ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಿಗಳಿಂದ ಲಾಮಾಗಳವರೆಗೆ

Last Updated 28 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕಾಡು ದಾರಿಯಲ್ಲಿ ಹೆಬ್ಬಾವು ತೆವಳಿದಂತೆ ಕಾಣುವ ಡಾಂಬರ್ ರಸ್ತೆಯಲ್ಲಿ ಧುತ್ತನೆ ಎದುರಾಗುವ ಪುಟ್ಟ ಪಟ್ಟಣ ಮುಂಡಗೋಡ. ಊರಿನ ಒಡಲನ್ನು ಸೀಳಿರುವ ಹೆದ್ದಾರಿಯ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ಕಟ್ಟಿರುವ ಹಳದಿ ಗುಡಾರದ ಸಾಲುಗಳು, ಚದರಂಗಿ ಹೂಗುಚ್ಛದಂತೆ ಕಾಣುವ ಹಳದಿ, ಹಸಿರು, ಕೆಂಪು ಬಣ್ಣದ ತರಕಾರಿಗಳು, ರಥಪುಷ್ಪದ ಗೊಂಚಲನ್ನು ನೆನಪಿಸುವ ಟೊಮೆಟೊ ರಾಶಿಗಳು...

ಇಷ್ಟಕ್ಕೆ ಮುಗಿಯಲಿಲ್ಲ; ಇನ್ನಷ್ಟು ಒಳಹೊಕ್ಕು ನೋಡಿ, ಬಾವಿಯಾಕಾರದ ಸಾಂಬಾರ ಬಟ್ಟಲಿನಂತೆ ಗೋಚರಿಸುವ ಕಾಳು–ಕಡಿ, ದವಸ– ಧಾನ್ಯಗಳ ಪೊಟ್ಟಣಗಳು, ಆಲದ ಬಿಳಿಲಿನ ಹಾಗೆ ಜೋತಾಡುವ ಹುರಿಹಗ್ಗದ ಎಳೆಗಳು, ಗಾಳಿಗೆ ತೊನೆದಾಡುತ್ತ ಕಿಣಿಕಣಿ ಸದ್ದು ಮಾಡುವ ಸಣ್ಣ ಗಂಟೆಗಳು, ಹೋದಲೆಲ್ಲ ಮೂಗಿಗೆ ಅಪ್ಪಳಿಸುವ ಕಾಂದಾ ಬಜ್ಜಿಯ ಘಮ!

ರ್ರೊಂಯ್‌ನೆ ಹಾದು ಹೋಗುವ ಕೆಂಪು ಬಸ್‌ಗಳು, ನಿಂತಲ್ಲೇ ಬೆನ್ನುಬಾಗಿ ಬಸ್ಸು ಹೋದ ಮೇಲೆ ಮತ್ತೊಮ್ಮೆ ಸೆರಗು ಸರಿಪಡಿಸಿಕೊಂಡು ಕಾಯಿಪಲ್ಲೆ ಆರಿಸುವ ಹೆಂಗಸರು, ದಾರಿಗಾಗಿ ಹಾರ್ನ್ ಹೊಡೆಯುತ್ತ ಮಧ್ಯೆ ನುಸುಳುವ ಮೂಟೆ ಹೇರಿಕೊಂಡ ದೊಡ್ಡ ಲಾರಿಗಳು, ಗಟಾರದ ಅಂಚಿನ ಮೂರಿಂಚು ಜಾಗದಲ್ಲಿ ತರಹೇವಾರಿ ತರಕಾರಿ ಸಸಿಗಳನ್ನು ಪೇರಿಸಿಟ್ಟುಕೊಂಡು ಕೂಗಿ ಕರೆಯುವ ಅಜ್ಜಿಯರು, ಗೌಜು, ಗದ್ದಲದ ಗೊಡವೆಯಿಲ್ಲದೇ ಹರಟೆ ಹೊಡೆಯುತ್ತ, ಕಿಲಕಿಲನೆ ನಗುತ್ತ ಗುಂಪಿನಲ್ಲಿ ಸಾಗುವ ಕೆಂಪಂಗಿ ಲಾಮಾಗಳು...

ಪ್ರತಿ ಸೋಮವಾರ ಬೆಳಿಗ್ಗೆ ಸೃಷ್ಟಿಯಾಗುವ ಈ ‘ಸಂತೆ’ಯೆಂಬ ಜೀವಚೈತನ್ಯದ ಸೆಲೆ ಕತ್ತಲೆಯ ಪರದೆ ಬೀಳುವ ಹೊತ್ತಿಗೆ ಮಂಗಮಾಯವಾಗಿ ಬಿಡುತ್ತದೆ. ತಾಲ್ಲೂಕು ಕೇಂದ್ರವಾದರೂ ಅರ್ಧ ಕಿಲೋ ಮೀಟರ್ ಅಂತರದಲ್ಲಿ ಇಡೀ ಪೇಟೆ ಮುಗಿದು ಕಾಡಿನ ನೀರವ ಮೌನಕ್ಕೆ ಜಾರುವ ಪಟ್ಟಣ ಮುಂಡಗೋಡ.

ಸಿದ್ದಿಗಳು, ಸಿಂಧಿಗಳು, ಲಂಬಾಣಿಗಳು, ಗವಳಿಗಳು, ಕೊರವರು, ಮಲಬಾರಿಗಳು, ತಮಿಳರು, ಕೊನೆಗೆ ಇಲ್ಲಿಯೇ ಕ್ಯಾಂಪ್‌ ಹಾಕಿರುವ ಟಿಬೆಟನ್ನರು... ಹೌದು, ಇಲ್ಲಿನ ಸಂತೆಯಲ್ಲಿ ಅದೆಷ್ಟೊಂದು ಜನಾಂಗೀಯ ವೈವಿಧ್ಯ! ಕಾಡಿನ ಹಳ್ಳಿಗಳಿಂದ ಸಂತೆಗಾಗಿಯೇ ನಾಡಿಗೆ ಬರುವ ಸಿದ್ದಿಗಳು, ಹಿಂದೆ ಅಣಬೆಗಳನ್ನೂ ನಾನಾ ಜಾತಿಯ ಕೆಸುವಿನ ಗಡ್ಡೆಗಳನ್ನೂ ತರುತ್ತಿದ್ದರಂತೆ. ಈಗ ಹಾಗೆ ಬರುವ ಗಡ್ಡೆಗಳ ಪ್ರಮಾಣ ತುಂಬಾ ಕಡಿಮೆಯಾಗಿದೆ. ಎಲ್ಲ ಜನಾಂಗದವರಿಗೆ ಬೇಕಾದ ಸಾಮಗ್ರಿಗಳನ್ನು ಮೊಗೆ ಮೊಗೆದು ಕೊಡುವ ಈ ಸಂತೆ, ಪ್ರತಿವರ್ಷ ಉರುಸ್‌ ನಡೆಯುವ ಒಂದುವಾರ ಮಾತ್ರ ತನ್ನ ಮೂಲನೆಲೆಯಿಂದ ಯಲ್ಲಾಪುರ ರಸ್ತೆಗೆ ಸ್ಥಳಾಂತರಗೊಳ್ಳುತ್ತದೆ.

ಸೋಮವಾರ ಬಂತೆಂದರೆ ಸಾಕು, ಬಂಕಾಪುರ, ಶಿಗ್ಗಾಂವಿ, ಸವಣೂರು ಭಾಗದ ವ್ಯಾಪಾರಿಗಳು ಬೆಳ್ಳಂಬೆಳಿಗ್ಗೆಯೇ ಹಾಜರು. ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಮುಂಡಗೋಡಿನ ಜನರಿಗೆ ಸನಿಹದ ಹುಬ್ಬಳ್ಳಿಯ ಒಡನಾಟ ಜಾಸ್ತಿ. ಅಲ್ಲಿನ ವ್ಯಾಪಾರಸ್ಥರಿಗೂ ಮುಂಡಗೋಡ ಸಂತೆಯ ಮೇಲೆ ವಿಶೇಷ ಸೆಳೆತ.

ಹುಬ್ಬಳ್ಳಿಯ ಅಜ್ಜ ಮಹಮ್ಮದ್ ಇಸ್ಮಾಯಿಲ್, 35 ವರ್ಷಗಳಿಂದ ಮುಂಡಗೋಡ ಸಂತೆಗೆ ಬುಡ್ಡಿದೀಪ, ಲಾಟೀನು, ಚಿಮಟಿಗೆ, ಇಕ್ಕಳ ಮೊದಲಾದ ಸಾಮಗ್ರಿಗಳನ್ನು ಮಾರಾಟಕ್ಕೆ ತರುತ್ತ ಬಡವರ ಬಂಧುವಾಗಿದ್ದಾರೆ. ಹುಬ್ಬಳಿಯಲ್ಲಿದ್ದರೆ ಮನೆಯಲ್ಲೇ ಇರುವ ಅವರು ಮುಂಡಗೋಡ ಸಂತೆಗೆ ಬಂದರೆ ಪಕ್ಕಾ ವ್ಯಾಪಾರಿ. ಚೌಕಾಶಿಗೆ ನಿಲ್ಲುವ ಗ್ರಾಹಕರ ಕಿರುಜಗಳಕ್ಕೆ ಬಗ್ಗದ ಈ ಅಜ್ಜ ಹೇಳುವ ಹಾಗೆ, ‘ಮೊದ್ಲು ಸಿಕ್ಕಾಪಟ್ಟಿ ಜನಾ ಬರ್ತಿದ್ರು. ಈಗ ವ್ಯಾಪಾರ ಭಾಳ್ ಡೌನ್ ಆಗೈತ್ರಿ. ಮಳಿ ಇಲ್ಲ, ಜನ್ರಿಗೆ ದುಡಿಮೆ ಇಲ್ರಿ. ಮತ್ ಈ ಟಿಬೆಟ್ ಮಂದಿ ಎಲ್ಲಾ ಹುಬ್ಬಳ್ಳಿಗೇ ಬಂದ್ ತಗಂಡ್ ಹೊಕ್ಕಾರ’.

ಸುತ್ತಲಿನ ಹತ್ತಾರು ಹಳ್ಳಿಗರಿಗೆ ಮುಂಡಗೋಡ ಸಂತೆಯೆಂದರೆ ಜಾತ್ರೆಯ ಸಡಗರ. ಬಂಕಾಪುರದ ಮುಸ್ಲಿಂ ವ್ಯಾಪಾರಿಗಳು ಸರಕಿನೊಂದಿಗೆ ಬಂದರೇ ಸಂತೆಗೆ ವಿಶೇಷ ಕಳೆ. ಇತ್ತಿತ್ತಲಾಗಿ ಆಸುಪಾಸಿನ ನಾಲ್ಕಾರು ಊರುಗಳ ಜನರಿಗೆ ಜೊತೆಗೆ ಸಂತೆಯ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ವಾರದ ಇನ್ನುಳಿದ ದಿನಗಳಲ್ಲಿ ಕಾತೂರು, ಇಂದೂರು, ಚಿಗಳ್ಳಿ, ಹುನಗುಂದ ಗ್ರಾಮಗಳಲ್ಲಿ ಸಂತೆ ಪ್ರಾರಂಭವಾಗಿದೆ. ಸಂತೆಯ ಬಯಲೇ ಬದುಕಾಗಿರುವ ಬಜ್ಜಿ ವ್ಯಾಪಾರಿ ಮೀರುನ್ನೀಸಾ ಇದನ್ನು ಸೊಗಸಾಗಿ ಹೇಳಿದರು. ‘ಸಂತಿ ವ್ಯಾಪಾರಕ್ಕೆ ಕುಳಿತು 10 ವರ್ಷ ಆತ್ರಿ. ಮಗ ಅಂಗಡಿ ಹಿಂದೆ ಕುಳಿತು ಕಾಂದಾ (ಈರುಳ್ಳಿ) ಬಜ್ಜಿ, ಚಹಾ ಸಿದ್ಧಪಡಿಸುತ್ತಾನೆ. ನಾನು ಮಾರಾಟಕ್ಕೆ ಕುಳಿತುಕೊಳ್ತೇನೆ. ಏನಿಲ್ಲಂದ್ರೂ ಮುಂಡಗೋಡ ಸಂತೆಯಲ್ಲಿ 5–6 ಸಾವಿರ ರೂಪಾಯಿ ವ್ಯಾಪಾರ ಆಗ್ತದೆ. ದಿನಾ ಒಂದೊಂದು ಸಂತೆಗೆ ಹೋಗ್ತೇವ್ರಿ. ವಾರ ವಾರ ಆಟೊರಿಕ್ಷಾ ಬಾಡಿಗೆ ಕೊಟ್ಟು ಸಾಕಾತು. ಒಂದು ಓಮ್ನಿ ತಗೋಳಾಕ್ ಅರ್ಜಿ ಕೊಟ್ಟೇವಿ’.

ಹಿಂದಿ ಸುಲಲಿತ:
ಶಾಲೆ ಮೆಟ್ಟಿಲು ಹತ್ತದ ಹಳ್ಳಿ ಹೆಂಗಸರು, ಕೂಲಿಗೆ ಹೋಗುವ ಪುರುಷರು ಅರಳು ಹುರಿದಂತೆ ಹಿಂದಿ ಮಾತನಾಡುತ್ತಿದ್ದರು. ನನಗೆ ಕುತೂಹಲ ತಡೆಯಲಾಗಲಿಲ್ಲ. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಆಟಿಕೆ, ಬಾಚಣಿಕೆ, ರಿಬ್ಬನ್, ರಬ್ಬರ್, ಕ್ಲಿಪ್, ಪೌಡರ್, ಕುಂಕುಮ ಕರಡಿಗೆ, ಚಹಾ ಸೋಸುವ ಹುಟ್ಟು ಹರಡಿಕೊಂಡು ಕುಳಿತಿದ್ದ ದುರ್ಗವ್ವ ಅವರನ್ನು ಮಾತಿಗೆಳೆದೆ. ‘ಮೂವತ್ತು ವರ್ಷಗಳಿಂದ ಸಂತೆ ನೋಡಾಕತ್ತೇನ್ರಿ. ಹುಬ್ಬಳ್ಳಿಯಲ್ಲಿ ಖರೀದಿ ಮಾಡಿ ಇಲ್ಲಿ ಬಂದು ವ್ಯಾಪಾರಕ್ಕೆ ಕೂರ್ತೇವಿ. ಸಂತೆ ಸರಕು ತರೋದು ಮೊದಲಿನ ಹಾಂಗೆ ಸುಲಭ ಇಲ್ರಿ. ಬಸ್‌ನವ್ರು ಭಾಳ್ ಕಿರಿಕಿರಿ ಮಾಡ್ತಾರೆ. ಆದ್ರೂ ಹಳ್ಳಿ ಮಂದಿ ಖರೀದಿಗೆ ಬರ್ತಾರಲ್ರಿ ಅದಕ್ಕೆ ವ್ಯಾಪಾರ ಮಾಡೋ ದಂಧೆ ಬಿಟ್ಟಿಲ್ಲ’ ಎನ್ನುತ್ತಿರುವಾಗಲೇ ಟಿಬೆಟ್ ಮಹಿಳೆಯೊಬ್ಬರು ಖರೀದಿಗೆ ಬಂದರು. ದುರ್ಗವ್ವ ಅವರೊಂದಿಗೆ ಸರಾಗವಾಗಿ ಹಿಂದಿಯಲ್ಲಿ ಮಾತುಕತೆ ನಡೆಸಿದರು.

ಚಿಲ್ಲರೆ ಎಣಿಸುತ್ತ ಮಾತು ಮುಂದುವರಿಸಿದ ಅವರು, ‘ಟಿಬೆಟ್‌ ಮಂದಿ ನಮ್ಗೆ ಹಿಂದಿ ಕಲಿಸ್ಯಾರ. ನಾವ್ ಪ್ರತಿವರ್ಷ ಲಾಮಾ ಕ್ಯಾಂಪ್‌ ಹಬ್ಬಕ್ಕೆ ವ್ಯಾಪಾರಕ್ಕೆ ಹೊಕ್ಕೇವ್ರಿ. ಅವ್ರಿಗೆ ಕನ್ನಡ ಬರಾಂಗಿಲ್ಲ. ಅದಕ್ ನಾವೇ ಹಿಂದಿ ಕಲ್ತೇವಿ. ಟಿಬೆಟ್ ಜನರಿಂದನೇ ನಾವ್ ಮುಂಡಗೋಡ ಮಂದಿ ಸ್ವಲ್ಪ ಉದ್ಧಾರ ಆಗೇವಿ. ಅವ್ರು ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ತಾರ್ರಿ. ನಮ್ ಮಕ್ಕಳಿಗೆ ದಿನಾ ಕೆಲ್ಸಾ ಸಿಗ್ತೈತ್ರಿ’ ಎಂದು ಪಿಸುದನಿಯಲ್ಲಿ ಹೇಳಿದರು.

‘ಮುಂಡಗೋಡ ಸಂತೆ ನೋಡಾಕ್ ಭಾಳ್ ಚಂದಾರೀ. ಗೌವಳೇರು, ಲಮಾಣ್ಕೇರು, ಮುಸ್ಲಿಮರು ಭಾಳ ಜನ ಬರ್ತಾರೆ. ಬಾಕಿ ದಿನ ಬಂದ್ರೆ ರೇಟು ಜಾಸ್ತಿ, ಸಂತೆಯಲ್ಲಿ ಸ್ವಲ್ಪ ಸಸ್ತಾ ಇರ್ತೈತಿ ಅಂತ ಹಳ್ಳಿಗರು ಬರ್ತಾರೆ’ ಎಂದು ವ್ಯಾಪಾರಿ ಕೇದಾರಪ್ಪ ಲೋಕಾಭಿರಾಮವಾಗಿ ಪಟ್ಟಾಂಗ ಹೊಡೆಯುತ್ತಿರುವಾಗ ಸುಳ್ಳೊಳ್ಳಿಯ ರಾಮವ್ವ ಬಂದರು, ‘ಯೇ ತಮ್ಮಾ ಈ ಚಾವಿಗ್ ಎಷ್ಟಪ್ಪಾ ? ಹತ್ತು ರೂಪಾಯಿ ಹೆಚ್ಚಾತು, ಎಂಟು ರೂಪಾಯಿಗೆ ಕೊಡ್ತೀಯಾ ನೋಡು’ ಅನ್ನುತ್ತ, ‘ಪಾಯಖಾನೆಗೆ ಚಾವಿ ತಗೊಂಡ್ ಹೋಗಾಕ್ ಬಂದೇನ್ರಿ. ಊರಾಗ್ ಇದ್ದಿದ್ದಿಲ್ಲ. ಅದ್ನ ನೋಡ್ಕೊಂಡು ಯಾರಾದ್ರೂ ಬಂದ್ ಹೋಗ್ಬಿಡ್ತಾರ್ರಿ. ಸಂತೆ ದುಬಾರಿ ಬಿಡ್ರಿ’ ಎಂದು ನನ್ನ ಕಿವಿಯಲ್ಲಿ ಗುಟ್ಟು ಬಿಚ್ಚಿಟ್ಟು, ಎಂಟು ರೂಪಾಯಿ ಕೊಟ್ಟು ಚಾವಿ ಖರೀದಿಸಿ ಮುಂದೆ ಸಾಗಿದರು.

ಸಂತೆಯಲ್ಲೊಂದು ಪುಟ್ಟ ನರ್ಸರಿ:
ಗಟಾರ ತುದಿಯಲ್ಲಿ ಇದ್ದಿದ್ದು ಮೂರು ಅಂಗುಲದ ಜಾಗ. ಅಲ್ಲೇ ಒಂದು ತರಕಾರಿ ಸಸಿಗಳ ಪುಟ್ಟ ನರ್ಸರಿ. ಸಾಲಾಗಿ ಕುಳಿತ ಮೂರ್ನಾಲ್ಕು ಅಜ್ಜಿಯರು, ಅವರೆದುರು ಬದನೆಕಾಯಿ, ಮೆಣಸಿನ ಸಸಿಗಳ ಸಣ್ಣ ಸಣ್ಣ ಕಟ್ಟು. ‘ಬಾ ತಂಗಿ’ ಎಂದು ಬಾಯ್ತುಂಬ ಕರೆದರು. ‘ಹೊಲದ ಕೆಲ್ಸಾ ಮಾಡಾಕಾಗ್ವಲ್ದು, ಮನಿ ಮುಂದೆ ಗಿಡ ಹಚ್ಚಿ ಸಂತೆಗೆ ತರ್ತೇನಿ. ಒಂದು ತಾಸ್ ಅಂದ್ರೆ ಗಿಡ ಎಲ್ಲ ಕಚ್ಚಾಡಿ ಹೋಕ್ಕಾವ್ರಿ. ಹೋದ್ ವಾರ 300 ರೂಪಾಯಿಗೆ ಬುಟ್ಟಿನೇ ಗುತ್ತಿಗೆ ಕೊಟ್ಟಬಿಟ್ಟೆ’ ಅಂದರು ಬಮ್ಮಿಗದ್ದೆಯ ಶಾಂತವ್ವ.

ಕಾಲಿಗೆ ಹಾಕಿದ್ದ ಚಪ್ಪಲನ್ನು ತೆಗೆದಿಟ್ಟುಕೊಂಡು ಅದರ ಮೇಲೆ ಕುಳಿದ್ದ ರೇಣುಕಾ, ‘15 ರೂಪಾಯಿಗೆ ಒಂದು ಸೀರೆ ಬರ್ರಿ ಅಣ್ಣಾ..’ ಎಂದು ಗಂಟಲು ಹರಿಯುವಂತೆ ಕೂಗುತ್ತಿದ್ದರು. ನೆಲದ ಮೇಲಿದ್ದ ಸೀರೆ ರಾಶಿಗೆ ಜೇನುನೊಣಗಳಂತೆ ಮುತ್ತಿದ್ದರು ಪುರುಷರು ! ಅಲ್ಲೇ ಕುಳಿತು ಚೌಕಾಶಿಗಿಳಿದ ಪಂಚೆಧಾರಿ ಹಿರಿಯನೊಬ್ಬ ಒಮ್ಮೆಲೇ 15 ಸೀರೆ ಖರೀದಿಸಿದ. ಅಬ್ಬಾ ಇದೇನು ಅಚ್ಚರಿ? ನಾನೂ ಹೋಗಿ ‘ಹ್ಯಾಂಗಕ್ಕಾ ಸೀರೆ’ ಎಂದು ಕೇಳಿದೆ. ‘ಒಂದಕ್ 15 ರೂಪಾಯಿ ಹಚ್ಚೇನ್ರಿ, ನೋಡ್ ಕೊಡ್ರಿ’ ಅಂತ ವರಾತ ಹಿಡಿದ ಅವರಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಯುದ್ಧ ಗೆದ್ದು ಬಂದ ಅನುಭವವಾಯಿತು.

ಕೃಷಿ ಬೆಳೆಗಳನ್ನು ಕಾಡುಪ್ರಾಣಿಗಳ ಹಾವಳಿಯಿಂದ ರಕ್ಷಿಸಿಕೊಳ್ಳಲು ಹಳ್ಳಿಗರು ಕಂಡುಕೊಂಡ ಸುಲಭ ಪ್ರತಿಬಂಧಕ ಸೀರೆ ಬೇಲಿ. ಜೋಳದ ಹೊಲದ ಸುತ್ತ ರಂಗುರಂಗಿನ ಸೀರೆ ಬೇಲಿ ಕಟ್ಟಿದರೆ ವನ್ಯಪ್ರಾಣಿಗಳು ಅತ್ತ ಸುಳಿಯುವುದಿಲ್ಲ. ಹೀಗಾಗಿ ಹಳೆ ಸೀರೆಗೆ ಭಾರೀ ಡಿಮಾಂಡು. ಮುಂಡಗೋಡ ಸಂತೆಯಲ್ಲಿ ಹಳೆ ಸೀರೆಗಳ ಬೆಲೆ ಷೇರ್ ಮಾರ್ಕೆಟ್‌ ಸೂಚ್ಯಂಕವಿದ್ದಂತೆ. ಬೇಡಿಕೆ ಜೋರಿದ್ದರೆ ಒಮ್ಮೆಲೇ ಮೇಲೇರಿ ಇನ್ನೊಂದೆರಡು ರಾಶಿ ಬಂದು ಬಿದ್ದರೆ ಆ ಕ್ಷಣವೇ ಪಾತಾಳಕ್ಕೆ ಕುಸಿಯುತ್ತದೆ !

ಕಿರಾಣಿ ತುಂಬಿಕೊಂಡ ಚೀಲ ತಲೆಮೇಲೆ ಏರಿಸಿಕೊಂಡು ಊರಿಗೆ ಹೊರಟಿದ್ದ ಹಮೀಜಾಬಿ ಹೇಳುತ್ತಿದ್ದರು ‘ಸಂತೆಗೆ ಬಂದರೆ ಸಸ್ತಾ ಆಗ್ತದೆ. ವಾರಕ್ಕಾಗುವಷ್ಟು ಸಾಮಾನು ಒಯ್ದರೆ ಮತ್ತೆ ಮುಂದಿನ ಸಂತೆಗೇ ಪೇಟೆಗೆ ಬರುವುದು’ ಎಂದು. ಕೃಷಿಕರು, ಕೂಲಿ ಕಾರ್ಮಿಕರು, ಗುಡ್ಡಗಾಡು ಜನರೇ ಹೆಚ್ಚಿರುವ ಜಿಲ್ಲೆಯ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದು ಮುಂಡಗೋಡ. ಹಮೀಜಾಬಿಯಂತೆ ಬಹುತೇಕ ಹಳ್ಳಿಗರು ಸಂತೆಯೊಂದಿಗೆ ನಂಟು ಬೆಳೆಸಿಕೊಂಡವರು. ವಾರವಿಡೀ ದುಡಿಯುವ ಜನರಿಗೆ ಸೋಮವಾರದ ಸಂತೆಯೆಂದರೆ ಊರಿನ ಜಾತ್ರೆಯಂತೆ, ಬ್ರ್ಯಾಂಡ್‌ ನೇಮ್ ಇಲ್ಲದ ಮಾಲ್‌ ಇದ್ದಂತೆ. ಮುಂಡಗೋಡ ಸಂತೆಯೆಂದರೆ ಹಾಗೆಯೇ, ಅಲ್ಲಿ ಏನುಂಟು ಏನಿಲ್ಲ?!

***

ಸುಂದರ ಸಂತೆ
‘ಮುಂಡಗೋಡ್ ವೀಕ್ಲಿ ಮಾರ್ಕೆಟ್ ಈಸ್ ಅ ನೈಸ್ ಒನ್’ ಎಂಬ ಉದ್ಘಾರದೊಂದಿಗೆ ಮಾತಿಗಿಳಿದ ಟಿಬೆಟನ್ ಕ್ಯಾಂಪ್‌ನ ನಿವಾಸಿ ತಶಿ, ‘ನಾವು ಮುಂಡಗೋಡಿಗರ ಜೊತೆ ಒಂದಾಗಿ ಬದುಕುತ್ತಿದ್ದೇವೆ. ಅವರನ್ನು ಕಂಡರೆ ನಮಗೆ ಬಹಳ ಖುಷಿ’ ಎಂದರು. ಹನುಮಂತಪ್ಪ ತಂದಿದ್ದ ಅನಾನಸ್ ರಾಶಿಯ ಬಳಿ ನಿಂತು ಎರಡು ಅನಾನಸ್ ಖರೀದಿಸಿದ ಅವರಿಗೆ ಕನ್ನಡ ಬರುತ್ತಿರಲಿಲ್ಲ. ಆದರೆ ಕನ್ನಡದ ಸಂಖ್ಯೆಯನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ‘ನೋನೋ 30 ರೂಪಾಯಿಗೆ ಟು’ ಎನ್ನುತ್ತ ಹಣ ಕೊಟ್ಟು ಗಾಡಿಯ ಮೇಲೆ ಹೊರಟೇ ಬಿಟ್ಟರು.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT