ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ನಗರಸಭೆ ಜತೆ ಜನ ಕೈಜೋಡಿಸಲಿ

Last Updated 29 ಆಗಸ್ಟ್ 2017, 6:56 IST
ಅಕ್ಷರ ಗಾತ್ರ

ಯಾದಗಿರಿ: ‘ನಗರ ಸ್ವಚ್ಛತೆ ಸೇರಿದಂತೆ ಅಭಿವೃದ್ಧಿ ಯೋಜನೆಗಳಿಗೆ ಸಾರ್ವಜನಿಕರು ನಗರಸಭೆ ಜತೆಗೆ ಕೈಜೋಡಿಸಿದಾಗ ನಗರ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ’ ಎಂದು ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸಿ ಹೇಳಿದರು.

ಗಣೇಶ ವಿಸರ್ಜನೆ ಹಾಗೂ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಸೋಮವಾರ ನಗರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
‘ಅಭಿವೃದ್ಧಿ ಕೇವಲ ಸರ್ಕಾರದ ಕೆಲಸ ಎಂಬ ಮನೋಭಾವ ಜನರಲ್ಲಿ ಉಳಿದಿದೆ. ಇಂತಹ ಮನೋಭಾವದಿಂದ ಜನರು ಹೊರಬರದ ಹೊರತು ಸಂಪೂರ್ಣ ಅಭಿವೃದ್ಧಿ ಸಾಧ್ಯವಿಲ್ಲ. ನಗರಸಭೆ ಸ್ವಚ್ಛತೆ ವಿಷಯದಲ್ಲಿ ಸಾಕಷ್ಟು ಶ್ರಮಿಸುತ್ತಿದ್ದರೂ, ನಗರ ಸ್ವಚ್ಛತೆ ನಿರಂತರ ಸವಾಲಾಗಿ ಪರಿಣಮಿಸುತ್ತಿದೆ. ಕಾರಣ, ನಗರಸಭೆಯ ಜತೆಗೆ ಸಾರ್ವಜನಿಕರ ಅಸಹಕಾರದಿಂದಾಗಿ ಸ್ವಚ್ಛತೆ ವಿಷಯದಲ್ಲಿ ಹಿನ್ನಡೆಗೆ ಕಾರಣವಾಗುತ್ತಿದೆ’ ಎಂದರು.

‘ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಗಸಭೆ ಕೈಗೊಳ್ಳಬೇಕಾದ ಕ್ರಮದಲ್ಲಿ ಸ್ವಲ್ಪ ಎಡವಿದೆ. ಹಾಗಾಗಿ, ನಗರದ ಬಹುತೇಕ ಕಡೆಗಳಲ್ಲಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಆದರೆ, ಅವುಗಳನ್ನು ನಗರಸಭೆ ಹೊಡ್ಡ ಹಾಗೂ ಚಿಕ್ಕ ಕೆರೆಗಳ ಬಳಿ ನಿರ್ಮಿಸಿರುವ ಕೃತಕ ಹೊಂಡಗಳಲ್ಲಿ ವಿಸರ್ಜಿಸಬೇಕು. ಕೃತಕ ಹೊಂಡ ಬಿಟ್ಟು ಕೆರೆ, ಬಾವಿ, ಹಳ್ಳಗಳಲ್ಲಿ ವಿಸರ್ಜಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್ ಮಾತನಾಡಿ, ‘ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ದುರ್ಘಟನೆ ನಡೆಯದಂತೆ ತಡೆಯಲು ಸ್ವಯಂ ಸೇವಕರನ್ನು ನೇಮಿಸಿದೆ. ಪೊಲೀಸ್ ಕರ್ತವ್ಯದ ರೀತಿಯಲ್ಲಿ ಈ ಸ್ವಯಂ ಸೇವಕರು ಕಾರ್ಯನಿರ್ವಹಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ನಗರ ಠಾಣೆ ಪಿಎಸ್‌ಐ ಮಹಾಂತೇಶ್ ಸಜ್ಜನ್‌ ಮಾತನಾಡಿ, ‘ಪ್ರಸಕ್ತ ವರ್ಷ ನಗರದಲ್ಲಿ ಒಟ್ಟು 57 ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ನೀಡಲಾಗಿದೆ. ಕಳೆದ ವರ್ಷ 34 ಗಣೇಶ ಮೂರ್ತಿಗಳಿಗೆ ಪರವಾನಗಿ ನೀಡಲಾಗಿತ್ತು. ಈ ಬಾರಿ 21 ಗಣೇಶ ಮೂರ್ತಿಗಳು ಹೆಚ್ಚಾಗಿ ಪ್ರತಿಷ್ಠಾಪನೆಗೊಂಡಿವೆ. ವಿಸರ್ಜನೆ ವೇಳೆ ಕಾನೂನು ನಿಯಮ ಪಾಲಿಸುವಂತೆ ಅವರಿಂದ ಮುಚ್ಚಳಿಕೆ ಕೂಡ ಬರೆಯಿಸಿಕೊಳ್ಳಲಾಗಿದೆ’ ಎಂದರು.

ಗಣೇಶ ಮೂರ್ತಿ ಪ್ರತಿಷ್ಠಾನೆ ಸೇವಾ ಸಮಿತಿ ಅಧ್ಯಕ್ಷ ಅಯ್ಯಣ್ಣ ಹುಂಡೇಕರ್ ಮಾತನಾಡಿ, ‘ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಆಗುವ ತೊಡಕುಗಳನ್ನು ನಗರಸಭೆ ನಿವಾರಿಸುತ್ತಿಲ್ಲ. ನಗರಸಭೆ ನಿರ್ಮಿಸಿರುವ ದೊಡ್ಡ ಕೆರೆ ಬಳಿಯ ಕೃತಕ ಹೊಂಡಕ್ಕೆ ಮೆರವಣಿಗೆ ನಡೆಸಲು ಸಮರ್ಪಕ ರಸ್ತೆ ಇಲ್ಲ. ಅಲ್ಲದೇ ಇಡೀ ನಗರ ಕತ್ತಲಕೂಪದಲ್ಲಿ ಮುಳುಗಿದ್ದರೂ, ಬೀದಿ ದೀಪದ ವ್ಯವಸ್ಥೆ ಮಾಡಿಲ್ಲ. ಹಾಗಾಗಿ, ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಹಜವಾಗಿ ಸಮಯ ವಿಳಂಬವಾಗುತ್ತದೆ. ಪೊಲೀಸ್ ಇಲಾಖೆ ಆ ಸಂದರ್ಭದಲ್ಲಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡ ವಿಶ್ವನಾಥ ಸಿರವಾರ, ಮುಸ್ಲಿಂ ಸಮಾಜದ ಮುಖಂಡ ಲಾಯಕ್‌ ಹುಸೇನ್ ಬಾದಲ್‌ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಉಪಾಧ್ಯಕ್ಷ ಸ್ಯಾಂಸನ್‌ ಮಾಳಿಕೇರಿ, ಸಿಪಿಐ ಮೌನೇಶ್ವರ ಪಾಟೀಲ, ನಗರಸಭೆ ಸದಸ್ಯ ಮರಲಿಂಗಪ್ಪ ಚಟ್ಟರಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT