ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಪಾವತಿ ಸ್ಥಗಿತಕ್ಕೆ ಹಂಗಾಮು ಕಾರಣ

Last Updated 29 ಆಗಸ್ಟ್ 2017, 5:26 IST
ಅಕ್ಷರ ಗಾತ್ರ

ಗದಗ: ವರ್ತಕರು ಮತ್ತು ದಲ್ಲಾಳರ ಪ್ರತಿಭಟನೆಗೆ ಮಣಿದಿರುವ ಕೃಷಿ ಮಾರಾಟ ಇಲಾಖೆ ಹುಬ್ಬಳ್ಳಿ ಮತ್ತು ಗದುಗಿನ ಐದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಜುಲೈ 24ರಿಂದ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಇ–ಪಾವತಿ ವ್ಯವಸ್ಥೆ ಯನ್ನು ಆಗಸ್ಟ್‌ 26ರಿಂದ ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಿದೆ. ಹೀಗಾಗಿ, ಒಂದು ತಿಂಗಳ ಬಿಡುವಿನ ನಂತರ ಸೋಮವಾರ ದಿಂದ ಮತ್ತೆ ಜಿಲ್ಲೆಯ ಎಲ್ಲ ಎಪಿಎಂಸಿ ಗಳಲ್ಲಿ ವಹಿವಾಟು ಪುನರಾರಂಭ ಆಗಿದೆ.

ವರ್ತಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಳೆದ 34ದಿನಗಳಿಂದ ಜಿಲ್ಲೆಯಲ್ಲಿ ಎಪಿಎಂಸಿ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಇ–ಪಾವತಿ ವ್ಯವಸ್ಥೆ ಜಾರಿಗೆ ಬಂದ ಮೊದಲೆರಡು ದಿನ ಮಾರುಕಟ್ಟೆ ಮಧ್ಯಪ್ರವೇಶ ನೀತಿಯ ಮೂಲಕ  ರಾಜ್ಯ ಸಹಕಾರ ಮಾರಾಟ ಮಹಾಮಂಡಳ ರೈತರಿಂದ ಕೃಷಿ ಉತ್ಪನ್ನ ಖರೀದಿಸಿದ್ದು ಬಿಟ್ಟರೆ ನಂತರದ ದಿನಗಳಲ್ಲಿ ಯಾವುದೇ ವಹಿವಾಟು ನಡದಿಲ್ಲ. ಹೀಗಾಗಿ ಎಪಿಎಂಸಿಗೆ ಮಾರುಕಟ್ಟೆ ಶುಲ್ಕದ ಮೂಲಕ ಬರುತ್ತಿದ್ದ ಲಕ್ಷಾಂತರ ರೂಪಾಯಿ ವರಮಾನ ನಷ್ಟವಾಗಿದೆ.

ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ  ಜಿಲ್ಲೆಯ ಗದಗ, ನರಗುಂದ, ಲಕ್ಷ್ಮೇಶ್ವರ, ಹೊಳೆಆಲೂರ, ಮುಂಡರಗಿ ಎಪಿಎಂಸಿ ಸೇರಿ ಮಾರುಕಟ್ಟೆ ಶುಲ್ಕದ ಮೂಲಕ ಒಟ್ಟು ₹1.44 ಕೋಟಿ ವರಮಾನ ಸಂಗ್ರಹವಾಗಿದೆ. ಆದರೆ, ಜುಲೈ ಕೊನೆಯ ವಾರದಿಂದ ಆಗಸ್ಟ್‌ ಅಂತ್ಯದವರೆಗೆ ಯಾವುದೇ ವಹಿವಾಟು ನಡೆದಿಲ್ಲ.

ಹೀಗಾಗಿ ಕನಿಷ್ಠ ₹50 ಲಕ್ಷದಷ್ಟು ವರಮಾನ ನಷ್ಟವಾಗಿದೆ. ‘ಈಗ ಸೀಸನ್‌ ಅಲ್ಲ, ಹೀಗಾಗಿ ನಷ್ಟದ ಪ್ರಮಾಣ ಕಡಿಮೆ. ಸೀಸನ್‌ ಅವಧಿಯಲ್ಲಿ ಈ ಯೋಜನೆ ಜಾರಿಗೆ ತಂದಿದ್ದರೆ  ತಿಂಗಳಿಗೆ ಕನಿಷ್ಠ ₹1ರಿಂದ ₹2 ಕೋಟಿ ಯಷ್ಟು ವರಮಾನ ನಷ್ಟವಾಗುತ್ತಿತ್ತು’ ಎಂದು ಗದಗ ಎಪಿಎಂಸಿ ಮೂಲಗಳು ಹೇಳಿವೆ.

ಹೊರ ರಾಜ್ಯದವರಿಂದ ವಹಿವಾಟು: ಎರಡು ವರ್ಷಗಳ ಹಿಂದೆಯೇ ಅಂದರೆ 2015ರ ಏಪ್ರಿಲ್‌ನಲ್ಲೇ ಹುಬ್ಬಳ್ಳಿ ಮತ್ತು ಗದುಗಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಇ–ಮಾರಾಟ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಇ–ಮಾರಾಟ ವ್ಯವಸ್ಥೆ ಜಾರಿ ಯಾದ ನಂತರ ಹೊರ ರಾಜ್ಯದ ವರ್ತಕರು ಗದುಗಿನ ಎಪಿಎಂಸಿಯಿಂದ  ಕೃಷಿ ಉತ್ಪನ್ನಗಳನ್ನು ಖರೀದಿಸುವುದು ಗಣನೀಯವಾಗಿ ಹೆಚ್ಚಿದೆ. ಹೀಗಾಗಿ ಮಾರುಕಟ್ಟೆ ಶುಲ್ಕದ ಮೂಲಕ ಸಂಗ್ರಹ ವಾಗುವ ವರಮಾನ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2016– 17ನೇ ಸಾಲಿನಲ್ಲಿ ₹11.23 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿತ್ತು. ಬರ ಮತ್ತು ಮಳೆ ಕೊರತೆ ಇದ್ದಿದ್ದರಿಂದ ಇದು ತುಸು ಕಡಿಮೆಯಾಗಿ ₹9.73 ಕೋಟಿ ಸಂಗ್ರಹವಾಗಿತ್ತು.

‘ಸೀಸನ್‌ ಇದ್ದಾಗ ಜಿಲ್ಲೆಯ ಐದೂ ಎಪಿಎಂಸಿಗಳು ಸೇರಿ ಪ್ರತಿ ನಿತ್ಯ ಸರಾಸರಿ ₹5ರಿಂದ ₹6 ಕೋಟಿ ಮೊತ್ತದ ವಹಿ ವಾಟು ನಡೆಯುತ್ತದೆ. ಗದಗ ಎಪಿಎಂಸಿ ಒಂದರಲ್ಲೇ ನಿತ್ಯ ಸರಾಸರಿ 200 ಲಾಟ್‌ ಕೃಷಿ ಉತ್ಪನ್ನಗಳು ಮಾರಾಟವಾಗುತ್ತವೆ ಆದರೆ, ಕಳೆದ ತಿಂಗಳಲ್ಲಿ ಯಾವುದೇ ವಹಿವಾಟು ನಡೆದಿಲ್ಲ. ಹೆಸರು ಕಾಳಿನ ಸೀಸನ್‌ ಇನ್ನಷ್ಟೇ ಆರಂಭವಾಗಲಿದೆ. ಗದುಗಿನ ಹೆಸರು ಕಾಳಿಗೆ ಹೊರ ರಾಜ್ಯದಲ್ಲಿ ಹೆಚ್ಚು ಬೇಡಿಕೆ ಇದೆ’ ಎಂದು ವರ್ತಕರೊಬ್ಬರು ಹೇಳಿದರು.

ಆರ್ಥಿಕ ಹಾನಿ ತಡೆಗಟ್ಟಲು ಕ್ರಮ
‘ಎಪಿಎಂಸಿಗೆ ಕೃಷಿ ಉತ್ಪನ್ನಗಳು ಆವಕವಾಗುವ ಸೀಸನ್‌ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಪ್ರಾರಂಭ ಆಗಲಿದ್ದು, ಈ ಸಂದರ್ಭದಲ್ಲಿ ವರ್ತಕರು ವಹಿವಾಟು ಸ್ಥಗಿತ ಗೊಳಿಸಿದರೆ ರೈತರಿಗೆ ತೊಂದರೆ ಆಗುತ್ತದೆ. ಮತ್ತು ಎಪಿಎಂಸಿ ಚಟುವಟಿಕೆಗಳ ಮೇಲೆ ಅವಲಂಬಿತರಾಗಿರುವವರಿಗೆ ತೀವ್ರ ಆರ್ಥಿಕ ಹಾನಿಯಾಗುತ್ತದೆ. ಹೀಗಾಗಿ ಇ–ಪಾವತಿ ವ್ಯವಸ್ಥೆ ಸ್ಥಗಿತಗೊಳಿಸುತ್ತಿದ್ದೇವೆ’ಎಂದು ಕೃಷಿ ಮಾರಾಟ ಇಲಾಖೆ, ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಅವರಿಗೆ ರವಾನಿಸಿರುವ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದೆ.

ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಎಪಿಎಂಸಿಗೆ ಹೆಚ್ಚಿನ ಕೃಷಿ ಉತ್ಪನ್ನಗಳ ಆವಕ ಇರುವುದಿಲ್ಲ. ಹೀಗಾಗಿ ಇ–ಪಾವತಿ ವ್ಯವಸ್ಥೆ ಪ್ರಾಯೋಗಿಕ ಜಾರಿಗೆ ಇದೇ  ಸಮಯವನ್ನು ಸಹಕಾರ ಇಲಾಖೆ ಆಯ್ದುಕೊಂಡಿತ್ತು. ಯಾವುದೇ ಸನ್ನಿವೇಶದಲ್ಲೂ ಈ ಯೋಜನೆಯನ್ನು ಜಾರಿಗೆ ತರಲೇಬೇಕು, ಯೋಜನೆ ಜಾರಿಗೆ ನಿಯೋಜನೆಗೊಂಡಿರುವ ವಿಶೇಷ ನೋಡೆಲ್‌ ಅಧಿಕಾರಿಗಳು ಆಯಾ ಎಪಿಎಂಸಿಗಳಲ್ಲಿ ಜುಲೈ 20ರಿಂದಲೇ ಹಾಜರಿದ್ದು ನಿಗಾ ವಹಿಸಬೇಕು.

ಹೊಸ ವ್ಯವಸ್ಥೆ ಜಾರಿಗೆ ಅಸಹಕಾರ ತೋರಿದರೆ ಅಂತಹ ವರ್ತಕರ ಪರವಾನಗಿ ರದ್ದುಗೊಳಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಿ ಎಂದೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ವರ್ತಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಜು.24ರಿಂದ ಆ. 26ರವರೆಗೆ ನಿರಂತರ ಪ್ರತಿಭಟನೆ ನಡೆಸಿದ್ದರು.  

ಜಿಲ್ಲೆಯ ಐದೂ ಎಪಿಎಂಸಿಗಳು ಸೇರಿ ಒಟ್ಟು 1253 ವರ್ತಕರಿದ್ದು, ಇವರಲ್ಲಿ 1216 ವರ್ತಕರು ಇ–ಪಾವತಿಗೆ ನೋಂದಣಿ ಮಾಡಿಕೊಂಡಿ ದ್ದರು. ಒಟ್ಟು 536 ದಲ್ಲಾಳರಿದ್ದು, ಇವರಲ್ಲಿ 507 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಆದಾಯ ತೆರಿಗೆ ವ್ಯಾಪ್ತಿಗೆ ಬರುವುದ ರಿಂದ ಸಾಕಷ್ಟು ದಲ್ಲಾಳರು ಲೇವಾದೇವಿ ಪರವಾನಗಿ ಪಡೆಯಲು ಹಿಂದೇಟು ಹಾಕಿದ್ದರು. ಜತೆಗೆ 24 ಗಂಟೆಗಳ ಒಳಗಾಗಿ ರೈತರಿಗೆ ವೇತನ ಪಾವತಿಸಬೇಕು ಎಂಬ ನಿಬಂಧನೆ ಯಲ್ಲಿ ಸಡಿಲಿಕೆ ತರಬೇಕೆಂದು ಆಗ್ರಹಿಸಿದ್ದರು.

* * 

ಇ-–ಪಾವತಿ ಸ್ಥಗಿತಗೊಳಿಸಿರು ವುದಾಗಿ ಕೃಷಿ ಮಾರುಕಟ್ಟೆ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ವರ್ತಕರ ಮುಷ್ಕರ ವಾಪಸ್‌ ಪಡೆಯಲಾಗಿದೆ
ಸಂಗಮೇಶ ದುಂದೂರ,
ಎಪಿಎಂಸಿ ಉಪ ಸಮಿತಿ ಅಧ್ಯಕ್ಷ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT