ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದ ಕೆಲಸಗಳೇ ಗೆಲುವಿಗೆ ಶ್ರೀರಕ್ಷೆ’

Last Updated 28 ಆಗಸ್ಟ್ 2017, 4:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ನಮ್ಮ ಸರ್ಕಾರ ಅನೇಕ ಜನಪರ ಕೆಲಸಗಳನ್ನು ಮಾಡಿದೆ. ಹಿಂದೆ ಮಾಡಿದ ಒಳ್ಳೆಯ ಕೆಲಸಗಳು ಮುಂದಿನ ಚುನಾವಣೆಯಲ್ಲಿ ನಮ್ಮ ಕೈಹಿಡಿಯಲಿವೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೇಳಿದರು.

ಸೋಮವಾರ ನಗರದಲ್ಲಿ ಆರಂಭವಾಗಲಿರುವ ‘ಪರಂ ನಡಿಗೆ ಬೂತ್‌ಮಟ್ಟದ ಕಡೆಗೆ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಭಾನುವಾರ ನಗರಕ್ಕೆ ಬಂದರು. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ‘ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘1952ರಲ್ಲಿ ಚುನಾವಣೆ ಆರಂಭವಾದ ಬಳಿಕ ನಮ್ಮ ಪಕ್ಷ ಅನೇಕ ಏಳುಬೀಳುಗಳನ್ನು ಕಂಡಿದೆ. ಹಲವು ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಈಗ ಅಧಿಕಾರ ಕಳೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮರಳಿ ಅಧಿಕಾರ ಪಡೆಯುತ್ತೇವೆ. ಅಮಿತ್‌ ಷಾ, ನರೇಂದ್ರ ಮೋದಿ ಯಾರು ಬಂದರೂ ಏನೂ ಆಗುವುದಿಲ್ಲ. ನಾವು ನೀಡಿದ ಸ್ವಚ್ಛ ಆಡಳಿತ, ಇಷ್ಟು ವರ್ಷ ಮಾಡಿದ ಜನಪರ ಕೆಲಸಗಳು ಮತ್ತು ದಕ್ಷ ನಾಯಕತ್ವದಿಂದ ಅಧಿಕಾರ ಉಳಿಸಿಕೊಳ್ಳುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿ–ಫೋರ್‌ ಸಮೀಕ್ಷೆ ಪ್ರಕಟಿಸಿರುವ ಸಂಖ್ಯೆಗಿಂತಲೂ ನಿಮ್ಮ ಪಕ್ಷ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆಯೇ ಎನ್ನುವ ಪ್ರಶ್ನೆಗೆ ‘ರಾಜ್ಯದ ಎಲ್ಲ ಕಡೆಯೂ ನಮ್ಮ ಕಾರ್ಯಕರ್ತರು ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ನಮಗೇ ಮತ ಹಾಕುತ್ತಾರೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ’ ಎಂದಷ್ಟೇ ಡಾ. ಜಿ.ಪರಮೇಶ್ವರ್‌ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಜೊತೆಗೆ ಹುಬ್ಬಳ್ಳಿ–ಧಾರವಾಡದಲ್ಲಿ ಕಾಂಗ್ರೆಸ್‌ ನಾಯಕರ ನಡುವೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು ‘ಈಗಾಗಲೇ ವರಿಷ್ಠರ ಜೊತೆ ಚರ್ಚಿಸಿ ಅಂತಿಮ ಪಟ್ಟಿ ಸಿದ್ಧಗೊಳಿಸಲಾಗಿದೆ.  ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಿ ಬಿಡುಗಡೆ ಮಾಡಲಿದ್ದಾರೆ’ ಎಂದು ಪುನರುಚ್ಚರಿಸಿದರು. ಆದರೆ, ಸಂಪುಟಕ್ಕೆ ಸೇರುವವರ ಹೆಸರು ಬಹಿರಂಗಗೊಳಿಸಲು ಅವರು ನಿರಾಕರಿಸಿದರು.

ಪಕ್ಷ ಬಿಡುವುದು ಸಾಮಾನ್ಯ: ಕಾಂಗ್ರೆಸ್‌ ಮುಖಂಡರಾಗಿದ್ದ ವರಪ್ರಸಾದ ರೆಡ್ಡಿ ಬಿಜೆಪಿ ಸೇರ್ಪಡೆಯಾದ ಬಗ್ಗೆ ಪ್ರತಿಕ್ರಿಯಿಸಿ ‘ಚುನಾವಣೆ ಸಮೀಪ ಬಂದಾಗ ಕೆಲವರು ಪಕ್ಷ ಬಿಟ್ಟು ಹೋಗುವುದು ಸಾಮಾನ್ಯ. ಅದೇ ರೀತಿ ಸಾಕಷ್ಟು ಜನ ಕಾಂಗ್ರೆಸ್‌ಗೂ ಬರುತ್ತಾರೆ. ಇದರಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT