ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಉದ್ದಿಮೆಯಲ್ಲಿ ಜಗದೀಶ ಯಶಸ್ಸು

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

* ಬಸವರಾಜ ಶಿ. ಗಿರಗಾಂವಿ

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಿದ್ದಾಪೂರ ಗ್ರಾಮದ ಪ್ರಭುಲಿಂಗೇಶ್ವರ ಷುಗರ್ಸ್‌ ಮತ್ತು ಕೆಮಿಕಲ್ಸನ ಅಧ್ಯಕ್ಷ ಜಗದೀಶ ಶಿವಯ್ಯ ಗುಡಗುಂಟಿಮಠ ಇವರು ಬಡತನದಲ್ಲಿ ಕಷ್ಟಪಟ್ಟು ಓದಿ ಯಶಸ್ವಿ ಉದ್ದಿಮೆದಾರ ಎನಿಸಿಕೊಂಡಿದ್ದಾರೆ.

ವಿಜಯಪುರ ಜಿಲ್ಲೆಯ ಹೊನ್ನವಾಡ ಗ್ರಾಮದವರಾದ ಜಗದೀಶ ಬಾಗಲಕೋಟೆಯಲ್ಲಿ ತಾಂತ್ರಿಕ ಶಿಕ್ಷಣ ಮುಗಿಸಿದ ನಂತರ, ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಟ್ರೈನಿ ಅಸಿಸ್ಟಂಟ್ ಎಂಜಿನಿಯರ್ (ಡಿಜೈನ್) ಹುದ್ದೆಗೆ ನೇಮಕಗೊಳ್ಳುತ್ತಾರೆ. ಅಂದಿನ ತಿಂಗಳ ಸಂಬಳ ಬರೀ ₹ 125. 1972ರಲ್ಲಿ ಈ ಕೆಲಸಕ್ಕೆ ಸೇರಿಕೊಂಡ ಜಗದೀಶ್‌,ದಕ್ಷತೆಯಿಂದ ಕೆಲಸ ನಿರ್ವಹಿಸುತ್ತ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು. ಇವರ ಕೆಲಸದ ಕಾರ್ಯವೈಖರಿಯನ್ನು ಕಂಡು ಕೆಲವು ಸಹೋದ್ಯೋಗಿ ಮಿತ್ರರು  ಇವರನ್ನು ‘ಕಾರ್ಖಾನೆಯ ದೈತ್ಯ’ ಎಂದು ಕರೆಯುತ್ತಿದ್ದರು.

ಕಾರ್ಖಾನೆಯಲ್ಲಿನ ಇವರ ತಾಂತ್ರಿಕ ಸೇವೆಯು ಕ್ರಮೇಣ ರಾಜ್ಯದ ಹೊರಗೂ ವಿಸ್ತರಿಸಿತು. ಮಹಾರಾಷ್ಟ್ರ, ಗುಜರಾತ್‌ ಮತ್ತು ಉತ್ತರಪ್ರದೇಶಗಳಿಂದಲೂ ಇವರ ಸೇವೆಗೆ ಬೇಡಿಕೆ ಬರತೊಡಗಿತು. ದೇಶದಾದ್ಯಂತ ಪ್ರವಾಸ ಮಾಡಿ ಸಕ್ಕರೆ ಕಾರ್ಖಾನೆಗಳಲ್ಲಿ ತಲೆದೋರುವ ತಾಂತ್ರಿಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಶಾಶ್ವತ ಪರಿಹಾರ ದೊರಕಿಸಿಕೊಟ್ಟು ಕಾರ್ಖಾನೆ ಮಾಲೀಕರ ಮೆಚ್ಚುಗೆಗೆ ಪಾತ್ರರಾಗುತ್ತ ಹೋದರು.

ದಿನಕಳೆದಂತೆ ದೇಶ-ವಿದೇಶಗಳಲ್ಲಿನ ಸಕ್ಕರೆ ಕಾರ್ಖಾನೆಗಳ ತಾಂತ್ರಿಕ ವಿಭಾಗದ ಸಂಪೂರ್ಣ ಮಾಹಿತಿ ಕರಗತ ಮಾಡಿಕೊಂಡರು. ಪ್ರತಿಯೊಂದು ಯಂತ್ರಗಳ ಬಿಡಿಭಾಗಗಳನ್ನು ಅಭ್ಯಸಿಸಿ ಪರಿಣತಿ ಸಾಧಿಸಿದರು. ಈ ಅನುಭವದ ಆಧಾರದ ಮೇಲೆ ಕೆಲ ವರ್ಷಗಳ ನಂತರ  ತಾವೇ ಸ್ವತಃ ಉದ್ಯೋಗ ಆರಂಭಿಸುವ ಹೆಬ್ಬಯಕೆ ಮೂಡಿತು. ಸಕ್ಕರೆ ಕಾರ್ಖಾನೆಗಳಿಗೆ ಅಗತ್ಯವಾಗುವ ಸಲಕರಣೆಗಳನ್ನು ತಯಾರಿಸಿ, ಮಾರುಕಟ್ಟೆಗೆ ತಾವೇ ಪೂರೈಸಬಹುದಲ್ಲ ಎನ್ನುವ ಆಲೋಚನೆ ಬಂದಿತು. ಉದ್ದಿಮೆ ಸ್ಥಾಪನೆಯ ಚಿಂತನೆಯನ್ನು ಸಾಕಾರಗೊಳಿಸಲು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಮತ್ತು ಧಾರವಾಡದಲ್ಲಿ ಎಕ್ಸ್‌ಟ್ರ್ಯಾಕ್ಟ್‌ ಎಂಜಿನಿಯರ್ಸ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ ( Extract Engineers (India) Pvt.Ltd) ಸ್ಥಾಪಿಸಿದರು.

‘ಕಾರ್ಖಾನೆಯ ಒಳ್ಳೆಯ ಗುಣಮಟ್ಟದ ಸಲಕರಣೆಗಳಿಗೆ ಆರಂಭದಿಂದಲೇ ಉತ್ತಮ ಬೇಡಿಕೆ ಕಂಡು ಬಂದಿತು. ಕ್ರಮೇಣ ದೇಶ-ವಿದೇಶಗಳಿಂದ ಬೇಡಿಕೆ ಹೆಚ್ಚಾಯಿತು. ಇಲ್ಲಿನ ಸಲಕರಣೆಗಳು ಮತ್ತು ನೀಲ-ನಕ್ಷೆಗಳು ಕೀನ್ಯಾ, ನೈಜೀರಿಯಾ, ಜರ್ಮನಿ ಮತ್ತು ವಿಯಾಟ್ನಾಂ ಸೇರಿದಂತೆ ಹಲವಾರು ದೇಶಗಳಲ್ಲಿ ಇಂದಿಗೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ’ ಎಂದು ಜಗದೀಶ್‌ ಅವರು ಹೆಮ್ಮೆಯಿಂದಲೇ ಹೇಳುತ್ತಾರೆ.ಈ ಉದ್ದಿಮೆ ಸ್ಥಾಪನೆಯಿಂದ ಅವರಿಗೆ ತೃಪ್ತಿ ಸಿಕ್ಕಿರಲಿಲ್ಲ. ಇನ್ನೂ ಏನನ್ನಾದರೂ ಸಾಧಿಸಬೇಕು ಎನ್ನುವ ಹಂಬಲ ಅವರಲ್ಲಿತ್ತು.  ಸಮಾಜಕ್ಕೆ ವಿಶಿಷ್ಟವಾದ ಕೊಡುಗೆ ಕೊಡಬೇಕು ಎಂದು  ಕನಸು ಕಾಣುತ್ತಿದ್ದರು.

1990ರ ದಶಕದಲ್ಲಿ  ಬೆಳೆದ ಕಬ್ಬು ಸರಿಯಾಗಿ ಕಾರ್ಖಾನೆಗಳಿಗೆ ಪೂರೈಕೆಯಾಗದೇ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಜಗದೀಶರ ಕಾರ್ಯದಕ್ಷತೆಯನ್ನು ಚೆನ್ನಾಗಿ ಅರಿತಿದ್ದ ಸುತ್ತ-ಮುತ್ತಲಿನ ಗ್ರಾಮಗಳ ಹಲವಾರು ರೈತರು ಇವರನ್ನು ಭೆಟ್ಟಿಯಾಗಿ ‘ಕಬ್ಬು ಹೇರಳವಾಗಿ ಬೆಳೆಯುವ ಈ ಭಾಗದಲ್ಲಿಯೇ ನೀವು ಒಂದು ಸಕ್ಕರೆ ಕಾರ್ಖಾನೆ ಸ್ಥಾಪಿಸಿ, ಈ ಭಾಗಕ್ಕೆ   ಅನುಕೂಲ ಮಾಡಿ ಕೊಡಿ. ನಿಮಗೆ ನಾವು ಸಹಾಯ ಮಾಡುತ್ತೇವೆ. ಇದರಿಂದ ಈ ಭಾಗದ ರೈತರಿಗೆಲ್ಲ ‍ಪ್ರಯೋಜನವಾಗಲಿದೆ’ ಎಂದು ವಿನಂತಿಸಿದರು.

ರೈತರ ಮಾತಿಗೆ ಸಮ್ಮತಿ ಸೂಚಿಸಿ, ಈ ಸವಾಲಿನ ಯೋಜನೆ ಕಾರ್ಯಗತಗೊಳಿಸಲು ಕಾರ್ಯಪ್ರವರ್ತರಾದರು. ಕಾರ್ಖಾನೆಗೆ ಅವಶ್ಯವಿರುವ ಪರವಾನಗಿ, ಜಮೀನು ಮತ್ತು ಕಾರ್ಖಾನೆಯ ಸ್ಥಳ ನಿಗದಿ ಸಲುವಾಗಿ  ಅನೇಕ ವಿಘ್ನಗಳನ್ನು ಎದುರಿಸುತ್ತಲೇ, ಹಳ್ಳಿ-ಹಳ್ಳಿಗಳಿಗೆ ತಿರುಗಿ ಷೇರು ಹಣ ಸಂಗ್ರಹಿಸಿ ‘ಪ್ರಭುಲಿಂಗೇಶ್ವರ ಷುಗರ್ಸ ಆಂಡ್ ಕೆಮಿಕಲ್ಸ ಲಿಮಿಟೆಡ್, ಸಿದ್ದಾಪೂರ’ ಕಾರ್ಖಾನೆ ಕಟ್ಟಲು ಮುಂದಾದರು.

ಕಾರ್ಖಾನೆ ಕಟ್ಟಲು ಪ್ರಾರಂಭಿಸಿದ ಮೊದಲಾರ್ಧದಲ್ಲಿ ಅಷ್ಟೇನು ತೊಂದರೆಯಾಗಲಿಲ್ಲ. ನಂತರದ ದಿನಗಳಲ್ಲಿ ಆರ್ಥಿಕ ತೊಂದರೆ, ಸರಕಾರದ ಕಟ್ಟು-ನಿಟ್ಟಾದ ಧೋರಣೆಗಳು ಮತ್ತು ಕಾರ್ಖಾನೆಯ ಕಾರ್ಯಕ್ಷೇತ್ರ ನಿಗದಿ ಸಮಸ್ಯೆಗಳು ಇವರ ನೆಮ್ಮದಿ ಕದಡಿದವವು. ಆದರೆ, ಯಾವತ್ತೂ ಕೈಚೆಲ್ಲಿ ಕುಳಿತುಕೊಳ್ಳಲಿಲ್ಲ. ಎದೆಗುಂದದೆ ಹಗಲು ರೈತರೊಂದಿಗೆ ತಿರುಗಾಟ, ರಾತ್ರಿ ನಿರ್ಮಾಣ ಹಂತದಲ್ಲಿದ್ದ ಕಾರ್ಖಾನೆಯ ಯಂತ್ರಗಳ  ಜೋಡಣೆಗೆ ಗಮನ ಕೇಂದ್ರಿಕರಿಸಿದರು. ‘ಹಗಲು ಚೇರ್ಮನ್ ರಾತ್ರಿ ವಾಚಮನ್’ ತರಹ ಕೆಲಸ ನಿರ್ವಹಿಸುತ್ತ ಮುನ್ನಡೆದರು.

ಕೊನೆಗೆ ರೈತರ ಸಹಕಾರ, ಜಗದೀಶರ ಪ್ರಾಮಾಣಿಕ ಪ್ರಯತ್ನದ ಫಲವಾಗಿ 2000ನೇ ಇಸವಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಯಿತು. ಕಾರ್ಖಾನೆ ಪ್ರಾರಂಭವಾದ ನಂತರ ಹವಾಮಾನ ವೈಪರೀತ್ಯ, ಕಾರ್ಖಾನೆಯ ಕಾರ್ಯಕ್ಷಮತೆ ಹೆಚ್ಚಳ ಮತ್ತು ಅನಾರೋಗ್ಯಕರ ಪೈಪೋಟಿಗಳು ಜಗದೀಶರನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡಲಿಲ್ಲ, ಕಾರ್ಖಾನೆ ಕಟ್ಟಲು ಹೋರಾಟ ಮಾಡಿದ ಜಗದೀಶರು, ಯಶಸ್ವಿಯಾಗಿ ನಡೆಸಲೂ ಸಹ ಹೋರಾಟ ಮಾಡುತ್ತಿದ್ದಾರೆ.

ಸುಸಜ್ಜಿತ ಶಾಲೆ

ಕಬ್ಬು ಬೆಳೆಗಾರರ ಸಹಕಾರದೊಂದಿಗೆ ಸಾವಿರಾರು ಬಡ ಮಕ್ಕಳಿಗೆ ಸುಸಜ್ಜಿತ ಪುಷ್ಪಾತಾಯಿ ಶಾಲೆ ಪ್ರಾರಂಭಿಸಿ,   ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದಾರೆ. ನಿರುದ್ಯೋಗಿ ಯುವಕರಿಗಾಗಿ ‘ಸಿದ್ದಾಪೂರ ಡಿಸ್ಟಿಲರಿ ಲಿಮಿಟೆಡ್’ ಮತ್ತು ರೈತರು, ಸಣ್ಣ-ಪುಟ್ಟ ಉದ್ದಿಮೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ‘ಪ್ರಭುಲಿಂಗೇಶ್ವರ ಸೌಹಾರ್ಧ ಬ್ಯಾಂಕ್‌’ ಸ್ಥಾಪಿಸಿದ್ದಾರೆ. ಈ ಬ್ಯಾಂಕ್ ವಾರ್ಷಿಕ   ₹ 7,000 ಕೋಟಿ ವ್ಯವಹಾರ ಮಾಡುತ್ತ  ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಜನರಿಗೆ ವರದಾನವಾಗಿದೆ.

ಜಗದೀಶರು ಸಾಕಷ್ಟು ಆರ್ಥಿಕ ತೊಂದರೆ ಅನುಭವಿಸಿ ಉದ್ದಿಮೆದಾರರಾಗಿ ಬೆಳೆದವರು. ಹೀಗಾಗಿ ಇವರು ಜನ-ಸಾಮಾನ್ಯರ ಎಲ್ಲ ಕಷ್ಟ-ಕಾರ್ಪಣ್ಯಗಳು ಅವರಿಗೆ ಚೆನ್ನಾಗಿ ಗೊತ್ತಿದೆ.ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ.

ಇವರು, ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಪಶ್ಚಿಮ ಭಾರತ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಸಹ ಅಧ್ಯಕ್ಷ ಮತ್ತು ಭಾರತೀಯ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಸಮಿತಿ ಸದಸ್ಯರಾಗಿದ್ದುಕೊಂಡು ಸಕ್ಕರೆ ಉದ್ಯಮಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರ ಅನುಭವ ಮತ್ತು ಜನಪರ ಯೋಜನೆಗಳನ್ನು ಗುರುತಿಸಿ ರಾಜ್ಯ ಸರಕಾರವು  ‘ಕಬ್ಬು ನಿಯಂತ್ರಣ ಮಂಡಳಿ’ಗೆ ಸದಸ್ಯರೆಂದು ನೇಮಕ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT