ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನ ತಂಗುದಾಣಗಳು

Last Updated 28 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಬೆಟ್ಟ-ಗುಡ್ಡಗಳ ಮಡಿಲಿನಲ್ಲಿರುವ ಹಳ್ಳಿಗಳ ಕಡೆಗೆ ನೀವು ಎಂದಾದರೂ ಬಂದಿದ್ದಾದರೆ, ರಸ್ತೆಯ ಪಕ್ಕದಲ್ಲಿ ಚಪ್ಪರ ಹಾಕಿದ ಪುಟ್ಟ ಪುಟ್ಟ ವಿಶ್ರಾಂತಿ ಧಾಮಗಳು 2–3 ಕಿ.ಮೀ.ಗೆ ಒಂದರಂತೆ ಸಿಗುತ್ತಲೇ ಹೋಗುತ್ತವೆ. ಹೌದು, ಇಲ್ಲೇಕೆ ನಿರ್ಮಾಣ ಮಾಡಲಾಗಿದೆ ಇಂತಹ ವಿಶ್ರಾಂತಿ ಧಾಮಗಳನ್ನು ಎಂಬ ಪ್ರಶ್ನೆ ಕಾಡುತ್ತಿದೆಯೇ? ಸ್ವಲ್ಪತಾಳಿ, ಪಕ್ಕದಲ್ಲೇ ಇರುವ ಹಳ್ಳಿಗಳ ಬಸ್‌ ತಂಗುದಾಣಗಳು ಸ್ವಾಮಿ ಅವುಗಳು.

ಮಲೆನಾಡಿನ ಈ ಹಳ್ಳಿಗಳ ಜನ ಬಸ್ ತಂಗುದಾಣಗಳನ್ನು ತಾವೇ ನಿರ್ಮಿಸಿ ಕೊಂಡಿದ್ದಾರೆ. ಈ ತಂಗುದಾಣಗಳ ನಿರ್ಮಾಣದ ಹಿನ್ನೆಲೆ ಹಾಗೂ ಇವುಗಳ ಬಗೆಬಗೆಯ ಸದುಪಯೋಗ ಮನಗಂಡಾಗ ಇವು ಮಲೆನಾಡಿನ ಹಳ್ಳಿಗಳ ಬಸ್‌ಗಳಲ್ಲಿ ಓಡಾಡುವ ಜನರ ತಂಗುದಾಣ ಮಾತ್ರವಾಗಿರದೆ ಈ ಹಳ್ಳಿಗರನ್ನು ಪ್ರೀತಿಯಿಂದ ಬೆಸೆದ ತಂಪುದಾಣಗಳಾಗಿವೆ.

ಹಳ್ಳಿಗಳ ಜನ ಸ್ಥಳೀಯವಾಗಿ ದೊರೆಯುವ ಅಡಿಕೆ ಮರ ಹಾಗೂ ಅಡಿಕೆ ಸೋಗೆಯಿಂದ ಈ ಬಸ್‌ ತಂಗುದಾಣ ನಿರ್ಮಿಸಿದ್ದಾರೆ. ಪ್ರತಿ ಮಳೆಗಾಲದ ಮುಂಚೆ ಚಪ್ಪರವನ್ನು ಒಪ್ಪ–ಓರಣ ಮಾಡಿ ಸನ್ನದ್ಧಗೊಳಿಸಲಾಗುತ್ತದೆ. ಇನ್ನು ಊರಿನವರೆಲ್ಲಾ ಸೇರಿ ಹಣ ಸಂಗ್ರಹಿಸಿ ಹಂಚಿನ ಹೊದಿಕೆ ಹಾಕಿದರೆ, ಕೆಲವೆಡೆ ಆರ್.ಸಿ.ಸಿ. ಕಟ್ಟಡಗಳೂ ನಿರ್ಮಾಣಗೊಂಡಿವೆ. ಕೆಲವು ಊರುಗಳಲ್ಲಿ ತಮ್ಮ ಕುಟುಂಬದ ಹಿರಿಯರ ಸ್ಮರಣಾರ್ಥ ಅತ್ಯಂತ ಸುಸಜ್ಜಿತ ತಂಗುದಾಣಗಳನ್ನು ಕಟ್ಟಿಸಿದ್ದು ಗಮನಾರ್ಹ.

ಈ ತಂಗುದಾಣಗಳಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇದೆ. ನಾಟಕಗಳ ತಾಲೀಮುಗಳು ಈ ತಂಗುದಾಣಗಳಲ್ಲಿ ನಡೆಯುತ್ತವೆ. ಸೀಮಾ ಹೆಗಡೆ ಎನ್ನುವ ಯುವತಿ ತಾನು ಮಕ್ಕಳಿಗೆ ಇಲ್ಲಿಯೇ ಉಚಿತವಾಗಿ ಟ್ಯೂಷನ್ ಹೇಳಿಕೊಡುವುದಾಗಿ ಹೆಮ್ಮೆಯಿಂದ ಹೇಳುತ್ತಾಳೆ. ಯಾರ ಹಂಗಿಲ್ಲದೆ ರಾತ್ರಿ ಇಲ್ಲಿ ಮಲಗುವವರೂ ಇದ್ದಾರೆ.

‘ನನ್ನ ಮದುವೆಯ ಸಮಯದಲ್ಲಿ ಹಿರಿಯರು ನನ್ನವಳನ್ನು ತೋರಿಸಿದ್ದು ಇಲ್ಲಿಯೇ’ ಎಂದು ನಾಚಿಕೆಯಿಂದ ಹೇಳುತ್ತಾನೆ ಯಲ್ಲಾಪುರ ಹತ್ತಿರದ ಹಳ್ಳಿಯ ಶ್ರೀನಿವಾಸ ಗೌಡ. ಕೆಲವು ತಂಗುದಾಣಗಳಲ್ಲಿ ಕನ್ನಡದ ನುಡಿಮುತ್ತುಗಳನ್ನು ಕೂಡ ಕಾಣಬಹದು.

ಹಳ್ಳಿಗಳು ವೃದ್ಧಾಶ್ರಮ ಆಗುವ ಇಂದಿನ ಭಯಾನಕ ದಿನಗಳಲ್ಲಿ ಇಂತಹ ನೂರಾರು ಹಳ್ಳಿ ಬದುಕಿನ ಕೊಂಡಿಗಳು ಜೀವನೋತ್ಸಾಹವನ್ನು ಪುಟಿದೇಳುವಂತೆ ಮಾಡುತ್ತವೆ, ಅಲ್ಲವೆ?

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT