ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ನೀತಿ: ಹೊಸ ಶಕೆ

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭಾರತದ ಆರ್ಥಿಕತೆಯಲ್ಲಿ ಚಿನ್ನ ಮಹತ್ವದ ಪಾತ್ರ ವಹಿಸುತ್ತಿದೆ. 20ನೇ ಶತಮಾನದ ಆರಂಭದಲ್ಲಿ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಮುಂಬೈನಲ್ಲಿ ಹೆಚ್ಚು ಕ್ರಿಯಾಶೀಲವಾಯಿತು. 1948ರಲ್ಲಿ ಬಾಂಬೆ ಬುಲಿಯನ್‌ ಅಸೋಸಿಯೇಷನ್‌ ಸ್ಥಾಪಿಸಲಾಯಿತು. ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರತಿನಿಧಿಗಳು ಈ ಸಂಘಟನೆಯಲ್ಲಿ ಇದ್ದರು. 1963ರಲ್ಲಿ ಚಿನ್ನ ಮತ್ತು ಬೆಳ್ಳಿ ವಹಿವಾಟಿನ ಮೇಲೆ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸುವ ಮೂಲಕ ‘ಸುವರ್ಣ ಯುಗ’ ಅಂತ್ಯವಾಯಿತು.

ಅಲ್ಲಿಂದ ದೇಶಿಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಕಪ್ಪು ಹಣ ವ್ಯಾಪಕವಾಗಿ ಹರಡಲು ಚಿನ್ನ ಪ್ರಮುಖ ಕಾರಣವಾಯಿತು. ಅಕ್ರಮವಾಗಿ ಚಿನ್ನದ ಸಾಗಿಸುವ ಪ್ರಕರಣಗಳು ಹೆಚ್ಚಾಗತೊಡಗಿದವು. 1990ರಲ್ಲಿ ಚಿನ್ನದ ಮೇಲೆ ವಿಧಿಸಿದ ನಿರ್ಬಂಧಗಳನ್ನು ತೆಗೆದುಹಾಕಲಾಯಿತು 1997ರಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುವುದನ್ನು ಮುಕ್ತಗೊಳಿಸಲಾಯಿತು. ಆದರೆ, 2015ರವರೆಗೂ   ಬೆಳವಣಿಗೆಗೆ ಪೂರಕವಾದ ‘ಚಿನ್ನದ ನೀತಿ’ ರೂಪಿಸಿರಲಿಲ್ಲ.

ಚಿನ್ನದ ನೀತಿಗೆ ಸಂಬಂಧಿಸಿದ ನನ್ನ ಆಸಕ್ತಿ ಹಲವು ದಶಕಗಳದ್ದು. 1991ರಲ್ಲಿ ಹಣಕಾಸು ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವಾಗಿನಿಂದಲೂ ಈ ಬಗ್ಗೆ ಚಿಂತನೆ ನಡೆಸಿದ್ದೆ. ಮಾರುಕಟ್ಟೆ ಮೌಲ್ಯದ ಪ್ರಕಾರ ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿನ ಚಿನ್ನಕ್ಕೆ ಮೌಲ್ಯ ನಿರ್ಧರಿಸಲು ಸುಗ್ರೀವಾಜ್ಞೆಯನ್ನು ಜಾರಿಗೊಳಿಸಬೇಕಾಯಿತು.

ವಿದೇಶಿ ವಿನಿಯಮಕ್ಕಾಗಿ ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿಟ್ಟಿದ್ದ ಸರ್ಕಾರದ ಚಿನ್ನವನ್ನು ‘ಲೀಸ್‌’ ಮೇಲೆ ನೀಡಬೇಕಾಯಿತು. ಕೊನೆಗೆ, ಸಾಲ ಮರುಪಾವತಿಯ ಸಂಕಷ್ಟ ಎದುರಾದಾಗ ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿದ್ದ ಚಿನ್ನದ ಒಂದಿಷ್ಟು ಭಾಗವನ್ನು ವಿದೇಶಿ ವಿನಿಮಯಕ್ಕಾಗಿ ಭದ್ರತೆಗಾಗಿ ನೀಡಲಾಯಿತು. ಇಂತಹ ಬೆಳವಣಿಗೆಗಳು ಭಾರತದ ಆರ್ಥಿಕತೆಯಲ್ಲಿ ಚಿನ್ನ ವಹಿಸುವ ಪಾತ್ರದ ಬಗ್ಗೆ ನನ್ನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿತು.

ಭಾರತದಲ್ಲಿ ಚಿನ್ನದ ಬೇಡಿಕೆ ಹೆಚ್ಚಳವಾಗಲು ಮಹಿಳೆಯರು ಸಹ ಕಾರಣರು. ಚಿನ್ನದ ಬಗ್ಗೆ ಮಹಿಳೆಯರಿಗೆ ವ್ಯಾಮೋಹ ಹೆಚ್ಚು. ಮೌಲ್ಯ ಕುಸಿತವಾಗದ ಕಾರಣ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಮಹಿಳೆಯರು ಚಿನ್ನದ ಬಗ್ಗೆ ಹೆಚ್ಚು ಒಲವು ತೋರುತ್ತಾರೆ. ಜತೆಗೆ ಹಣಕಾಸಿನ ಸಂಕಷ್ಟ ಎದುರಾಗಲು ಚಿನ್ನವನ್ನು ಅಡವಿಟ್ಟು ಅಥವಾ ಮಾರಾಟ ಮಾಡಿ ಪರಿಹಾರ ಕಂಡುಕೊಳ್ಳುತ್ತಾರೆ.

ಆಸ್ತಿ ಮೇಲಿನ ಹಕ್ಕಿಗೆ ಸಂಬಂಧಿಸಿದಂತೆ ಇನ್ನೂ ಮಹಿಳೆಯರಿಗೆ ಸಮರ್ಪಕವಾಗಿ ಪಾಲು ದೊರೆಯುತ್ತಿಲ್ಲ. ದಾಖಲೆಗಳಲ್ಲಿ ಆಸ್ತಿ ನೀಡಿದ್ದರೂ ಮಹಿಳೆಯರು ಅದರ ಹಕ್ಕನ್ನು ಪಡೆಯಲು ಸಾಧ್ಯವಾಗದಿರುವ ಉದಾಹರಣೆಗಳೇ ಹೆಚ್ಚು. ಹೀಗಾಗಿ ಚಿನ್ನ ತಮ್ಮ ಜೀವನಕ್ಕೆ ಭದ್ರತೆ ಒದಗಿಸುತ್ತದೆ ಎನ್ನುವ ಅಭಿಪ್ರಾಯ ಬಲಗೊಂಡಿದೆ. ಚಿನ್ನಕ್ಕೆ ಸಂಬಂಧಿಸಿದ ಸಾರ್ವಜನಿಕ ನೀತಿಯನ್ನು ರೂಪಿಸುವಾಗ ಎಲ್ಲರಿಗೂ ಅನುಕೂಲ ಕಲ್ಪಿಸಬೇಕು. ಅದು ಯಾರಿಗೂ ತಾರತಮ್ಯ ಮಾಡಬಾರದು.

1990ರ ಬಳಿಕ ಸುಧಾರಣೆ ಕ್ರಮಗಳು ಜಾರಿಯಾದವು. ಅಸಂಘಟಿತವಾಗಿದ್ದ ಕ್ಷೇತ್ರವನ್ನು ಅಧಿಕೃತವಾಗಿ ಸಂಘಟಿಸುವ ಪ್ರಯತ್ನಗಳು ಆರಂಭವಾದವು. ಇಂದು ಶೇಕಡ 10ರಷ್ಟು ಚಿಲ್ಲರೆ ವ್ಯಾಪಾರಿಗಳು ಸಂಘಟಿತರಾಗಿದ್ದಾರೆ. ಹಲವಾರು ಕಾನೂನುಗಳಿಗೂ ತಿದ್ದುಪಡಿ ಮಾಡಲಾಗಿದೆ.ಸರ್ಕಾರದ ನೀತಿಯು ಸಹ ಚಿನ್ನದ ಸ್ಥಾನಮಾನ ಮತ್ತು ಆರ್ಥಿಕತೆಯಲ್ಲಿ ಅದು ವಹಿಸುತ್ತಿರುವ ಮಹತ್ವದ ಪಾತ್ರವನ್ನು ಗುರುತಿಸಿದೆ. ಹೀಗಾಗಿ, ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದು ಮುಖ್ಯ. ಚಿನ್ನವನ್ನು ನಾವು ವಸ್ತು ಎಂದು ವ್ಯಾಖ್ಯಾನಿಸಬಹುದು. ಆದರೆ, ಹಣಕಾಸು ಕ್ಷೇತ್ರದಲ್ಲಿ ಚಿನ್ನ ವಹಿಸುವ ಪಾತ್ರ ಅಗಾಧ. ಹೀಗಾಗಿಯೇ ಭಾರತೀಯ ರಿಸರ್ವ್‌ ಬ್ಯಾಂಕ್‌ ಸಹ ಚಿನ್ನಕ್ಕೆ ಹೆಚ್ಚು ಒಲವು ತೋರುತ್ತದೆ.

ಚಿನ್ನದ ಕುರಿತು ಕೇಂದ್ರ ಸರ್ಕಾರ ಈಗ ಕೈಗೊಂಡಿರುವ ಕ್ರಮಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ. ಸಾರ್ವಜನಿಕ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಉದಾಹರಣೆಗೆ 2015–16ರಲ್ಲಿ  ಚಿನ್ನಕ್ಕೆ ಸಂಬಂಧಿಸಿದ ಮೂರು ಮಹತ್ವದ ಯೋಜನೆಗಳನ್ನು 2015–16ರಲ್ಲಿ ಪ್ರಕಟಿಸಲಾಯಿತು. ‘ಗೋಲ್ಡ್‌ ಮನಿಟೈಸೇಷನ್‌’ ಯೋಜನೆ, ‘ ಬಾಂಡ್‌ ಯೋಜನೆ ಮತ್ತು ‘ ಭಾರತೀಯ ಚಿನ್ನದ ನಾಣ್ಯ’ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.

‘ಗೋಲ್ಡ್‌ ಮನಿಟೈಸೇಷನ್‌’  ಈ ಯೋಜನೆಯ ಅನುಷ್ಠಾನದಲ್ಲಿ ಹಲವು ಸವಾಲುಗಳು ಎದುರಾಗಿವೆ. ಸರ್ಕಾರ ಈ ಯೋಜನೆ ಅನುಷ್ಠಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಅಗತ್ಯವಿದೆ. ಗ್ರಾಹಕರಿಗೆ ಹೆಚ್ಚಿನ ಬಡ್ಡಿ ದರ ದೊರೆಯುವಂತೆ ಮಾಡಿದರೆ ಅನುಕೂಲ. ಕಾಳಸಂತೆಯಲ್ಲಿ ನಡೆಯುವ ಅಕ್ರಮ ಚಿನ್ನದ ವಹಿವಾಟು ಸಹ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಗಂಭೀರ  ಸ್ವರೂಪದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸರ್ಕಾರ ಈಗ ಕೈಗೊಂಡಿರುವ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಬೇಕಾಗಿದೆ. ಸವಾಲು ಮತ್ತು ಅವಕಾಶಗಳ ಬಗ್ಗೆ ಸಮಾಲೋಚನೆ ಮಾಡಿ ರೂಪುರೇಷೆಗಳನ್ನು ಸಿದ್ಧಪಡಿಸಬೇಕು. ಚಿನ್ನದ ಕುರಿತು ಹಣಕಾಸು ಸಚಿವಾಲಯ ಕಾರ್ಯ ತಂಡ ರಚಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಹಲವು ವರ್ಷಗಳ ಕಾಲ ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾತ್ರ ಚಿನ್ನ ಮಾರಾಟ ಮಾಡುತ್ತಿತ್ತು. 2000 ಇಸ್ವಿ ವೇಳೆಗೆ ಈ ಬ್ಯಾಂಕ್‌ನಲ್ಲಿದ್ದ ಚಿನ್ನ 1975ರಲ್ಲಿ ಇದ್ದ ಪ್ರಮಾಣಕ್ಕಿಂತಲೂ 3,600ಟನ್‌ಗಳಷ್ಟು ಕಡಿಮೆಯಾಗಿತ್ತು. 1999ರಲ್ಲಿ 17 ಬ್ಯಾಂಕ್‌ಗಳು ‘ವಾಷಿಂಗ್ಟನ್‌ ಗೋಲ್ಡ್‌’ ಒಪ್ಪಂದಕ್ಕೆ ಸಹಿ ಹಾಕಿದವು.

ಚಿನ್ನ ಮಾರಾಟದ ಮೇಲೆ ಮಿತಿ ಹಾಕುವುದು ಒಪ್ಪಂದದ ಉದ್ದೇಶವಾಗಿತ್ತು. 2004, 2009 ಮತ್ತು 2014ರಲ್ಲಿ ಎರಡನೇ ಮತ್ತು ಮೂರನೇ ಹಾಗೂ ನಾಲ್ಕನೇ ಒಪ್ಪಂದಗಳನ್ನು ಜಾರಿಗೊಳಿಸಲಾಯಿತು. ಆದರೆ, ಜಾಗತಿಕ ಹಣಕಾಸು ಬಿಕ್ಕಟ್ಟಿನ ಬಳಿಕ 2009ರಿಂದ ಹಲವು ಬದಲಾವಣೆಗಳಾದವು. ಅಂದಿನಿಂದ ಕೇಂದ್ರೀಯ ಬ್ಯಾಂಕ್‌ಗಳೇ ಚಿನ್ನವನ್ನು ಖರೀದಿಸುತ್ತಿವೆ. ಮುಂದಿನ ದಿನಗಳಲ್ಲಿ ‘ಚಿನ್ನದ ಯುಗ’ ಆರಂಭವಾಗುವುದನ್ನು ನಿರೀಕ್ಷಿಸಬೇಕಾಗಿದೆ.

ವೈ.ವಿ. ರೆಡ್ಡಿ. (ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾಜಿ ಗವರ್ನರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT