಳುಗಟ್ಟಲೆ ಮಳೆ ಬರುವುದೇ ಇಲ್ಲ. ಇದೆಲ್ಲ ಮಾನವ ನಿರ್ಮಿತ. ಈ ಬಗ್ಗೆ ನಿಮ್ಮ ಆಲೋಚನೆ ಏನು?

ಹೌದು, ನೀವು ಹೇಳೋದು ಸತ್ಯ. ಅದಕ್ಕೇ ಅರಣ್ಯ ಬೆಳೆಸಿ ಎಂದು ನಾವು ಹೇಳುತ್ತಿರುವುದು. ಮರಗಳು ಇದ್ದರೆ ನೀರು ಹರಿದು ಹೋಗುವುದಿಲ್ಲ. ಒಮ್ಮೆ ಬರ, ಇನ್ನೊಮ್ಮೆ ಪ್ರವಾಹ ಉಂಟಾಗಲು ಕಾಡು ನಾಶವಾಗಿರುವುದೇ ಕಾರಣ. ಎಲ್ಲ ನದಿಗಳೂ ಸೀಸನಲ್ ನದಿಗಳಾಗಿವೆ. ಕಾವೇರಿ ನದಿ 870 ಕಿ.ಮೀ. ಹರಿಯುತ್ತಿತ್ತು. ಈಗ ಅದು ಸಮುದ್ರಕ್ಕಿಂತ 170 ಕಿ.ಮೀ. ದೂರದಲ್ಲಿಯೇ ಬತ್ತಿ ಹೋಗುತ್ತಿದೆ. ಇನ್ನು ಕೆಲವು ವರ್ಷ ಕಳೆದರೆ ತಮಿಳುನಾಡಿನ ರೈತರು ಕಾವೇರಿ ನೀರಿಗಾಗಿ ಹೋರಾಟ ಮಾಡುವ ಅಗತ್ಯವೇ ಇರಲ್ಲ. ಯಾಕೆಂದರೆ ಅದು ತಮಿಳುನಾಡಿಗೆ ಬರುವುದರಲ್ಲಿಯೇ ಬತ್ತಿ ಹೋಗುತ್ತದೆ. ಅದಕ್ಕೇ ಕಾವೇರಿ ನೀರು ಬಳಕೆದಾರ ರೈತರ ಸಂಘ ಸ್ಥಾಪಿಸುವ ಉದ್ದೇಶವೂ ನಮಗೆ ಇದೆ. ಎಲ್ಲರೂ ಕಾವೇರಿ ಮಕ್ಕಳು. ಕಾವೇರಿ ದುರ್ಬಳಕೆ ಮಾಡೋದಲ್ಲ. ಅದನ್ನು ಪುನರುಜ್ಜೀವನಗೊಳಿಸುವುದು ಹೇಗೆ ಎಂದು ಆಲೋಚಿಸಬೇಕು.

* ಈಗಾಗಲೇ ಇಂತಹ ಪ್ರಯತ್ನ ನಡೆದಿದೆ. ಕಾವೇರಿ ಕುಟುಂಬ ಇದೆ. ಆದರೆ ಅವರ ಮಾತನ್ನು ಅಧಿಕಾರಿಗಳು, ರಾಜಕಾರಣಿಗಳು ಕೇಳುತ್ತಿಲ್ಲ. ಇದೆಲ್ಲ ನಿಮಗೆ ಗೊತ್ತಾ?

ಎಲ್ಲವೂ ನಾಳೆ ಬೆಳಿಗ್ಗೆಯೇ ಆಗಲ್ಲ. ಆದರೆ ನಾವು, ನೀವು ಸುಮ್ಮನೆ ಕುಳಿತುಕೊಳ್ಳಲು ಆಗದು. ಒಂದು ಹೆಜ್ಜೆ ಮುಂದೆ ಇಡಬೇಕು. ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಸಾಗಬೇಕು. ಅದಕ್ಕಾಗಿ ನಾವು ಹೆಜ್ಜೆ ಹಾಕುತ್ತಿದ್ದೇವೆ. ನೀವೂ ಬನ್ನಿ ಜೊತೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT