ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ರಾಜೇಂದ್ರ. ಎನ್., ಮೈಸೂರು
ನಾನು ಪ್ರತೀ ಬುಧವಾರ ನಿಮ್ಮ ಅಂಕಣ ತಪ್ಪದೇ ಓದುತ್ತೇನೆ. ನಾನು 20 ವರ್ಷ ಭಾರತೀಯ ವಾಯುಪಡೆಯಲ್ಲಿ  (Indian Air Force) ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದೆ. ಇದರಿಂದ ನನಗೆ ₹ 17,539 ಪಿಂಚಣಿ ಬರುತ್ತದೆ. ನಾನು ಅಲ್ಲಿ ಕೆಲಸ ಬಿಟ್ಟ ನಂತರ ಭಾರತೀಯ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಇಲ್ಲಿ ₹ 43,612 ವೇತನ ಬರುತ್ತದೆ. ನಾನು I.A.F. ನಿಂದ ಪಡೆಯುವ ಪಿಂಚಣಿ ಹಣಕ್ಕೆ ತೆರಿಗೆ ವಿನಾಯಿತಿ ಇದೆಯೋ ಅಥವಾ ಇಂದಿನ ಸಂಬಳಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕೇ?

ಉತ್ತರ: ನೀವು Ex-Serviceman ಆಗಿರುತ್ತೀರಿ. ಇದರಿಂದಾಗಿ ನಿಮಗೆ ಅಂಚೆ ಕಚೇರಿಯಲ್ಲಿ ಕೆಲಸ ದೊರಕಿರಬಹುದು. ಆದಾಯ ತೆರಿಗೆ ಕಾನೂನಿನಲ್ಲಿ  Ex-Serviceman ವರ್ಗಕ್ಕೆ ಅವರು ಪಡೆಯುವ ಪಿಂಚಣಿಗೆ ತೆರಿಗೆ ವಿನಾಯಿತಿ ಇರುವುದಿಲ್ಲ. ನೀವು ಪಡೆಯುವ ಅಂಚೆ ಕಚೇರಿ ಸಂಬಳ ಹಾಗೂ ಪಿಂಚಣಿ ಮೊತ್ತ ಸೇರಿಸಿ ತೆರಿಗೆ ಕೊಡಬೇಕಾಗುತ್ತದೆ. ನೀವು ಉಳಿತಾಯದ ವಿಚಾರದಲ್ಲಿ ತಿಳಿಸಿಲ್ಲ. ನೀವು ₹ 61,151 ಮಾಸಿಕವಾಗಿ ಸಂಬಳ ಹಾಗೂ ಪಿಂಚಣಿಯಿಂದ ಪಡೆಯುತ್ತಿದ್ದೀರಿ. ಗರಿಷ್ಠ ₹ 21,151 ಮಾಸಿಕ ಖರ್ಚು ಮಾಡಿದರೂ, ₹ 40,000 ನಿಮ್ಮೊಡನೆ ಉಳಿಯುತ್ತದೆ. ಸ್ವಲ್ಪ ಸಾಲ ಮಾಡಿದರೂ ತೊಂದರೆ ಇಲ್ಲ, ನೀವು ಮೈಸೂರಿನಲ್ಲಿ 30X40 ನಿವೇಶನ ಕೊಂಡು, ತಿಂಗಳಲ್ಲಿ ಉಳಿಯುವ ಹಣದಿಂದ ಸಾಲ ತೀರಿಸಿರಿ. ಈ ವಿಚಾರ ನಿಮಗೆ ಮನಸ್ಸಿಲ್ಲದಿದ್ದರೆ, ನೀವು ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ಜಂಟಿಯಾಗಿ ತಿಂಗಳಿಗೆ ಕನಿಷ್ಠ  ₹ 25,000 ಆರ್.ಡಿ. ಮಾಡಿರಿ. ಉಳಿಯುವ ಹಣದಲ್ಲಿ ಗರಿಷ್ಠ ₹ 1.50 ಲಕ್ಷ  ಸೆಕ್ಷನ್ 80ಸಿ ಅಡಿಯಲ್ಲಿ ತೊಡಗಿಸಿ ತೆರಿಗೆ ಉಳಿಸಿಕೊಳ್ಳಿ.

ಹೆಸರು– ಊರು ಬೇಡ

ನಾನು ಹಾಗೂ ನನ್ನ ಮಗಳು ಜಂಟಿಯಾಗಿ ಬ್ಯಾಂಕ್ ಖಾತೆ ಹೊಂದಿದ್ದೇವೆ. ನನ್ನ ಮಗಳು ವಿವಾಹ ವಿಚ್ಛೇದನವಾಗಿ ₹ 20 ಲಕ್ಷ ಗಂಡನ ಕಡೆಯಿಂದ ಪಡೆದಿದ್ದಾಳೆ. ಈ ಹಣ ಬ್ಯಾಂಕಿನಲ್ಲಿ ಠೇವಣಿಯಾಗಿರಿಸಿದ್ದೇನೆ. ನನ್ನ ಮಗಳು ಕೆಲಸದಲ್ಲಿದ್ದು ಆದಾಯ ತೆರಿಗೆ ಕೊಡುತ್ತಿದ್ದಾಳೆ. ತೆರಿಗೆ ಉಳಿಸಲು ನಾನು ಅಥವಾ ನನ್ನ ಮಗಳು ಈ ಹಣ ನನ್ನ ಹೆಂಡತಿಗೆ (ಅಥವಾ ನನ್ನ ಮಗಳು ತಾಯಿಗೆ) ಠೇವಣಿ ರೂಪದಲ್ಲಿ ವರ್ಗಾಯಿಸಬಹುದೇ?
ಉತ್ತರ: ನಿಮ್ಮ ಮಗಳು ವಿವಾಹ ವಿಚ್ಛೇದನದಿಂದ ಪಡೆದ ಹಣ ₹ 20 ಲಕ್ಷವನ್ನು ಬ್ಯಾಂಕಿನಲ್ಲಿ ಜಂಟಿಯಾಗಿ ಠೇವಣಿ ಮಾಡುವಾಗ, ಯಾರ ಹೆಸರು ಪ್ರಥಮವಾಗಿ ಬರೆಸಿರುತ್ತೀರಿ ಎನ್ನುವುದು ಮುಖ್ಯವಾಗುತ್ತದೆ.

ಗಂಡ ಹೆಂಡತಿಗೆ ಎಷ್ಟು ಬೇಕಾದರೂ ಹಣ ದಾನವಾಗಿ (By Gift) ಕೊಡಬಹುದು. ಆದರೆ ಇಂತಹ ವರ್ಗಾವಣೆಯಿಂದ ಮಾಡಿದ ಠೇವಣಿಯ ಬಡ್ಡಿ, ಗಂಡನ ಆದಾಯಕ್ಕೆ ಸೇರುತ್ತದೆ ಹಾಗೂ ಗಂಡನು ತನ್ನ ಎಲ್ಲ ಆದಾಯ ಸೇರಿಸಿ ತೆರಿಗೆ ಕೊಡಬೇಕಾಗುತ್ತದೆ.

ಒಂದು ವೇಳೆ ನೀವು ಜಂಟಿಯಾಗಿ ಇರಿಸಿದ ಠೇವಣಿಯಲ್ಲಿ, ಒಂದನೇ ಹೆಸರು ನಿಮ್ಮ ಮಗಳದ್ದಾಗಿರುವಲ್ಲಿ ಈ ಪ್ರಮೇಯ ಬರುವುದಿಲ್ಲ. ಹಾಗೆ ಮಾಡುವಾಗ ನಿಮ್ಮ ಮಗಳು ₹ 20 ಲಕ್ಷ Gift Deed ದಾನಪತ್ರ ಮೂಲಕ ತಾಯಿಗೆ ವರ್ಗಾಯಿಸಲಿ. ಹೀಗೆ ವರ್ಗಾಯಿಸಿ ಠೇವಣಿ ಮಾಡುವಾಗ ಮಗಳ ಹೆಸರಿನಲ್ಲಿ ನಾಮನಿರ್ದೇಶನ ಮಾಡಿರಿ. ಇದೇ ವೇಳೆ ಈಗಾಗಲೇ ಜಂಟಿಯಾಗಿ ಠೇವಣಿ ಇರಿಸುವುದು ನಿಮ್ಮ ಹಾಗೂ ನಿಮ್ಮ ಮಗಳ ಹೆಸರಾಗಿದ್ದಲ್ಲಿ (ಒಂದನೇ ಹೆಸರು ನಿಮ್ಮದಾಗಿದ್ದಲ್ಲಿ) ನೀವು, ಸತ್ಯ ಸಂಗತಿಯನ್ನು ಒಂದು ಅಫಿಡಿಫಿಟ್ (Affidavit) ಬರೆದು ನೋಟರಿ ಮುಂದೆ ಸಹಿ ಹಾಕಿ, ನಂತರ ಹಣವನ್ನು ಹೆಂಡತಿ ಹೆಸರಿಗೆ ವರ್ಗಾಯಿಸಿ. ಹೀಗೆ ಮಾಡಿದರೆ, ಇಂತಹ ಠೇವಣಿಯಿಂದ ಬರುವ ಬಡ್ಡಿ  ಆದಾಯಕ್ಕೆ ಸೇರಿಸಿ ತೆರಿಗೆ ಕೊಡವ ಅವಶ್ಯವಿಲ್ಲ.  ಮಗಳ ಹೆಸರಿಗೆ ನಾಮನಿರ್ದೇಶನ (Nomination) ಮಾಡಲು ಎಂದಿಗೂ ಮರೆಯದಿರಿ.

ಕೆ.ಆರ್. ಪಂಡಾರೆ, ಬೆಂಗಳೂರು

ಬಂಡವಾಳ ವೃದ್ಧಿ ತೆರಿಗೆ (Capital Gain Tax) ಉಳಿಸಲು REC/NHAI ಬಾಂಡುಗಳಲ್ಲಿ ಹಣ ಹೂಡಲು ಎಲ್ಲಿ ವ್ಯವಸ್ಥೆ ಇದೆ?
ಉತ್ತರ: ಬಹಳಷ್ಟು ಖಾಸಗಿ ಹಣಕಾಸು ಸಂಸ್ಥೆಗಳು REC–NHAI ಬಾಂಡ್‌ನಲ್ಲಿ ಹಣ ತೊಡಗಿಸಲು ಅನುವು ಮಾಡಿಕೊಡುತ್ತವೆ. ಹೀಗೆ ಹಣ ಹೂಡುವಾಗ Account Payee Crossed Cheque ಮೂಲಕವೇ ಹಣ ವರ್ಗಾವಣೆ ಮಾಡಿರಿ. ಯಾರಾದರೂ ನಗದು ಪಡೆದು ಠೇವಣಿ ಮಾಡುವಲ್ಲಿ ನೀವು ಮೋಸ ಹೋಗಬಹುದು, ಜೊತೆಗೆ ಈ ಎರಡೂ ಸಂಸ್ಥೆಗಳು ನಗದು ಹಣ ಎಂದಿಗೂ ಸ್ವೀಕರಿಸುವುದಿಲ್ಲ.

ನಂಜುಂಡಸ್ವಾಮಿ ಮೊಬೈಲ್ ಸಂಖ್ಯೆ 94480 32853 ಇವರು ಅಧಿಕೃತ ಏಜಂಟರಾಗಿದ್ದು, ನೀವು ಬಯಸಿದಲ್ಲಿ, ನಿಮ್ಮ ದೂರವಾಣಿ ಸಂಖ್ಯೆ, ಮನೆ ವಿಳಾಸ ಕೊಟ್ಟರೆ ನಿಮ್ಮ ಮನೆಗೇ ಬಂದು ಫಾರಂ ತುಂಬಿಸಿ, ಚೆಕ್ ಪಡೆದು, REC/NHAI  ಕಳಿಸಿ, ನೇರವಾಗಿ ಬಾಂಡು ನಿಮ್ಮ ಮನೆಗೆ ತಲಪುವಂತೆ ಮಾಡುತ್ತಾರೆ.  ಇದೇ ವೇಳೆ ನಿಮಗೆ ಬೇರಾದರೂ ತಿಳಿದಲ್ಲಿ ಅವರ ಮುಖಾಂತರವೇ ಮಾಡಿರಿ. ಎರಡೂ ಬಾಂಡ್‌ನಲ್ಲಿ ಇರಿಸುವುದಾದರೂ,  ಗರಿಷ್ಠ ಮಿತಿ ₹ 50 ಲಕ್ಷ ಮಾತ್ರ. 3 ವರ್ಷ ಅವಧಿ (Lock in Period) ಬಡ್ಡಿ ದರ  ಶೇ 5.25. ಬಡ್ಡಿ ವಾರ್ಷಿಕವಾಗಿ ಅಥವಾ ಒಮ್ಮೆಲೇ ಪಡೆಯಬಹುದು.  ನಿಮ್ಮ ಪ್ರಶ್ನೆಯಿಂದ ಹಲವರಿಗೆ ಉತ್ತರ ಸಿಕ್ಕಿದಂತಾಗುತ್ತದೆ.

ಹೆಸರು, ಊರು ಬೇಡ

ನಾನು ಅವಿವಾಹಿತ. ಸರ್ಕಾರಿ ನೌಕರ. ಎಲ್ಲಾ ಕಡಿತದ ನಂತರ ₹ 15,000 ಬರುತ್ತದೆ. ನನ್ನ ತಾಯಿಗೆ ಪಿತ್ರಾರ್ಜಿತ ಆಸ್ತಿಯಿಂದ ₹ 27 ಲಕ್ಷ ಬಂದಿದೆ. ನನ್ನ ಸಹೋದರಿಗೆ 23 ವರ್ಷ ಅವಳಿಗೆ ಮದುವೆ ಮಾಡಬೇಕು. ಇನ್ನು ಮೂರು ವರ್ಷಗಳ ನಂತರ ನಾನು ಕೂಡಾ ಮದುವೆಯಾಗಬೇಕು. ಬೆಂಗಳೂರಿನಲ್ಲಿ 20X30 ನಿವೇಶನವಿದೆ. ₹ 10 ಲಕ್ಷ ಸಾಲ ಮನೆ ಕಟ್ಟಲು ಸಿಗುತ್ತದೆ ಎಂಬುದಾಗಿ ಬ್ಯಾಂಕ್  ಮ್ಯಾನೇಜರ್ ಹೇಳುತ್ತಾರೆ. ನನ್ನ, ನನ್ನ ಸಹೋದರಿಯ ಹಾಗೂ ತಂದೆ ತಾಯಿಗಳ ಉತ್ತಮ ಬದುಕಿಗೆ ಸರಿಯಾದ ಮಾರ್ಗದರ್ಶನ ಮಾಡಿರಿ?
ಉತ್ತರ: ₹ 27 ಲಕ್ಷ ಬಂದಿರುವುದರಿಂದ ಸದ್ಯಕ್ಕೆ ಗೃಹ ನಿರ್ಮಿಸಲು ಬ್ಯಾಂಕ್ ಸಾಲದ ಮೊರೆ ಹೋಗುವುದು ಉಚಿತವಲ್ಲ. ₹ 10 ಲಕ್ಷ ಸಾಲಕ್ಕೆ ಸಮಾನ ಮಾಸಿಕ ಕಂತು (EMI) ₹ 10,000 ತನಕ ಬರುವುದರಿಂದ ನಿಮ್ಮ ಸಂಬಳದ ಸಿಂಹಪಾಲು ಸಾಲಕ್ಕೆ ತುಂಬ ಬೇಕಾಗುತ್ತದೆ.

ತಂಗಿಯ ಮದುವೆಗೆ ₹ 2 ಲಕ್ಷ ಬೆಲೆ ಬಾಳುವ ಬಂಗಾರದ ಒಡವೆ ಕೊಂಡುಕೊಳ್ಳಿ ಹಾಗೂ ₹ 3 ಲಕ್ಷ ಮೀಸಲಾಗಿಡಿ. 20X30 ನಿವೇಶನದಲ್ಲಿ ಗರಿಷ್ಠ ₹ 10 ಲಕ್ಷ ಖರ್ಚಿನೊಳಗೆ ಒಂದು ಮನೆ ಕಟ್ಟಿಕೊಳ್ಳಿ. ಇದರಿಂದ ನೀವು ಕೊಡುವ ಬಾಡಿಗೆ ಹಣ ಉಳಿಯುತ್ತದೆ. ಉಳಿದ ₹ 12 ಲಕ್ಷ ನಿಮ್ಮ ತಂದೆ ತಾಯಿಯ ಹೆಸರಿನಲ್ಲಿ ಅಂಚೆ ಕಚೇರಿ ಮಾಸಿಕ ಬಡ್ಡಿ ಬರುವ (MIS) ಯೋಜನೆಯಲ್ಲಿ ತೊಡಗಿಸಿ, ಅವರಿಗೆ ಬಡ್ಡಿ ಪಡೆಯಲು ತಿಳಿಸಿ. ನಿಮ್ಮ ಮದುವೆಗೋಸ್ಕರ ₹ 5,000 ಆರ್.ಡಿ. ಸಂಬಳ ಪಡೆಯುವ ಬ್ಯಾಂಕಿನಲ್ಲಿ 3 ವರ್ಷಗಳ ಅವಧಿಗೆ ಮಾಡಿರಿ. ಈ ರೀತಿ ಆರ್ಥಿಕ ಶಿಸ್ತು ಪರಿಪಾಲಿಸಿದಲ್ಲಿ ನಿಮ್ಮ ಮುಂದಿನ ಜೀವನ ಬಹು ಸುಖಮಯವಾಗಿರುತ್ತದೆ.

ಆರ್.ಜಿ. ಬ್ಯಾಕೋಡ, ವಿಜಯಪುರ

ನೀವು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಪಿ.ಪಿ.ಎಫ್. 15 ವರ್ಷಗಳವರೆಗೆ ಹಿಂದಕ್ಕೆ ಪಡೆಯುವಂತಿಲ್ಲ ಎಂಬುದಾಗಿ ತಿಳಿಸಿದ್ದಿರಿ. ಆದರೆ 15 ವರ್ಷಗಳ ಮೊದಲು ಕೂಡಾ ಸ್ವಲ್ಪ ಹಣ ವಾಪಸು ಪಡೆಯಬಹುದು ಎನ್ನುವುದು ಬಹಳ ಜನರಿಗೆ ತಿಳಿದಿರುವುದಿಲ್ಲ. ಈ ವಿಚಾರದಲ್ಲಿ ಓದುಗರಿಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕಾಗಿ ವಿನಂತಿ.
ಉತ್ತರ: ಪಿ.ಪಿ.ಎಫ್. ಒಂದು 15 ವರ್ಷಗಳ ಯೋಜನೆ. ವಾರ್ಷಿಕ ಕನಿಷ್ಠ ₹ 500, ಗರಿಷ್ಠ ₹ 1.50 ಲಕ್ಷ ಈ ಖಾತೆಗೆ ತುಂಬಬಹುದು. ಈ ಖಾತೆಗೆ ವಾರ್ಷಿಕವಾಗಿ ತುಂಬುವ ಹಣ, ಸೆಕ್ಷನ್ 80ಸಿ ಆಧಾರದ ಮೇಲೆ  ಗರಿಷ್ಠ ₹ 1.50 ಲಕ್ಷಗಳ ತನಕ, ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು ಹಾಗೂ ಈ ಖಾತೆಯಲ್ಲಿ ಬರುವ ಸಂಪೂರ್ಣ ಬಡ್ಡಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ.

ಪಿ.ಪಿ.ಎಫ್‌ ವಿಚಾರದಲ್ಲಿ ಈ ಕೆಳಗಿನ ಮಾಹಿತಿ ಓದುಗರಿಗೆ ಅನುಕೂಲವಾಗಬಹುದು.

1. ಜಂಟಿಯಾಗಿ ಪ್ರಾರಂಭಿಸಬಹುದು 2. ನಾಮ ನಿರ್ದೇಶನದ ಸೌಲತ್ತು ಇರುತ್ತದೆ 3. ಖಾತೆದಾರ ತನ್ನ ಅಪ್ರಾಪ್ತ ವಯಸ್ಕ ಮಕ್ಕಳ ಹೆಸರಿನಲ್ಲಿ ಕೂಡಾ ಖಾತೆ ತೆರೆಯಬಹುದು. ಆದರೆ, ಖಾತೆದಾರ ಹಾಗೂ ಮಕ್ಕಳ ಖಾತೆಯಲ್ಲಿ ಒಟ್ಟಿನಲ್ಲಿ ತುಂಬಬಹುದಾದ ಮೊತ್ತ ₹ 1.50 ಲಕ್ಷ ಮಾತ್ರ. 4. 15 ವರ್ಷ ತುಂಬಿದ ನಂತರ ಒಂದು ವರ್ಷದೊಳಗೆ, ಮುಂದಿನ 5 ವರ್ಷಗಳ ಅವಧಿಗೆ ಖಾತೆ ಮುಂದುವರಿಸಬಹುದು. ಹೀಗೆ ಎಷ್ಟು ಸಲ ಬೇಕಾದರೂ ಮುಂದುವರಿಸಬಹುದು 5. ಅವಧಿಗೆ ಮುನ್ನ (15 ವರ್ಷಗಳೊಳಗೆ) ಖಾತೆ ಮುಚ್ಚುವಂತಿಲ್ಲ. 6. 7ನೇ ಆರ್ಥಿಕ ವರ್ಷದಿಂದ, ಹಿಂದಿನ ವರ್ಷ ಇರುವ ಜಮಾ ಮೊತ್ತದಿಂದ ಶೇ 50 ವಾಪಸು ಪಡೆಯಬಹುದು. 7. ಖಾತೆ ಪ್ರಾರಂಭಿಸಿದ ಮೂರು ವರ್ಷಗಳ ನಂತರ, ಸಾಲ ಪಡೆಯಬಹುದು. 8. ಈ ಖಾತೆಯನ್ನು ಕೋರ್ಟು ಅಟ್ಯಾಚ್‌ಮೆಂಟ್‌ ಮಾಡುವಂತಿಲ್ಲ.

ಸದಾನಂದ, ಮಂಡ್ಯ

ನಾನು ನಿವೃತ್ತಿಯ ನಂತರ ಬಂದ ಹಣದಲ್ಲಿ, ಮಗಳ ಹೆಸರಿನಲ್ಲಿ ₹ 6 ಲಕ್ಷ, ಮಗನ ಹೆಸರಿನಲ್ಲಿ ₹ 4 ಲಕ್ಷ, ಹೆಂಡತಿ ಹೆಸರಿನಲ್ಲಿ ₹ 5 ಲಕ್ಷ, ಎಫ್‌.ಡಿ. ಮಾಡಿದ್ದೇನೆ. ₹ 1 ಲಕ್ಷ ಬೇರೆ ಠೇವಣಿಯಾಗಿರಿಸಿ ಬರುವ ಬಡ್ಡಿಯಲ್ಲಿ ಅಂಧರಿಗೆ, ಅನಾಥರಿಗೆ, ಬಡಮಕ್ಕಳಿಗೆ ಸಹಾಯ ಮಾಡಬೇಕೆಂದಿದ್ದೇನೆ. ನನ್ನೊಡನಿರುವ ₹ 16 ಲಕ್ಷ ಯಾವುದರಲ್ಲಿ ವಿನಿಯೋಗಿಸಿದರೆ ಇನ್ನೂ ಹೆಚ್ಚಿನ ವರಮಾನ ಪಡೆಯಬಹುದೆ?
ಉತ್ತರ: ನೀವು ಬ್ಯಾಂಕ್‌ ಠೇವಣಿ ಮಾಡಿರುವುದು ಸರಿ ಇರುತ್ತದೆ. ಊಹಾಪೋಹಗಳ ಹೂಡಿಕೆ, ಹೊರನೋಟಕ್ಕೆ ಆಕರ್ಷಣೀಯವಾಗಿ ಕಂಡರೂ, ಅಲ್ಲಿ ಕಂಟಕ ಕಾಯುತ್ತಿರುತ್ತದೆ. ಇದರಿಂದ ನೀವು ಕಷ್ಟಪಟ್ಟು ದುಡಿದ ಹಣ ಕರಗಿಹೋಗುವ ಸಾಧ್ಯತೆ ಕೂಡಾ ಇದೆ.

ಇದೇ ವೇಳೆ ಅಭದ್ರವಾದ ಸ್ಥಳ ಅಥವಾ ಜನರಲ್ಲಿ ಹಣ ಹೂಡಿದರೆ, ಅಸಲೇ ಕಳೆದುಕೊಳ್ಳುವ ಪ್ರಮೇಯ ಬಂದೊದಗಬಹುದು. ನಿಮಗೆ ಬಡ್ಡಿಯ ಅವಶ್ಯವಿಲ್ಲವಾದಲ್ಲಿ, ₹ 16 ಲಕ್ಷದಲ್ಲಿ ₹ 15 ಲಕ್ಷ ಒಮ್ಮೆಲೇ ಬಡ್ಡಿ ಬರುವ ಯೋಜನೆಯಲ್ಲಿ ತೊಡಗಿಸಿ, ನಿಮ್ಮ ಹಣ ಹೆಚ್ಚಿನ ವರಮಾನಗಳಿಸಲು ಅನುವು ಮಾಡಿಕೊಡಿ. ಈ ಯೋಜನೆಯಲ್ಲಿ ಬಡ್ಡಿ ಅಸಲಿಗೆ ಪ್ರತೀ ಮೂರು ತಿಂಗಳಿಗೊಮ್ಮೆ ಜಮಾ ಆಗಿ, ಚಕ್ರಬಡ್ಡಿಯಲ್ಲಿ ನಿಮ್ಮ ಮೂಲ ಧನ ಬೆಳೆಯುತ್ತದೆ. ₹ 1 ಲಕ್ಷ ಎಫ್‌.ಡಿ.ಯಲ್ಲಿ ಇರಲಿ. ಈ ಹಣದ ಬಡ್ಡಿ ಬಡವರಿಗೆ ಹಂಚಲು ಅನುಕೂಲವಾಗುತ್ತದೆ.


ಜಿ. ಸುಬ್ರಮಣ್ಯ ರಾಜು, ಚಿಕ್ಕಲ್ಲಸಂದ್ರ, ಬೆಂಗಳೂರು

NHAI-REC ಠೇವಣಿಗೆ ಗರಿಷ್ಠ ಮಿತಿ ಇದೆಯೇ? 3 ವರ್ಷಗಳ ನಂತರ ಆಸ್ತಿ ಖರೀದಿಸಲು ಬಳಸಬಹುದೇ ಅಥವಾ ಬ್ಯಾಂಕ್‌ ಠೇವಣಿ ಇಟ್ಟು ಬಡ್ಡಿ ಪಡೆಯಬಹುದೇ, ಈ ಹಣಕ್ಕೆ ತೆರಿಗೆ ಇದೆಯೇ ತಿಳಿಸಿರಿ. ಈ ಬಾಂಡುಗಳನ್ನು ಅದರ ಅವಧಿಯೊಳಗೆ ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆಯಬಹುದೇ?
ಉತ್ತರ: ಸೆಕ್ಷನ್‌ 54ಇ ಆಧಾರದ ಮೇಲೆ ಬಂಡವಾಳ ವೃದ್ಧಿ ತೆರಿಗೆ (Capital Gain Tax) ಉಳಿಸಲು NHAI-REC ಇವುಗಳಲ್ಲಿ ತೊಡಗಿಸಬಹುದಾದ ಗರಿಷ್ಠ ಮಿತಿ ₹ 50 ಲಕ್ಷ. ಈ ಬಾಂಡುಗಳ ಅವಧಿ ಮುಗಿಯುತ್ತಲೇ ಬರುವ ಹಣದಿಂದ, ಮುಂದೆ ಆಸ್ತಿ ಮಾತ್ರವಲ್ಲ ಏನನ್ನೂ ಖರೀದಿಸಬಹುದು, ಅಥವಾ ಬ್ಯಾಂಕಿನಲ್ಲಿ ಠೇವಣಿಯಾಗಿ ಇರಿಸಬಹುದು. ₹ 50 ಲಕ್ಷ ದಾಟಿದ ಮೊತ್ತಕ್ಕೆ ಶೇ 20 ತೆರಿಗೆ ಸಲ್ಲಿಸಬೇಕು.

NHAI-REC ಯಲ್ಲಿ ಇರಿಸಿದಾಗ ಹಾಗೂ ಮುಂದೆ ಠೇವಣಿ ಇರಿಸಿದಾಗ ಬರುವ ಬಡ್ಡಿಗೆ ತೆರಿಗೆ ವಿನಾಯತಿ ಇಲ್ಲ. ಹೀಗೆ ಬರುವ ಬಡ್ಡಿ ಆದಾಯ, ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕು. NHAI-REC ಬಾಂಡುಗಳ ಮೂರು ವರ್ಷಗಳ ಅವಧಿಯಲ್ಲಿ, ಇಂತಹ ಬಾಂಡುಗಳನ್ನು ಬ್ಯಾಂಕುಗಳಲ್ಲಿ ಅಥವಾ ಇನ್ನಿತರ ಆರ್ಥಿಕ ಸಂಸ್ಥೆಯಲ್ಲಿ ಅಡವಿಟ್ಟು ಸಾಲ ಪಡೆಯುವಂತಿಲ್ಲ. ನಿಮ್ಮ ಪ್ರಶ್ನೆಯಿಂದ ಹಲವರಿಗೆ ಉತ್ತರ ಸಿಕ್ಕಿದಂತಾಗಿದೆ. ನಿಮಗೆ ಧನ್ಯವಾದಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT