ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶೋತ್ಸವ

Last Updated 27 ಆಗಸ್ಟ್ 2017, 4:54 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶೋತ್ಸವ ಸಂಭ್ರಮ. ಸತತ ಬರದ ಪರಿಣಾಮ ಈ ಬಾರಿ ಉತ್ಸವದ ಅಬ್ಬರ ಕಡಿಮೆಯಿದ್ದರೂ, ಸಂಪ್ರದಾಯದಂತೆ ಆಚರಣೆ ಮುಂದುವರಿದಿದೆ. ಪಿಒಪಿ ಮೂರ್ತಿ ಹಾಗೂ ಡಿ.ಜೆ. ನಿಷೇಧದ ನಡುವೆ ಗಣೇಶೋತ್ಸವ ನಡೆಯುತ್ತಿದ್ದು, ಭಕ್ತಿ, ಶ್ರದ್ಧೆ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ ಎಂದು ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

ನಗರಸಭೆ, ಪೊಲೀಸ್, ಹೆಸ್ಕಾಂ ಮತ್ತಿತರ ಇಲಾಖೆಗಳ ಪರವಾನಗಿ ಪಡೆದ 32 ಸಾರ್ವಜನಿಕ ಗಣಪತಿಯನ್ನು ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದೆ. ಈ ಪೈಕಿ ಮೂರು ದಿನಗಳಿಂದ ಸುಮಾರು 11 ದಿನಗಳ ತನಕ ಬೆಸ ದಿನಗಳಲ್ಲಿ ವಿಸರ್ಜನೆ ನಡೆಯಲಿದೆ.

ಮನೆಗಳನ್ನು ಹೊರತು ಪಡಿಸಿ, ನಗರದ 55 ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸ್ವಂತ ಕಚೇರಿ, ಶಾಲೆ, ಕಚೇರಿಗಳ ಆವರಣ ಮತ್ತಿತರೆಡೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರು ಅನುಮತಿ ಪಡೆದಿಲ್ಲ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

‘ಈ ಬಾರಿ ಮಾರುಕಟ್ಟೆಯಲ್ಲಿನ ವಹಿವಾಟು ತೀರಾ ಕುಸಿದಿದೆ. ಹೀಗಾಗಿ ಗಣೇಶೋತ್ಸವ ಮಾತ್ರವಲ್ಲ, ಒಟ್ಟಾರೆ ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆ ವಹಿವಾಟು ಕಡಿಮೆ ಇದೆ’ ಎನ್ನುತ್ತಾರೆ ವರ್ತಕ ರಮೇಶ್.

‘ಪಿಒಪಿ ನಿಷೇಧ ಮಾಡಿದ ಪರಿಣಾಮ ಹಲವರು ಮಣ್ಣಿನ ಮೂರ್ತಿ ಗಳನ್ನು ಪ್ರತಿಷ್ಠಾಪಿಸಿದ್ದಾರೆ. ಇಂತಹ ಮೂರ್ತಿಗಳಲ್ಲಿ ನಿಜವಾದ ಶ್ರದ್ಧಾ ಭಕ್ತಿಯ ಆಕರ್ಷಣೆ ಇದೆ. ಆದರೂ, ಕೆಲವರು ಬೇರೆಡೆಯಿಂದ ತಂದು ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಆದರೆ, ಮಣ್ಣಿನ ಮೂರ್ತಿಗಳ ಲಕ್ಷಣ, ಮೂಡುವ ಭಕ್ತಿ, ಸೆಳೆತದ ಮುಂದೆ ಪಿಒಪಿ ಮೂರ್ತಿಗಳ ಮೂರ್ತಿ ದೊಡ್ಡದಾದರೂ ಕೀರ್ತಿ ಚಿಕ್ಕದಾಗಿ ಕಾಣುತ್ತವೆ’ ಎನ್ನುತ್ತಾರೆ ನಗರದ ಗಣೇಶ ಮತ್ತಿತರರು.

‘ಪಿಒಪಿ ನಿಷೇಧದಿಂದಾಗಿ ಈ ಬಾರಿ ಮಣ್ಣಿನ ಗಣೇಶ ಮೂರ್ತಿಯ ದರ ಸ್ವಲ್ಪ ಹೆಚ್ಚಿದೆ. ಆದರೆ, ಮುಂದಿನ ವರ್ಷಗಳಲ್ಲಿ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಉದ್ಯೋಗ ದೊರೆಯುವ ನಿರೀಕ್ಷೆ ಇದೆ’ ಎಂದರು. ‘ನಗರದಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದೇವೆ. ಆದರೂ, ಕೆಲವರು ಹೊರಗಿನಿಂದ ಮೂರ್ತಿ ತಂದಿದ್ದಾರೆ ಎಂಬ ದೂರುಗಳಿವೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ಅಕ್ಕಮಹಾದೇವಿ ಹೊಂಡದ ಬಳಿ ತಾತ್ಕಾಲಿಕ ಹೊಂಡ ನಿರ್ಮಿಸಲಾಗಿದೆ. ಶಾಂತಿ ಪಾಲನೆ ಹಾಗೂ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಜನರ ಸಹಕಾರ ಮುಖ್ಯ’ ಎಂದು ನಗರಸಭೆ ಪೌರಾಯುಕ್ತ ಶಿವಕುಮಾರಯ್ಯ ಪ್ರತಿಕ್ರಿಯಿಸಿದರು.

ಪೊಲೀಸ್ ಪಥ ಸಂಚಲನ: ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆ ಗಾಗಿ ಪೊಲೀಸರು ನಗರದಲ್ಲಿ ಶನಿವಾರ ಪಥ ಸಂಚಲನ ನಡೆಸಿದರು. ನಗರದ ಎಂ.ಜಿ. ರಸ್ತೆ, ಮೇಲಿನ ಪೇಟೆ, ಸುಭಾಸ್ ವೃತ್ತ, ಮುನ್ಸಿಪಲ್ ಹೈಸ್ಕೂಲ್‌, ಪಿ.ಬಿ. ರಸ್ತೆಗಳಲ್ಲಿ ಪಥಸಂಚಲನ ಸಾಗಿ ಬಂತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ನಿರ್ದೇಶನದ ಅನ್ವಯ ಡಿವೈಎಸ್ಪಿ ಎಲ್‌. ಕುಮಾರಪ್ಪ ನೇತೃತ್ವದಲ್ಲಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಬಸವ ರಾಜ್‌ ಎಚ್, ಮಹಿಳಾ ಇನ್‌ಸ್ಪೆಕ್ಟರ್‌್‌ ಸುಲೋಚನಾ ಗರಗ, ಗ್ರಾಮೀಣ ಸರ್ಕಲ್ ಇನ್‌ಸ್ಪೆಕ್ಟರ್‌ ಬಾಸೂ ಚೌಹಾಣ್, ಸಬ್ ಇನ್‌ಸ್ಪೆಕ್ಟರ್‌್‌ ಶಶಿಧರ ಯು.ಜೆ ದ್ದರು. ನಾಗರಿಕ ಪೊಲೀಸ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕ್ಯೂಆರ್‌ಟಿ, ಮಹಿಳಾ ಪೊಲೀಸ್, ಗೃಹ ರಕ್ಷಕ ದಳ ತುಕುಡಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು.

* * 

ಗಣೇಶ ಮೂರ್ತಿಗಳ ವಿಸರ್ಜನೆಗೆ ಅಕ್ಕಮಹಾದೇವಿ ಹೊಂಡದ ಬಳಿ ತಾತ್ಕಾಲಿಕ ಹೊಂಡ ನಿರ್ಮಿಸಲಾಗಿದೆ. ಶಾಂತಿ ಪಾಲನೆ ನಿಟ್ಟಿನಲ್ಲಿ ಜನರ ಸಹಕಾರ ಮುಖ್ಯ
ಶಿವಕುಮಾರಯ್ಯ
ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT