ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳು ಆತ್ಮಗೌರವದ ಪ್ರತೀಕ

Last Updated 27 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ಸ್ವಯಂಪೂರ್ಣವಾದರೆ ದೇಶದಲ್ಲಿನ ಶೇ.90ರಷ್ಟು ಸಮಸ್ಯೆಗಳು ಪರಿಹಾರವಾದಂತೆಯೇ. ಹಾಗಾಗಿ ನಾವು ಅವುಗಳ ಸಮಸ್ಯೆಗಳು ಮತ್ತು ಪರಿಹಾರದ ಕುರಿತಾಗಿ ಗಂಭೀರವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗಬೇಕಾದ ಸಮಯವಿದು.

ಸದ್ಯ ಸರ್ಕಾರಿ ಶಾಲೆಗಳು ಖಾಸಗಿ ವ್ಯವಸ್ಥೆಗಿಂತ ಉತ್ತಮವಾಗಿದೆ ಎಂದು ಅನೇಕ ಅಧ್ಯಯನದಿಂದ ದೃಢಪಟ್ಟಿದೆ. ಹಾಗೆಯೇ, ಈ ಗುರಿಯನ್ನು ತಲುಪದ ಸರ್ಕಾರಿ ಶಾಲೆಗಳೂ ಇವೆ. ಜನಸಾಮಾನ್ಯರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಅಂತಹ ಒಳ್ಳೆಯ ಅಭಿಪ್ರಾಯವಿಲ್ಲ. ಇವನ್ನು ಪರಾಮರ್ಶೆ ಮಾಡಿ ಸೂಕ್ತವಾದ ಪರಿಹಾರ ಕೈಗೊಂಡರೆ ದೇಶದ ಅಭಿವೃದ್ಧಿಯಲ್ಲಿ ಬಲು ದೊಡ್ಡ ಹೆಜ್ಜೆಯಿಟ್ಟಂತಾಗುತ್ತದೆ.

ಈಗ ಆಗಬೇಕಾಗಿರುವುದನ್ನು ನೋಡೋಣ. ಕನ್ನಡ (ಅಥವಾ ದೊಡ್ಡ ಮಟ್ಟದಲ್ಲಿ ನೋಡುವುದಾದರೆ ಮಾತೃಭಾಷಾ ಮಾಧ್ಯಮ) ಮಾಧ್ಯಮದಲ್ಲಿನ ಶಿಕ್ಷಣ ಎಂದರೆ ಜನರಲ್ಲಿ ಅನೇಕ ಗೊಂದಲಗಳಿವೆ. ಸರ್ಕಾರಿ ಶಾಲೆಗೆ ಸೇರಿಸಿದರೆ ತಮ್ಮ ಮಕ್ಕಳ ಭವಿಷ್ಯ ಭದ್ರವಿಲ್ಲ ಎಂಬ ಭಾವನೆಯೂ ಅನೇಕ ಪೋಷಕರಲ್ಲಿದೆ.

ಮಾತೃಭಾಷೆಯನ್ನು ಉಳಿಸಿ, ಬೆಳೆಸಿ ಎಂದು ಹೋರಾಟ ನಡೆಸುವ ತಜ್ಞರೆನ್ನಿಸಿಕೊಂಡವರು ತಮ್ಮ ಮಕ್ಕಳನ್ನು ಮಾತ್ರ ಆಂಗ್ಲಭಾಷಾ ಶಾಲೆಗೆ ಸೇರಿಸುತ್ತಿರುವುದು ಜನಸಾಮಾನ್ಯರಲ್ಲಿ ಸಂಶಯವನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಮೊದಲು ನಾವು ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಕರ್ನಾಟಕದ ಮಟ್ಟಿಗೆ ಯೋಚಿಸುವುದಾದರೆ ಮಾತೃಭಾಷೆಯಲ್ಲಿನ ಶಿಕ್ಷಣ, ಅದರಲ್ಲಿಯೂ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯ ಅಳವಡಿಕೆ ಬಹಳ ಮುಖ್ಯ. ಇಂಗ್ಲಿಷ್‍ನಂತಹ ಭಾಷೆ, ಅದರ ವ್ಯಾಕರಣ, ಕಾಗುಣಿತ (ಸ್ಪೆಲ್ಲಿಂಗ್) ಆರಂಭ ಹಂತದಲ್ಲಿಯೇ ಮಕ್ಕಳಲ್ಲಿ ಗೊಂದಲ ಹುಟ್ಟಿಸಿ ಕಲಿಕೆಯನ್ನು ಕುಂಠಿತಗೊಳಿಸುತ್ತದೆ.

ಬರೆಯುವ ಮತ್ತು ಅದನ್ನು ಉಚ್ಚರಿಸುವುದರ ನಡುವಿನ ವ್ಯತ್ಯಾಸ ಸಹ ಪರಿಣಾಮವನ್ನುಂಟುಮಾಡುತ್ತದೆ. ಒಟ್ಟಾರೆಯಾಗಿ ಇದು ಆಲೋಚನಶಕ್ತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಜೊತೆಗೆ ಇತರ ಕೆಲವು ಸಮಸ್ಯೆಗಳೂ ಇವೆ. ಕಲಿಸುವ ರೀತಿಯಲ್ಲೂ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ, ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಈ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಐದನೇ ತರಗತಿಯ ನಂತರ ಒಂದು ಭಾಷೆಯಾಗಿ ಇಂಗ್ಲಿಷನ್ನು ಕಲಿಸಿದರೆ ಸಾಕು. ಅಲ್ಲಿಯವರೆಗೆ, ಅವಶ್ಯವೆನಿಸಿದಲ್ಲಿ ಮೌಖಿಕವಾದ ಕಲಿಕೆ ಇರಲಿ. ಈ ಹಂತ ದಾಟಿದ ಮಕ್ಕಳಿಗೆ ಭಾಷೆ-ಭಾಷೆಗಳಲ್ಲಿನ ವ್ಯತ್ಯಾಸಗಳನ್ನು ತಿಳಿ ಹೇಳುವುದೂ ಸುಲಭ ಮತ್ತು ಮಕ್ಕಳಿಗೆ ಅರ್ಥಮಾಡಿಕೊಳ್ಳುವುದೂ ಸುಲಭ. ಇದರಿಂದ ಕಲಿಕೆ ಗೊಂದಲ ಮುಕ್ತವಾಗುತ್ತದೆ.

ಬಹಳ ಮುಖ್ಯವಾದ ಅಂಶ – ಶಿಕ್ಷಕರು: ಸೂಕ್ತ ತರಬೇತಿ ಹೊಂದಿದ, ಆಸಕ್ತ ಹಾಗೂ ಸ್ಫೂರ್ತಿಯುತ ಶಿಕ್ಷಕರ ಪಡೆಯ ಆವಶ್ಯಕತೆಯಿದೆ. ಅಂತಹ ಶಿಕ್ಷಕರು ಇಲ್ಲವೆಂದಲ್ಲ, ಆದರೆ ಅವರ ಸಂಖ್ಯೆ ಹೆಚ್ಚಬೇಕಾಗಿದೆ. ಉತ್ತಮ ಶಿಕ್ಷಕರ ನೇಮಕಾತಿ, ಅವರಿಗೆ ಕಾಲಕಾಲಕ್ಕೆ ಸೂಕ್ತ ತರಬೇತಿಗಳನ್ನು ನೀಡುವುದು ಒಂದೆಡೆಯಾದರೆ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಬೇಕಾದಂತಹ ಲೌಕಿಕ ಸಲವತ್ತುಗಳನ್ನು ಒದಗಿಸುವುದೂ ಅತಿ ಮಹತ್ವದ ವಿಷಯ.

ಎಲ್ಲ ಇಲಾಖೆಗಳಲ್ಲಿ ಶೇ.20ರಷ್ಟು ಸಿಬ್ಬಂದಿ ನಿರುಪಯುಕ್ತ ಎನ್ನುವ ಮಾತಿದೆ. ಆದರೆ, ಶಿಕ್ಷಣ ಕ್ಷೇತ್ರದಲ್ಲಿಯೂ ಇದು ಸತ್ಯ. ಇಂತಹವರನ್ನು ಗುರುತಿಸಿ, ಸೂಕ್ತ ತರಬೇತಿಯನ್ನು ನೀಡಿ ವ್ಯವಸ್ಥೆಯನ್ನು ಸದೃಢಗೊಳಿಸಬೇಕಾದ ಆವಶ್ಯಕತೆಯಿದೆ. ಹಾಗೆಯೇ, ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರ ಮೇಲಿರುವ ಎಲ್ಲ ಅಶೈಕ್ಷಣಿಕ ಕಾರ್ಯಗಳಿಂದ ಅವರನ್ನು ಮುಕ್ತಗೊಳಿಸುವ ಕಾರ್ಯ ಕೂಡಲೇ ಆಗಬೇಕಿದೆ. ಶಿಕ್ಷಕರ ಏಕೈಕ ಕಾರ್ಯ–ಹೊಣೆಗಾರಿಕೆ ಎಂದರೆ ಮಕ್ಕಳಿಗೆ ಶಿಕ್ಷಣವನ್ನು ನೀಡುವುದು. ಉಳಿದ ಎಲ್ಲ ಕಾರ್ಯಕ್ಕೂ ಸರ್ಕಾರ ಬೇರೆ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು. ಇದು ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ.

ಇನ್ನು ಸರ್ಕಾರಿ ಶಾಲೆ ಎಂದ ಕೂಡಲೇ ಸಾಮಾನ್ಯವಾಗಿ ಜನರ ಕಣ್ಣಮುಂದೆ ಬರುವ ಚಿತ್ರ ‘ಸೋರುತಿಹುದು ಮನೆಯ ಮಾಳಗಿ.. ಹೊಸ್ತಿಲಲಿ ಹುಲ್ಲು ಹುಟ್ಟಿ’ ಎಂಬಂತಹ ಕಟ್ಟಡ! ಇಂತಹ ಕಟ್ಟಡಗಳು ಇಂದಿಗೂ ಇರುವುದು ನಿಜವಾದರೂ ಸಾಕಷ್ಟು ಬದಲಾವಣೆಗಳಾಗಿವೆ. ಒಳ‍್ಳೆಯ ಕಟ್ಟಡ, ಪೀಠೋಪಕರಣಗಳು, ಅತ್ಯಾಧುನಿಕ ಸವಲತ್ತಿನ ಸರ್ಕಾರಿ ಶಾಲೆಗಳಿವೆ. ಅವುಗಳನ್ನು ಹೊಂದಿಸಲು ಅಹರ್ನಿಶಿ ಶ್ರಮಪಟ್ಟಿರುವ, ಪಡುತ್ತಿರುವ ಶಿಕ್ಷಕವರ್ಗವೇ ಇದೆ. ಆದರೆ, ಇದನ್ನು ಶಿಕ್ಷಕರಿಗೇ ಬಿಡುವುದು ತರವಲ್ಲ. ಸರ್ಕಾರ ಸಮರೋಪಾದಿಯಲ್ಲಿ ಸರ್ಕಾರಿ ಶಾಲೆಗಳಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸಲೇಬೇಕು.

ಸರ್ಕಾರಿ ಶಾಲೆಗಳು ಈಗಾಗಲೇ ಹೇಳಿದಂತೆ ನಮ್ಮ ಆತ್ಮಗೌರವದ ಪ್ರತೀಕ. ಇದು ಸಮಾಜದಲ್ಲಿ ಮೇಲು ಕೀಳು, ಉಳ್ಳವ-ಬಡವ ಎಂಬ ತಾರತಮ್ಯಗಳನ್ನು ಅಳಿಸಿಹಾಕಲು ಇರುವ ಬಹುದೊಡ್ಡ ಅಸ್ತ್ರ. ಸರ್ಕಾರಿ ಶಾಲೆಗಳು ಸರಿಯಾದಲ್ಲಿ ದೇಶವೇ ಸರಿಯಾದ ಹಳಿಗಳ ಮೇಲೆ ಬಂದು ನಿಲ್ಲುತ್ತದೆ. ದೇಶಸೇವೆಯ ಬಹುದೊಡ್ಡ ಕೆಲಸ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಅಡಗಿದೆ ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ.

ಆಗಬೇಕಿರುವ ಇನ್ನು ಪ್ರಮುಖ ಕಾರ್ಯಗಳು:

* ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುವಂತೆ ಸರ್ಕಾರ ನಿಯಮಾವಳಿಗಳನ್ನು ರಚಿಸಬೇಕು. ಸರ್ಕಾರದಿಂದ ನಡೆಸಲಾಗುವ ಶಾಲೆಗಳನ್ನು ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಬಳಸಿಕೊಳ್ಳುವಂತಾಗಬೇಕು. ಆಗ ಜನಸಾಮಾನ್ಯರಿಗೆ ಇವುಗಳ ಮೇಲೆ ನಂಬಿಕೆ ಬರುತ್ತದೆ. ಇದರಿಂದ ಅವುಗಳ ಅಭಿವೃದ್ಧಿಯೂ ಸುಲಭವಾಗುತ್ತದೆ. ಅಲ್ಲಲ್ಲಿ, ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿರುವ ಉದಾಹರಣೆಗಳನ್ನು ಕಾಣುತ್ತಿದ್ದೇವೆ. ಇದು ವಿಪರೀತ ಹೆಚ್ಚಬೇಕು. ಇದಕ್ಕಾಗಿ ಕಾನೂನು ರಚನೆಯಾದರೂ ಸರಿಯೇ.

* ನಮ್ಮ ಅಂಗನವಾಡಿ ಕೇಂದ್ರಗಳು ಅನಾಥಾಲಯಗಳಂತಿವೆ ಎಂಬ ಮಾತಿದೆ. ಇದು ತಪ್ಪಿ ಎಲ್‍ಕೆಜಿ ಮತ್ತು ಯುಕೆಜಿಗಳಿಗಿಂತಲೂ ಚೆನ್ನಾಗಿ ಆಗಬೇಕು. ಆದರೆ, ಅಲ್ಲಿನ ಹೊರೆಯಿರದೆ, ಆ ವಯಸ್ಸಿನ ಮಕ್ಕಳಿಗೆ ತಕ್ಕುದಾದ ಶಿಕ್ಷಣವನ್ನು ವೈಜ್ಞಾನಿಕವಾಗಿ ಯುಕ್ತ ತರಬೇತಿ ಹೊಂದಿದ ಶಿಕ್ಷಕರಿಂದ ಆಗಬೇಕು.

* ಬಹುಮುಖ್ಯವಾದದ್ದು ಶೈಕ್ಷಣಿಕ ವಿಚಾರಗಳು. ಇವು ಗುಣಾತ್ಮಕವಾಗಿ ಅಭಿವೃದ್ಧಿಯಾಗಬೇಕು. ಪಠ್ಯಪುಸ್ತಕ, ಪಠ್ಯೇತರ ಕಾರ್ಯಗಳು ವೈಜ್ಞಾನಿಕವಾಗಿ ರಚಿತವಾಗಿ ಕಾಲ ಕಾಲಕ್ಕೆ ಬದಲಾಗಬೇಕು ಹಾಗೂ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ನಮ್ಮ ಅತಿ ಕಡಿಮೆ ಸೌಲಭ್ಯವಿರುವ ಹಳ‍್ಳಿಗಾಡಿನಲ್ಲಿ ಓದುತ್ತಿರುವ ವಿದ್ಯಾರ್ಥಿ ತೆರೆದುಕೊಳ‍್ಳುವಂತಿರಬೇಕು.

* ಸರ್ಕಾರಿ ಶಾಲೆಗಳ ಅಭಿವೃದ್ಧಿ ಮನೆಮಾತಾಗಬೇಕು. ದೊಡ್ಡಿಯಂತಿದೆ, ಎಂಬ ಮಾತು ಹೋಗಿ. ಸರ್ಕಾರಿ ಶಾಲೆ ಅಭಿವೃದ್ಧಿಯ ದ್ಯೋತಕವಾಗಬೇಕು. ಇದರಲ್ಲಿ ಸರ್ಕಾರದ ಪಾಲು ದೊಡ್ಡದು.

* ಜನರಲ್ಲಿ ಸರ್ಕಾರಿ ಶಾಲೆ ಎಂದರೆ ನಮ್ಮದು ಎಂಬ ಭಾವನೆ ಬರುವಂತೆ ಇವುಗಳನ್ನು ನಡೆಸಬೇಕು. ಇಂದು ಜನರ ಭಾಗವಹಿಸುವಿಕೆ ತೀರಾ ಕಡಿಮೆಯಿದೆ. ಇದು ಹೆಚ್ಚಾಗಬೇಕು. ಇಲ್ಲಿನ ಪೋಷಕರು ಎಷ್ಟೋ ಸಂದರ್ಭದಲ್ಲಿ ಅಶಿಕ್ಷಿತರು ಇಲ್ಲವೆ ಮೊದಲನೇ ಪೀಳಿಗೆ ಸಾಕ್ಷರರು. ಸುಶಿಕ್ಷಿತ ಪೋಷಕರ ಸಂಖ್ಯೆ ಹೆಚ್ಚಾದಂತೆ ಇಡೀ ವ್ಯವಸ್ಥೆಯೇ ಬದಲಾಗುತ್ತದೆ. ಸರ್ಕಾರ ಹಾಗೂ ಸಮಾಜ ಆ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕು.

* ಸರ್ಕಾರ ಮತ್ತು ಜನರು ಶಾಲೆಗೆ ಸಂಬಂಧಪಟ್ಟವರನ್ನು ಸದಾ ಶಾಲಾಭಿವೃದ್ಧಿಯ ಕಡೆಗೆ ತೊಡಗಿಕೊಳ್ಳುವಂತೆ ಮನವೊಲಿಸಬೇಕು. ಇವರು ಚಿತ್ರ ನಟರಿರಬಹುದು, ಯಾವುದೇ ಸೆಲಬ್ರಿಟಿಯಿರಬಹುದು, ಸಾಹಿತಿ–ಕಲಾವಿದ–ಕ್ರೀಡಾಪಟುಗಳಿರಬಹುದು. ಒಟ್ಟಾರೆ ಸರ್ಕಾರಿ ಶಾಲೆಯ ಮೇಲೆ ಪ್ರಭಾವ ಬೀರುವಂತಹ ಯಾರೇ ಆದರೂ ಅವರು ಸರ್ಕಾರಿ ಶಾಲೆಗಳ ಪರವಾಗಿ ಕೆಲಸ ಮಾಡುವಂತೆ ಮಾಡಬೇಕು.

ಜನರ ಮನಸ್ಸಿನಲ್ಲಿರುವ ಸರ್ಕಾರಿ ಶಾಲೆಯ ಕಲ್ಪನೆ ವಾಸ್ತವಸೂಚಿಯಲ್ಲ. ಇಂದು ಅನೇಕ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿರುವ ಸರ್ಕಾರಿ ಶಾಲೆಗಳಿವೆ. ಅವುಗಳಿಗೆ ಸಹಾಯ ಮಾಡುತ್ತಿರುವ ಸ್ವಯಂಸೇವಾ ಸಂಘಟನೆಗಳಿವೆ. ಹಣದ ವಿಚಾರವನ್ನೇ ಮಾತಾಡದೆ ಏನು ಸಾಧಿಸಬಹುದು ಎಂಬುದನ್ನು ತೋರಿಸಿದ ಅನೌಪಚಾರಿಕ ಸಂಸ್ಥೆಗಳಿವೆ. ಇವುಗಳಿಗೆ ಜನಬೆಂಬಲ ಅವಶ್ಯಕ. ಆಸಕ್ತರು ಈ ಜಾಲತಾಣವನ್ನು ನೋಡಬಹುದು. http://www.developschools.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT