ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಕೇಂದ್ರ ಸ್ಥಾನದಲ್ಲೇ ಸೌಲಭ್ಯ ಕೊರತೆ

Last Updated 29 ಆಗಸ್ಟ್ 2017, 6:29 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಘಾಟಬೋರಾಳ ಗ್ರಾಮದಲ್ಲಿ ಚರಂಡಿ ಮೊದಲಾದ ಮೂಲಸೌಲಭ್ಯ ಕೊರತೆ ಕಾರಣ ಗ್ರಾಮಸ್ಥರು ರೋಗಭೀತಿಯಲ್ಲಿದ್ದಾರೆ.

ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ಅಂತರದಲ್ಲಿರುವ ಗ್ರಾಮದಲ್ಲಿ ಜಾಮನಗರ್, ಸೇವಾನಗರ, ರೇಡು, ಝರಾಳ್‌ ಹಾಗೂ ಕಂಟು ತಾಂಡಾ ಸೇರಿ 4 ತಾಂಡಾ ಮತ್ತು 6 ಗ್ರಾಮಗಳು ಘಾಟಬೋರಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುತ್ತವೆ.

ಘಾಟಬೋರಾಳ್‌ ಗ್ರಾಮದಲ್ಲಿ 12 ಸಾವಿರ ಜನಸಂಖ್ಯೆ ಇದೆ. 23 ಸದಸ್ಯರ ಪಂಚಾಯಿತಿಯಲ್ಲಿ ಕೇಂದ್ರ ಗ್ರಾಮ ಒಂದರಲ್ಲೇ 18 ಸದಸ್ಯರಿದ್ದಾರೆ. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕೇಂದ್ರ ಸ್ಥಾನವಾಗಿದೆ. ಅಲ್ಲದೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲರ ಕೇಂದ್ರ ಗ್ರಾಮ. ಆದರೂ ಇಲ್ಲಿ ಚರಂಡಿ ಕಾಣ ಸಿಗುವುದಿಲ್ಲ. ರಸ್ತೆ ಮಧ್ಯೆ ತ್ಯಾಜ್ಯ ಸಂಗ್ರಹಗೊಂಡಿದ್ದು, ಜನರು ರೋಗಭೀತಿ ಎದುರಿಸುತ್ತಿದ್ದಾರೆ.

ಗ್ರಾಮದಲ್ಲಿ ನಿರ್ಮಿಸಿರುವ ಸಿಮೆಂಟ್‌ ರಸ್ತೆಗಳು ಹಾಳಾಗಿದ್ದು, ಗುಂಡಿ ಬಿದ್ದ ಕಾರಣ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ಈ ಬಗ್ಗೆ ಚುನಾಯಿತ ಪ್ರತಿನಿಧಿ, ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಶಿವಾಜಿರಾವ, ರಾಜಾರಾಮ, ವೆಂಕಟರಾವ ಆರೋಪಿಸಿದ್ದಾರೆ.ಇಲ್ಲಿನ ಸರ್ಕಾರಿ ಶಾಲೆ ಶಿಕ್ಷಕರು ಸಮರ್ಪಕ ಸಮಯ ಪಾಲಿಸದ ಕಾರಣ ಮಕ್ಕಳ ಸಂಖ್ಯೆ ಜೊತೆ ಶಿಕ್ಷಣದ ಗುಣಮಟ್ಟವೂ ಕುಸಿದಿದ್ದು, ಸುಧಾರಣೆ ಆಗಬೇಕು. ಜೊತೆಗೆ ಪಿಯುಸಿ, ಪದವಿ ಕಾಲೇಜು ಶಿಕ್ಷಣಕ್ಕಾಗಿ ಭಾಲ್ಕಿಗೆ ತೆರಳುವುದಕ್ಕಾಗಿ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂಬುದು ಪಾಲಕರ ಒತ್ತಾಸೆ.

ಅನುದಾನ ಕೊರತೆ ಕಾರಣ ಗ್ರಾಮದಲ್ಲಿ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ಶೀಘ್ರ ಚರಂಡಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸೂಯಬಾಯಿ ಭೋಸ್ಲೆ ಹೇಳಿದರು.

ಗ್ರಾಮದಲ್ಲಿ ಜಲನಿರ್ಮಲ ಯೋಜನೆ ಅಡಿ ಪೈಪ್‌ಲೈನ್‌ ಅಳವಡಿಸಲು ಗುತ್ತಿಗೆದಾರರು ರಸ್ತೆ ಅಗೆದು ಹಾಗೆ ಬಿಟ್ಟಿದ್ದರಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ರಸ್ತೆ ದುರುಸ್ತಿಗೆ ಯತ್ನಿಸುವುದಾಗಿ ಅವರು ಭರವಸೆ ನೀಡಿದರು. ಗ್ರಾಮದಲ್ಲಿ ಹಳೆ ಮತ್ತು ಹೊಸ ಪ್ರದೇಶದಲ್ಲಿ ಎರಡು ಶುದ್ಧ ಕುಡಿವ ನೀರಿನ ಘಟಕ ಆರಂಭಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT