ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯಲ್ಲಿ ದುಡ್ಡಷ್ಟೇ ದೊಡ್ಡಪ್ಪನಾಗದಿರಲಿ

Last Updated 27 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದಶಕಗಳ ಹಿಂದಿನ ಮಾತು. ಕ್ರೀಡೆಯು ಆಡುವವರ ಸೋಲು–ಗೆಲುವುಗಳಿಗೆ ಸೀಮಿತವಾಗಿರುತ್ತಿತ್ತು. ಅದನ್ನು ಹೊರತುಪಡಿಸಿದರೆ ಮನೋಲ್ಲಾಸ ಮತ್ತು ಆಸಕ್ತಿಯ ಕಣಜವಾಗಿರುತ್ತಿತ್ತು. ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ, ಪ್ರಶಸ್ತಿ ಗೆದ್ದು ಬೀಗುವ ಛಲದಲ್ಲಿರುತ್ತಿದ್ದರು.

ಕಾಲ ಬದಲಾದಂತೆ ಕ್ರೀಡೆಗಳನ್ನು ಆಡುವ, ನೋಡುವ ಮತ್ತು ಆಯೋಜಿಸುವ ದೃಷ್ಟಿಕೋನ ಬದಲಾಗಿದೆ. ಭಾರತೀಯ ಕ್ರೀಡಾರಂಗದಲ್ಲಿ ಇವತ್ತು ವೃತ್ತಿಪರತೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರ, ಕಾರ್ಪೊರೇಟ್ ಸಂಸ್ಥೆಗಳು ದುಡ್ಡು ವಿನಿಯೋಗಿಸುತ್ತಿವೆ. ಅದರಿಂದ ಆಟಗಾರರಿಗೆ ಆರ್ಥಿಕ ಲಾಭ, ಆಧುನಿಕ ಸೌಲಭ್ಯಗಳು ಸಿಗುತ್ತಿವೆ. ಇದು ತಪ್ಪಲ್ಲ. ಇದರಿಂದಾಗಿ ಇವತ್ತು ಕ್ರೀಡಾಪಟುಗಳು ಪದಕ ಗೆಲ್ಲದಿದ್ದರೂ ಹಣ ಸಿಗುವುದು ಖಚಿತವಾಗಿದೆ.

ಈಗಿನ ಕ್ರೀಡಾಪಟುಗಳು ಯಾವುದೋ ಕೂಟದಲ್ಲಿ ಬೆಳ್ಳಿ ಅಥವಾ ಕಂಚಿನ ಪದಕ ಗಳಿಸಿದರೂ ವಾಣಿಜ್ಯ ಕಂಪೆನಿಗಳು ಹಣ ಸುರಿಯಲು, ಸರ್ಕಾರವು ನಗದು ಬಹುಮಾನ ನೀಡಲು ಮುಗಿಬೀಳುತ್ತವೆ. ಮೇಲ್ನೋಟಕ್ಕೆ ಇದು ಒಳ್ಳೆಯದೆನಿಸುತ್ತದೆ. ಆದರೆ ಕೇವಲ ಹಣ ಮಾತ್ರ ಮಹತ್ವ ಪಡೆದುಕೊಂಡು ಪದಕ ಗೆಲುವಿನ ಗುರಿ ಎರಡನೇ ಸ್ಥಾನಕ್ಕಿಳಿಯುವ ಅಪಾಯ ಕಾಣುತ್ತಿದೆ.

ಯುವಪಡೆಯಲ್ಲಿ ಈ ಮನೋಭಾವ ಬದಲಾಗಬೇಕಾದರೆ ಸ್ಪರ್ಧಾತ್ಮಕತೆ ಹೆಚ್ಚಬೇಕು. ಅದಕ್ಕಾಗಿ ಬೇರುಮಟ್ಟದಿಂದಲೇ ಸಿದ್ಧತೆಗಳು ನಡೆಯಬೇಕು. ಪ್ರತಿಯೊಂದು ಕ್ರೀಡೆಯಲ್ಲಿಯೂ ಜೂನಿಯರ್, ಸಬ್‌ಜೂನಿಯರ್‌ ಮಟ್ಟದಲ್ಲಿ ಪ್ರತಿಭೆಗಳ ನಿರಂತರ ಒರತೆ ಇರಬೇಕು. ಸೀನಿಯರ್ ವಿಭಾಗದವರನ್ನು ಸಂರಕ್ಷಿಸುವ ಮತ್ತು ಬೆಳೆಸುವುದರ ಜೊತೆಗೆ ಜೂನಿಯರ್‌ ಹಂತಗಳಲ್ಲಿಯೂ ಉದಯೋನ್ಮುಖ ಪ್ರತಿಭೆಗಳನ್ನು ಸಿದ್ಧಗೊಳಿಸುವ ಪ್ರಕ್ರಿಯೆ ಏಕಕಾಲದಲ್ಲಿ ನಡೆಯಬೇಕು. ಎಂಟರಿಂದ ಹತ್ತು ವರ್ಷ ವಯಸ್ಸಿನ ಮಕ್ಕಳನ್ನು ಆಯ್ಕೆ ಮಾಡಿ ತರಬೇತಿ ಆರಂಭಿಸಬೇಕು. ಆ ಮೂಲಕ ಎರಡನೇ, ಮೂರನೇ ಮತ್ತು ನಾಲ್ಕನೇ ಸಾಲಿನ ಆಟಗಾರರನ್ನು ಬೆಳೆಸಬೇಕು. ಆಗ ಜನರ ತೆರಿಗೆಯ ಹಣವನ್ನು ಕ್ರೀಡಾಭಿವೃದ್ಧಿಗೆ ವಿನಿಯೋಗಿಸುವ ಸರ್ಕಾರದ ಪ್ರಯತ್ನಕ್ಕೆ ಫಲ ಸಿಗುವ ಸಾಧ್ಯತೆ ಇರುತ್ತದೆ.

ಹಲವು ವರ್ಷ ದೇಶವನ್ನು ಪ್ರತಿನಿಧಿಸಿದ ಆಟಗಾರ ನಿವೃತ್ತಿಯಾಗುವ ಸಂದರ್ಭದಲ್ಲಿ ಆತನ ಜಾಗ ತುಂಬಲು ಯುವ ಆಟಗಾರರ ದೊಡ್ಡ ಸಾಲು ನಿರ್ಮಾಣವಾಗಬೇಕು. ಅದು ಆರೋಗ್ಯಕರ ಸ್ಪರ್ಧೆಯ  ಪ್ರತೀಕವಾಗುತ್ತದೆ. ಆದರೆ ಭಾರತದಲ್ಲಿ ಇಂತಹ ಬದಲಾವಣೆ ಕೇವಲ ಒಂದೆರಡು ವರ್ಷಗಳಲ್ಲಿ ಆಗುವುದಿಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಅದಕ್ಕಾಗಿ ಸರ್ಕಾರ, ಕ್ರೀಡಾ ಸಂಸ್ಥೆಗಳು, ನಿಯಮಗಳು ಪರಸ್ಪರ ಒಂದೆಡೆ ಸೇರಿ ಯೋಜನೆ ರೂಪಿಸುವಂತಾಗಬೇಕು. ಈ ಮೊದಲು ಪೈಕಾ ಕ್ರೀಡಾಕೂಟವಿತ್ತು. ಈಗ ಅದು ಖೇಲೊ ಇಂಡಿಯಾ ಆಗಿದೆ. ಆದರೆ ಅವುಗಳಿಂದ ಆಗುತ್ತಿರುವ ಕೆಲಸಗಳೇನು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು.

ಕ್ರಿಕೆಟ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿ ಶಿಫಾರಸುಗಳ ಜಾರಿ ನಡೆಯುತ್ತಿರುವ ಮಾದರಿಯಲ್ಲಿಯೇ ಇನ್ನಿತರ ಕ್ರೀಡಾ ಸಂಸ್ಥೆಗಳಲ್ಲಿಯೂ ಸುಧಾರಣೆಗಳು ನಡೆಯಬೇಕು. ನಮ್ಮ ದೇಶದ ಕ್ರೀಡಾ ಇಲಾಖೆಗಳನ್ನು ಆಳುವ ಸಚಿವರು, ಅಧಿಕಾರಿಗಳು ಕ್ರೀಡಾ ಹಿನ್ನೆಲೆಯಿಂದ ಬಂದವರಾಗಿರುವುದಿಲ್ಲ. ಅವರು ರಾಜಕೀಯದಲ್ಲಿ ಮುಂದಿರುತ್ತಾರೆ. ಆದ್ದರಿಂದ ಆಟದಂಗಳವನ್ನು ರಾಜಕೀಯದ ಕಣವಾಗಿ ಮಾರ್ಪಾಡು ಮಾಡುತ್ತಾರೆ.

ಅಮೆರಿಕ, ರಷ್ಯಾಗಳ ಅಧ್ಯಕ್ಷರು, ಅಧಿಕಾರಿಗಳು ಟೆನಿಸ್, ಬೇಸಬಾಲ್, ಈಜು ಮತ್ತಿತರ ಕ್ರೀಡೆಗಳಲ್ಲಿ ಸಕ್ರಿಯವಾಗಿರುವುದನ್ನು ನಾವು ನೋಡುತ್ತೇವೆ. ಆದರೆ ನಮ್ಮಲ್ಲಿ ಅಂತಹ ರಾಜಕಾರಣಿಗಳು ಎಷ್ಟಿದ್ದಾರೆ. ಆದ್ದರಿಂದ ಕ್ರೀಡೆಯಲ್ಲಿ ಸಾಧನೆ ಮಾಡಿದವರು, ಕ್ರೀಡಾಕ್ಷೇತ್ರಕ್ಕೆ ಮಹತ್ವದ ಕಾಣಿಕೆ ಕೊಟ್ಟವರ ಕೈಗಳಲ್ಲಿಯೇ ಅಧಿಕಾರ ಇರುವುದು ಸೂಕ್ತ. ಪ್ರತಿಷ್ಠಿತ ಅರ್ಜುನ, ಖೇಲ್‌ರತ್ನ, ಧ್ಯಾನಚಂದ್, ದ್ರೋಣಾಚಾರ್ಯ ಪ್ರಶಸ್ತಿಗಳನ್ನು ನೀಡುವಲ್ಲಿಯೂ ಸೂಕ್ತ ಮಾನದಂಡ ಅನುಸರಿಸಬೇಕು.

ಶಿಕ್ಷಣ ರಂಗದಲ್ಲಿಯೂ ಅಮೂಲಾಗ್ರ ಬದಲಾವಣೆ ಅಗತ್ಯ. ಕ್ರೀಡೆ ಒಂದು ಪರಿಪೂರ್ಣ ಪಠ್ಯದ ರೂಪ ಪಡೆಯಬೇಕು. ಗಣಿತ, ವಿಜ್ಞಾನ, ಸಮಾಜ ಶಾಸ್ತ್ರಗಳ ವಿಷಯವಿರುವಂತೆ ಕ್ರೀಡೆಯೂ ಇರಲಿ. ಅದಕ್ಕೂ ಅಂಕಗಳು ಕಡ್ಡಾಯವಾಗಿರಲಿ. ಯಾವ ಮಗುವಿಗೆ ಏನು ಇಷ್ಟವೋ ಅದನ್ನು ಓದಲು ಅವಕಾಶ ಸಿಗುತ್ತದೆ.

ಕ್ರೀಡೆಯನ್ನೇ ಪದವಿಯನ್ನಾಗಿ ಪಡೆದು ಉದ್ಯೋಗಸ್ಥನಾಗುವ ಆಥವಾ ದೊಡ್ಡ ಕ್ರೀಡಾಪಟುವಾಗುವ ವ್ಯವಸ್ಥೆ ಜಾರಿಯಾಗಬೇಕು. ಕ್ರೀಡೆ ಓದಿನೊಂದಿಗೆ ಮೂಲ ವಿಷಯವಾಗಬೇಕು. ಇಷ್ಟು ದಿನ ಪಠ್ಯೇತರ ಮಾಡಿ ನಾವು ಸಾಧಿಸಿದ್ದೇನು?

ಈ ನಿಟ್ಟಿನಲ್ಲಿ ಸರ್ಕಾರವೇ ಮುಂದಡಿ ಇಡಬೇಕು.  ಕೇವಲ ಅನುದಾನವನ್ನು ಖರ್ಚು ಮಾಡುವುದಕ್ಕೆ ಒತ್ತು ನೀಡುವುದು ಸರಿಯಲ್ಲ. ಹಣವು ಯಾವ ರೀತಿ, ಏಕೆ ಮತ್ತು ಯಾರಿಗಾಗಿ ಖರ್ಚು ಮಾಡಬೇಕು ಎಂಬ ಸ್ಪಷ್ಟತೆ ಇಲ್ಲ. ಹಣದ ವೆಚ್ಚ ಮತ್ತು ಅದರ ಲೆಕ್ಕ ನೀಡುವ ಸಂಪ್ರದಾಯ ನಿಲ್ಲಬೇಕು. ಹಾಕಿದ ಹಣಕ್ಕೆ ಪ್ರತಿಫಲವೇನು ಎಂಬುದರ ಮೌಲ್ಯ ಮಾಪನ ನಡೆಯಬೇಕು. ಉದಾಹರಣೆಗೆ ಕಳೆದ 20 ವರ್ಷಗಳಲ್ಲಿ ಹಾಕಿ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಖರ್ಚಾದ ಹಣವೆಷ್ಟು ಮತ್ತು ಲಭಿಸಿದ ಪದಕಗಳೆಷ್ಟು? ಅದು ತೃಪ್ತಿದಾಯಕವೇ? ಎಂಬ ಲೆಕ್ಕಾಚಾರ ಸೂಕ್ತವೆನಿಸುತ್ತದೆ. ವೃತ್ತಿ ಪರ ಮತ್ತು ವಾಣಿಜ್ಯೀಕರಣಗೊಂಡಿರುವ ಕ್ರೀಡೆಯಲ್ಲಿ ಆಟಗಾರರಿಗೆ ಪದಕ ಗೆಲ್ಲುವ ಗುರಿ ನಿಗದಿಪಡಿಸುವುದರ ಕುರಿತು ಚಿಂತನೆ ನಡೆಸಲು ಸೂಕ್ತ ಕಾಲವಿದು.

ಇತ್ತೀಚಿನ ವರ್ಷಗಳಲ್ಲಿ ಪ್ರೀಮಿಯರ್ ಲೀಗ್‌ ಟೂರ್ನಿಗಳು ನಡೆಯುತ್ತಿವೆ. ಅಲ್ಲಿ ಹಣ, ಪ್ರಸಿದ್ಧಿಗಳು ಸಿಗುತ್ತಿವೆ. ಮಾಧ್ಯಮಗಳೂ ಕ್ರೀಡೆಯತ್ತ ಚಿತ್ತ ಹರಿಸುವಂತಾಗಿದೆ. ಸ್ವಲ್ಪಮಟ್ಟಿಗೆ ಕ್ರೀಡೆಗಳ ಜನಪ್ರಿಯತೆ ಹೆಚ್ಚಲೂ ಈ ಲೀಗ್‌ಗಳು ಕಾರಣವಾಗುತ್ತಿವೆ.

ಕ್ರಿಕೆಟ್ ಅಬ್ಬರದಲ್ಲಿ ಕಳೆದುಹೋಗಿದ್ದ ಬಹಳಷ್ಟು ಆಟಗಳು ಟಿ.ವಿ. ಪರದೆ ಮೇಲೆ ಕಾಣಿಸಿಕೊಳ್ಳುತ್ತಿವೆ. ಆದರೆ ಇಲ್ಲಿಯೂ ಪ್ರಥಮ ಸಾಲಿನ (ತಾರಾ ವರ್ಚಸ್ಸು ಇರುವವರು) ಕ್ರೀಡಾಪಟುಗಳೇ ಹೆಚ್ಚಿನ ಪ್ರಾಶಸ್ತ್ಯ ಪಡೆಯುತ್ತಿದ್ದಾರೆ.

ಅಲ್ಲಿ ಜೂನಿಯರ್‌ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಸಿಗಬೇಕು. ಅವರು ಬೆಳೆಯಲು ಮತ್ತು ಆಟದಲ್ಲಿ ಆಸಕ್ತಿ ಉಳಿಸಿಕೊಳ್ಳಲು ಹೆಚ್ಚು ಅವಕಾಶ ಸಿಗಬೇಕು. ಕೇವಲ ನಿಯಮಕ್ಕಾಗಿ ಸ್ಥಳೀಯ ಮತ್ತು ಜೂನಿಯರ್ ಆಟಗಾರರನ್ನು ಸೇರಿಸಿಕೊಂಡು ಮೀಸಲು ಪಟ್ಟಿಯಲ್ಲಿಡುವ ರೂಢಿ ಒಳ್ಳೆಯದಲ್ಲ. ಕ್ರೀಡಾಂಗಣಕ್ಕೆ ಇಳಿಯುವವರು ಆರ್ಥಿಕವಾಗಿ, ಸಾಮಾಜಿಕವಾಗಿ, ದೈಹಿಕ, ಮಾನಸಿಕವಾಗಿ ಆರೋಗ್ಯಕರ ವ್ಯಕ್ತಿಯಾಗಿ ರೂಪುಗೊಳ್ಳಬೇಕು. ಈ ಎಲ್ಲ ವಿಷಯಗಳಲ್ಲಿಯೂ ಸಮತೋಲನ ಸಾಧಿಸಬೇಕು. ಕೇವಲ  ಆರ್ಥಿಕ ದೃಷ್ಟಿಕೋನದಿಂದ ಮಾತ್ರ ಕ್ರೀಡೆಯ ಬೆಳವಣಿಗೆಯನ್ನು ನೋಡುವುದು ಸೂಕ್ತವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT