ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಯ ಪಥಕ್ಕೆ ಯಶ್‌ಪಾಲ್ ದಿಕ್ಸೂಚಿ

Last Updated 27 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕಳೆದ ದಶಕದಲ್ಲೊಮ್ಮೆ ದೆಹಲಿಯಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ/ UGC) ಆಯೋಜಿಸಿದ್ದ ತರಬೇತಿಯೊಂದರಲ್ಲಿ ಭೌತಶಾಸ್ತ್ರಜ್ಞ ಯಶಪಾಲ್‌ರೊಂದಿಗೆ ಬೆರೆಯುವ ಅವಕಾಶವೊಂದು ಸಿಕ್ಕಿತ್ತು. ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದ ಅತ್ಯುನ್ನತ ಸ್ಥಾನಗಳನ್ನೆಲ್ಲ ಅದಾಗಲೇ ನಿರ್ವಹಿಸಿದ್ದ ಅವರು ಕೊಂಚವೂ ಬಿಗುಮಾನವಿಲ್ಲದೆ ಮಾತನಾಡಿದರು. ಹಿರಿಕಿರಿಯರೆಂದು ಬೇಧ ಮಾಡದೆ ತಮ್ಮ ವಿಚಾರಗಳನ್ನೆಲ್ಲ ಆಸ್ಥೆ ಮತ್ತು ಆಪ್ತತೆಯಿಂದ ಅವರು ಹಂಚಿಕೊಳ್ಳುತ್ತಿದ್ದ ರೀತಿಯೇ ಅನನ್ಯ. ಅದರೆ ವೈಜ್ಞಾನಿಕ ವಾಗ್ವಾದಗಳನ್ನು ಮಾತ್ರ ನಿಖರವಾಗಿ ಮತ್ತು ಅಗತ್ಯವಿದ್ದೆಡೆ ಕಟುವಾಗಿಯೂ ಮಂಡಿಸುತ್ತಿದ್ದ ಈ ಅಪ್ಪಟ ವಿಜ್ಞಾನಿಯ ಬೌದ್ಧಿಕಶ್ರದ್ಧೆಯು ಯಾರಾದರೂ ಗೌರವಿಸುವಂಥದ್ದಾಗಿತ್ತು. ಸ್ವತಂತ್ರ ಭಾರತದ ಶಿಕ್ಷಣ ಮತ್ತು ವಿಜ್ಞಾನ ಸಂವಹನದ ಕ್ಷೇತ್ರಗಳ ಸಾಕ್ಷಿಪ್ರಜ್ಞೆಯಂತೆಯೇ ಅವರು ಬದುಕಿದವರು. ಇಂಥ ಶ್ರೇಷ್ಠ ವಿಜ್ಞಾನಿ ಯಶಪಾಲ್ ತುಂಬು ಜೀವನ ನಡೆಸಿ, ಇತ್ತೀಚೆಗೆ ಕಣ್ಮರೆಯಾದರು (1926-2017). ಶಿಕ್ಷಣ ಕ್ಷೇತ್ರಕ್ಕೆ ಆರು ದಶಕಗಳ ಕಾಲ ಅವರು ನೀಡಿದ ಅಮೂಲ್ಯ ಮಾರ್ಗದರ್ಶನಕ್ಕೆ ದೇಶ ಸದಾ ಋಣಿಯಾಗಿರಲಿದೆ. ಅವರಿಗೆ ನೀಡಬಹುದಾದ ಹೃದಯಪೂರ್ವಕ ಶ್ರದ್ಧಾಂಜಲಿಯೆಂದರೆ ಬಹುಶಃ ಅವರು ಪ್ರತಿನಿಧಿಸುತ್ತಿದ್ದ ಮೌಲ್ಯಗಳನ್ನು ಶೈಕ್ಷಣಿಕ ಸಮುದಾಯ ಅಳವಡಿಸಿಕೊಳ್ಳುವುದೇ ಆಗಿದೆ.

ಯಶಪಾಲರನ್ನು ನೆನೆದಾಗಲೆಲ್ಲ ಅನಾಯಾಸವಾಗಿ ನೆನಪಾಗುವ ಮೂರು ಪ್ರಮುಖ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸುತ್ತ, ಶಿಕ್ಷಣಕ್ಷೇತ್ರವನ್ನು ಈ ಕುರಿತು ಚಿಂತನೆಗೆ ಪ್ರೇರೇಪಿಸುವುದು ಈ ಬರಹದ ಉದ್ದೇಶ. ಒಂದನೆಯದು: ಶೈಕ್ಷಣಿಕ ಸಂಸ್ಥೆಗಳ ಪರಿಣಾಮಕಾರಿ ನಿರ್ವಹಣೆಯನ್ನು ಕುರಿತಾಗಿ. ಎರಡನೆಯದು: ಶಿಕ್ಷಣಕ್ಷೇತ್ರಕ್ಕೆ ವೈಜ್ಞಾನಿಕ ದೃಷ್ಟಿ ಮತ್ತು ನೈತಿಕ ನೆಲೆಗಟ್ಟನ್ನು ಒದಗಿಸುವುದು. ಮೂರನೆಯದು: ಸಮಸ್ತರಿಗೂ ಸುಸ್ಥಿರ ಅಭಿವೃದ್ಧಿಯ ಪಥವನ್ನು ತೋರಿಸಲು ಜನವಿಜ್ಞಾನ ಮತ್ತು ವಿಜ್ಞಾನಸಂವಹನದ ಅಗತ್ಯವನ್ನು ಮನಗಾಣಿಸುವುದಕ್ಕೆ ಸಂಬಂಧಿಸಿದ್ದು.

ಶೈಕ್ಷಣಿಕ ಸಂಸ್ಥೆಗಳ ಚೈತನ್ಯಯುಕ್ತ ನಿರ್ವಹಣೆ: ಯಶಪಾಲ್ ದೇಶದ ಅನೇಕ ಸಾಂವಿಧಾನಿಕ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಾದವರು. ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾನಿಲಯದ ಕುಲಪತಿ, ಯುಜಿಸಿಯ ಅಧ್ಯಕ್ಷ, ಯೋಜನಾ ಆಯೋಗ ಮತ್ತು ವಿಜ್ಞಾನ ಇಲಾಖೆಗೆ ಸಲಹೆಗಾರ, ನ್ಯಾಶನಲ್ ಸೈನ್ಸ್ ಆಕಾಡೆಮಿಯ ಅಧ್ಯಕ್ಷ - ಹೀಗೆ ಹತ್ತಾರು. ದೇಶದ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರವನ್ನು ರೂಪಿಸುವ ಈ ಮಹತ್ತರ ಸ್ಥಾನಗಳಲ್ಲೆಲ್ಲ ಅವರು ಎಲ್ಲರಿಗೂ ಮಾದರಿಯಾಗುವಂಥ ಹೆಜ್ಜೆಗುರುತು ಬಿಟ್ಟುಹೋಗಿದ್ದಾರೆ. ಇದು ಅವರಲ್ಲಿದ್ದ ಪ್ರತಿಭೆ, ಶ್ರಮ, ಪ್ರಾಮಾಣಿಕತೆ ಹಾಗೂ ಶ್ರದ್ಧೆಯ ಪ್ರತೀಕ.

ಸರ್ಕಾರದ ಇಲಾಖೆಯಿರಲಿ ಅಥವಾ ಶಿಕ್ಷಣ ಸಂಬಂಧಿ ಸಂಸ್ಥೆಗಳೇ ಇರಲಿ, ಯಶಪಾಲ್ ತೋರಿದ ದಾರಿ ಮತ್ತು ದಿಕ್ಕು ಬಹುಸ್ಪಷ್ಟ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯೇ ಅವುಗಳ ಪರಮೋಚ್ಚ ಗುರಿಯಾಗಬೇಕು. ರಾಷ್ಟ್ರೀಯ ಸಂಸ್ಥೆಯಿರಲಿ, ಶಾಲಾ–ಕಾಲೇಜುಗಳಿರಲಿ ಅಥವಾ ತಜ್ಞಸಮಿತಿಯಾಗಲಿ - ಎಲ್ಲೆಡೆಯೂ ಆ ವಿಷಯಗಳಲ್ಲಿ ಪರಿಣತಿಯುಳ್ಳ ವಿಷಯತಜ್ಞರೇ ನಿರ್ಧಾರ ಕೈಗೊಳ್ಳಬೇಕು. ಸರ್ವರಿಗೂ ನ್ಯಾಯ ಒದಗಿಸಬಲ್ಲ ಹಾಗೂ ಪಾರದರ್ಶಕವಾದ ಸ್ಪಷ್ಟ ನೀತಿಯ ಆಧಾರದಲ್ಲೇ ಶಿಕ್ಷಣ ಹಾಗೂ ಸಂಶೋಧನೆಯ ಕ್ಷೇತ್ರಗಳು ಸಾಗಬೇಕು. ಸಂಸ್ಥೆಗಳ ಉದ್ದೇಶದಲ್ಲಿ ನೈತಿಕತೆ ಹಾಗೂ ನಿರ್ವಹಣೆಯಲ್ಲಿ ಸ್ವಾಯತ್ತತೆ ಸ್ಥಿರವಾಗಿರಬೇಕು. ಇವನ್ನೆಲ್ಲ ಅವರು ಹೇಳಿದ್ದಷ್ಟೇ ಅಲ್ಲ, ಅನುಸರಿಸಿ ತೋರಿದರು. ವಿಶ್ವವಿದ್ಯಾಲಗಳ ಸಂಶೋಧನಾ ಪ್ರಾಜೆಕ್ಟ್‌ಗಳನ್ನು ನಿಷ್ಕರ್ಷೆ ಮಾಡುವ ಸಂದರ್ಭಗಳಲ್ಲಿ, ಯುಜಿಸಿ ಮುಖ್ಯಸ್ಥರಾಗಿಯೂ ಅಧಿಕಾರ ತೋರದೆ ಓರ್ವ ವಿಜ್ಞಾನಿಯಾಗಿ ಮಾತ್ರ ಅಭಿಪ್ರಾಯ ನೀಡುತ್ತಿದ್ದುದನ್ನು ಅನೇಕ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರು ದಾಖಲಿಸಿದ್ದಾರೆ. ಸರ್ಕಾರಿ ಇಲಾಖೆಯಿಂದ ಶಾಲಾ–ಕಾಲೇಜುಗಳ ಹಂತದವರೆಗಿನ ಎಲ್ಲ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆಯಲ್ಲಿ ಈ ಬಗೆಯ ಶ್ರದ್ಧೆ, ಪ್ರಾಮಾಣಿಕತೆ ಮತ್ತು ವಸ್ತುನಿಷ್ಠತೆಯೇ ಇಂದಿನ ಅಗತ್ಯವಲ್ಲವೇ?

ವೈಜ್ಞಾನಿಕ ದೃಷ್ಟಿ ಮತ್ತು ನೈತಿಕ ನೆಲೆಗಟ್ಟು: ಶಿಕ್ಷಣಕ್ಷೇತ್ರವನ್ನು ನೈತಿಕ ನೆಲಗಟ್ಟಿನ ಮೇಲೆ ನಿಲ್ಲಿಸಿ, ಅದಕ್ಕೆ ವೈಜ್ಞಾನಿಕ ದೃಷ್ಟಿಕೋನವನ್ನು ನೀಡಿದರೆ ಮಾತ್ರ ಅದನ್ನು ವಿದ್ಯಾರ್ಥಿಕೇಂದ್ರಿತವಾಗಿಸಲು ಸಾಧ್ಯ. ‘ಮಕ್ಕಳು ಮೂಲತಃ ಕ್ರಿಯಾಶೀಲರೇ ಆಗಿರುತ್ತಾರೆ. ಶಿಕ್ಷಣವು ಅದನ್ನು ಗುರುತಿಸಿ, ಅವರಲ್ಲಿನ ಅಂತಃಶಕ್ತಿಯನ್ನು ಅರಳಿಸುವ ಕೆಲಸ ಮಾಡಬೇಕಷ್ಟೇ’ ಎಂದು ಅಬ್ದುಲ್ ಕಲಾಂ ಸದಾ ಹೇಳುತ್ತಿದ್ದುದು ಈ ಕಾರಣಕ್ಕಾಗಿಯೇ. ಬಹುಶಃ ಆಡಳಿತದ ಉನ್ನತ ಮಟ್ಟದಲ್ಲಿ ಯಶಪಾಲರಷ್ಟು ಪರಿಣಾಮಕಾರಿಯಾಗಿ ಈ ತತ್ವವನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದ ಸಮಕಾಲೀನ ಶಿಕ್ಷಣತಜ್ಞ ಬೇರೊಬ್ಬರಿರಲಿಕ್ಕಿಲ್ಲ.

ಪ್ರಾಥಮಿಕ ಶಾಲೆಯಿಂದ ಉನ್ನತ ಸಂಶೋಧನಾ ಸಂಸ್ಥೆಗಳವರೆಗೆ - ವಿದ್ಯಾರ್ಥಿಗಳು ಸ್ವತಂತ್ರವಾಗಿ ಆಲೋಚಿಸುವ ವಾತಾವರಣವನ್ನು ನಿರ್ಮಿಸುವುದೇ ಶಿಕ್ಷಕರ ಪ್ರಾಥಮಿಕ ಅದ್ಯತೆ ಎಂದು ಅವರು ಬಲವಾಗಿ ನಂಬಿದ್ದರು. ನಲಿಯುತ್ತಲೇ ಜ್ಞಾನದಿಗಂತವನ್ನು ವಿಸ್ತರಿಸುವುದು, ಕೌಶಲ ರೂಢಿಸಿಕೊಳ್ಳುವುದು ಹಾಗೂ ಜೀವನಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು – ಈ ಮೂರು ಅಂಶಗಳನ್ನು ಕಲಿಕಾಕ್ರಮದಲ್ಲಿ ಅಳವಡಿಸಿಕೊಳ್ಳಲು ಹಲವು ಆಯಾಮಗಳಲ್ಲಿ ಶ್ರಮಿಸಿದರು. 2005ರಲ್ಲಿ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರ ರೂಪಿಸಿದ ‘ರಾಷ್ಟ್ರಿಯ ಪಠ್ಯಕ್ರಮ ಚೌಕಟ್ಟು’ (NCF, 2005/ NCERT ) ಈ ದಿಕ್ಕಿನಲ್ಲಿಟ್ಟ ಮಹತ್ವದ ಹೆಜ್ಜೆ. ಕಂಠಪಾಠ, ಪರೀಕ್ಷೆಯ ಅಂಕಗಳ ಸಂಕೋಲೆಯಿಂದ ಕಲಿಕೆಯನ್ನು ಹೊರತಂದು, ಜ್ಞಾನಾಭಿವೃದ್ಧಿ ಮತ್ತು ನಿತ್ಯಬದುಕಿಗೆ ಜೋಡಿಸುವ ಪ್ರಯತ್ನ ಇದರಿಂದಾಯಿತು. ಮಕ್ಕಳನ್ನು ಸ್ವತಂತ್ರ ವ್ಯಕ್ತಿತ್ವದ ಚಿಂತಕರನ್ನಾಗಿ ರೂಪಿಸಲು, ಉನ್ನತ ಶಿಕ್ಷಣದಲ್ಲಿ ಸಂಶೋಧನೆಗೆ ಇನ್ನಷ್ಟು ಆದ್ಯತೆ ದೊರಕುವಂತಾಯಿತು. ಪ್ರಾಥಮಿಕ ಶಾಲೆಗಳ ತರಗತಿಯಲ್ಲೂ ಸುರುಳಿ ಕಲಿಕಾ ವಿಧಾನದಂಥ ಮಾದರಿಗಳು ಜೋಡಣೆಯಾದವು. ಬಹುಮಾಧ್ಯಮ ಕಲಿಕಾತಂತ್ರ ಬಳಕೆ ಹಾಗೂ ಸಮಗ್ರ ಮೌಲ್ಯಮಾಪನ ಪದ್ಧತಿ ಅಳವಡಿಕೆಯಾಗಲೂ ಬುನಾದಿಯಾಯಿತು.

ಶೈಕ್ಷಣಿಕ ವಾತಾವರಣದಲ್ಲಿ ಇವಿನ್ನೂ ವ್ಯಾಪಕವಾಗಿ ರಕ್ತಗತವಾಗಬೇಕಿದೆ. ವಿದ್ಯಾರ್ಥಿಗಳು ಆಡುತ್ತ, ನಲಿಯುತ್ತ ಕಲಿಯುವುದನ್ನು ಪೋಷಿಸುವ ಸಂವೇದನೆ ಎಲ್ಲರಲ್ಲೂ ಬರಬೇಕಿದೆ. ಪಠ್ಯಕ್ರಮದ ಕಲಿಕೆಯಲ್ಲಿ ವಿವಿಧ ಆಯಾಮಗಳನ್ನು ನಿರಂತರವಾಗಿ ಅಳವಡಿಸುವ ಪ್ರಯತ್ನವನ್ನು ಶಿಕ್ಷಕರು ಕೈಗೊಳ್ಳಬೇಕಿದೆ. ಯಶಪಾಲರೂ ಹಲವಾರು ಬಾರಿ ತಮ್ಮ ಭಾಷಣಗಳಲ್ಲಿ ಉದ್ಧರಿಸುತ್ತಿದ್ದ ಲೆಬನೀಸ್–ಅಮೆರಿಕನ್ ತತ್ವಶಾಸ್ತ್ರಜ್ಞ ಖಲೀಲ್ ಗಿಬ್ರಾನ್ ನೂರು ವರ್ಷಗಳ ಹಿಂದೆಯೇ ಹೇಳಿದ ಈ ಕೆಳಗಿನ ಮಾತುಗಳು ತುಂಬ ಪ್ರಸ್ತುತವೆನಿಸುತ್ತವೆ:

‘ನಮ್ಮ ಮಗು ನಮ್ಮದಷ್ಟೇ ಅಲ್ಲ, ಈ ಜಗತ್ತಿನದು ಕೂಡ!
ನಮ್ಮ ಆಲೋಚನೆಗಳನ್ನೆಲ್ಲ ಅವರಿಗೆ ತುಂಬಲಾರೆವು,
ಏಕೆಂದರೆ, ಅವರಿಗೂ ಅಗಾಧ ಯೋಚನಾಶಕ್ತಿಯಿದೆ! ಅವರು ಜಾಣರಾಗಲೇನೋ ಶ್ರಮಿಸೋಣ,
ಆದರೆ ನಮ್ಮ ಯಥಾಪ್ರತಿಗಳಂತಲ್ಲ!
ಅವರು ಜೀವಿಸಬೇಕಾದದ್ದು ಭವಿಷ್ಯದಲ್ಲಿ; ಅದೂ ಸ್ವತಂತ್ರವಾಗಿ!

ಜನವಿಜ್ಞಾನದ ಅರಿವೇ ಮೌಢ್ಯವನ್ನು ಓಡಿಸಬೇಕು:
ಕಳೆದ ಅರವತ್ತು ವರ್ಷಗಳಲ್ಲಿ ಯಶಪಾಲರು ಕೊಡುಗೆ ನೀಡಿದ ಇನ್ನೊಂದು ಕ್ಷೇತ್ರವೆಂದರೆ, ಜನವಿಜ್ಞಾನದ ತತ್ವಪ್ರಸರಣ. ಬಡತನ, ಅಜ್ಞಾನ, ಅಸಹಾಯಕತೆ - ಈ ಬಗೆಯ ಕಾರಣಗಳಿಗಾಗಿ ಭಾರತೀಯ ಸಮಾಜದ ಎಲ್ಲ ಸ್ತರಗಳಲ್ಲಿ ಮೌಢ್ಯ ವ್ಯಾಪಿಸಿರುವುದು ಎಲ್ಲರಿಗೂ ತಿಳಿದದ್ದೇ. ವಿದ್ಯಾವಂತಸಮಾಜವೂ ಇದಕ್ಕೆ ಹೊರತಲ್ಲ. ರೋಗಕ್ಕೆ ಔಷಧವನ್ನು ನೀಡಬೇಕಾದ ಸಂದರ್ಭದಲ್ಲಿ ಮೌಢ್ಯಕ್ಕೆ ಮೊರೆ ಹೋಗುವುದು, ಸಂಕಷ್ಟ ಬಂದಾಗ ದೆವ್ವಭೂತಗಳ ಕಾರಣ ಹುಡುಕುವುದು, ಇಂಥವು ಇಂದಿಗೂ ಇವೆ. ಅಂದರೆ, ಮಂಗಳನೆತ್ತರಕ್ಕೆ ಏರುವಷ್ಟು ವಿಜ್ಞಾನ-ತಂತ್ರಜ್ಞಾನ ಬೆಳೆದ ಈ ದಿನಗಳಲ್ಲೂ ಇದ್ಯಾವುದೂ ನಿಂತಿಲ್ಲ! ಸಮಾಜದಲ್ಲಿ ವೈಜ್ಞಾನಿಕ ಮನೋಭಾವದ ಕೊರತೆಯೇ ಇವಕ್ಕೆಲ್ಲ ಕಾರಣವಲ್ಲವೇ? ಈ ಕುರಿತಂತೆಲ್ಲ ಸಮಾಜದಲ್ಲಿ ಅರಿವು ಹೆಚ್ಚಿಸಲು ಯಶಪಾಲ್‌ ನಿರಂತರ ಶ್ರಮಿಸಿದರು. ಪುಸ್ತಕ, ಲೇಖನಗಳನ್ನು ಬರೆದರು. ದೇಶದ ಉದ್ದಗಲದಲ್ಲಿ ಉಪನ್ಯಾಸ ನೀಡಿದರು. ದೂರದರ್ಶನದಲ್ಲಿ ಅವರು ಪ್ರಸ್ತುತಪಡಿಸಿದ 'ಟರ್ನಿಂಗ್ ಪಾಯಿಂಟ್’ ಕಾರ್ಯಕ್ರಮವಂತೂ ಬಹು ಜನಪ್ರಿಯವಾಯಿತು. ಕೇಂದ್ರ ಸರ್ಕಾರದ ‘ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು’ (NSTC) ಮುಖ್ಯಸ್ಥರಾಗಿ, ವಿಜ್ಞಾನಲೋಕದ ಅರಿವು ಹೆಚ್ಚಿಸುವ ಅನೇಕ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳ ಮೂಲಕ ರೂಪಿಸಿದರು.

ನಮ್ಮ ಶಾಲಾ-ಕಾಲೇಜು-ವಿಶ್ವವಿದ್ಯಾನಿಲಯಗಳು ಈ ದಿಕ್ಕಿನಲ್ಲಿ ಸಾಧಿಸುವುದು ಇನ್ನೂ ಸಾಕಷ್ಟಿವೆ. ವೈಜ್ಞಾನಿಕ ಮನೋಭಾವವನ್ನು ಪಸರಿಸುವುದು, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಪ್ರಸ್ತುತ-ತಂತ್ರಜ್ಞಾನವನ್ನು ರೂಪಿಸುವುದು, ವೈಜ್ಞಾನಿಕ ಅನುಸಂಧಾನಗಳ ಫಲಶ್ರುತಿಯ ನಿರಂತರ ಸಂವಹನೆಯಂಥವು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮನಸಾರೆ ಕೈಜೋಡಿಸಿದರೆ ಮಾತ್ರ ಸುಲಭ. ಬದುಕಿನ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ಈ ಕಾಲದ ಪರಿಸರನಾಶದ ಸಮಸ್ಯೆಗಳಿಗೂ ಈ ಬಗೆಯ ವಿಜ್ಞಾನ ಸಂವಹನವೇ ಉತ್ತರ ದೊರಕಿಸಲು ಸಾಧ್ಯ.

ದೆಹಲಿಯಲ್ಲಿ ಭೇಟಿಯಾಗಿದ್ದಾಗ ಅವರು ಹೇಳಿದ್ದ ಮಾತೊಂದು ಈಗಲೂ ಕಿವಿಯಲ್ಲಿ ಅನುರಣಿಸುತ್ತಿದೆ; ಶಿಕ್ಷಕ ಸಮೂದಾಯಕ್ಕೆಲ್ಲ ಕಿವಿಮಾತಾಗಬಲ್ಲ ಹಿತನುಡಿಯದು. ’ಎಲ್ಲೆಡೆಯೂ ಆಗುತ್ತಿರುವ ಪರಿಸರನಾಶವನ್ನು ತಡೆಯಲು ಸರ್ಕಾರ ವಿಫಲವಾಗುತ್ತಿರುವಾಗ, ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಹೇಳುವ ಪರಿಸರಸಂರಕ್ಷಣೆ ಪಾಠ ಎಷ್ಟರಮಟ್ಟಿಗೆ ಪ್ರಸ್ತುತ?’ ಎಂಬರ್ಥದ ಪ್ರಶ್ನೆಯನ್ನು ಓರ್ವ ಪರಿಸರವಿಜ್ಞಾನ ಶಿಕ್ಷಕನ ಕಾಳಜಿಯಿಂದ ಕೇಳಿದ್ದೆ. ಅದಕ್ಕವರು ತಮ್ಮ ವಿಶಿಷ್ಟ ಧ್ವನಿಯಲ್ಲಿ ಸ್ಪಷ್ಟವಾಗಿ ಉತ್ತರಿಸಿದ್ದರು: ’ಮಿತ್ರಾ, ಸರ್ಕಾರದ ನೂನ್ಯತೆಗಳ ಪಟ್ಟಿಮಾಡುತ್ತಲೇ ಸಮಯ ಕಳೆಯುವುದು ಬೇಡ. ಬದಲಾಗಿ, ನಿಮ್ಮ ತರಗತಿಯನ್ನು ಪ್ರತಿದಿನವೂ ಪರಿಣಾಮಕಾರಿಯಾಗಿಸಲು ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸಿ. ಏಕೆಂದರೆ, ನೀವು ಪಾಠ ಮಾಡುವುದು ಮುಂದಿನ ತಲೆಮಾರುಗಳಿಗೆ. ತರಗತಿಗೊಬ್ಬ ಬದಲಾದರೂ ಈ ದೇಶದ ಭವಿಷ್ಯ ಬದಲಾಗಬಲ್ಲದು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT