ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪ್ರತಿಭೆಗಳಿಗೆ ಸಾಣೆ ಹಿಡಿಯುವ ಹೊಣೆ

Last Updated 27 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭಾರತ ಹಾಕಿ ಲೋಕ ಕಂಡ ದಿಗ್ಗಜ ಆಟಗಾರರಲ್ಲಿ ಕರ್ನಾಟಕದ ಜೂಡ್‌ ಫೆಲಿಕ್ಸ್‌ ಸೆಬಾಸ್ಟಿಯನ್‌ ಕೂಡ ಒಬ್ಬರು. ತಮ್ಮ ಅಮೋಘ ಆಟದ ಮೂಲಕ ಸಾಗಿದ ಹಾದಿಯಲ್ಲೆಲ್ಲಾ  ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಅವರು ಚರಿತ್ರೆಯ ‍ಪುಟಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಅಚ್ಚೊತ್ತಿದ್ದಾರೆ.

ಎಳವೆಯಿಂದಲೇ ಹಾಕಿ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ಫೆಲಿಕ್ಸ್‌ ಅವರು ಶಾಲಾ ಹಂತದಲ್ಲಿಯೇ ಶ್ರೇಷ್ಠ ಆಟ ಆಡಿ ಗಮನ ಸೆಳೆದಿದ್ದರು. 1983ರಲ್ಲಿ ಅಂತರರಾಷ್ಟ್ರೀಯ ಹಾಕಿಗೆ ಅಡಿ ಇಟ್ಟಿದ್ದ ಅವರು ಭಾರತ ‍ತಂಡ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಎತ್ತಿಹಿಡಿಯುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಈ ಮೂಲಕ ತಮ್ಮ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದ್ದರು.

90ರ ದಶಕದಲ್ಲಿ ಅವರು ಮಿಡ್‌ಫೀಲ್ಡ್‌ ವಿಭಾಗದಲ್ಲಿ ಭಾರತದ ಬೆನ್ನೆಲುಬಾಗಿದ್ದರು.12 ವರ್ಷಗಳ ಕಾಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಜೂಡ್‌, 250ಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ.

1993ರಲ್ಲಿ ಭಾರತ ತಂಡದ ನಾಯಕರಾಗಿ ನೇಮಕವಾಗಿದ್ದ ಫೆಲಿಕ್ಸ್‌ ಮೂರು ವರ್ಷಗಳ ಕಾಲ ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು.1994ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ವಿಶ್ವಕಪ್‌, ಅದೇ ವರ್ಷ ಜಪಾನ್‌ನ ಹಿರೋಶಿಮಾದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟ ಸೇರಿದಂತೆ ಹಲವು ಪ್ರತಿಷ್ಠಿತ ಕೂಟಗಳಲ್ಲಿ ತಂಡವನ್ನು ಮುನ್ನಡೆಸಿರುವ ಹೆಗ್ಗಳಿಕೆ ಅವರದ್ದು.

1988ರಲ್ಲಿ ದಕ್ಷಿಣ ಕೊರಿಯಾದ ಸೋಲ್‌ ಮತ್ತು 1992ರಲ್ಲಿ ಬಾರ್ಸಿಲೋನದಲ್ಲಿ ಜರುಗಿದ್ದ ಒಲಿಂಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ದೇಶದ ಪರ ಆಡಿದ್ದ ಹಿರಿಮೆಯನ್ನೂ ಫೆಲಿಕ್ಸ್‌ ತಮ್ಮದಾಗಿಸಿಕೊಂಡಿದ್ದಾರೆ.

1990ರಲ್ಲಿ ಪಾಕಿಸ್ತಾನದ ಲಾಹೋರ್‌ ಮತ್ತು 1994ರಲ್ಲಿ ಸಿಡ್ನಿಯಲ್ಲಿ ಆಯೋಜನೆಯಾಗಿದ್ದ ವಿಶ್ವಕಪ್‌ಗಳಲ್ಲೂ ಅವರು ಕಣಕ್ಕಿಳಿದಿದ್ದರು. 1990ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ಜರುಗಿದ್ದ ಏಷ್ಯನ್‌ ಕ್ರೀಡಾಕೂಟದಲ್ಲೂ ಆಡಿದ್ದರು. ಅಷ್ಟೇ ಅಲ್ಲದೆ 1985ರಲ್ಲಿ ಆಸ್ಟ್ರೇಲಿಯಾದ ಪರ್ತ್‌, 1987ರಲ್ಲಿ ಪಾಕಿಸ್ತಾನ ಮತ್ತು 1989ರಲ್ಲಿ ಬರ್ಲಿನ್‌ನಲ್ಲಿ ಜರುಗಿದ್ದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗಳಲ್ಲಿ ಅಂಗಳಕ್ಕಿಳಿದಿದ್ದರು.

ಕೋಚ್‌ ಆಗಿಯೂ ಫೆಲಿಕ್ಸ್‌ ಅವರ ಕೊಡುಗೆ ಅನನ್ಯ. 2014ರಲ್ಲಿ ಅವರು ಭಾರತ ಸೀನಿಯರ್‌ ತಂಡದ ಸಹಾಯಕ ಕೋಚ್‌ ಆಗಿದ್ದಾಗ ಪುರುಷರ ತಂಡ ಇಂಚೆನ್‌ನಲ್ಲಿ ಜರುಗಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿತ್ತು. ಅದೇ ವರ್ಷ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟ, 2015ರಲ್ಲಿ ಮಲೇಷ್ಯಾದ ಇಫೊದಲ್ಲಿ ಜರುಗಿದ್ದ ಸುಲ್ತಾನ್‌ ಅಜ್ಲಾನ್‌ ಷಾ ಕಪ್‌ ಟೂರ್ನಿಗಳಲ್ಲಿ ಕ್ರಮವಾಗಿ ತಂಡ ಬೆಳ್ಳಿ ಮತ್ತು ಕಂಚಿನ ಸಾಧನೆ ಮಾಡಿದ್ದರ ಹಿಂದೆ ಫೆಲಿಕ್ಸ್‌ ಅವರ ತಂತ್ರಗಾರಿಕೆ ಕೆಲಸ ಮಾಡಿತ್ತು. ಅವರು 1995ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.

2020 ಮತ್ತು 2024ರ ಒಲಿಂಪಿಕ್ಸ್‌ಗಳಲ್ಲಿ ಪದಕದ ಮೇಲೆ ಕಣ್ಣು ನೆಟ್ಟಿರುವ  ಹಾಕಿ ಇಂಡಿಯಾ (ಎಚ್‌ಐ) ಹೋದ ವಾರ ಫೆಲಿಕ್ಸ್‌ ಅವರನ್ನು ಜೂನಿಯರ್‌ ಪುರುಷರ ತಂಡದ ಮುಖ್ಯ ಕೋಚ್‌ ಆಗಿ ನೇಮಕ ಮಾಡಿದೆ. ಹೊಸ ಜವಾಬ್ದಾರಿ ಮತ್ತು  ಸವಾಲುಗಳ ಬಗ್ಗೆ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಹಾಕಿ ಇಂಡಿಯಾ ನಿಮ್ಮನ್ನು ಜೂನಿಯರ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಿಸಿದೆ. ಹೇಗನಿಸುತ್ತಿದೆ?
ಜೂನಿಯರ್‌ ತಂಡಕ್ಕೆ ತರಬೇತಿ ನೀಡುವ ಮಹತ್ತರವಾದ ಜವಾಬ್ದಾರಿ ಸಿಕ್ಕಿರುವುದಕ್ಕೆ ಅತೀವ ಖುಷಿಯಾಗಿದೆ. ಇದಕ್ಕಾಗಿ ಹಾಕಿ ಇಂಡಿಯಾಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹೊಸ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಇದೆ.

* ಈ ಹುದ್ದೆಗೆ ನಿಮ್ಮನ್ನು ನೇಮಕ ಮಾಡಬಹುದು ಎಂಬ ನಿರೀಕ್ಷೆ ಇತ್ತೆ?
ಯಾವ ನಿರೀಕ್ಷೆಯೂ ಇರಲಿಲ್ಲ. ಈ ಹಿಂದೆ ಸೀನಿಯರ್‌ ತಂಡದ ಸಹಾಯಕ ಕೋಚ್‌ ಆಗಿ ಕೆಲಸ ಮಾಡಿದ್ದೆ. ಜೊತೆಗೆ ಕೆಲ ವಿದೇಶಿ ಕ್ಲಬ್‌ಗಳಿಗೂ ಮಾರ್ಗದರ್ಶನ ನೀಡಿದ ಅನುಭವ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಾಕಿ ಇಂಡಿಯಾ ಈ ಜವಾಬ್ದಾರಿ ನೀಡಿದೆ ಎಂದು ಭಾವಿಸಿದ್ದೇನೆ.

* ಈಗ ನಿಮ್ಮ ಮುಂದಿರುವ ಸವಾಲುಗಳೇನು?
ಭಾರತದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಅಂತಹವರನ್ನು ಗುರುತಿಸಿ ಅವರ ಪ್ರತಿಭೆಗಳಿಗೆ ಸಾಣೆ ಹಿಡಿಯುವ ಕೆಲಸ ಮಾಡಬೇಕು. ಜೂನಿಯರ್‌ ಮಾತ್ರವಲ್ಲದೇ ಸೀನಿಯರ್‌ ತಂಡದಲ್ಲೂ ದಿಟ್ಟ ಸಾಮರ್ಥ್ಯ ತೋರುವ ಹಾಗೆ ಅವರನ್ನು ಸಜ್ಜುಗೊಳಿಸಬೇಕು.

* ನೀವು ದಶಕಗಳ ಕಾಲ ಭಾರತ ತಂಡದ ಪರ ಆಡಿದ್ದೀರಿ. ನಿಮ್ಮ ಕಾಲಘಟ್ಟಕ್ಕೆ ಹೋಲಿಸಿದರೆ ಈಗ ಭಾರತದ ಹಾಕಿಯಲ್ಲಿ ಯಾವೆಲ್ಲಾ ಬದಲಾವಣೆಗಳಾಗಿವೆ. ಸೀನಿಯರ್‌ ತಂಡದ ಸಾಮರ್ಥ್ಯದ ಬಗ್ಗೆ ನೀವು ಏನು ಹೇಳುತ್ತೀರಿ?
ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ದೇಶದ ಎಲ್ಲಾ ಭಾಗಗಳಲ್ಲೂ ಹಾಕಿಯ ಬೇರುಗಳು ನಿಧಾನವಾಗಿ ಆಳಕ್ಕಿಳಿಯುತ್ತಿವೆ. ಆಸ್ಟ್ರೇಲಿಯಾ, ಜರ್ಮನಿ, ನೆದರ್ಲೆಂಡ್ಸ್‌ನಲ್ಲಿರುವಂತೆ ನಮ್ಮಲ್ಲೂ ಅತ್ಯಾಧುನಿಕ ಸೌಕರ್ಯಗಳಿವೆ. ಹೀಗಿದ್ದರೂ ಅಂತರರಾಷ್ಟ್ರೀಯ ಕೂಟಗಳಲ್ಲಿ ದಿಟ್ಟ ಆಟ ಆಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಮೊದಲಿನಿಂದಲೂ ನಾವು ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದವರು. ಆದರೆ ಈಗ ಅದು ಮರೆಯಾದಂತಿದೆ. ತಂಡದ ಹಿತದೃಷ್ಟಿಯಿಂದ ಎಲ್ಲರೂ ಈ ಕಲೆಯನ್ನು ಮೈಗೂಡಿಸಿಕೊಂಡು ಸಾಗುವುದು ಬಹಳ ಅಗತ್ಯ.

* ಜೂನಿಯರ್‌ ತಂಡದ ಕೋಚ್‌ ಆಗಿ ನಿಮ್ಮ ಮೊದಲ ಆದ್ಯತೆ?
ಮುಖ್ಯವಾಗಿ ಆಟಗಾರರಲ್ಲಿ ಹಾಕಿ ಪ್ರೀತಿ ಬೆಳೆಸಬೇಕು. ಜೊತೆಗೆ ಮೂಲ ಕೌಶಲಗಳನ್ನು ಕಲಿಸಬೇಕು. ಆ ನಂತರ ಹೊಸ ಪಟ್ಟುಗಳನ್ನು ಹೇಳಿಕೊಟ್ಟು ಆಟಗಾರರ ಮನೋಬಲ ಹೆಚ್ಚಿಸಬೇಕು. ಜೊತೆಗೆ ಆಕ್ರಮಣಕಾರಿ ಗುಣ ಬೆಳೆಸುವ ಜವಾಬ್ದಾರಿಯೂ ನನ್ನ ಮೇಲಿದೆ.

* ಹಿಂದೆ ಸೀನಿಯರ್‌ ತಂಡದ ಸಹಾಯಕ ಕೋಚ್‌ ಆಗಿ ಕೆಲಸ ಮಾಡಿದ್ದೀರಿ. ಆ ಅನುಭವ ಈಗ ನೆರವಿಗೆ ಬರಬಹುದೇ?
ಸೀನಿಯರ್‌ ತಂಡದ ಸಹಾಯಕ ಕೋಚ್‌ ಆಗಿ ದುಡಿದ ಅವಧಿಯಲ್ಲಿ ಸಾಕಷ್ಟು ಹೊಸ ವಿಚಾರಗಳನ್ನು ಕಲಿತಿದ್ದೇನೆ. ಜೂನಿಯರ್‌ ತಂಡವನ್ನು ಸಜ್ಜುಗೊಳಿಸಲು ಹಿಂದಿನ ಅನುಭವ ಖಂಡಿತವಾಗಿಯೂ ನೆರವಾಗಲಿದೆ.

* ಮುಂದಿನ ಟೂರ್ನಿಗಳ ಬಗ್ಗೆ ಹೇಳಿ?
ಅಕ್ಟೋಬರ್‌ನಲ್ಲಿ ಮಲೇಷ್ಯಾದಲ್ಲಿ ಸುಲ್ತಾನ್‌ ಜೋಹರ್‌ ಕಪ್‌ ಟೂರ್ನಿ ನಡೆಯಲಿದೆ. ಇದರಲ್ಲಿ ಪ್ರಶಸ್ತಿ ಎತ್ತಿಹಿಡಿಯುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ತಂಡವನ್ನು ಇನ್ನಷ್ಟು ಶಕ್ತಿಯುತಗೊಳಿಸಬೇಕು. ಹಾಕಿ ಇಂಡಿಯಾ ಈಗಾಗಲೇ ಸಂಭಾವ್ಯ ತಂಡ ಪ್ರಕಟಿಸಿದೆ. ಇವರ ಪೈಕಿ ಶ್ರೇಷ್ಠರೆನಿಸಿದ 18 ಮಂದಿಯನ್ನು ಆಯ್ಕೆಮಾಡುವ ಜವಾಬ್ದಾರಿ ಇದೆ. ಕೋಚ್‌ ಆಗಿ ಇದು ನನಗೆ ಅಗ್ನಿ ಪರೀಕ್ಷೆಯ ಕಣ. ಇದರಲ್ಲಿ ಯಶಸ್ವಿಯಾಗುವ ಭರವಸೆ ಇದೆ.

*ಕರ್ನಾಟಕದಿಂದ ಹೆಚ್ಚು ಮಂದಿ ಆಟಗಾರರು ಭಾರತ ತಂಡಕ್ಕೆ ಆಯ್ಕೆಯಾಗುತ್ತಿಲ್ಲವಲ್ಲ?
ನಮ್ಮಲ್ಲಿ ಪ್ರತಿಭಾನ್ವಿತರಿಗೆ ಕೊರತೆ ಇಲ್ಲ. ಆದರೆ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ಹಿಂದೆ ಬೀಳುತ್ತಿದ್ದೇವೆ. ಯುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲೂ ನಾವು ಹಿಂದೆ ಬಿದ್ದಿದ್ದೇವೆ.

***

ಫೆಲಿಕ್ಸ್ ಅವರ ಅನುಭವ..
* ಏಪ್ರಿಲ್‌ 2014ರಿಂದ ಆಗಸ್ಟ್‌ 2015ರವರೆಗೆ (1 ವರ್ಷ 5ತಿಂಗಳು) ಭಾರತ ಸೀನಿಯರ್‌ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಣೆ.

* ಡಿಸೆಂಬರ್‌ 2014ರಿಂದ ಫೆಬ್ರುವರಿ 2015ರವರೆಗೆ (3 ತಿಂಗಳು) ಹಾಕಿ ಇಂಡಿಯಾ ಲೀಗ್‌ನಲ್ಲಿ ಆಡುವ ಕಳಿಂಗ ಲ್ಯಾನ್ಸರ್‌ ತಂಡದ ಮುಖ್ಯ ಕೋಚ್‌.

* 2 ವರ್ಷಗಳ ಕಾಲ (1995–1997) ಸಿಂಗಪುರ ರಿಕ್ರಿಯೇಷನ್‌ ಕ್ಲಬ್‌ನ ಮುಖ್ಯ ಕೋಚ್‌ ಆಗಿ ಕೆಲಸ.

*4 ವರ್ಷಗಳ ಕಾಲ (2000–2004) ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್‌) ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದರು.

* 1997ರಿಂದ 2001ರವರೆಗೆ ಪ್ಯಾರಿಸ್‌ನ ರೇಸಿಂಗ್‌ ಕ್ಲಬ್‌ ಡಿ ಫ್ರಾನ್ಸ್‌ ತಂಡದಲ್ಲಿ ಆಡಿದ್ದರು. ಈ ಅವಧಿಯಲ್ಲಿ ತಂಡಕ್ಕೆ ಅವರೇ ಕೋಚ್‌ ಆಗಿದ್ದರು.

* 1995ರಿಂದ 2000ದ ಅವಧಿಯಲ್ಲಿ ಭಾರತ, ಇಂಗ್ಲೆಂಡ್‌, ಸಿಂಗಪುರ ಮತ್ತು ಮಲೇಷ್ಯಾಗಳಲ್ಲಿ ನಡೆದ ರಾಷ್ಟ್ರೀಯ ಲೀಗ್‌ಗಳಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದರು.

* ಎರಡು ವಿಶ್ವಕಪ್‌, ಏಷ್ಯನ್‌ ಕ್ರೀಡಾಕೂಟ ಮತ್ತು ವಿವಿಧ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ಸೀನಿಯರ್‌ ತಂಡದ ಸಾರಥ್ಯ ವಹಿಸಿದ್ದರು.

* 1998ರಲ್ಲಿ ನೆದರ್ಲೆಂಡ್ಸ್‌ ಹಾಕಿ ಫೆಡರೇಷನ್‌ನ ಆಹ್ವಾನದ ಮೇರೆಗೆ ಅಲ್ಲಿನ 18 ವರ್ಷದೊಳಗಿನವರ ಬಾಲಕಿಯರ ತಂಡಕ್ಕೆ ಒಂದು ವಾರ ತರಬೇತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT