ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಪಾರು ಆದೇಶ ಹಿಂಪಡೆಯಿರಿ

Last Updated 29 ಆಗಸ್ಟ್ 2017, 6:18 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಧೋಳದ ಹಿಂದೂ ಜಾಗರಣ ವೇದಿಕೆಯ 9 ಮಂದಿ ಮುಖಂಡರ ಗಡಿಪಾರು ಆದೇಶ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸಂಸದ ಪಿ.ಸಿ.ಗದ್ದಿಗೌಡರ ನೇತೃತ್ವದಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಭಾನುವಾರ ಐಜಿಪಿ ಡಾ.ಕೆ. ರಾಮಚಂದ್ರರಾವ್ ಅವರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಐಜಿಪಿ ಅವರನ್ನು ಭೇಟಿಯಾದ ಬಿಜೆಪಿ ನಿಯೋಗ,  ಮುಖಂಡ ಶಿವಾನಂದ ಬಡಿಗೇರ ಸೇರಿದಂತೆ 9 ಮಂದಿ ಹಿಂದೂ ಜಾಗರಣ ವೇದಿಕೆ ಸದಸ್ಯರನ್ನು ಹಾಗೂ ಮುಸ್ಲಿಂ ಸಮಾಜದ ಮುಖಂಡರನ್ನು ಗಣೇಶ ಹಬ್ಬದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ. ಹಬ್ಬದ ವೇಳೆ ಈ ರೀತಿ ಮಾಡಿರುವುದು ಸರಿಯಲ್ಲ.

ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ನೀಡುವುದು ಸರಿಯಲ್ಲ. ಹಾಗಾಗಿ ಆಗಸ್ಟ್ 31ರೊಳಗೆ ಗಡಿಪಾರು ಆದೇಶ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಮುಧೋಳ ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಧೋಳದಲ್ಲಿ 2015ರಲ್ಲಿ ಹಬ್ಬದ ವೇಳೆ ಕಹಿ ಘಟನೆ ನಡೆದಿದೆ. ಅದನ್ನು ಮರೆತು ಸಂಭ್ರಮದಿಂದ ಗಣೇಶ ಉತ್ಸವ ಆಚರಿಸೋಣ. ಗಡಿಪಾರು ಮಾಡುವ ಮೂಲಕ ಮತ್ತೆ ಅದನ್ನು ನೆನಪಿಸುವ ಕೆಲಸ ಆಗಬಾರದು. ಹಿಂದೂ–ಮುಸ್ಲಿಮ್ ಎಲ್ಲರೂ ಸೇರಿ ಶಾಂತಿಯಿಂದ ಗಣೇಶ ಉತ್ಸವ ಆಚರಿಸಲಾಗುತ್ತಿದೆ. ಹಾಗಾಗಿ ಗಡಿಪಾರು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಮುಖಂಡರ ಮನವಿಗೆ ಪ್ರತಿಕ್ರಿಯಿಸಿದ ಐಜಿಪಿ ಡಾ.ಕೆ.ರಾಮಚಂದ್ರರಾವ್, ‘ಗಡಿಪಾರು ಆದೇಶ ಯಾವುದೇ ದುರುದ್ದೇಶದಿಂದ ಕೂಡಿಲ್ಲ. ಹಬ್ಬದ ವೇಳೆ ಜಿಲ್ಲೆಯಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಯಾರೊಬ್ಬರನ್ನೂ ವೈಯಕ್ತಿಕವಾಗಿ ಗುರಿ ಮಾಡಿಲ್ಲ. ಗಣೇಶ ವಿಸರ್ಜನೆ ಕಾರ್ಯ ಮುಗಿದ ಬಳಿಕ ಗಡಿಪಾರು ಆದೇಶ ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದರು.

ನಿಯೋಗದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ, ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ  ವೀರಣ್ಣ ಚರಂತಿಮಠ, ಶ್ರೀಕಾಂತಕುಲಕರ್ಣಿ, ನಾರಾಯಣಸಾ ಭಾಂಡಗೆ, ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಕಿರಾಣ ಪವಾಡಶೆಟ್ಟರ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮೋಹನ  ಜಾಧವ  ಮತ್ತಿತರರು ಪಾಲ್ಗೊಂಡಿದ್ದರು.

ಆಗಸ್ಟ್‌ 31ರಂದು ಮುಧೋಳ ಚಲೋ
ಬಾಗಲಕೋಟೆ: ಹಿಂದೂ ಜಾಗರಣ ವೇದಿಕೆ ಮುಖಂಡ ಶಿವಾನಂದ ಬಡಿಗೇರ ಹಾಗೂ ಇತರೆ ಎಂಟು ಜನರ  ಗಡಿಪಾರು ಆದೇಶ ಹಿಂಪಡೆಯದಿದ್ದಲ್ಲಿ ಇದೇ 31ರಂದು ಮುಧೋಳ ಚಲೋ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಚಾಲಕ ಅಯ್ಯನಗೌಡರ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮುಧೋಳದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯ ವಿವಿಧೆಡೆಯಿಂದ  ಹಿಂದೂ ಪರ ಸಂಘಟನೆಗಳ ಸಾವಿರಾರು ಮಂದಿ ಕಾರ್ಯಕರ್ತರು ಬರಲಿದ್ದಾರೆ. ಲೋಕಾಪುರ ರಸ್ತೆ ಹತ್ತಿರದ ಎಪಿಎಂಸಿ ಆವರಣದಿಂದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಬೃಹತ್ ಖಂಡನಾ ಸಭೆ ನಡೆಸಲಾಗುವುದು ಎಂದರು.

‘ಹಿಂದೂ ಧರ್ಮ ರಕ್ಷಣೆಗಾಗಿ ಯಾವುದೇ ರೀತಿಯ ಹೋರಾಟಕ್ಕೂ ವೇದಿಕೆ ಸಿದ್ದವಾಗಿದೆ. ದುರುದ್ದೇಶ ಪೂರಕವಾಗಿ 108 ಕಲಂ ಅನ್ವಯ ಸಂಘಟನೆಯ ಕಾರ್ಯಕರ್ತರ ಮೇಲೆ ಮೊಕದ್ದಮೆ ದಾಖಲಿಸಿ ಕೋರ್ಟ್‌ಗೆ ಅಲೆದಾಡುವಂತೆ ಮಾಡುವ ಮೂಲಕ ದೌರ್ಜನ್ಯ ಎಸಗಲಾಗುತ್ತಿದೆ’ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಮುತ್ತಗಿ, ಸಂಚಾಲಕ ವಿಶ್ವನಾಥ ಕುಂಟೋಜಿ, ಶ್ರೀಕಾಂತ್‌  ಹಾಜರಿದ್ದರು.

* * 

ಸರ್ಕಾರ ಹಿಂದೂಪರ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಹೀಗೆ ಮುಂದುವರಿಸಿದರೆ ಯಾವ ಕ್ಷಣದಲ್ಲಿಯಾದರೂ ಜಿಲ್ಲಾ ಸ್ತಬ್ಧ ಚಳವಳಿಗೆ ಕರೆ ನೀಡಲಾಗುವುದು
ಅಶೋಕ ಮುತ್ತಿನಮಠ
ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT