ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮುಂಗಾರು ಮಳೆ ಚುರುಕಾಗಿದೆ. ಕೊಡಗು ಜಿಲ್ಲೆಯಾದ್ಯಂತ ಮಂಗಳವಾರವೂ ಉತ್ತಮ ಮಳೆ ಸುರಿದಿದೆ. ಸಕಲೇಶಪುರ– ಸುಬ್ರಹ್ಮಣ್ಯ ನಡುವೆ ರೈಲು ಮಾರ್ಗದಲ್ಲಿ ಮಣ್ಣು ಕುಸಿದಿದೆ. ಸುಳ್ಯ ತಾಲ್ಲೂಕಿನ ಮರ್ಕಂಜ ಗ್ರಾಮದಲ್ಲಿ ಸೋಮವಾರ ಕೊಟ್ಟಿಗೆ ಕುಸಿದು ಕೊರತ್ತಿಕಜೆ ಕಬ್ಬು (75) ಎಂಬುವರು ಮೃತಪಟ್ಟಿದ್ದಾರೆ.

ಸಮುದ್ರದಲ್ಲಿ ಭಾರಿ ಅಲೆಗಳ ಪರಿಣಾಮ ಕಾರವಾರದಲ್ಲಿ ಗೋವಾದ ಸುಮಾರು 25 ಮೀನುಗಾರಿಕಾ ದೋಣಿಗಳು ಬಂದರು ಬಳಿ ಲಂಗರು ಹಾಕಿವೆ.

ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಸಂಜೆಯ ಬಳಿಕ ಮಳೆ ಬಿರುಸುಗೊಂಡಿದ್ದು ತ್ರಿವೇಣಿ ಸಂಗಮದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಭಾಗಮಂಡಲ– ನಾಪೋಕ್ಲು ರಸ್ತೆಯ ಮೇಲೂ ನೀರು ಹರಿಯುತ್ತಿದೆ. ಮಡಿಕೇರಿ, ವಿರಾಜಪೇಟೆ, ಸಿದ್ದಾಪುರ, ಶನಿವಾರಸಂತೆ, ಸೋಮವಾರಪೇಟೆ, ಕುಶಾಲನಗರ ವ್ಯಾಪ್ತಿಯಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ.

ಕೆಆರ್‌ಎಸ್‌ ಒಳಹರಿವು ಹೆಚ್ಚಳ: ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಕೆಆರ್‌ಎಸ್‌ ಜಲಾಶಯದ ಒಳ ಹರಿವು 22,207 ಕ್ಯುಸೆಕ್‌ಗೆ ಏರಿದೆ.

ಮಂಗಳವಾರ ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟ 94.60 ಅಡಿಗೆ ತಲುಪಿದ್ದು ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 1.65 ಅಡಿಯಷ್ಟು ಹೆಚ್ಚಳವಾಗಿದೆ. ಸದ್ಯ ಜಲಾಶಯದಲ್ಲಿ 18.8 ಟಿಎಂಸಿ ಅಡಿ ನೀರಿದೆ.

ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 92.78 ಅಡಿ ಇತ್ತು. 6,810 ಒಳಹರಿವು, 9,629 ಹೊರಹರಿವು ಇತ್ತು.

ಮುಳುಗಿದ ಸೇತುವೆಗಳು:‌‌ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸುಬ್ರಹ್ಮಣ್ಯ ರೋಡ್‌ ನಿಲ್ದಾಣದ ಬಳಿ ಮಣ್ಣು ಕುಸಿತ ಉಂಟಾಗಿದೆ. ಪುತ್ತೂರು ತಾಲ್ಲೂಕಿನ ಕಡಬ ಪರಿಸರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹೊಸಮಠ ಮತ್ತು ಬಿಳಿನೆಲೆ ಮುಳುಗು ಸೇತುವೆಗಳು ಸೋಮವಾರ ರಾತ್ರಿ ಮುಳುಗಡೆಯಾಗಿದ್ದವು. ಚಿಕ್ಕಮಗಳೂರು ಸುತ್ತಮುತ್ತ ತುಂತುರು ಮಳೆಯಾಯಿತು.

ಲಂಗರು ಹಾಕಿದ ದೋಣಿಗಳು (ಕಾರವಾರ ವರದಿ)ಹವಾಮಾನ ವೈಪರೀತ್ಯದಿಂದಾಗಿ, ಗೋವಾದ ಸುಮಾರು 25 ಮೀನುಗಾರಿಕೆ ದೋಣಿಗಳು ಎರಡು ದಿನಗಳಿಂದ ಇಲ್ಲಿನ ಬೈತಖೋಲ್‌ ಬಂದರಿನ ತಡೆಗೋಡೆ ಸಮೀಪ ಲಂಗರು ಹಾಕಿವೆ.

ಸಮುದ್ರದಲ್ಲಿ ಗಾಳಿ ಜೋರಾಗಿ ಬೀಸುತ್ತಿದ್ದು, ತೆರೆಗಳು ಅಧಿಕವಾಗಿವೆ. ಸುರಕ್ಷತೆ ದೃಷ್ಟಿಯಿಂದ ಗೋವಾ ದೋಣಿಗಳು ಬಂದರು ಬಳಿ ಬೀಡುಬಿಟ್ಟಿವೆ. ಸ್ಥಳೀಯ ದೋಣಿಗಳು ಸಹ ಆಳ ಸಮುದ್ರಕ್ಕೆ ತೆರಳದೇ ಸಮೀಪದಲ್ಲೇ ಮೀನುಗಾರಿಕೆ ನಡೆಸಿ ಬಂದರಿಗೆ ಮರಳುತ್ತಿವೆ.

ಮುಂದುವರಿದ ಮಳೆ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ.

ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲೂ ಬಿರುಸುಗೊಂಡಿದ್ದು ಮುಂಡಗೋಡ, ದಾಂಡೇಲಿ ಹಾಗೂ ಹಳಿಯಾಳದಲ್ಲಿ ಸಾಧಾರಣ ಮಳೆಯಾಗಿದೆ.

ಬೆಳಗಾವಿ ಜಿಲ್ಲೆಯ ಬೆಳಗಾವಿ, ಚಿಕ್ಕೋಡಿಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಧಾರವಾಡ, ಹಾವೇರಿಯಲ್ಲೂ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಮಂಗಳವಾರ ಉತ್ತಮ ಮಳೆಯಾಗಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇಡೀ ದಿನ ಧಾರಾಕಾರ ಮಳೆ ಸುರಿದಿದೆ. ಸಾಗರ, ಭದ್ರಾವತಿ, ಹೊಸನಗರ, ಶಿಕಾರಿಪುರ, ಸೊರಬ ತಾಲ್ಲೂಕು ಭಾಗಗಲ್ಲಿ ಉತ್ತಮ ಮಳೆ ಸುರಿದಿದೆ.

ದಾವಣಗೆರೆ ನಗರದಲ್ಲಿ ಮಧ್ಯಾಹ್ನ ಜಿಟಿಜಿಟಿ ಮಳೆಯಾಗಿದೆ. ಹೊನ್ನಾಳಿ, ಚನ್ನಗಿರಿ ತಾಲ್ಲೂಕಿನ ಕೆಲಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಉಜ್ಜನಿ ಜಲಾಶಯ ಭರ್ತಿ– ಭೀಮೆಗೆ ನೀರು: ನೆರೆಯ ಮಹಾರಾಷ್ಟ್ರದ ಉಜ್ಜನಿ ಜಲಾಶಯ ಭರ್ತಿಯಾಗಿದ್ದು, ಭೀಮಾ ನದಿಗೆ ಮಂಗಳವಾರದಿಂದಲೇ 15 ರಿಂದ 20 ಸಾವಿರ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ.

ಜಲಾಶಯದಿಂದ ಹೊರಬಿಟ್ಟ ನೀರು ಬುಧವಾರದ ವೇಳೆಗೆ ರಾಜ್ಯದ ಗಡಿ ಪ್ರವೇಶಿಸಲಿದೆ.

ಸುಳ್ಯದಲ್ಲಿ 12 ಸೆಂ.ಮೀ. ಮಳೆ (ಬೆಂಗಳೂರು ವರದಿ): ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.

ಸುಳ್ಯ, ಭಾಗಮಂಡಲದಲ್ಲಿ ತಲಾ 12, ಮೂಲ್ಕಿ, ಕಾರ್ಕಳ ತಲಾ 10, ಕೊಲ್ಲೂರು, ಅಂಕೋಲ, ಕೊಟ್ಟಿಗೆಹಾರ ತಲಾ 9, ಮೂಡುಬಿದಿರೆ, ಪುತ್ತೂರು, ಮಡಿಕೇರಿ, ಆಗುಂಬೆ ತಲಾ 8, ಕೋಟ, ಕಳಸ ತಲಾ 7, ಪಣಂಬೂರು, ಮಂಗಳೂರು, ಬಂಟ್ವಾಳ, ಕಾರವಾರ, ಸೋಮವಾರಪೇಟೆಯಲ್ಲಿ ತಲಾ 6 ಸೆಂ.ಮೀ. ಮಳೆಯಾಗಿದೆ.

ಹೊನ್ನಾವರ, ಗೇರುಸೊಪ್ಪ, ಮಂಕಿ, ಬೀದರ್, ಪೊನ್ನಂಪೇಟೆ, ಲಿಂಗನಮಕ್ಕಿ, ಕಮ್ಮರಡಿ, ಮೂಡಿಗೆರೆ ತಲಾ 5, ಧರ್ಮಸ್ಥಳ, ಕುಮಟಾ, ಬನವಾಸಿ, ಇಂಡಿ, ಕುಶಾಲನಗರ, ಹಂಚದಕಟ್ಟೆ, ಎಚ್‌.ಡಿ. ಕೋಟೆ ತಲಾ 4, ಕುಂದಾಪುರ, ಚಿಂಚೋಳಿ, ತಾಳಗುಪ್ಪ, ಹೊಸನಗರ, ಆನವಟ್ಟಿ, ಶೃಂಗೇರಿ, ಜಯಪುರ, ಕೊಪ್ಪ, ಹಾಸನ ತಲಾ 3, ಸಿದ್ದಾಪುರ, ಶಿರಾಲಿ, ಕೊಪ್ಪಳ, ಹುಮ್ನಾಬಾದ್, ನೆಲೋಗಿ, ದೇವದುರ್ಗ, ಶಿವಮೊಗ್ಗ, ತ್ಯಾಗರ್ತಿ, ಬಾಳೇಹೊನ್ನೂರು, ನರಸಿಂಹರಾಜಪುರ, ರಾಯಲಪಡು, ಹೊನ್ನಾಳಿ, ಚಿತ್ರದುರ್ಗ ತಲಾ 2, ಕದ್ರಾ, ಯಲ್ಲಾಪುರ, ಕುಷ್ಠಗಿ, ಮಸ್ಕಿ, ಭದ್ರಾವತಿ, ಲಕ್ಕವಳ್ಳಿ, ಹೊಳೆನರಸೀಪುರ, ಮೈಸೂರು, ಪಾವಗಡದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ರೈಲು ಮಾರ್ಗದಲ್ಲಿ ಮಣ್ಣು ಕುಸಿತ
ಸಕಲೇಶಪುರ:
ಸಕಲೇಶಪುರ– ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದ ಶಿರುವಾಗಿಲು ಬಳಿ 85ನೇ ಕಿ.ಮೀ ಸಮೀಪ ಮಂಗಳವಾರ ಮಧ್ಯಾಹ್ನ ಹಳಿಯ ಮೇಲೆ ಮಣ್ಣು ಕುಸಿದು 9 ಗಂಟೆಗಳಿಗೂ ಹೆಚ್ಚು ಕಾಲ ಕುಡ್ಲ ಎಕ್ಸ್‌ಪ್ರೆಸ್‌ ರೈಲು (ರೈಲು ಗಾಡಿ ಸಂಖ್ಯೆ 16575) ಶಿರುವಾಗಿಲು ನಿಲ್ದಾಣದಲ್ಲೇ ನಿಂತಿದ್ದು, ಪ್ರಯಾಣಿಕರು ಪರದಾಡಿದ್ದಾರೆ.

ಯಶವಂತಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ಈ ರೈಲು ಪಶ್ಚಿಮಘಟ್ಟದ ಮಳೆಕಾಡಿನ ಶಿರವಾಗಿಲು ನಿಲ್ದಾಣಕ್ಕೆ ಮಧ್ಯಾಹ್ನ 1.30ಕ್ಕೆ ಬರುವಷ್ಟರಲ್ಲಿ ಸುಬ್ರಹ್ಮಣ್ಯ ಮಾರ್ಗದಲ್ಲಿ ಮಣ್ಣು ಕುಸಿತ ಉಂಟಾಗಿದೆ. ಹೀಗಾಗಿ, ರೈಲು ಮಧ್ಯಾಹ್ನ 1.30ರಿಂದ ಕಾಡಿನ ಮಧ್ಯದಲ್ಲಿರುವ ನಿಲ್ದಾಣದಲ್ಲಿಯೇ ನಿಲ್ಲಬೇಕಾಯಿತು.

ಹಳಿಗಳ ಮೇಲೆ ಬಿದ್ದಿರುವ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿದೆ. ರೈಲಿನಲ್ಲಿರುವ ಪ್ರಯಾಣಿಕರಿಗೆ ಲಘು ಉಪಾಹಾರ ನೀಡಲಾಗಿದೆ. ರಸ್ತೆ ಮಾರ್ಗದಲ್ಲಿ ಸಂಚರಿಸಲು ಬಯಸುವವರಿಗೆ ಟಿಕೆಟ್ ಹಣವನ್ನು ವಾಪಸ್ ನೀಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಆದರೆ, ಶಿರುವಾಗಿಲು ರೈಲು ನಿಲ್ದಾಣದಿಂದ ರಸ್ತೆ ಸಂಪರ್ಕವೂ ಹಾಳಾಗಿರುವುದರಿಂದ 300ಕ್ಕೂ ಅಧಿಕ ಪ್ರಯಾಣಿಕರಿಗೆ ಬೇರೆ ದಾರಿ ಕಾಣದಾಗಿದೆ.

ನೈರುತ್ಯ ರೈಲ್ವೆಯ ವಿಭಾಗೀಯ ಪ್ರಬಂಧಕ ಅತುಲ್ ಗುಪ್ತಾ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

ಕಾರವಾರ– ಯಶವಂತಪುರ (ರೈಲು ಗಾಡಿ ಸಂಖ್ಯೆ 16516) ರೈಲನ್ನು ಮಂಗಳೂರಿನಿಂದ ಸೇಲಂ ಮಾರ್ಗವಾಗಿ ಯಶವಂತಪುರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಈ ರೈಲು 8ರಿಂದ 9 ಗಂಟೆಗಳಷ್ಟು ಕಾಲ ತಡವಾಗಲಿದೆ ಎಂದು ಮೈಸೂರಿನ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸಮುದ್ರದಲ್ಲಿ ಅಲೆಗಳು ಭಾರಿ ಪ್ರಮಾಣದಲ್ಲಿರುವ ಕಾರಣ ಕಾರವಾರದಲ್ಲಿ ಸುಮಾರು 25 ಮೀನುಗಾರಿಕಾ ದೋಣಿಗಳು ಬೈತಖೋಲ್‌ ಬಂದರಿನ ತಡೆಗೋಡೆ ಸಮೀಪ ಲಂಗರು ಹಾಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT