ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್ ಪ್ರದೇಶಕ್ಕೆ ಅಂಗನವಾಡಿ ಕಟ್ಟಡ ಇಲ್ಲ

Last Updated 29 ಆಗಸ್ಟ್ 2017, 8:49 IST
ಅಕ್ಷರ ಗಾತ್ರ

ಸಿದ್ದಾಪುರ: ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಿಕೊಂಡು ಮೂಲಸೌಕರ್ಯಗಳಿಂದ ವಂಚಿತ ಹಂಜ ಪರಿಸರದಲ್ಲಿ ನಿರ್ಮಾಣವಾಗುತ್ತಿದ್ದ ಅಂಗನವಾಡಿ ಕಟ್ಟಡ ರಾಜಕೀಯ ವೈಷಮ್ಯಕ್ಕೆ ಸ್ಥಗಿತಗೊಂಡಿದೆ.

ಕುಂದಾಪುರ ತಾಲ್ಲೂಕಿನ ಮಡಾಮಕ್ಕಿ ಗ್ರಾಮದ ಹಂಜ ಪರಿಸರಕ್ಕೆ ತೆರಳುವುದೆ ಒಂದು ಹರಸಾಹಸ. ರಸ್ತೆ, ಬೀದಿದೀಪ, ವಾಹನ ಸಂಚಾರದ ಕೊರತೆಯಿದ್ದರೂ ಹಂಜ ಪರಿಸರದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ ಎನ್ನುವುದೇ ಆ ಪ್ರದೇಶದ ಹೆಗ್ಗಳಿಕೆ. ಹಂಜದಿಂದ ಮಡಾಮಕ್ಕಿಗೆ ಸುಮಾರು 5 ಕಿ.ಮೀ ದೂರವಿದ್ದು, ಮಳೆಗಾಲದಲ್ಲಿ ಸಂಚರಿಸುವುದೇ ಕಷ್ಟ!

ಆ ಪ್ರದೇಶದಲ್ಲಿರುವ 40 ಕ್ಕೂ ಅಧಿಕ ಕುಟುಂಬಗಳ ಬೇಡಿಕೆ ಗಮನಿಸಿ ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಿಆರ್‌ಡಿ ಅನುದಾನದಡಿ ₹3 ಲಕ್ಷ ಹಾಗೂ ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ₹5ಲಕ್ಷ ಸೇರಿದಂತೆ ಒಟ್ಟು ₹8 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡಕ್ಕೆ ಅನುಮೋದನೆ ದೊರಕಿತ್ತು.

ಹಂಜ ಕಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲಿ ಅಂಗನವಾಡಿ ನಿರ್ಮಾಣ ಆಗಬೇಕಿದ್ದರಿಂದ ಶಾಲೆಗೆ ಆಟದ ಮೈದಾನದ ಅಗತ್ಯತೆ ಮನಗಂಡು ಶಾಲೆಯ ಪಕ್ಕದಲ್ಲಿರುವ ಗುಡ್ಡವನ್ನು ಜೆಸಿಬಿ ಮೂಲಕ ಅಗೆದು ಕೆಲಸ ಪೂರ್ಣಗೊಳಿಸಿದ್ದರು. ಅಲ್ಲದೆ ಉದ್ಯೋಗಖಾತ್ರಿ ಸದಸ್ಯರು ಕಟ್ಟಡದ ಪಾಯ ತೆಗೆಯುವುದು, ಪಂಚಾಂಗ ನಿರ್ಮಾಣ, ಗೋಡೆ ರಚನೆಯ ಕೆಲಸ ಪೂರ್ಣಗೊಳಿಸಿದ್ದರು. ಸದಸ್ಯರು ಕೆಲಸ ಆರಂಭಕ್ಕಿಂತ ಮುಂಚಿತವಾಗಿ ನಮೂನೆ 6 ಪಡೆದಿಲ್ಲ ಹಾಗೂ ಪಿಡಿಒ ತನ್ನ ಗಮನಕ್ಕೆ ಬಂದಿಲ್ಲ ಎನ್ನುವ ನೆಪವೊಡ್ಡಿ ಕಟ್ಟಡಕ್ಕೆ ಎನ್‌ಎಂಆರ್ ಹಾಕದೆ ಸತಾಯಿಸಿದ್ದರು. ಸ್ಥಳೀಯ ರಾಜಕೀಯ ವೈಷಮ್ಯದಿಂದ ಕಟ್ಟಡ ರಚನೆಯ ಆರಂಭದಲ್ಲಿಯೆ ವಿಘ್ನಗಳು ಬಂದೊದಗಿತ್ತು.

ಅಂಗನವಾಡಿಯ ₹3 ಲಕ್ಷ ಮೊತ್ತದ ಕಾಮಗಾರಿಗೆ ಪೂರ್ಣ ಅನುದಾನ ಬಿಡುಗಡೆಯಾಗಿಲ್ಲ. ₹64000  ಬಾಕಿಯಿದೆ. ಪ್ರಾರಂಭದ ಅನುದಾನವೆ ಬಾಕಿಯಿರುವಾಗ ಉದ್ಯೋಗಖಾತ್ರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಎಂದು  ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಕುಲಾಲ್ ತಿಳಿಸಿದರು.

ಬಿಲ್ ವಿಳಂಬ: ಉದ್ಯೋಗಖಾತ್ರಿ ಸದಸ್ಯರು ಹಾಗೂ ಕಟ್ಟಡ ರಚನೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಸಾಲವಾಗಿ ಪಡೆದು ಗುತ್ತಿಗೆದಾರರು ಕಟ್ಟಡ ನಿರ್ಮಾಣಕ್ಕೆ ತೊಡಗಿದ್ದರು. ಕಟ್ಟಡ ಸಾಮಾನ್ಯ ಹಂತಕ್ಕೆ ಬಂದಾಗ ಆಕ್ಷೇಪ ವ್ಯಕ್ತವಾಗಿತ್ತು. ಮಾತ್ರವಲ್ಲದೆ ಪಿಡಿಒ ಎನ್‌ಎಂಆರ್ ಹಾಕದೆ ಸತಾಯಿಸಿದ ಪರಿಣಾಮ ಗುತ್ತಿಗೆದಾರರು ಅನುದಾನ ದೊರೆಯದೆ ಸಂಕಟ ಅನುಭವಿಸುವಂತಾಗಿತ್ತು ಎಂದು ಸ್ಥಳೀಯರ ಹೇಳಿಕೆ.

ಪ್ರಜಾವಾಣಿ ವರದಿಯನ್ನಾಧರಿಸಿ ಆಗಿನ ಸಿಇಒ ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅನುದಾನ ಮಂಜೂರುಗೊಳಿಸಲು ನಿರ್ದೇಶನ ನೀಡಿದ್ದರು. ಇದುವರೆಗೆ ₹3ಲಕ್ಷದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ₹64000 ಅನುದಾನ ಬಿಡುಗಡೆಗೆ ಬಾಕಿಯಿದೆ ಎನ್ನಲಾಗುತ್ತಿದೆ.

ಸರ್ಕಾರ ಮೂಲಸೌಕರ್ಯ ಕಲ್ಪಿಸುವ ಹಾಗೂ ಗುಣಾತ್ಮಕ ಶೈಕ್ಷಣಿಕ ಚಟುವಟಿಕೆ ನಡೆಸುವ ಹಿನ್ನೆಲೆಯಲ್ಲಿ ಸಮಾನ ಗುರಿ ಮತ್ತು ಪರಿಕಲ್ಪನೆಯೊಂದಿಗೆ ಗ್ರಾಮೀಣ ಭಾಗದಲ್ಲಿ ಬಾಲವಿಕಾಸ ಸಮಿತಿ ರಚಿಸಿತ್ತು. 3–5 ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಒದಗಿಸಲು ಅಂಗನವಾಡಿ ಕೇಂದ್ರ ಪ್ರಾರಂಭಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ.

ಹಂಜ ಅಂಗನವಾಡಿ ಕಟ್ಟಡದ ಅಗತ್ಯತೆ ಗಮನಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮುತುವರ್ಜಿ ವಹಿಸಿ ಕಾಮಗಾರಿ ರಚನೆಗೆ ಸೂಕ್ತ ಕ್ರಮ ಕೈಗೊಂಡಿದ್ದರು. ಆದರೆ ಸ್ಥಳೀಯ ರಾಜಕೀಯದಿಂದ ಕುಗ್ರಾಮದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ವಿಘ್ನ ಎದುರಾಗಿದೆ.

ಕಾಮಗಾರಿ ಪೂರ್ಣಗೊಂಡಿದ್ದರೂ ಬಿಲ್ ನೀಡಲು ಸತಾಯಿಸಿದ ಪರಿಣಾಮ ಉದ್ಯೋಗಖಾತ್ರಿಯಲ್ಲಿ ಕಟ್ಟಡ ಪೂರ್ಣಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಕಟ್ಟಡ ಪೂರ್ಣಗೊಂಡ ನಂತರ ಅನುದಾನ ದೊರೆಯದಿದ್ದರೆ ಏನು ಮಾಡಲು ಸಾಧ್ಯ ಎನ್ನುವುದು ಅವರ ಪ್ರಶ್ನೆಯಾಗಿದೆ. ಆದರೆ ಸ್ಥಳೀಯ ರಾಜಕೀಯ ವಿದ್ಯಮಾನಗಳಿಂದ ಮಡಾಮಕ್ಕಿ ಹಂಜದಲ್ಲಿ ನಿರ್ಮಾಣವಾಗಬೇಕಿದ್ದ ಅಂಗನವಾಡಿ ಕೇಂದ್ರ ಅತಂತ್ರ ಸ್ಥಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT