ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯತ್ತ ‘ಲಕ್ಷ್ಯ’

Last Updated 27 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹದಿನಾರು ವರ್ಷದ ಯುವ ಆಟಗಾರ ಲಕ್ಷ್ಯ ಸೇನ್ ಜೂನಿಯರ್ ವಿಭಾಗದ ವಿಶ್ವ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ನಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಮಿಂಚು ಹರಿಸಿದ್ದಾರೆ. ಸೀನಿಯರ್ ವಿಭಾಗದ ಅಗ್ರಸ್ಥಾನದ ಮೇಲೂ ಗುರಿ ನೆಟ್ಟಿರುವ ಲಕ್ಷ್ಯಸೇನ್‌ ಭವಿಷ್ಯದ ತಾರೆಯಾಗಿ ಹೊರಹೊಮ್ಮುವ ಭರವಸೆ ಮೂಡಿಸಿದ್ದಾರೆ.

ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಮ್ಮೆ ಅವರ ಮುಡಿ ಸೇರಿದೆ. ಇಷ್ಟೇ ಅಲ್ಲದೇ ಮೊದಲ ಬಾರಿಗೆ ಸೀನಿಯರ್ ವಿಭಾಗದಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್ ಓಪನ್ ಹಾಗೂ ಇತ್ತೀಚೆಗೆ ತವರಿನಿಂದ ಹೊರಗೆ ಮೊದಲ ಬಾರಿಗೆ ಬಲ್ಗೇರಿಯಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿರುವುದು ಇವರ ಸಾಧನೆಗೆ ಸಾಕ್ಷಿಯಾಗಿವೆ. ಕರ್ನಾಟಕದ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಅಭ್ಯಾಸ ಹಾಗೂ ತಮ್ಮ ಕುಟುಂಬದ ಬೆಂಬಲ ಇವರಿಗೆ ಇದೆ. ತಂದೆ ಡಿ.ಕೆ ಸೇನ್‌ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಬ್ಯಾಡ್ಮಿಂಟನ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರೆ, ಸಹೋದರ ಚಿರಾಗ್ ಸೇನ್‌ ಕೂಡ ಬ್ಯಾಡ್ಮಿಂಟನ್‌ನಲ್ಲಿ ಆದ ಛಾಪು ಮೂಡಿಸುತ್ತಿದ್ದಾರೆ.

* ಮೊದಲ ಬಾರಿಗೆ ಬ್ಯಾಡ್ಮಿಂಟನ್ ಆಸಕ್ತಿ ಹುಟ್ಟಿದ್ದು ಹೇಗೆ?
ಅಜ್ಜ, ಅಪ್ಪ, ಅಣ್ಣ ಇವರ ಆಟವನ್ನು ನೋಡಿಕೊಂಡೇ ಬೆಳೆದೆ. ಐದು ವರ್ಷದಿಂದ ಆಡಲು ಪ್ರಾರಂಭಿಸಿದೆ. ಒಂಬತ್ತು ವರ್ಷದವನಿದ್ದಾಗ ಪ್ರಕಾಶ್‌ ಪಡುಕೋಣೆ ಅವರ ಅಕಾಡೆಮಿ ಸೇರಿಕೊಂಡೆ. ಬೆಂಗಳೂರಿಗೆ ಟೂರ್ನಿ ಆಡಲು ಬಂದಾಗ ವಿಮಲ್‌ ಕುಮಾರ್‌ ಅವರ ಭೇಟಿಯಾಯಿತು. ಅವರು ಒಂದು ತಿಂಗಳು ಅಭ್ಯಾಸ ಶಿಬಿರಕ್ಕೆ ಬಂದು ಸೇರಿಕೊಳ್ಳಲು ಹೇಳಿದರು. ಅಲ್ಲಿಂದ ಈ ಕ್ರೀಡೆಯೊಂದಿಗೆ ನನ್ನ ಪಯಣ ಆರಂಭವಾಯಿತು.

* ಜೂನಿಯರ್ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರುವ ಹಾದಿಯಲ್ಲಿ ನಿಮಗೆ ಎದುರಾದ ಸವಾಲುಗಳು ಏನು?
ಜೂನಿಯರ್ ವಿಭಾಗದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡಿದ್ದರಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಆಗ ನನ್ನ ಉದ್ದೇಶ ರ‍್ಯಾಂಕಿಂಗ್ ಪಡೆದುಕೊಳ್ಳುವುದು ಆಗಿರಲಿಲ್ಲ. ಪ್ರಮುಖ ಟೂರ್ನಿಗಳನ್ನು ಗೆದ್ದುಕೊಳ್ಳುವಲ್ಲಿ ಪರಿಶ್ರಮ ಹಾಕಿದೆ. ಅಗ್ರಸ್ಥಾನಕ್ಕೆ ಏರುವ ನಂಬಿಕೆ ಇರಲಿಲ್ಲ. ಆ ಬಳಿಕ ಉತ್ತಮ ಟೂರ್ನಿಗಳಲ್ಲಿ ಆಡುವ ಅವಕಾಶ ಸಿಕ್ಕಿದ್ದು ನನ್ನ ಭವಿಷ್ಯದ ದಿಕ್ಕು ಬದಲಾಯಿಸಿತು.

*ಸೀನಿಯರ್‌ ವಿಭಾಗದಲ್ಲಿ ತವರಿನಿಂದ ಹೊರಗೆ ಮೊದಲ ಬಾರಿಗೆ ಬಲ್ಗೇರಿಯಾ ಓಪನ್‌ ಜಯಿ ಸಿದ್ದೀರಿ. ಈ ಟೂರ್ನಿಯ ಪಯಣ ಹೇಗಿತ್ತು?
ಒಂದು ತಿಂಗಳು ಸತತವಾಗಿ ಪಂದ್ಯಗಳನ್ನು ಆಡಿದ್ದೆ. ಹತ್ತು ದಿನ ಅಭ್ಯಾಸ ಶಿಬಿರದಲ್ಲಿ ಕೂಡ ಪಾಲ್ಗೊಂಡಿದ್ದೆ. ಮೊದಲ ಸುತ್ತಿನಲ್ಲೇ ಅಗ್ರಶ್ರೇಯಾಂಕದ ಆಟಗಾರನೊಂದಿಗೆ ಆಡಬೇಕಾಗಿದ್ದರಿಂದ ವಿಭಿನ್ನವಾದ ತಯಾರಿ ನಡೆಸಿದ್ದೆ. ಈ ಟೂರ್ನಿ ಗೆಲ್ಲುವ ವಿಶ್ವಾಸ ಇತ್ತು.

* ವಿಯೆಟ್ನಾಂ ಓಪನ್ ಸಿದ್ಧತೆ ಹೇಗೆ ನಡೆದಿದೆ?
ಇನ್ನೂ ಒಂದು ವಾರ ಬಾಕಿ ಇದೆ. ಸತತವಾಗಿ ಟೂರ್ನಿಗಳನ್ನು ಆಡಿರುವುದರಿಂದ ನಾಲ್ಕು ದಿನ ಫಿಟ್‌ನೆಸ್‌ ಕಡೆ ಗಮನಕೊಡಲಿದ್ದೇನೆ. ಬಳಿಕ ಒಂದೆರಡು ದಿನ ಕೋಚ್‌ಗಳಿಂದ ಮಾರ್ಗದರ್ಶನ ಪಡೆದು ಅಭ್ಯಾಸ ನಡೆಸುವ ಯೋಜನೆ ಇದೆ.

* ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ  ಸೌರಭ್ ವರ್ಮಾ ಎದುರು ಆಡಿದ ಅನುಭವ ಹೇಗಿತ್ತು?
ಆದು ಸ್ಮರಣೀಯ ಟೂರ್ನಿ. ಹಿರಿಯ ಆಟಗಾರ ಎಚ್‌.ಎಸ್‌. ಪ್ರಣಯ್‌ ಅವರನ್ನು ಮಣಿಸಿದ್ದೆ. ಪ್ರೀ ಕ್ವಾರ್ಟರ್‌ ಹಾಗೂ ಕ್ವಾರ್ಟರ್‌ ಫೈನಲ್‌ನಲ್ಲಿ ದೀರ್ಘವಾದ ಪಂದ್ಯಗಳನ್ನು ಆಡಿದೆ; ದಣಿದಿದ್ದೆ. ಫೈನಲ್‌ನಲ್ಲಿ ಸೌರಭ್ ಕೂಡ ಉತ್ತಮವಾಗಿ ಆಡಿದರು. ಅವರ ಭಿನ್ನ ಆಟದ ಶೈಲಿ ಹಾಗೂ ಸ್ಮ್ಯಾಷ್‌ಗಳನ್ನು ಎದುರಿಸುವಲ್ಲಿ ನಾನು ಎಡವಿದೆ. ಅಲ್ಲದೇ ಅವರು ಯೋಜನಾಬದ್ಧವಾಗಿ ಆಡಿದರು. ನಾನು ಬೇಗನೆ ಪಾಯಿಂಟ್ಸ್ ಬಿಟ್ಟು ಕೊಟ್ಟಿದ್ದು ಸೋಲಿಗೆ ಕಾರಣವಾಯಿತು.

ಪ್ರಣಯ್ ಎದುರು ಮೊದಲ ಬಾರಿಗೆ ಆಡಿದ್ದೆ. ಪಂದ್ಯ ಆರಂಭವಾದಾಗ ಗೆಲ್ಲುವ ವಿಶ್ವಾಸ ಇರಲಿಲ್ಲ. ಮೊದಲ ಸೆಟ್‌ನಲ್ಲಿ ಪ್ರಣಯ್‌ ಗೆದ್ದರು. ಅಷ್ಟರಲ್ಲಿ ನಾನು ಅವರ ಎದುರು ಹೇಗೆ ಆಡಿದರೆ ಗೆಲ್ಲಬಹುದು ಎಂಬ ಯೋಜನೆಯನ್ನು ಮನಸ್ಸಿನಲ್ಲೇ ರೂಪಿಸಿದ್ದೆ. ಇದು ಫಲ ಕೊಟ್ಟಿತು. ಅವರ ಆಟವನ್ನು ಸಾಕಷ್ಟು ಬಾರಿ ನೋಡಿದ್ದೆ. ಇದರಿಂದ ಅವರು ಯಾವ ಜಾಗದಲ್ಲಿ ಹೇಗೆ ಆಡುತ್ತಾರೆ ಅನ್ನುವುದನ್ನು ಊಹಿಸಲು ಸಾಧ್ಯವಾಯಿತು. ಉಳಿದ ಎರಡು ಗೇಮ್‌ಗಳನ್ನು ಯಶಸ್ವಿಯಾಗಿ ಗೆದ್ದುಕೊಂಡೆ. ಈ ಪಂದ್ಯದ ಗೆಲುವು ನನಗೆ ಸಾಕಷ್ಟು ಸ್ಫೂರ್ತಿ ತುಂಬಿತು.

* ಬ್ಯಾಡ್ಮಿಂಟನ್‌ನಲ್ಲಿ ನಿಮಗೆ ಸ್ಫೂರ್ತಿ ಯಾರು?
ಪ್ರಕಾಶ್ ಪಡುಕೋಣೆ ಹಾಗೂ ಚೆನ್‌ ಲಾಂಗ್‌

* ಅಕಾಡೆಮಿಯಲ್ಲಿ ಪ್ರಮುಖ ಪಂದ್ಯಗಳಿಗಾಗಿ ಹೇಗೆ ಸಿದ್ಧತೆ ನಡೆಸುತ್ತೀರಿ?
ಇಲ್ಲಿ ನನಗೆ ಬ್ಯಾಡ್ಮಿಂಟನ್‌ನ ವಿಶೇಷ ತಂತ್ರಗಳನ್ನು ಕಲಿಯಲು ಸಾಧ್ಯವಾಗಿದೆ. ಹಿರಿಯ ಆಟಗಾರರು ನಮಗೆ ಸಿಗುವುದು ಇಲ್ಲಿ ಕಲಿಯುವುದರಿಂದ ಆಗುವ ದೊಡ್ಡ ಲಾಭಗಳಲ್ಲಿ ಒಂದು. ಸೈನಾ ನೆಹ್ವಾಲ್ ಕೂಡ ಮಾರ್ಗದರ್ಶನ ನೀಡಿದ್ದಾರೆ. ಅವರಿಗೆ ಆಟದ ಬಗ್ಗೆ ಇರುವ ಬದ್ಧತೆ, ತಾಳ್ಮೆ, ಕಠಿಣ ಪರಿಶ್ರಮ ಹಾಗೂ ಅವರು ಯೋಚಿಸುವ ರೀತಿ ನಮಗೆ ಸಾಕಷ್ಟು ಸ್ಫೂರ್ತಿ ತುಂಬಿದೆ.

ನಾವು ಉತ್ತರಾಖಂಡದಿಂದ ಬೆಂಗಳೂರಿಗೆ ವಾಸ ಬದಲಿಸಿದ್ದರಿಂದ ಕುಟುಂಬದ ಬೆಂಬಲ ಕೂಡ ಜತೆಗಿದೆ. ಉತ್ತರಾಖಂಡದವನಾದರೂ ಬೆಂಗಳೂರಿನಲ್ಲಿ ತವರು ನೆಲದಷ್ಟು ಆಪ್ತತೆ ಸಿಕ್ಕಿದೆ. ಪರೀಕ್ಷೆ ಒಂದು ತಿಂಗಳು ಇದ್ದಾಗ ಮಾತ್ರ ಓದು. ಉಳಿದ ಎಲ್ಲಾ ಸಮಯ ಬ್ಯಾಡ್ಮಿಂಟನ್‌ಗಾಗಿಯೇ ಮೀಸಲು ಇಟ್ಟಿದ್ದೇನೆ. ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮಾಡುತ್ತಿದ್ದೇನೆ.

* ಭವಿಷ್ಯದ ಯೋಜನೆಗಳು?
ಈಗಷ್ಟೇ ಸೀನಿಯರ್ ವಿಭಾಗದಲ್ಲಿ ಆಡಲು ಆರಂಭಿಸಿದ್ದೇನೆ. ಸೀನಿಯರ್‌ ರ‍್ಯಾಂಕಿಂಗ್‌ನಲ್ಲಿ 50 ರೊಳಗಿನ ಸ್ಥಾನ ಸಿಕ್ಕರೆ ಉತ್ತಮ ಟೂರ್ನಿಗಳಲ್ಲಿ ಆಡುವ ಅವಕಾಶ ಸಿಗುತ್ತದೆ. ಇದರಿಂದ ಭವಿಷ್ಯದ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ.

* ವಿಶ್ವ ಜೂನಿಯರ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದೀರಿ?
ಹೌದು ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ಇದೆ. ಇಲ್ಲಿ ಕಠಿಣ ಪೈಪೋಟಿ ಇರುತ್ತದೆ. ಆದರೆ ಛಲ ಇದ್ದರೆ ಯಾವ ಹಾದಿಯೂ ಕಷ್ಟ ಎನಿಸದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT