ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪನ ಜಪದಲ್ಲಿ ಮಿಂದೆದ್ದ ಭಕ್ತ ಸಮೂಹ

Last Updated 28 ಆಗಸ್ಟ್ 2017, 5:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಘ್ನ ವಿನಾಶಕ ಗಣೇಶನಿಗೆ ನಗರದ ಹಲವೆಡೆ ಭಾನುವಾರ ವಿಶೇಷ ಪೂಜೆ ಜರುಗಿತು. ಪೆಂಡಾಲ್‌ಗಳಿಗೆ ತಂಡೋಪತಂಡವಾಗಿ ಬರುತ್ತಿದ್ದ ಭಕ್ತರು ಪಾರ್ವತಿ ಪುತ್ರನ ದರ್ಶನ ಪಡೆದು ಪುನೀತರಾದರು. ವಿಶೇಷ ಪ್ರಸಾದ ಸ್ವೀಕರಿಸಿ, ‘ಗಣಪತಿ ಮಹಾರಾಜ್‌ ಕೀ ಜೈ’, ‘ವಿಘ್ನ ನಿವಾರಕನಿಗೆ ಜೈ’ ಎಂದು ಕೂಗಿ ಭಕ್ತಿ ಮೆರೆದರು.

ಕೊಪ್ಪಿಕರ್ ರಸ್ತೆ, ದಾಜಿಬಾನ್ ಪೇಟೆ, ಹೊಸೂರು, ಮೇದಾರ ಓಣಿ, ಮರಾಠ ಗಲ್ಲಿ, ಬಂಬೂ ಬಜಾರ್, ಮೂರು ಸಾವಿರ ಮಠದ ಚೌಕ, ಸ್ಟೇಷನ್ ರಸ್ತೆ ಸೇರಿದಂತೆ ವಿವಿಧೆಡೆ ಕೂರಿಸಿದ್ದ ಆಕರ್ಷಕ ಗಣಪತಿ ಮೂರ್ತಿಗಳು ಭಕ್ತರ ಗಮನ ಸೆಳೆದವು. ಧ್ವನಿವರ್ಧಕಗಳಲ್ಲಿ ಬೆಳಿಗ್ಗೆಯಿಂದಲೂ ಗಣೇಶನ ಜಪಿಸುವ ಹಾಡುಗಳು ಕೇಳಿ ಬರುತ್ತಿದ್ದವು.

ಸಂಜೆಯಾಗುತ್ತಿದ್ದಂತೆ ಗಣಪತಿ ಪೆಂಡಾಲ್‌ಗಳು ಬಣ್ಣದ ದೀಪಗಳಿಂದ ಮಿನುಗುತ್ತಿದ್ದವು. ದಾರಿಯುದ್ದಕ್ಕೂ ಹರಿಯಬಿಟ್ಟಿದ್ದ ಬಗೆ ಬಗೆಯ ಸೀರಿಯಲ್‌ ಸೆಟ್‌ಗಳು ಕಿನ್ನರ ಲೋಕವನ್ನು ಸೃಷ್ಟಿಸಿದವು. ಜಿಜಿ ಜಿಟಿ ಮಳೆಯನ್ನೂ ಲೆಕ್ಕಿಸದೆ, ಭಕ್ತರು ಮಾರುದ್ದದ ಸಾಲಿನಲ್ಲಿ ನಿಂತು ಗಣಪನ ದರ್ಶನ ಪಡೆದರು.

ಡಿಪೊದಲ್ಲಿ ವಿಶೇಷ ಪೂಜೆ: ಪಿ.ಬಿ. ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೊದಲ್ಲಿ ಇಂದು ಅದ್ಧೂರಿ ಪೂಜೆ ನಡೆಯಿತು. ಬಳಿಕ ಅನ್ನದಾನ ನಡೆಯಿತು. ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಸೇರಿದಂತೆ ಹಿರಿಯ ಅಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಂತೆಯೇ ಹಳೇ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ ಕೆಲ ಪೊಲೀಸ್ ಠಾಣೆಯಗಳಲ್ಲೂ ಗಣೇಶನಿಗೆ ಪೂಜೆ ಸಲ್ಲಿಸಲಾಯಿತು.

ಹೊಸೂರು ರಸ್ತೆ, ದಾಜಿಬಾನ ರಸ್ತೆ, ಕೊಪ್ಪಿಕರ್ ರಸ್ತೆ ಗಣಪತಿ ಪೆಂಡಾಲ್‌ಗಳಲ್ಲಿ ನೃತ್ಯ, ವೇಷಭೂಷಣ ಸ್ಪರ್ಧೆ, ರಸಮಂಜರಿ ಸೇರಿದಂತೆ ಬಗೆ ಬಗೆಯ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು. ಪ್ರಮುಖ ರಸ್ತೆಗಳಲ್ಲಿ ಗಣೇಶನ ದರ್ಶನಕ್ಕೆ ಹೆಚ್ಚಿನ ಭಕ್ತರು  ಬಂದಿದ್ದರಿಂದ ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಯಿತು.

24 ತಾಸು ನಿಗಾ: ಗಣೇಶ ವಿಸರ್ಜನೆ ವೇಳೆ ಯಾವುದೇ ಅವಘಡ ಸಂಭವಿಸಿದಂತೆ  ಎಚ್ಚರವಹಿಸಲು ಹೊಸೂರು ಬಾವಿ ಬಳಿ, ದಿನದ ಇಪ್ಪತ್ತನಾಲ್ಕು ತಾಸು ಪೊಲೀಸರನ್ನು ನಿಯೋಜಿಸಲಾಗಿದೆ.

‘ಗಣೇಶನ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಜಗಳವಾಗದಂತೆ ಮತ್ತು ಅವಘಡಕ್ಕೆ ಅವಕಾಶ ನೀಡದಂತೆ ಆರೇಳು ಪೊಲೀಸರನ್ನು ಬಾವಿ ಬಳಿ ನಿಯೋಜಿಸಲಾಗಿದೆ. ಎರಡು ಪಾಳಿಗಳಲ್ಲಿ ದಿನದ ಇಪ್ಪತ್ತನಾಲ್ಕು ತಾಸು ಸಿಬ್ಬಂದಿ ಬಾವಿ ಬಳಿ ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ರಂಗಿನ ಮೆರವಣಿಗೆ
ಗಣೇಶ ಚತುರ್ಥಿಯ ಮೂರನೇ ದಿನದಂದು ಭಾನುವಾರ ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಡಿಜೆ ಹಾಗೂ ಧ್ವನಿವರ್ಧಕ ಸಂಗೀತದೊಂದಿಗೆ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ನಡೆಯಿತು.

ಯುವಕ–ಯುವತಿಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗಿದರು. ಬಳಿಕ ಹೊಸೂರಿನಲ್ಲಿ ನಿರ್ಮಿಸಿರುವ ಬಾವಿ ಹಾಗೂ ಉಣಕಲ್‌ ಕೆರೆಗೆ ಗಣೇಶನ ಮೂರ್ತಿಗಳನ್ನು ವಿಸರ್ಜಿಸಿದರು.

ಮನೆಯಲ್ಲಿ ಕೂರಿಸಲಾಗಿದ್ದ ಸಣ್ಣ ಗಣೇಶನ ಮೂರ್ತಿಗಳನ್ನು ಸ್ಥಳೀಯರು ಸಂಜೆ ತಂದು ವಿಸರ್ಜಿಸಿದರು. ಕೆಲ ಗಣೇಶ     ಭಕ್ತ ಮಂಡಳಿಗಳು ತಮ್ಮ ಪ್ರದೇಶದಲ್ಲಿ ಕೂರಿಸಿದ್ದ ಮೂರ್ತಿಗಳನ್ನು ರಾತ್ರಿ ಮೆರವಣಿಗೆ ಮೂಲಕ ತಂದು ವಿಸರ್ಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT