ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಳಗೇ ಸಮಾಧಿಗಳು

Last Updated 28 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಸ್ಮಶಾನ’ ಎಂದರೆ ಯಾರೂ ಇಷ್ಟಪಡದ ಜಾಗ. ಆದರೆ ಮನೆಯನ್ನೇ ಸ್ಮಶಾನವನ್ನಾಗಿ ಮಾಡಿ ಅದರಲ್ಲಿಯೇ ಜೀವನ ನಡೆಸುವ ಅಪರೂಪದ ಕುಟುಂಬವೊಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮಂಡಲಗೇರಿ ಗ್ರಾಮದಲ್ಲಿದೆ. ಅದೇ ರುದ್ರಮುನಿಶಾಸ್ತ್ರಿ ಅವರ ಕುಟುಂಬ. ಬೇರೆಯವರಿಗೆ ಸ್ಮಶಾನವಾಗಿ ಕಂಡರೆ ಅವರಿಗೆ ಮಾತ್ರ ಅದೊಂದು ದೇವಸ್ಥಾನ!

ಕುಟುಂಬದ ಹಿರಿಯರು ಕಾಲವಾದ ನಂತರ ಮನೆಯಲ್ಲಿಯೇ ಸಮಾಧಿ ಮಾಡಿ ಅವರ ಹೆಸರಲ್ಲಿ ಗದ್ದುಗೆ ಕಟ್ಟಿಸಿ ಪೂಜಿಸಲಾಗುತ್ತದೆ. ನೂರೆಂಟು ದೇವರ ಗುಡಿ ಗುಂಡಾರ ತಿರುಗಾಡುವ ಬದಲು ಉತ್ತಮ ಸಂಸ್ಕಾರ ಕಲಿಸಿ ಬದುಕಿಗೆ ಆಶ್ರಯ ನೀಡಿದವರೇ ದೇವರೆಂದು ಭಾವಿಸಿದ್ದಾರೆ ಈ ಕುಟುಂಬದವರು.

ಹಿರೇಮಠ ಅವರ ಕುಟುಂಬದ 13 ಜನರ ಸಮಾಧಿ ಇದೇ ಒಕ್ಕಲುತನ ಮನೆಯಲ್ಲಿ ಶಾಸ್ತ್ರೋಕ್ತವಾಗಿ ನಡೆದಿದೆ. ಕುಟುಂಬದ ಹಿರಿಯ ರಾಜಶೇಖರಯ್ಯ ಅವರು ಪುರಾಣ ಪ್ರವಚನಕಾರರಾಗಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದರು. 1972ರಲ್ಲಿ ಅವರು ಲಿಂಗೈಕ್ಯರಾದ ಸಂದರ್ಭದಲ್ಲಿ ಗ್ರಾಮಸ್ಥರ ಪಾಲಿಗೆ ಒಬ್ಬ ದೇವರನ್ನೇ ಕಳೆದುಕೊಂಡಂತೆ ಭಾಸವಾಗಿತ್ತು. ಇವರನ್ನು ಸಾರ್ವಜನಿಕರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವ ಬದಲು ಮನೆಯಲ್ಲಿಯೇ ಸಮಾಧಿ ಮಾಡಿ ನಿತ್ಯ ಪೂಜಿಸುವಂತಾಗಬೇಕು ಎಂದು ನಿರ್ಧರಿಸಲಾಯಿತು. ಆ ಪರಿಪಾಠ ಅವರ ಮನೆಯಲ್ಲಿ ಯಾರೇ ಮೃತರಾದರೂ ಮುಂದುವರಿಯಿತು. ಹಿರಿಯರು, ಕಿರಿಯರು, ಸೊಸೆಯಂದಿರು, ಮಕ್ಕಳು ಸೇರಿ ಈಗ 13 ಜನ ಅಸುನೀಗಿದ್ದಾರೆ. ಜೀವನ ಕಟ್ಟಿಕೊಂಡ ಸ್ಥಳದಲ್ಲೇ ಅವರು ಮಣ್ಣಲ್ಲಿ ಲೀನವಾಗಿದ್ದು ಕುಟುಂಬದವರಿಗೆ ಸಂತೃಪ್ತಿ ಭಾವನೆ ಮೂಡಿಸಿದೆ. ಹಿರಿಯರಿಗೆ ಗದ್ದುಗೆ ಕಟ್ಟಿ ಗೌರವ ಸಲ್ಲಿಸಿದ ತೃಪ್ತಿ ಅವರಲ್ಲಿದೆ.

‘ಕುಟುಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರನ್ನು ಸ್ಮರಿಸದೇ ಹೋದರೆ ಕುಟುಂಬಕ್ಕೆ ಶ್ರೇಯಸ್ಸಲ್ಲ. ಹೀಗಾಗಿ ಅವರನ್ನು ದೇವರೆಂದೇ ನಂಬಿ ದೀಪ ಹಚ್ಚಿ ಪ್ರತಿನಿತ್ಯ ಪೂಜಿಸುತ್ತಿದ್ದೇವೆ’ ಎನ್ನುತ್ತಾರೆ ಒಕ್ಕಲುತನ ಮನೆಯ ಸದಸ್ಯೆ ವಿಜಯಲಕ್ಷ್ಮಿ.

ಒಕ್ಕಲುತನ ಮನೆಯಲ್ಲಿನ ಗದ್ದುಗೆಗಳು ದೇವರ ಗುಡಿಗಳಾಗಿ ಗೋಚರವಾಗುತ್ತಿವೆ. ಅವರ ನಂಬಿಕೆ, ಪರಂಪರೆ ಹಾಗೂ ಅವರಲ್ಲಿನ ಸಂತೃಪ್ತಿಗುಣ ಪ್ರಶ್ನಾತೀತ ಎಂದು ಪಕ್ಕದ ಕುಕನೂರಿನ ಅನ್ನದಾನೇಶ್ವರಮಠದ ಮಹಾದೇವಯ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಗದ್ದುಗೆ, ಸಮಾಧಿಗಳ ಮಧ್ಯೆ ಓಡಾಡುತ್ತಾ, ಮೃತ ವ್ಯಕ್ತಿಗಳೊಂದಿಗೆ ಜೀವಿತಾವಧಿಯಲ್ಲಿ ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ದಿನ ಕಳೆಯುತ್ತಿರುವುದು ಸೋಜಿಗವಲ್ಲವೆ?

⇒ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT