ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಕ್ಕಟ್ಟಿನಲ್ಲಿ ಸಹಕಾರಿ ಸಂಸ್ಥೆಗಳು

Last Updated 27 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮನೋಹರ ಮಸ್ಕಿ
ಸಹಕಾರಿ ಸಂಸ್ಥೆಗಳ ಆಡಳಿತ ಹಿಡಿದವರು ನಿಜವಾಗಿಯೂ ಸಹಕಾರಿ ತತ್ವ ಪಾಲಿಸುತ್ತಿದ್ದಾರೆಯೇ? ರಾಜ್ಯದ 8000ಕ್ಕೂ ಹೆಚ್ಚು ಪತ್ತಿನ ಸಹಕಾರ ಸಂಘಗಳು ಹಾಗೂ 3000ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಸ್ಥೆಗಳು ಈಗ ಆದಾಯ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ. ಹೈದರಾಬಾದ್‌ನ ದಿ ಸಿಟಿಜನ್ ಕೋ-ಆಪರೇಟಿವ್ ಸೊಸೈಟಿ ವರ್ಸಸ್ ಆದಾಯ ತೆರಿಗೆ ಇಲಾಖೆಯ ಪ್ರಕರಣದಲ್ಲಿ ಇದೇಆಗಸ್ಟ್ 8 ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಹಕಾರ ಕ್ಷೇತ್ರದಲ್ಲಿ ತಲ್ಲಣ ಮೂಡಿಸಿದೆ.

ಈ ತೀರ್ಪು ಆದಾಯ ತೆರಿಗೆಗೆ ಮಾತ್ರ ಸಂಬಂಧಿಸಿಲ್ಲ. ಅದು ಸಹಕಾರಿ ಕಾಯ್ದೆ ಮತ್ತು ಅದರ ನಿಯಂತ್ರಕರನ್ನು ‘ನೀವು ಸಹಕಾರಿ ತತ್ವ ಪಾಲಿಸುತ್ತಿದ್ದೀರಾ’ ಎಂದು ಪ್ರಶ್ನಿಸಿದೆ. ನಿಜ, ದೇಶದ ಲಕ್ಷಾಂತರ ಸಹಕಾರಿ ಸಂಸ್ಥೆಗಳ ಜೊತೆ ಕರ್ನಾಟಕ ರಾಜ್ಯದಲ್ಲಿನ 8000ಕ್ಕೂ ಹೆಚ್ಚು ಪತ್ತಿನ ಸಹಕಾರ ಸಂಘಗಳು ಹಾಗೂ 3000ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಸ್ಥೆಗಳು ಆದಾಯ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಧುತ್ತನೆ ಎದುರಾಗಿದೆ. ಅದು ಹಿಂದಿನ ಎರಡೂ ವರ್ಷಕ್ಕೆ ವಿಸ್ತರಣೆ ಆದಲ್ಲಿ ಈ ಹನ್ನೊಂದು ಸಾವಿರ ಸಹಕಾರಿ ಸಂಸ್ಥೆಗಳಲ್ಲಿ ಶೇಕಡ 50ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳಿಗೆ ಸಂಕಷ್ಟದ ಸ್ಥಿತಿ ಬರಬಹುದು.

ಸಹಕಾರಿ ತತ್ವ ಎಂದರೇನು ಎಂಬುದನ್ನೂ ಸುಪ್ರೀಂ ಕೋರ್ಟ್ ಹೇಳಿದೆ. ಎಪ್ಪತ್ತು ವರ್ಷಗಳಿಂದ ನಮ್ಮ ಸಹಕಾರಿ ಕಾಯ್ದೆಗಳಲ್ಲಿದ್ದ ಸದಸ್ಯ- ಸಹಸದಸ್ಯ- ನಾಮಮಾತ್ರ ಸದಸ್ಯ ಎಂಬ ಬೇರೆ - ಬೇರೆ ದರ್ಜೆಗಳ ಸದಸ್ಯತ್ವ ವ್ಯವಸ್ಥೆ ಸಹಕಾರಿ ತತ್ವಕ್ಕೆ ಬದ್ಧವಾಗಿಲ್ಲ ಎಂದೂ ಅಭಿಪ್ರಾಯಪಟ್ಟಿದೆ. ಆದಾಯ ತೆರಿಗೆ ಕಾಯ್ದೆಯ ಕಲಂ 80ಪಿ ಪ್ರಕಾರ ಸಹಕಾರಿ ಸಂಸ್ಥೆಗಳು (ಸಹಕಾರಿ ಬ್ಯಾಂಕು- ಮಾರಾಟ ಸಹಕಾರಿ ಸಂಘಗಳನ್ನು ಹೊರತುಪಡಿಸಿ) ಗಳಿಸಿದ ಆದಾಯಕ್ಕೆ ಆದಾಯ ತೆರಿಗೆ ಕಟ್ಟಬೇಕಾಗಿರಲಿಲ್ಲ. ಆದರೆ ಈಗ ಸುಪ್ರೀಂ ಕೋರ್ಟ್ ಈ ಸೌಲಭ್ಯಕ್ಕೆ ಕತ್ತರಿ ಹಾಕಿದೆ.

ಪ್ರಸ್ತುತ ಸಹಕಾರಿ ಕಾಯ್ದೆಗಳಲ್ಲಿ ಮೂರು ರೀತಿಯಸದಸ್ಯತ್ವದ ಅವಕಾಶವಿದೆ. ಮೊದಲ ದರ್ಜೆಯವರಾದ ಸಾಮಾನ್ಯ ಸದಸ್ಯರಿಗೆ ಮಾತ್ರ ಮತದಾನದ ಹಕ್ಕಿದೆ, ಉಳಿದ ಎರಡು ದರ್ಜೆಯವರಾದ ಸಹಸದಸ್ಯ- ನಾಮಮಾತ್ರ ಸದಸ್ಯರಿಗೆ ಆಡಳಿತ ಮಂಡಳಿಯನ್ನು ಚುನಾಯಿಸುವ ಮತದಾನದ ಹಕ್ಕನ್ನು ಸಹಕಾರಿ ಕಾಯ್ದೆಗಳು ನೀಡುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಸಹಕಾರಿ ಸಂಸ್ಥೆಗಳು, ತಮ್ಮ ಬಹುಪಾಲು ವ್ಯವಹಾರವನ್ನು ಎರಡನೇ ದರ್ಜೆಯ ಸದಸ್ಯರಾದ ಸಹ ಸದಸ್ಯ-ನಾಮಮಾತ್ರ ಸದಸ್ಯರ ಜೊತೆ ಮಾಡುತ್ತಿವೆ.

ಇದರೊಂದಿಗೆ ಇ-ಸ್ಟ್ಯಾಂಪಿಂಗ್, ಬಸ್- ರೈಲ್ವೆ ಟಿಕೆಟ್ ಬುಕಿಂಗ್‌ನಂತಹ ವ್ಯವಹಾರಗಳನ್ನು ಸಾರ್ವಜನಿಕರೊಂದಿಗೂ ನಡೆಸುತ್ತಿವೆ. ಇವು, ಸದಸ್ಯೇತರರ ವ್ಯವಹಾರಗಳಿಂದ ಗಳಿಸಿದ ಆದಾಯಕ್ಕೆ ತೆರಿಗೆಕಟ್ಟಿ, ಉಳಿದ ಮತದಾನದ ಹಕ್ಕಿಲ್ಲದ ಎರಡನೇ ದರ್ಜೆಯ ಸದಸ್ಯರೊಂದಿಗೆ ನಡೆಸಿದ ವ್ಯವಹಾರಗಳಿಂದ ಗಳಿಸಿದ ಆದಾಯದ ಮೇಲೆ ಸಹಕಾರಿ ಸಂಸ್ಥೆಗಳಿಗೆ ಅನ್ವಯವಾಗುವ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುತ್ತಿದ್ದವು.

ದಿ ಸಿಟಿಜನ್ ಕೋ-ಆಪರೇಟಿವ್ ಸೊಸೈಟಿ ವರ್ಸಸ್ ಆದಾಯ ತೆರಿಗೆ ಇಲಾಖೆಯ ಪ್ರಕರಣ ದಲ್ಲಿ ಸುಪ್ರಿಂ ಕೋರ್ಟ್, ‘ಆದಾಯ ತೆರಿಗೆ ಕಾಯ್ದೆಯ ಕಲಂ 80ಪಿ ಅಡಿ ನೀಡಿರುವ ವಿನಾಯಿತಿಯು ಪರಸ್ಪರ ಸಹಕಾರ ತತ್ವದಡಿ ಮತ್ತು ಲಾಭದ ಉದ್ದೇಶವಲ್ಲದ ಚಟುವಟಿಕೆಗಳಿಗಾಗಿ ನೀಡಿದ ವಿನಾಯಿತಿ ಆಗಿದೆ’ ಎಂದು ಹೇಳಿದೆ. ‘ಈ ಸಹಕಾರ ಸಂಸ್ಥೆಯು ಸಾಮಾನ್ಯ ಸದಸ್ಯರಲ್ಲದೆ ನಾಮಮಾತ್ರ ಸದಸ್ಯರ ಜೊತೆಯೂ ವ್ಯವಹಾರ ಮಾಡುತ್ತಿದೆ. ಮತದಾನದ ಹಕ್ಕಿಲ್ಲದ ಇಂತಹ ಎರಡನೇ ದರ್ಜೆಯ ಸದಸ್ಯರಿಂದ ಠೇವಣಿ ಪಡೆದು, ಸಾಲ ನೀಡಿ ಲಾಭ ಮಾಡುತ್ತಿದೆ. ಈ ಸಂಘದ ಬಹುಪಾಲು ಲಾಭವು ಇಂತಹ ವ್ಯವಹಾರದಿಂದಲೇ ಬಂದಿದೆ’ ಎಂದೂ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಸಹಕಾರಿ ಸಂಸ್ಥೆಗಳು ಹೀಗೆ ಮಾಡುವ ಮೂಲಕ ಲಾಭ ಗಳಿಸುವ ಉದ್ದೇಶದ ಹಣಕಾಸು ಸಂಸ್ಥೆಗಳೇ ಹೊರತು ಸಹಕಾರಿ ಸಂಸ್ಥೆಗಳಾಗಿ ಉಳಿದಿಲ್ಲ. ಆದ್ದರಿಂದ ಸಹಕಾರಿ ಕಾಯ್ದೆಯಡಿ ನೋಂದಣಿಯಾಗಿದ್ದರೂ ಇದು ಆದಾಯ ತೆರಿಗೆ ವಿನಾಯಿತಿಗೆ ಅರ್ಹವಲ್ಲ ಎಂದು ಹೇಳಿದೆ.

ಈ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನ ಸಹಕಾರ ಸಂಸ್ಥೆಗಳ ಬಗೆಗೆ ನೋಡುವುದಾದರೆ ಇ-ಸ್ಟ್ಯಾಂಪಿಂಗ್ ವ್ಯವಹಾರಗಳನ್ನು ನಮ್ಮ ಸಹಕಾರಿ ಸಂಘಗಳು ಸಾರ್ವಜನಿಕರೊಂದಿಗೂ ಮಾಡುತ್ತಿವೆ. ಅಲ್ಲದೇ, ಎರಡನೇ ದರ್ಜೆಯ ಸದಸ್ಯರೊಂದಿಗಿನ ವ್ಯವಹಾರದ ಪ್ರಮಾಣವು ಬಹಳ ದೊಡ್ಡ ಗಾತ್ರದಲ್ಲಿದೆ. ಅವೆಲ್ಲಾ ಈಗ ಸುಪ್ರೀಂ ಕೋರ್ಟ್ ಆದೇಶದಿಂದ ಅಪಾಯಕ್ಕೆ ಸಿಲುಕಿವೆ.

ನಮ್ಮ ಸಹಕಾರಿ ಕಾನೂನುಗಳು ಎರಡನೇ ದರ್ಜೆಯ ಸದಸ್ಯತ್ವಕ್ಕೆ ಏಕೆ ಅವಕಾಶ ನೀಡಿವೆ? ನಿಯಂತ್ರಣದ ಅಧಿಕಾರ ಹೊಂದಿರುವ ಸಹಕಾರಿ ಇಲಾಖೆ ಇಂತಹ ಎರಡನೇ ದರ್ಜೆಯ ಸದಸ್ಯತ್ವಗಳನ್ನು ಅವುಗಳ ಮಿತಿಗಳಿಗೆ ಸೀಮಿತವಾಗಿರುವಂತೆ ಮಾಡಿ, ಸಹಕಾರಿ ತತ್ವ ಎತ್ತಿ ಹಿಡಿಯುವಲ್ಲಿ ಸೋತಿದೆಯೇ? ಸಹಕಾರಿ ಸಂಸ್ಥೆಗಳ ಆಡಳಿತ ಹಿಡಿದವರು ಮತ್ತು ಸಹಕಾರಿಗಳೆಂದು ಕರೆಸಿಕೊಳ್ಳುತ್ತಿರುವವರು ನಿಜವಾಗಿಯೂ ಸಹಕಾರಿ ತತ್ವ ಪಾಲಿಸುತ್ತಿದ್ದಾರೆಯೇ?

ಈ ಮೂರೂ ಪ್ರಶ್ನೆಗಳಿಗೆ ಸಹಕಾರಿಗಳು ಮತ್ತು ಸರ್ಕಾರ ಗಂಭೀರವಾಗಿ ಆದಷ್ಟೂ ಶೀಘ್ರವಾಗಿ ಉತ್ತರ ಕಂಡುಕೊಳ್ಳಬೇಕಿದೆ. ತೆರಿಗೆ ಅಧಿಕಾರಿಗಳು ನಮ್ಮ ಸಹಕಾರಿ ಸಂಸ್ಥೆಗಳ ಬಾಗಿಲು ತಟ್ಟುವ ಮುನ್ನ ಈ ಆತ್ಮವಿಮರ್ಶೆ ನಡೆಯಬೇಕಿದೆ. ಸಹಕಾರಿ ತತ್ವ ಎಂದರೇನು ಎಂಬ ಚರ್ಚೆ ಸಹಕಾರಿ ಕಾಯ್ದೆಯ ವ್ಯಾಪ್ತಿಯೊಳಗೆ ನಡೆಯದೆ, ಆದಾಯ ತೆರಿಗೆ ವ್ಯಾಪ್ತಿಯೊಳಗೆ ನಡೆದ ವಿಪರ್ಯಾಸಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕಿದೆ.
ಆದರೆ, ಯಾವ ಸಂಸ್ಥೆ ನಿಜವಾದ ಸಹಕಾರಿ ತತ್ವವನ್ನು ಪಾಲಿಸಿದೆಯೋ ಅದು ಈಗಲೂ ಮುಗುಳು ನಗುತ್ತಾ ಮುಂದೆ ಸಾಗಬಹುದು.
 

ಲೇಖಕ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT