ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ, ಈರುಳ್ಳಿ ದರ ದಿಢೀರ್‌ ಕುಸಿತ

Last Updated 28 ಆಗಸ್ಟ್ 2017, 5:46 IST
ಅಕ್ಷರ ಗಾತ್ರ

ಹಾವೇರಿ: ಕೆಲವೇ ದಿನಗಳ ಹಿಂದೆ ಗಗನಮುಖಿಯಾಗಿದ್ದ ಈರುಳ್ಳಿ ಹಾಗೂ ಟೊಮೆಟೊ ಬೆಲೆ ಈಗ ಇಳಿಕೆಯಾಗಿದೆ. ಶ್ರಾವಣ ಮಾಸ ಮುಕ್ತಾಯಗೊಂಡಿರುವುದು ಹಾಗೂ ಜಿಲ್ಲೆಯಲ್ಲಿ ಬೆಳೆದ ತರಕಾರಿ ಮಾರುಕಟ್ಟೆಗೆ ಬಂದಿರುವ  ಕಾರಣ ಬೆಲೆ ಕುಸಿತ ಕಂಡಿದೆ ಎಂದು ವಿಶ್ಲೇಷಿಸಲಾಗಿದ್ದು, ಗ್ರಾಹಕರು ನಿರಾಳರಾಗಿದ್ದಾರೆ.

ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳ ಸಂದರ್ಭದಲ್ಲಿ ₹70ರಿಂದ ₹80ರ ಗಡಿ ದಾಟಿದ್ದ ಟೊಮೆಟೊ ಹಾಗೂ ಈರುಳ್ಳಿ, ಈಗ ₹ 20ರಿಂದ ₹30ಕ್ಕೆ ಹಾಗೂ 30ರಿಂದ 40ಕ್ಕೆ ಇಳಿದಿದೆ. ತರಕಾರಿ ಬೆಲೆ ಕುಸಿತ ಗ್ರಾಹಕರಿಗೆ ಕೊಡುಗೆಯಾದರೆ, ಸತತ ಬರಗಾಲದಲ್ಲಿ ತರಕಾರಿ ಬೆಳೆದ ರೈತರಿಗೆ ಸಂಕಷ್ಟ ತಂದೊಡ್ಡಿದೆ.

‘ಜಿಲ್ಲೆಯಲ್ಲಿ ಬೆಳೆದ ಈರುಳ್ಳಿ ಹಾಗೂ ಟೊಮೆಟೊ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದೆ, ಹೀಗಾಗಿ ದರ ಕುಸಿದಿದೆ. ಆದರೆ, ಬೇರೆ ಜಿಲ್ಲೆಗಳಿಂದ ಆಮದಾಗುವ ತರಕಾರಿಗಳ ಬೆಲೆಯಲ್ಲಿ ಗಣನೀಯ ವ್ಯತ್ಯಾಸ ಆಗಿಲ್ಲ’ ಎಂದು ತರಕಾರಿ ವ್ಯಾಪಾರಸ್ಥ ಹಜರತ್‌್ ಸೇತ್‌ಸನದಿ ತಿಳಿಸಿದರು.

‘ಕೆಲ ತಿಂಗಳಿನಿಂದ ಜಿಲ್ಲೆಯಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಬೀನ್ಸ್‌, ಬೆಂಡೆಕಾಯಿ, ಚವಳಿಕಾಯಿ, ಬದನೆಕಾಯಿ, ಹಸಿ ಮೆಣಸು, ಹೂ ಕೋಸು, ಹೀರೆಕಾಯಿ, ಸವತೆಕಾಯಿ ಹಾಗೂ ಈರುಳ್ಳಿ, ಟೊಮೆಟೊ ಮಾರು ಕಟ್ಟೆಗೆ ಬಂದಿವೆ. ಆದರೆ ಅವುಗಳಿಗೆ ಉತ್ತಮ ಬೆಲೆ ಸಿಕ್ಕಿಲ್ಲ. ಬದಲಾಗಿ ಬೇರೆ ಜಿಲ್ಲೆಗಳಿಂದ ತರಕಾರಿ ಮಾರುಕಟ್ಟೆಗೆ ಬಂದ ಕ್ಯಾರೆಟ್‌, ಬೀಟ್‌ರೋಟ್‌, ಆಲೂಗಡ್ಡೆ ಬೆಲೆ ಹೆಚ್ಚಿದೆ’ ಎಂದರು.

‘ಸ್ಥಳೀಯ ‘ಕಡ್ಡಿ’ ಹಾಗೂ ‘ಸಿತಾರಾ’ ಹಸಿ ಮೆಣಸಿನಕಾಯಿಯನ್ನು ಕೆಜಿಗೆ ₹40ರಿಂದ ₹50ಕ್ಕೆ, ಗುಂಟೂರ ₹20 ರಿಂದ ₹25ರ ವೆರೆಗೆ ಹಾಗೂ ದೊಡ್ಡ ಮೆಣಸಿನಕಾಯಿಯನ್ನು ₹ 40ರ ವರೆಗೆ ಮಾರುತ್ತಿದ್ದೇವೆ. ಹೀರೆಕಾಯಿ, ಸವತೆಕಾಯಿ ಪ್ರತಿ ಕೆಜಿಗೆ ₹40ರಿಂದ ₹ 50ರ ವರೆಗೆ ಹಾಗೂ ಎಲೆಕೋಸು ಹಾಗೂ ಹೂ ಕೋಸನ್ನು ಪ್ರತಿ ಕೆಜಿಗೆ ₹10ರಿಂದ ₹20ರ ವೆರೆಗೆ ಮಾರುತ್ತಿದ್ದೇವೆ’ ಎಂದು ತರಕಾರಿ ವ್ಯಾಪಾರಸ್ಥೆ ನೀಲಮ್ಮ ಹಳಗೊಂಡರ ತಿಳಿಸಿದರು.

‘ಮದುವೆ ಋತು ಹಾಗೂ ಹಬ್ಬದ ಸಮಯದಲ್ಲಿ ತರಕಾರಿ ಬೆಲೆ ಹೆಚ್ಚಾಗುತ್ತದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಗಣೇಶ ಹಬ್ಬದ ಸಮಯದಲ್ಲಿಯೂ ಸ್ಥಳೀಯವಾಗಿ ಬೆಳೆದ ತರಕಾರಿ ಬೆಲೆ ಕಡಿಮೆ ಇದೆ. ಸತತ ಬರಗಾಲದಿಂದ ಬಳಲಿದ ಸ್ಥಳೀಯ ರೈತರು ಕಷ್ಟಪಟ್ಟು ಬೆಳೆಸಿದ ತರಕಾರಿಗೂ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಗ್ರಾಹಕ ಮೌನೇಶ ಬಡಿಗೇರ ತಿಳಿಸಿದರು.

ಮಾಂಸವೂ ಏರುಪೇರು
‘ಶ್ರಾವಣ ಮಾಸದ ಮೊದಲ ದಿನವೇ  ಕೆ.ಜಿ ದರದಲ್ಲಿ ₹60 ಕುಸಿದಿದ್ದ ಕೋಳಿ ಮಾಂಸವು ಈಗ ನಿಧಾನವಾಗಿ ಏರುಗತಿ ಕಾಣುತ್ತಿದೆ. ಆಷಾಢದ ಕೊನೆ ದಿನಗಳಲ್ಲಿ ₹220ಕ್ಕೆ ತಲುಪಿದ್ದ ಕೆ.ಜಿ ಕೋಳಿ ಮಾಂಸ ದರವು ಶ್ರಾವಣದಲ್ಲಿ ₹140ರಿಂದ ₹160ಕ್ಕೆ ಇಳಿದಿತ್ತು. ಭಾದ್ರಪದ ಮಾಸದ ಚೌತಿ ಮುಗಿದ ಬಳಿಕ ನಿಧಾನಗತಿಯ ಏರಿಕೆ ಕಾಣುತ್ತಿದೆ’ ಎನ್ನುತ್ತಾರೆ ಕೋಳಿ ಮಾಂಸ ವ್ಯಾಪಾರಿ ರಿಯಾಜ್ ಅಹ್ಮದ್.

* * 

ಸ್ಥಳೀಯವಾಗಿ ಬೆಳೆದ ಟೊಮೆಟೊ, ಈರುಳ್ಳಿ ಇತ್ಯಾದಿ ಮಾರುಕಟ್ಟೆಗೆ ಬರುತ್ತಿರುವ ಕಾರಣ, ತರಕಾರಿ ಬೆಲೆ  ಇಳಿಕೆಯಾಗುತ್ತಿದೆ
ರುದ್ರೇಶ ಹಿರೇಮಠ
ತರಕಾರಿ ವ್ಯಾಪಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT