ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹60 ಲಕ್ಷದಲ್ಲಿ ‘ತ್ರಿಕೋನಾಕಾರ’ ಉದ್ಯಾನ

Last Updated 28 ಆಗಸ್ಟ್ 2017, 5:41 IST
ಅಕ್ಷರ ಗಾತ್ರ

ಹಾವೇರಿ: ರಸ್ತೆಗಳು, ಚರಂಡಿಗಳು, ರಾಜಕಾಲುವೆಗಳು ನಗರದ ನರನಾಡಿಗಳಾದರೆ, ಉದ್ಯಾನಗಳೇ ಉಸಿರಾಟದ ಶ್ವಾಸಕೋಶಗಳು. ಕಾಂಕ್ರೀಟ್ ಕಾಡಿನಲ್ಲಿ ಮುಂಜಾನೆ–ಮುಸ್ಸಂಜೆಯ ವಿಹಾರಕ್ಕೆ ಈ ಉದ್ಯಾನಗಳೇ ಆಸರೆ.  ಆದರೆ, ಹಾವೇರಿಯ ಬಹುತೇಕ ಬಡಾವಣೆಗಳಲ್ಲಿ ಇಂತಹ ‘ಉಸಿರಾಟ’ವೇ ನಿಂತು ಹೋಗಿದೆ. ಈ ನಡುವೆಯೇ ಬಸವೇಶ್ವರ ನಗರದ ‘ಬಿ’ ಬ್ಲಾಕ್‌ನಲ್ಲಿ ‘ಸಿ’ ಬ್ಲಾಕ್‌ಗೆ ಹೊಂದಿಕೊಂಡ ‘ತ್ರಿಕೋನಾಕಾರ’ದ ಉದ್ಯಾನ ಅಭಿವೃದ್ಧಿಗೊಳ್ಳುತ್ತಿದ್ದು, ಗಮನ ಸೆಳೆಯುತ್ತಿದೆ.

ಬಸವೇಶ್ವರ ನಗರದ ‘ಸಿ’ ಬಡಾವಣೆಯ ಅಭಿವೃದ್ಧಿಯ ಹಂತದಲ್ಲಿದೆ. ಇದಕ್ಕೆ ಹೊಂದಿಕೊಂಡ ‘ಬಿ’ ಬ್ಲಾಕ್‌ನ ತ್ರಿಕೋನಾಕಾರದ 1 ಎಕರೆ ಜಾಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಸುಮಾರು ₹60 ಲಕ್ಷ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸುತ್ತಿದೆ. ಇದು, ಇಲ್ಲಿನ ಮಕ್ಕಳು, ಹಿರಿಯರು ನಿಟ್ಟುಸಿರುವ ಬಿಡುವಂತೆ ಮಾಡಿದೆ.

ಉದ್ಯಾನಕ್ಕೆ ಸುತ್ತ ಆವರಣ ಬೇಲಿ ಹಾಕಲಾಗಿದ್ದು, ಸಂಜೆ ನಡಿಗೆಗೆ ‘ವಾಕಿಂಗ್ ಪಾತ್’ ನಿರ್ಮಿಸಲಾಗಿದೆ. ಅಲ್ಲದೇ, ಹಸಿರು ಬೆಳೆಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮಕ್ಕಳಿಗಾಗಿ ಜಾರು ಬಂಡಿ, ತಿರುಗುವ ಆಟ, ಏತ ಪಾತ ಮತ್ತಿತರ ಆಟಿಕೆಗಳನ್ನು ಹಾಕಲಾಗಿದೆ. ಹಿರಿಯರಿಗೆ ಕುಳಿತುಕೊಳ್ಳಲು ಆಸನಗಳು ಮತ್ತಿತರ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಉದ್ಯಾನದ ಮೂಲೆಯಲ್ಲಿ ತೆರೆದ ವೇದಿಕೆ ನಿರ್ಮಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಉದ್ಯಾನದ ಯಾವುದೇ ಮೂಲೆಯಲ್ಲಿ ಕುಳಿತರೂ, ವಾಕಿಂಗ್ ಮಾಡುತ್ತಲೇ ಸಾಂಸ್ಕೃತಿಕ ಕಾರ್ಯಕ್ರಮ ಆಸ್ವಾದಿಸುವ ಅವಕಾಶ ಇದಾಗಿದೆ.

‘ಮುಸ್ಸಂಜೆಯ ಬಳಿಕವೂ ವಾಕಿಂಗ್ ಮಾಡುವ ರೀತಿಯಲ್ಲಿ ವಿದ್ಯುತ್ ದೀಪದ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ, ಮುಂಜಾನೆ ಮತ್ತು ಮುಸ್ಸಂಜೆ ಹಿತಮಯವಾದ ಹಾಡು ಕೇಳಲು ಬೇಕಾದ ಧ್ವನಿ ವ್ಯವಸ್ಥೆಯನ್ನು ಮಾಡಲಾಗುವುದು. ಈ ಕಾರ್ಯಗಳು ಪೂರ್ಣಗೊಂಡ ಕೂಡಲೇ ಉದ್ಘಾಟಿಸುತ್ತೇವೆ’ ಎನ್ನುತ್ತಾರೆ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ.

ನಗರದಲ್ಲಿ ಉದ್ಯಾನಗಳು:  ನಗರಗಳಲ್ಲಿ ಮಕ್ಕಳು, ಹಿರಿಯರು, ಮಹಿಳೆಯರು ಸೇರಿದಂತೆ ನಾಗರಿಕರ ವಿಹಾರಕ್ಕಾಗಿ ಬಡಾವಣೆಗೊಂದು ಉದ್ಯಾನ ಕಡ್ಡಾಯವಾಗಿ ಇರಬೇಕು ಎಂದು ನಿಯಮಾವಳಿಯೇ ಇದೆ. ಆದರೆ, ಹಾವೇರಿ ನಗರ ಮಾತ್ರ ಇದಕ್ಕೆ ಹೊರತಾಗಿದೆ.

ಹಾವೇರಿಯ ಬಹುತೇಕ ಬಡಾವಣೆಗಳಿಗೆ ಉದ್ಯಾನವೇ ಇಲ್ಲ. ದಾಖಲೆಗಳಲ್ಲಿ ಕಾಯ್ದಿರಿಸಿದ ಜಾಗವು ಒತ್ತುವರಿ, ಗಿಡಗಂಟಿ, ಪಾಳು ಬಿದ್ದು ಹೋಗಿದೆ. ಹೀಗಾಗಿ ನಾಗರಿಕರಿಗೆ ‘ಸುಂದರ ಸಂಜೆ’ ಕಳೆಯಲು ಸೂಕ್ತ ಸ್ಥಳವಿಲ್ಲ. ಮಳೆ ಕೊರತೆ, ಹಸಿರು ಗಿಡ ಮರಗಳ ಕೊರತೆಯ ಕಾರಣ ‘ಮಲೆನಾಡಿನ ಸೆರಗು’ ಎನಿಸಿದ ಹಾವೇರಿ ನಗರದ ಮನೆಗಳಲ್ಲಿ ಮಳೆಗಾಲದಲ್ಲೇ ಕುಳಿತುಕೊಳ್ಳಲಾಗದ ಸೆಖೆ ಶುರುವಾಗಿದೆ.

‘ನಗರದಲ್ಲಿ ಸುಮಾರು 200ಕ್ಕೂ ಹೆಚ್ಚು ಉದ್ಯಾನ ನಿವೇಶನಗಳಿವೆ. ಆದರೆ, ಈ ಪೈಕಿ ಬೆರಳೆಣಿಕೆ ಉದ್ಯಾನಗಳು ಮಾತ್ರ ಅಭಿವೃದ್ಧಿ ಹೊಂದಿವೆ. ಉಳಿದಂತೆ ಪಾಳು ಬಿದ್ದಿರುವುದೇ ಹೆಚ್ಚು. ಅಲ್ಲದೇ, ಈ ಹಿಂದೆ ಇದ್ದ ಪುರಸಭೆಯ ನಿರ್ಲಕ್ಷದಿಂದಾಗಿ ಹಲವೆಡೆ ಉದ್ಯಾನ ಒತ್ತುವರಿ ಆಗಿದೆ’ ಎನ್ನುತ್ತಾರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ.ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ₹2 ಕೋಟಿ ವೆಚ್ಚದಲ್ಲಿ ಸುಮಾರು 10 ಉದ್ಯಾನಗಳನ್ನು ಅಭಿವೃದ್ಧಿ ಪಡಿಸುತ್ತಿದೆ.

ಸಾರ್ವಜನಿಕರ ಸಹಕಾರ: ಅಶ್ವಿನಿ ನಗರದಲ್ಲಿ ನಾಗರಿಕರು ಸಮಿತಿ ರಚಿಸಿಕೊಂಡು, ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಉದ್ಯಾನ ನಿರ್ಮಿಸಿದ್ದಾರೆ. ದಾನಿಗಳ ನೆರವು ಹಾಗೂ ಸ್ವಯಂ ಪ್ರೇರಣೆಯಿಂದ ಅಭಿವೃದ್ದಿ ಪಡಿಸುತ್ತಿದ್ದಾರೆ. ಇದು ನಗರಕ್ಕೆ ಮಾದರಿಯಾಗಿದೆ. ಉದಯ ನಗರ ನಿವಾಸಿಗಳೂ ಉದ್ಯಾನ ಸಂರಕ್ಷಿಸುತ್ತಾ ಬಂದಿದ್ದಾರೆ. ನಿರ್ಮಾಣ ಮತ್ತು ಅಭಿವೃದ್ಧಿ ಮಾತ್ರ ‘ಸರ್ಕಾರ’ದ ಸಂಸ್ಥೆಗಳಿಂದ ಸಾಧ್ಯ.  ಆದರೆ,  ಉದ್ಯಾನಗಳ ನಿರ್ವಹಣೆ ಹಾಗೂ ಸಂರಕ್ಷಣೆಗೆ ಸಾರ್ವಜನಿಕರ ಆಸಕ್ತಿಯೇ ಅತಿಮುಖ್ಯ ಎಂಬುದು ಬಹುತೇಖ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಅಭಿಮತ.

* * 

ನಾಗರಿಕರು ಸಮಿತಿ ರಚಿಸಿ ಕೊಂಡು ಮುಂದೆ ಬಂದರೆ ಬಡಾವಣೆಗಳಲ್ಲಿ ಉದ್ಯಾನ ಸುಧಾರಿಸಬಹುದು. ಸಮಿತಿ– ಸಂಸ್ಥೆಗಳು ದತ್ತು ಸ್ವೀಕರಿಸಿದರೂ ಉತ್ತಮ
ಸಂಜೀವಕುಮಾರ್ ನೀರಲಗಿ
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT