ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ವಿರೋಧಿ ಚಟುವಟಿಕೆ ಸಹಿಸಲ್ಲ

Last Updated 29 ಆಗಸ್ಟ್ 2017, 5:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪಕ್ಷ ವಿರೋಧಿ ಚಟುವಟಿಕೆಯನ್ನು ಸಹಿಸುವುದಿಲ್ಲ. ಅಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರನ್ನು ಪಕ್ಷದಲ್ಲಿ ಇಟ್ಟುಕೊಳ್ಳುವುದೂ ಇಲ್ಲ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ. ಪರಮೇಶ್ವರ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಹಾಗೂ ಗ್ರಾಮೀಣ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನಡೆದ ಬೂತ್‌ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ವಿರುದ್ಧ ಹೋರಾಟ ಮಾಡಬೇಕು. ನಮ್ಮ, ನಮ್ಮಲ್ಲಿ ಕಲಹ ಮಾಡಿಕೊಳ್ಳುವುದು ಬೇಡ. ಕಾರ್ಯಕರ್ತರು ಯಾವುದೇ ಹಿಂಜರಿಕೆ ಇಲ್ಲದೆ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ದೂರು ನೀಡಿ. ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದರು.

‘ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೆ ನಾನೂ ಮಲಗಲ್ಲ, ನಿಮ್ಮನ್ನೂ ಮಲಗಲು ಬಿಡುವುದಿಲ್ಲ. ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೆ ಮಲಗುವ ಹಾಗಿಲ್ಲ. ಪಕ್ಷ ಸಂಘಟನೆ ಬಿಟ್ಟು ಮನೆಯಲ್ಲಿ ಕುಳಿತರೂ ಸಹಿಸುವುದಿಲ್ಲ’ ಎಂದು ಹೇಳಿದರು.

‘ಚುನಾವಣೆಗೂ ಮುಂಚೆ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಲಾಗಿತ್ತು. ಬಹುತೇಕ ಭರವಸೆಗಳನ್ನು ಈಡೇರಿಸಲಾಗಿದೆ. ಒಂದು ಲಕ್ಷ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ. 10 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ನೀರಾವರಿಗಾಗಿ ₹ 62,000 ಕೋಟಿ ನೀಡಲಾಗಿದ್ದು, ಅದರಲ್ಲಿ ಈಗಾಗಲೇ 42 ಸಾವಿರ ಖರ್ಚು ಮಾಡಲಾಗಿದೆ. 1.5 ಲಕ್ಷ ಜನರಿಗೆ ಸರ್ಕಾರಿ ಕೆಲಸ ನೀಡಲಾಗಿದೆ’ ಎಂದರು.

ಬಿಜೆಪಿಯ ಚುನಾವಣಾ ವೆಚ್ಚ ಭರಿಸಿದ ಉದ್ಯಮಿಗಳಾದ ಆದಾನಿ, ಅಂಬಾನಿ ಅಂಥವರ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಆರೋಪಿಸಿದ ಅವರು. ರೈತರ ಸಾಲ ಮನ್ನಾ ಮಾಡುವುದಿಲ್ಲ ಏಕೆ ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ರೈತ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ಕೇಂದ್ರದ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಎರಡು ಕಣ್ಣುಗಳಿದ್ದ ಹಾಗೆ. ಐದು ವರ್ಷದಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಂಡಿದ್ದೇವೆ. ಬಿಜೆಪಿ ಅವರು ಮಾತನಾಡುವುದನ್ನು ಕಲಿತಿದ್ದಾರೆ.

ಜತೆಗೆ ಕಾಂಗ್ರೆಸ್‌ ಹಳೆಯ ಯೋಜನೆಗಳನ್ನೇ ಹೊಸ ಹೆಸರಿನಲ್ಲಿ ಜಾರಿಗೊಳಿಸುತ್ತಿದ್ದಾರೆ ಎಂದು ಟೀಕಿಸಿದರು. ಕುಂದಗೋಳ ಶಾಸಕ ಸಿ.ಎಸ್‌. ಶಿವಳ್ಳಿ ಮಾತನಾಡಿ, ಕೇಂದ್ರ ಸರ್ಕಾರ ಬರೀ ಘೋಷಣೆಗಳನ್ನು ಮಾಡುತ್ತಿದೆ. ಸಾಲಮನ್ನಾ, ಮಹದಾಯಿ ಬಗೆಹರಿಸಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಉದ್ಯೋಗ ಭರವಸೆ ಈಡೇರಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮುಖಂಡ ಎಫ್‌.ಎಚ್‌. ಜಕ್ಕಪ್ಪನವರ ಮಾತನಾಡಿದರು. ಎ.ಎಂ. ಹಿಂಡಸಗೇರಿ, ಐ.ಜಿ. ಸನದಿ, ವೀರಕುಮಾರ ಪಾಟೀಲ ಇದ್ದರು.

ಸಾಧನೆಯ ಪಟ್ಟಿ ಕೊಡಿ
ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದ ಐದು ವರ್ಷಗಳಲ್ಲಿ ಮಾಡಿದ ಸಾಧನೆಯ ಪಟ್ಟಿ ಕೊಡಿ. ಕಾಂಗ್ರೆಸ್‌ ಸರ್ಕಾರ ಐದು ವರ್ಷಗಳಲ್ಲಿ ಮಾಡಿದ ಸಾಧನೆಗಳ ಪಟ್ಟಿ ಕೊಡುತ್ತೇವೆ. ಎರಡನ್ನೂ ನೋಡಿ ಜನರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಸವಾಲು ಹಾಕಿದರು.

ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಈಗ ಐದು ವರ್ಷಗಳ ಕಾಲ ಒಬ್ಬರೇ ಮುಖ್ಯಮಂತ್ರಿಯಾಗಿದ್ದಾರೆ. ಸುಭದ್ರ ಸರ್ಕಾರ ನೀಡಿದ್ದೇವೆ. ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ, ಮಹದಾಯಿ ವಿಷಯ ಬಂದಾಗ ಬಿಜೆಪಿ ನಾಯಕರು ಮಾತನಾಡುವುದೇ ಇಲ್ಲ ಎಂದು ತರಾಟೆ ತೆಗೆದುಕೊಂಡರು.

ಪ್ರಧಾನಿ ಆಗುವ ಮುನ್ನ ಮೋದಿ ಅವರು ಆಧಾರ್‌ ಯೋಜನೆಯನ್ನು ವಿರೋಧಿಸಿದ್ದರು. ಈಗ ಎಲ್ಲದಕ್ಕೂ ಆಧಾರ್‌ ಕಡ್ಡಾಯಗೊಳಿಸುತ್ತಿದ್ದಾರೆ. ಜಿಎಸ್‌ಟಿಯೂ ಯುಪಿಎ ಸರ್ಕಾರದ ಕೂಸು. ನೋಟು ರದ್ದು ಮಾಡುವ ಮೂಲಕ ಕಪ್ಪು ಹಣ ಹೊರ ತೆಗೆಯಲಾಗುವುದು ಎಂದು ಹೇಳಿದ್ದರು. ಈಗ ಎಷ್ಟು ಕಪ್ಪು ಹಣ ಸಿಕ್ಕಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

* * 

ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗುವುದೂ ಅಷ್ಟೇ ಸತ್ಯ
ಡಾ. ಜಿ. ಪರಮೇಶ್ವರ್‌
ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT