ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಗೃಹ ಇಲ್ಲದ 29,118 ಕುಟುಂಬ

Last Updated 29 ಆಗಸ್ಟ್ 2017, 7:20 IST
ಅಕ್ಷರ ಗಾತ್ರ

ಹಾಸನ: ಅ. 2ರೊಳಗೆ ‘ಬಯಲು ಬಹಿರ್ದೆಸೆ ಮುಕ್ತ’ ಜಿಲ್ಲೆಯಾಗಿ ಘೋಷಿಸಲು ಪಣ ತೊಟ್ಟಿರುವ ಜಿಲ್ಲಾ ಪಂಚಾಯಿತಿ, ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಜಿಲ್ಲೆಯ 3,60,414 ಕುಟುಂಬಗಳ ಪೈಕಿ 3,313,26 ಕುಟುಂಬಗಳು ಮಾತ್ರ ಶೌಚಗೃಹ ನಿರ್ಮಿಸಿಕೊಂಡಿದ್ದು, 29,118 ಕುಟುಂಬಗಳು ಇನ್ನೂ ಶೌಚಗೃಹ ನಿರ್ಮಿಸಿಕೊಳ್ಳದೆ ಇರುವುದು ಅಧಿಕಾರಿಗಳಿಗ ತಲೆ ನೋವಾಗಿದೆ.

ಈಗಾಗಲೇ ಸಕಲೇಶಪುರ, ಆಲೂರು, ಹಾಸನ ಮತ್ತು ಬೇಲೂರು ಅನ್ನು ಬಯಲು ಬಹಿರ್ದೆಸೆ ಮುಕ್ತ ತಾಲ್ಲೂಕುಗಳಾಗಿ ಘೋಷಣೆ ಮಾಡಲಾಗಿದೆ. ಉಳಿದ ನಾಲ್ಕು ತಾಲ್ಲೂಕುಗಳಲ್ಲಿ ಶೇ 8ರಷ್ಟು ಕಾಮಗಾರಿ ಬಾಕಿ ಇದೆ.

ಅರಕಲಗೂಡು 2540, ಅರಸೀಕೆರೆ 16200, ಚನ್ನರಾಯಪಟ್ಟಣ 6218, ಹೊಳೆನರಸೀಪುರ 4250 ಮನೆಗಳು ಶೌಚಾಲಯ ಹೊಂದಬೇಕಿದೆ. ಇದರಲ್ಲಿ 19 ಸಾವಿರ ಫಲಾನುಭವಿಗಳು ಶೌಚಗೃಹ ನಿರ್ಮಿಸಿಕೊಳ್ಳಲು ಗ್ರಾಮ ಪಂಚಾಯಿತಿಯಿಂದ ಕಾಮಗಾರಿ ಆದೇಶ ಪಡೆದಿದ್ದಾರೆ. ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಿಧಾನಗತಿಯಲ್ಲಿ ಕಾಮಗಾರಿ ಸಾಗುತ್ತಿದೆ.

ಶೌಚಗೃಹ ನಿರ್ಮಿಸಿಕೊಳ್ಳದ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ಅಗತ್ಯ ದಾಖಲೆಗಳಾದ ಬ್ಯಾಂಕ್‌ ಖಾತೆ ಸಂಖ್ಯೆ, ಆಧಾರ್‌ ಕಾರ್ಡ್‌ ಪ್ರತಿಯನ್ನು ಸಲ್ಲಿಸಿ ಕಾಮಗಾರಿ ಆದೇಶ ಪಡೆದುಕೊಳ್ಳುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚನೆ ನೀಡಿದ್ದಾರೆ. ಶೌಚಗೃಹ ನಿರ್ಮಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹ 15 ಸಾವಿರ ಹಾಗೂ ಇತರೆ ವರ್ಗದವರಿಗೆ ₹ 12 ಸಾವಿರ ಸಹಾಯ ಧನವನ್ನು ಸರ್ಕಾರ ನೀಡಲಿದೆ.

ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ತಮ್ಮ ಮನೆಯಲ್ಲಿ ಕಡ್ಡಾಯವಾಗಿ ಶೌಚಗೃಹ ಹೊಂದಿರಬೇಕು. ಸೌಲಭ್ಯ ಹೊಂದದೆ ಇರುವ ಸದಸ್ಯರ ಸದಸ್ಯತ್ವ ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

‘ಜಿಲ್ಲಾದ್ಯಂತ 29,118 ಮನೆಗಳಲ್ಲಿ ಶೌಚಗೃಹ ನಿರ್ಮಿಸಬೇಕಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಆದೇಶ ಪಡೆದು ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಸರ್ಕಾರದ ಪ್ರೋತ್ಸಾಹ ಧನ ಹಾಗೂ ಇತರೆ ಸೌಲಭ್ಯ ಕಡಿತಗೊಳಿಸಲಾಗುವುದು.

ಶೌಚಾಲಯ ನಿರ್ಮಿಸಿಕೊಳ್ಳದ ಕುಟುಂಬದ ಸದಸ್ಯರ ಮನವೊಲಿಸಬೇಕು. ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು, ಸಿಬ್ಬಂದಿ ಹಾಗೂ ಸಮುದಾಯ ಆಧಾರಿತ ಸಂಘ ಸಂಸ್ಥೆಗಳ ಸದಸ್ಯರನ್ನೊಳಗೊಂಡ ತಂಡ ರಚಿಸಿ ಬೆಳಗ್ಗೆ 5.30 ರಿಂದ 9ರವರೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ಶೌಚಾಲಯ ನಿರ್ಮಿಸುವುದು ಮತ್ತು ಬಳಸಲು ಪ್ರೇರೇಪಣೆ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಜಾನಕಿ ತಿಳಿಸಿದರು.

‘ಆ. 29ರಂದು ಸ್ವಚ್ಛಭಾರತ್‌ ಮಿಷನ್‌ ಅಧಿಕಾರಿಗಳ ತಂಡ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲಿದೆ. ಕಡಿಮೆ ಅವಧಿಯಲ್ಲಿ ತ್ವರಿತವಾಗಿ ಕೈಗೊಳ್ಳಬೇಕಾದ ಕಾಮಗಾರಿ ಕುರಿತು ಸಲಹೆ ನೀಡಲಿದೆ. ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯನಿರ್ವಹಕ ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸಲಿದೆ’ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿದ್ದರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT