ದೇಶಿ ಬಂಡವಾಳ ಹೂಡಿಕೆ ಹೆಚ್ಚಳ

ಷೇರುಪೇಟೆಯ ಚಟುವಟಿಕೆ ಎಷ್ಟು ಬೇಗ ಬದಲಾವಣೆ ಪ್ರದರ್ಶಿಸುತ್ತದೆ ಎಂದರೆ ಇತ್ತೀಚಿನವರೆಗೂ ಭಾರತೀಯ ಷೇರುಪೇಟೆಗಳು ಹೆಚ್ಚಾಗಿ ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯನ್ನೇ ಆಧರಿಸಿ ಸೂಚ್ಯಂಕಗಳ, ಷೇರುಗಳ ಬೆಲೆಗಳಲ್ಲಿ ಏರುಪೇರಾಗುತ್ತಿತ್ತು.

ಸಾಂದರ್ಭಿಕ ಚಿತ್ರ

ಷೇರುಪೇಟೆಯ ಚಟುವಟಿಕೆ ಎಷ್ಟು ಬೇಗ ಬದಲಾವಣೆ ಪ್ರದರ್ಶಿಸುತ್ತದೆ ಎಂದರೆ ಇತ್ತೀಚಿನವರೆಗೂ ಭಾರತೀಯ ಷೇರುಪೇಟೆಗಳು ಹೆಚ್ಚಾಗಿ ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯನ್ನೇ ಆಧರಿಸಿ ಸೂಚ್ಯಂಕಗಳ, ಷೇರುಗಳ ಬೆಲೆಗಳಲ್ಲಿ ಏರುಪೇರಾಗುತ್ತಿತ್ತು. 

ಆದರೆ ಈ ತಿಂಗಳಲ್ಲಿ ಸತತವಾದ ಮಾರಾಟದ ಹಾದಿಯಲ್ಲಿದ್ದರು ಸಹ ಸೂಚ್ಯಂಕಗಳು, ಷೇರಿನ ಬೆಲೆಗಳು ಉತ್ತಮ ಸ್ಥಿತಿ, ಸ್ಥಿರತೆ ಕಂಡುಕೊಂಡಿರುವುದು ವಿಸ್ಮಯಕಾರಿ ಅಂಶವೆನಿಸುತ್ತದೆ. ಇದಕ್ಕೆ ಮೂಲಕಾರಣ ದೇಶಿ ವಿತ್ತೀಯ ಸಂಸ್ಥೆಗಳ ಮೂಲಕ ಪೇಟೆಗೆ ಹರಿದುಬರುತ್ತಿರುವ ಹಣ, ಸಣ್ಣ ಹೂಡಿಕೆದಾರರಿಗೆ ಷೇರುಪೇಟೆ ಬಗ್ಗೆ  ಮೂಡುತ್ತಿರುವ ಆಸಕ್ತಿಯ ಜೊತೆಗೆ ಬ್ಯಾಂಕ್ ಬಡ್ಡಿ ದರಗಳ ಇಳಿಕೆಯು ಸಹ ಸೇರಿದೆ.

ಈ ವಾರವೂ ಸಹ ನಾಲ್ಕು ದಿನಗಳ ವಹಿವಾಟು ನಡೆದು ಸೂಚ್ಯಂಕಗಳಲ್ಲಿ ಸ್ಥಿರತೆ ಕಂಡುಬಂದರೂ ಹೆಚ್ಚಿನ ಕಂಪೆನಿಗಳ ಷೇರಿನ ಬೆಲೆಗಳಲ್ಲಿ ಉತ್ತಮ ಏರಿಕೆ ಪ್ರದರ್ಶಿತವಾಯಿತು.  ಇದರಲ್ಲಿ ಅನೇಕ ಅಗ್ರಮಾನ್ಯ ಕಂಪೆನಿಗಳು, ಸಾರ್ವಜನಿಕ ವಲಯದ ಕಂಪೆನಿಗಳು ಸೇರಿವೆ.

ಷೇರಿನ ಬೆಲೆಗಳ ಏರಿಕೆಯಲ್ಲಿ ಕೇವಲ ಕಂಪೆನಿಗಳ ಆಂತರಿಕ ಸಾಧನೆಯೊಂದೇ ಕಾರಣವಾಗಿರದೆ, ಕಂಪೆನಿಗಳ ಘನತೆ, ಪ್ರತಿಷ್ಠೆಗಳು (ಬ್ರ್ಯಾಂಡ್‌ ) ಸಹ ಹೆಚ್ಚಿನ ಕೊಡುಗೆ ನೀಡುವುದು ಇತ್ತೀಚಿನ ವಾಡಿಕೆಯಾಗಿದೆ.

ಬಾಂಬೆ ಡೈಯಿಂಗ್ ಕಂಪೆನಿಯ ಸಾಧನೆ ಕಳೆದ ತ್ರೈಮಾಸಿಕದಲ್ಲಿ  ಉತ್ತಮವಾಗಿಲ್ಲವೆಂಬ ಕಾರಣಕ್ಕೆ ಬೆಲೆ ಕುಸಿತ ಕಂಡಿತ್ತು,  ಆದರೆ ಈವಾರ ಷೇರು ₹77 ರ ಸಮೀಪದಿಂದ ₹85 ರ ಸಮೀಪಕ್ಕೆ ಜಿಗಿಯಿತು. ವಿವಿಧ ಕಾರಣಗಳಿಂದ ಸತತವಾದ ಇಳಿಕೆಗೊಳಗಾಗಿದ್ದ, ಸಂವೇದಿ ಸೂಚ್ಯಂಕದ ಭಾಗವಾದ ಲುಪಿನ್  ಷೇರು ಈ ವಾರದಲ್ಲಿ ₹920 ರ ಸಮೀಪದ ಕನಿಷ್ಟದಿಂದ ₹998 ರವರೆಗೂ ಏರಿಕೆ ಕಂಡು ₹991 ರ ಸಮೀಪ ವಾರಾಂತ್ಯಕಂಡಿತು. ಫಲಿತಾಂಶದ ನಂತರದಲ್ಲಿ ₹110 ರ ಸಮೀಪದಿಂದ ₹91 ರವರೆಗೂ ಕುಸಿತ ಕಂಡಿದ್ದ ಮಣ್ಣಾಪುರಂ ಫೈನಾನ್ಸ್ ಷೇರು  ಈ ವಾರ ಚೇತರಿಕೆ ಕಂಡು ₹98 ರವರೆಗೂ ಏರಿಕೆ ಕಂಡಿತು.

ಸರ್ಕಾರಿ ವಲಯದ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪೆನಿ ಪ್ರತಿ ಷೇರಿಗೆ ₹21 ರ ಲಾಭಾಂಶದ ನಂತರದ ವಹಿವಾಟಿನಲ್ಲಿ ಈ ತಿಂಗಳ 14  ರಂದು ಷೇರಿನ ಬೆಲೆಯೂ ₹ 395ಕ್ಕೆ ತಲುಪಿದ್ದು ನಂತರದ ದಿನಗಳಲ್ಲಿ ಅಂದರೆ ಗುರುವಾರ 24 ರಂದು ಷೇರಿನ ಬೆಲೆಯು ₹428 ರವರೆಗೂ ಜಿಗಿತ ಕಂಡಿರುವುದು,   ಪೇಟೆಯಲ್ಲಿ ಉತ್ತಮ ಕಂಪೆನಿಗಳು ಕುಸಿತದಲ್ಲಿದ್ದಾಗ ನೀಡಬಹುದಾದ ಲಾಭದ ಇಳುವರಿಯ ಪ್ರಮಾಣ ತಿಳಿಸುತ್ತದೆ. ಇಲ್ಲಿ ಲಾಭಾಂಶ ನಂತದಲ್ಲೂ ಹೆಚ್ಚಿನ ಅವಕಾಶ ಕಲ್ಪಿಸಿಕೊಟ್ಟಿದೆ. ಇದರೊಂದಿಗೆ ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗಳು ಸಹ ಹೆಚ್ಚಿನ ಏರಿಳಿತ ಪ್ರದರ್ಶಿಸಿವೆ.

ಪ್ರತಿ ಷೇರಿಗೆ ₹10 ರ ಲಾಭಾಂಶ ವಿತರಿಸಲು ಸೆಪ್ಟೆಂಬರ್ 19 ನಿಗದಿತ ದಿನವಾಗಿರುವ ಕಾರಣ, ದಿವೀಸ್ ಲ್ಯಾಬೊರೇಟರೀಸ್ ಷೇರಿನ ಬೆಲೆಯು ₹617 ರ ಸಮೀಪದಿಂದ ₹676 ರವರೆಗೂ ಚಿಮ್ಮಿತು. ಈ ಷೇರಿನ ಬೆಲೆಯು ಜುಲೈ 10 ರಂದು ಕಂಪೆನಿಯ ವಿಶಾಖಪಟ್ಟಣದ ಘಟಕದ ಮೇಲೆ ವಿಧಿಸಿದ್ದ 'ಇಂಪೋರ್ಟ್ ಅಲ್ಲರ್ಟ್' ಅನ್ನು ಹಿಂತೆಗೆದುಕೊಂಡಿದೆ ಎಂದು ಷೇರಿನ ಬೆಲೆಯು ಅಂದು ₹682 ರ ಸಮೀಪದಿಂದ  ₹816  ನ್ನು ದಾಟಿ ಅಂದೇ ₹734ರ ಸಮೀಪ ಕೊನೆಗೊಂಡಿತು.

ಸೆಂಟ್ರಲ್ ಡೆಪಾಜಿಟರಿ ಸರ್ವಿಸಸ್ ಲಿ ಕಂಪೆನಿ ಷೇರಿನ ಬೆಲೆಯು ₹320 ರ ಸಮೀಪದಿಂದ ₹344 ರ ಸಮೀಪಕ್ಕೆ ಸೋಮವಾರ ಜಿಗಿತ ಕಂಡು ತನ್ನ ಸ್ಥಿರತೆಯನ್ನು ಕಾಪಾಡಿಕೊಂಡಿತು.  ಗೇಲ್ ಇಂಡಿಯಾ  ಷೇರಿನ ಬೆಲೆಯು ₹ 375 ರ ಸಮೀಪದಿಂದ ₹390ರವರೆಗೂ ಜಿಗಿತ ಕಂಡಿತು. ತಾಂತ್ರಿಕ ವಲಯದ ಅಪ್ಟೆಕ್ ಲಿಮಿಟೆಡ್ ಷೇರಿನ ಬೆಲೆಯು ₹226 ರ ಸಮೀಪದಿಂದ ಒಂದೇ ವಾರದಲ್ಲಿ ₹319 ರ ವಾರ್ಷಿಕ ಗರಿಷ್ಠ ತಲುಪಿರುವುದು ಪೇಟೆಯಲ್ಲಿ ಅನಿರೀಕ್ಷಿತ ಅವಕಾಶಗಳಿಗೆ ಹಿಡಿದ ಕನ್ನಡಿಯಾಗಿದೆ.

ಒಟ್ಟಾರೆ 71 ಅಂಶಗಳ ಏರಿಕೆ ಕಂಡ ಸಂವೇದಿ ಸೂಚ್ಯಂಕ ತನ್ನೊಂದಿಗೆ ಮಾಧ್ಯಮ ಶ್ರೇಣಿ ಸೂಚ್ಯಂಕ 43 ಅಂಗಳ ಮತ್ತು ಕೆಲ ಮಾಧ್ಯಮ ಶ್ರೇಣಿ ಸೂಚ್ಯಂಕ 28 ಅಂಗಳ ಏರಿಕೆ ಕಾಣುವಂತೆ ಮಾಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ₹4,666 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,883 ಕೋಟಿ ಮೌಲ್ಯದ ಷೇರನ್ನು ಖರೀದಿಸಿವೆ. ಪೇಟೆಯ ಬಂಡವಾಳ ಮೌಲ್ಯ ₹130.03 ಲಕ್ಷ ಕೋಟಿಯಲ್ಲಿ ಸ್ಥಿರತೆ ಕಂಡಿತ್ತು.

ಲಾಭಾಂಶ: ಕೇರ್ ರೇಟಿಂಗ್ಸ್ ಪ್ರತಿ ಷೇರಿಗೆ  ₹6,  ಪ್ರಾಕ್ಟರ್ ಅಂಡ್ ಗ್ಯಾಂಬಲ್ ₹27, ಕ್ಯಾಸ್ಟ್ರಾಲ್ ₹5 ರ ಮುಖ ಬೆಲೆ ಷೇರಿಗೆ ₹4.50, (ನಿ ದಿ: ಡಿಸೆಂಬರ್ 31),  ಜಿಲ್ಲೆಟ್ ಇಂಡಿಯಾ ಪ್ರತಿ ಷೇರಿಗೆ ₹10.

ಬೋನಸ್ ಷೇರು: ಶಿವಾಲಿಕ್ ಬೈ ಮೆಟಲ್ ಕಂಟ್ರೊಲ್ಸ್ ಲಿಮಿಟೆಡ್ ಕಂಪೆನಿ 1:1 ರ ಅನುಪಾತದ ಬೋನಸ್ ಪ್ರಕಟಿಸಿದೆ.

ಮುಖಬೆಲೆ ಸೀಳಿಕೆ: ನೆಸ್ಕೊ ಲಿಮಿಟೆಡ್ ಕಂಪೆನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ  ಸೀಳಲು ಸೆಪ್ಟೆಂಬರ್ 18 ನಿಗದಿತ ದಿನ.

ಡೆಕ್ಕನ್ ಸಿಮೆಂಟ್ಸ್ ಲಿ ಕಂಪೆನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲು ಸೆಪ್ಟೆಂಬರ್ 12 ನಿಗದಿತ ದಿನ.

ಷೇರು ಮರು ಖರೀದಿ:  ಶೋಭಾ ಲಿಮಿಟೆಡ್ ಕಂಪೆನಿ ತನ್ನ ಬಂಡವಾಳದ ಶೇ1.5 ರಷ್ಟು ಷೇರುಗಳನ್ನು, ಪ್ರತಿ ಷೇರಿಗೆ ₹425 ರಂತೆ ಮರು ಖರೀದಿ ಮಾಡಲು  ಈ ತಿಂಗಳ 28 ನಿಗದಿತ ದಿನ.

ಕಂಪೆನಿ ಹೆಸರಿನ ಬದಲಾವಣೆ: ಸ್ಪಾನ್ ಡಯಾಗ್ನಸ್ಟಿಕ್ಸ್ ಲಿಮಿಟೆಡ್ ಕಂಪೆನಿ ಹೆಸರನ್ನು ಸ್ಪ್ಯಾನ್ ಡೈವರ್ಜಂಟ್ ಲಿಮಿಟೆಡ್ ಎಂದು ಬದಲಿಸಲಾಗಿದೆ.

ಬಿಲ್ವಾರಟೆಕ್ಸ್ ಫಿನ್ ಲಿಮಿಟೆಡ್ ಕಂಪೆನಿ ಹೆಸರನ್ನು ಕ್ಯಾಪಿಟಲ್ ಇಂಡಿಯಾ ಫೈನಾನ್ಸ್ ಲಿಮಿಟೆಡ್ ಎಂದು ಬದಲಿಸಲಾಗಿದೆ.ಅರ್ಟೆಕ್ ಪವರ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪೆನಿ ಹೆಸರನ್ನು ಅರ್ಟೆಕ್ ಪರ ಅಂಡ್ ಟ್ರೇಡಿಂಗ್ ಲಿಮಿಟೆಡ್ ಎಂದು ಬದಲಿಸಲಾಗಿದೆ.

ವಾರದ ವಿಶೇಷ
ಷೇರುಪೇಟೆ ಎಂಬ ಚಕ್ರವ್ಯೂಹದೊಳಗೆ ಪ್ರವೇಶಿಸುವ  ಧೈರ್ಯ, ಸಾಮರ್ಥ್ಯ, ಕೌಶಲಗಳು ಹೂಡಿಕೆದಾರರಲ್ಲಿದ್ದು ಅದನ್ನು ಅಳವಡಿಸಿಕೊಂಡಿರುತ್ತಾರೆ.  ಆದರೆ ಆ ಚಕ್ರವ್ಯೂಹದಿಂದ ಹೊರಬರಲು ಯೋಜಿಸದೆ ಕೇವಲ ಅಭಿಮನ್ಯುಗಳಂತಿರುತ್ತಾರೆ. ಆದರೆ ಪೇಟೆಯಲ್ಲಿ ಹೂಡಿಕೆ ಮಾಡುವ ಮೂಲ ಉದ್ದೇಶ ಲಾಭ ಗಳಿಕೆ ಎಂಬುದನ್ನು ಮರೆತು, ಕೆಲವು ಬಾರಿ ಷೇರುಗಳೊಂದಿಗೆ ಭಾವನಾತ್ಮಕ ಬೆಸುಗೆಯ ಕಾರಣ, ಆಕರ್ಷಕ ಲಾಭ ಗಳಿಕೆಯ ಅವಕಾಶಗಳಿಂದ ವಂಚಿತರಾಗುತ್ತಾರೆ.

ಇಂದಿನ ಪೇಟೆಗಳಿಗೆ ಚಕ್ರವ್ಯೂಹದೊಳಗೆ ಪ್ರವೇಶಿಸಿ, ಅವಕಾಶವಿದ್ದಾಗ ಹೊರಬರುವ ಅರ್ಜುನನ  ನೈಪುಣ್ಯತೆಯು ಅತ್ಯವಶ್ಯಕವಾಗಿದೆ.  ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹಿಂದಿನವಾರ ಇನ್ಫೋಸಿಸ್ ಕಂಪೆನಿ ಷೇರು 17 ರಂದು ₹1,028 ಕ್ಕೆ ತಲುಪಿ 18 ರಂದು ₹884 ಕ್ಕೆ ಕುಸಿದು,  22 ರಂದು ₹861 ರವರೆಗೂ ಇಳಿದು ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿತು. ನಂತರ ಪುಟಿದೆದ್ದು ₹919 ನ್ನು ತಲುಪಿ ₹912 ರ ಸಮೀಪ ವಾರಾಂತ್ಯ ಕಂಡಿದೆ. ಈ ರೀತಿಯ ಭಾರಿ ಕುಸಿತ ಕಂಡಾಗ ಅಗ್ರಮಾನ್ಯ ಕಂಪೆನಿಗಳು ಹೂಡಿಕೆಗೆ ಉತ್ತಮ ಅವಕಾಶ ಕಲ್ಪಿಸಿಕೊಡುತ್ತವೆ. ಇಂತಹ ಕಂಪೆನಿಗಳ ಪ್ರತಿಷ್ಠೆ, ಘನತೆಗಳು, ಷೇರಿನ ಬೆಲೆ ಕುಸಿತದಲ್ಲಿದ್ದಾಗ,  ವಿತ್ತೀಯ ಸಂಸ್ಥೆಗಳ ಆಸಕ್ತಿ ಕೆರಳಿಸಿ ಖರೀದಿಗೆ ಪ್ರೇರೇಪಿಸುತ್ತದೆ.

ಇದೆ ರೀತಿಯ ಬೆಳವಣಿಗೆಗಳನ್ನು ಫಾರ್ಮಾ ವಲಯದ ಕಂಪೆನಿಗಳಾದ ದಿವೀಸ್ ಲ್ಯಾಬ್, ಲುಪಿನ್ ಗಳಲ್ಲಿ ಪ್ರದರ್ಶಿತವಾಯಿತು. ಈಗ ಕುಸಿತ ಕಂಡಿರುವ ಕೇರ್ ರೇಟಿಂಗ್ಸ್ ಕಂಪೆನಿಯ ಶೇ8ರಷ್ಟು ಷೇರುಗಳನ್ನು ಜೂನ್ ಅಂತ್ಯದಲ್ಲಿ ಕೆನರಾ ಬ್ಯಾಂಕ್ ಮತ್ತೊಂದು ರೇಟಿಂಗ್ ಕಂಪೆನಿ ಕ್ರಿಸಿಲ್‌ಗೆ ಮಾರಾಟ ಮಾಡಿದಾಗ ಷೇರಿನ ಬೆಲೆ ₹1,800 ನ್ನು ತಲುಪಿತ್ತು. 

ಕಳೆದ ಜೂನ್ ಅಂತ್ಯದ ತ್ರೈಮಾಸಿಕ ಫಲಿತಾಂಶ ಉತ್ತಮವಾಗಿದೆ ಎಂದು ಇಂಟರ್ ಗ್ಲೊಬ್ ಏವಿಯೇಷನ್ ಕಂಪೆನಿ ಷೇರಿನ ಬೆಲೆಯು ₹1,346 ರ ವರೆಗೂ ಏರಿಕೆ ಕಂಡಿತು. ಆದರೆ ಈಗ ಮತ್ತೊಮ್ಮೆ ₹1,187 ರವರೆಗೂ ಇಳಿಕೆ ಕಂಡಿದೆ. ಈ ರೀತಿಯ ಏರಿಳಿತಗಳನ್ನು ಅನುಕೂಲಕ್ಕೆ  ಉಪಯೋಗಿಸಿಕೊಳ್ಳುವ ಕಲೆಯೇ  ವ್ಯಾಲ್ಯೂ ಪಿಕ್ -ಪ್ರಾಫಿಟ್ ಬುಕ್ ಸಮೀಕರಣವಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಒತ್ತಡದಲ್ಲಿ ಷೇರುಪೇಟೆ ವಹಿವಾಟು

ಷೇರು ಸಮಾಚಾರ
ಒತ್ತಡದಲ್ಲಿ ಷೇರುಪೇಟೆ ವಹಿವಾಟು

12 Mar, 2018
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

ಷೇರು ಸಮಾಚಾರ
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

5 Mar, 2018
ಎಣಿಕೆಗೆ ನಿಲುಕದ ಪೇಟೆಯ ಚಲನೆ

ಷೇರು ಸಮಾಚಾರ
ಎಣಿಕೆಗೆ ನಿಲುಕದ ಪೇಟೆಯ ಚಲನೆ

26 Feb, 2018

ಷೇರು ಸಮಾಚಾರ
ಲಾಭ ನಗದೀಕರಣಕ್ಕೆ ದೊರೆತ ಅವಕಾಶ

ಷೇರುಪೇಟೆಯಲ್ಲಿನ ಕೆಲವು ಬೆಳವಣಿಗೆಗಳು ಕೇವಲ ಭಾಷಣ, ವಿಶ್ಲೇಷಣೆಗೆ ಮಾತ್ರ ಸೀಮಿತವಾಗಿದ್ದು ಅವನ್ನು ಕೈಗೆ ಎಟುಕಿಸಿಕೊಳ್ಳಲು ಸಾಧ್ಯವಿಲ್ಲದಂತಿರುತ್ತವೆ.

18 Feb, 2018
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

ಷೇರು ಸಮಾಚಾರ
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

12 Feb, 2018