ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಿನ ರಾಜಕಾರಣ ಕೊನೆಗೊಳ್ಳಲಿ

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿ ನೇತೃತ್ವದಲ್ಲಿ 1947ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯ ಪಡೆಯಿತು. ಪರತಂತ್ರದ ಜಾಗದಲ್ಲಿ ಪ್ರಜಾತಂತ್ರ. ದೇಶಕ್ಕೆ ಸೂಕ್ತವಾದ ಸಂವಿಧಾನ ರಚಿಸಲು ಅಧ್ಯಯನಶೀಲರು, ವಿಚಾರವಂತರು ಆದ ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಆ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ಅವರು ಬೇರೆ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ನಮ್ಮ ರಾಷ್ಟ್ರಕ್ಕೆ ಅಗತ್ಯವಾದ ಸಂವಿಧಾನವನ್ನು ರಚಿಸಿದ್ದಾರೆ.

ಸಂವಿಧಾನದ ಪ್ರಕಾರ ಆಡಳಿತ ನಿರ್ವಹಣೆಗೆ ಮುಖ್ಯವಾಗಿ ಮೂರು ಅಂಗಗಳನ್ನು ರಚಿಸಲಾಯಿತು. ಅವುಗಳೆಂದರೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ. ಇದೀಗ ನಮ್ಮ ರಾಜ್ಯವಷ್ಟೇ ಅಲ್ಲ, ದೇಶದಲ್ಲಿಯೇ ಈ ಮೂರೂ ಅಂಗಗಳಲ್ಲಿ ಇರಬೇಕಾದ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ಆಗಾಗ್ಗೆ ಏರ್ಪಡುವ ಇವುಗಳ ನಡುವಿನ ಸಂಘರ್ಷ ಇಡೀ ವ್ಯವಸ್ಥೆ ಬಗ್ಗೆ ಜನ ಸಾಮಾನ್ಯರು ಜುಗುಪ್ಸೆ ಪಡುವಂತಹುದಾಗಿದೆ. ಇವುಗಳ ನಡುವಿನ ಶುದ್ಧ ಸಮನ್ವಯವೇ ಸಂಸದೀಯ ವ್ಯವಸ್ಥೆಯ ಗೌರವ ಎನ್ನುವ ಮನೋಭಾವ ಕ್ಷೀಣಿಸುತ್ತಿದೆ.

ಭಾರತ ಇಂದು ನಕಾರಾತ್ಮಕವಾದ ಬೆಳವಣಿಗೆಗೆ ಸಾಕ್ಷಿ ಆಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಗೆಲ್ಲುವವರೆಗೂ ಅವನು ಪ್ರಭು ಆಗಿರುತ್ತಾನೆ. ಗೆಲ್ಲಿಸಿದ ಬಳಿಕ ಜನಪ್ರತಿನಿಧಿಯು ಪ್ರಭುವಿನಂತೆ ಮೆರೆಯುತ್ತಾ ಹೋಗುತ್ತಾನೆ. ಬದಲಾದ ಪರಿಸ್ಥಿತಿಯಲ್ಲಿ ಮತದಾರರಿಗೆ ಹಣ, ಹೆಂಡ ಮತ್ತು ಜಾತಿಯ ಆಮಿಷ ಒಡ್ಡಲಾಗುತ್ತದೆ. ಮತವನ್ನು ಖರೀದಿಸಲಾಗುತ್ತದೆ. ಪ್ರಜೆಗಳು ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳುತ್ತಿದ್ದಾರೆಂಬ ಆಪಾದನೆ. ಪ್ರಜೆಗಳಿಂದ ಅಭ್ಯರ್ಥಿಗಳುಕಲುಷಿತರಾದರೋ ಅಥವಾ ಅಭ್ಯರ್ಥಿಗಳಿಂದ ಮತದಾರರು ಕಲುಷಿತರಾದರೋ! ಎಂಬ ಜಿಜ್ಞಾಸೆ. ಇದು ಬೀಜ–ವೃಕ್ಷ ನ್ಯಾಯದಂತೆ. ಇಬ್ಬರೂಕಲುಷಿತಗೊಂಡಿರುವುದು ನಿಜ. ಗಣತಂತ್ರದಲ್ಲಿ ಕು-ತಂತ್ರಗಳೇ ಪ್ರಾಬಲ್ಯವನ್ನು ಪಡೆಯುತ್ತಿವೆ. ಚುನಾವಣೆಯ ಹಿನ್ನೆಲೆಯಲ್ಲಿ ತಂತ್ರಗಳು ಸಾಮಾನ್ಯ. ಆದರೆ ಕುತಂತ್ರಗಳು ಎಂದಿಗೂ ಶೋಭಾಯಮಾನ ಅಲ್ಲ. ಶಾಸಕಾಂಗ ತನಗಿರುವ ಬಹುಮತದ ಜತೆಯಲ್ಲಿ ಸೂಕ್ತವಾದ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಸಂದರ್ಭಕ್ಕೆ ತಕ್ಕಂತೆ ಶಾಸನಗಳನ್ನು ಮಾಡುವ ಅಧಿಕಾರವನ್ನು ಒಳಗೊಂಡಿರುತ್ತದೆ. ಶಾಸನಗಳನ್ನು ಮಾಡುವವರೇ ಶಾಸನಗಳನ್ನು ಮುರಿಯುತ್ತಿರುವುದು ಶೋಚನೀಯ. Law makers are becoming Law breakers ಎನ್ನುವುದು ಜನಜನಿತವಾಗಿದೆ. ಶಾಸಕಾಂಗ ರೂಪಿಸಿದ ಶಾಸನಗಳನ್ನು ಕಾರ್ಯಾಂಗ ಅನುಷ್ಠಾನಗೊಳಿಸುತ್ತದೆ. ಶಿಸ್ತನ್ನು ಕಾಪಾಡಿ, ಆರ್ಥಿಕ ಮತ್ತು ಸಾಮಾಜಿಕಅಭಿವೃದ್ಧಿಯನ್ನು ಹೆಚ್ಚಿಸಿ, ವಿದೇಶಾಂಗದ ನೀತಿಯನ್ನು ನಿರ್ದೇಶಿಸಿ ಇಡೀ ಆಡಳಿತದ ಮೇಲ್ವಿಚಾರಣೆಯನ್ನು ಮಾಡುವುದೇ ಕಾರ್ಯಾಂಗದ ಅಧಿಕಾರ.

ಭಾರತದ ಅತ್ಯುನ್ನತವಾದ ನ್ಯಾಯಾಲಯವೇ ಸುಪ್ರೀಂ ಕೋರ್ಟ್.ಇಡೀ ದೇಶದಲ್ಲಿನ ನ್ಯಾಯ ನೀಡಿಕೆಯ ಜವಾಬ್ದಾರಿ ಇದರದ್ದಾಗಿರುವುದರಿಂದ ಇಲ್ಲಿನ ತೀರ್ಪುಗಳಿಗೆ ಬೆಲೆ ಕೊಡಬೇಕಿರುವುದು ಉಳಿದ ಎರಡೂ ಅಂಗಗಳ ಕರ್ತವ್ಯವಾಗಬೇಕು. ಇಲ್ಲಿನ ತೀರ್ಪುಗಳು ಒಪ್ಪಿತವಾಗದೆ ಸರ್ಕಾರಗಳು ಹಿಂಬಾಗಿಲ ದಾರಿ ಹುಡುಕಿ ಸುಗ್ರೀವಾಜ್ಞೆಗಳ ಮೂಲಕ ತಮ್ಮ ಉದ್ದೇಶ ಸಾಧಿಸಿಕೊಳ್ಳುವ ಪರಿಪಾಠ ಒಳ್ಳೆಯದಲ್ಲ. ಅಂತಿಮವಾಗಿ ಸೌರ್ವಭೌಮತ್ವವೆನ್ನುವುದು ಸದನಗಳಿಗಿದೆಯಾದರೂ ನ್ಯಾಯಸಮ್ಮತವಾಗಿಯೇ ಸಾರ್ವಜನಿಕ ಆಡಳಿತ ಇರಬೇಕಾಗಿದೆ. ಈ ಮೂರೂ ಅಂಗಗಳು ಅವುಗಳವೇ ಆದ ಜವಾಬ್ದಾರಿಗಳನ್ನು ಹೊಂದಿವೆ. ಅವನ್ನು ಅರಿತು ನಿರ್ವಹಿಸಬೇಕಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗದ ಕಾರ್ಯಕ್ಷಮತೆಯಲ್ಲಿ ಲೋಪ ಉಂಟಾದಾಗ ಮಧ್ಯಪ್ರವೇಶಿಸುವ ಅಧಿಕಾರ ನ್ಯಾಯಾಂಗಕ್ಕಿದೆ. ಎಷ್ಟೋ ಸಾರಿ ನ್ಯಾಯಾಂಗವು ಆಡಳಿತದಲ್ಲಿ ಅನವಶ್ಯಕವಾಗಿ ಮೂಗು ತೂರಿಸುತ್ತದೆ ಎನ್ನುವ ಆರೋಪ ಶಾಸಕಾಂಗದ್ದಾಗಿದೆ. ಶಾಸಕಾಂಗದಲ್ಲಿ ಹಾಗೂಕಾರ್ಯಾಂಗದಲ್ಲಿ ಉಂಟಾಗುವ ಲೋಪದೋಷಗಳನ್ನು ನಿವಾರಿಸುವಲ್ಲಿ ತಾನೇಕೆ ಮಧ್ಯಪ್ರವೇಶಿಸಬಾರದೆನ್ನುತ್ತದೆ ನ್ಯಾಯಾಂಗ. ಆಗಾಗ್ಗೆ ಇಂತಹ ವಿದ್ಯಮಾನಕ್ಕೆ ರಾಷ್ಟ್ರ ಒಳಗಾಗುವುದು ಪ್ರಗತಿಯ ಲಕ್ಷಣವಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಅಂಥದೊಂದು ಸನ್ನಿವೇಶ ಉಂಟಾಗಿದೆ. ವಿರೋಧ ಪಕ್ಷದಲ್ಲಿರುವ ನಾಯಕರು ‘ನಮ್ಮ ಪಕ್ಷ ಆಡಳಿತಕ್ಕೆ ಬಂದಂತಹ ಸಂದರ್ಭದಲ್ಲಿ ನಿಮ್ಮನ್ನು ಜೈಲಿಗೆ ಹಾಕಿಸುತ್ತೇವೆ’ ಎಂದು, ಇದಕ್ಕೆ ವಿರುದ್ಧವಾಗಿ ಅಧಿಕಾರದಲ್ಲಿರುವವರು ‘ಈಗಲೇ ನಿಮ್ಮನ್ನು ಜೈಲಿಗೆ ಅಟ್ಟುತ್ತೇವೆ’ ಎಂದು ಹೇಳುತ್ತಿದ್ದಾರೆ. ಯಾವುದೇ ಜನಪ್ರತಿನಿಧಿಯನ್ನಾಗಲೀ, ಅಧಿಕಾರಿಯನ್ನಾಗಲೀ ಜೈಲಿಗೆ ಕಳುಹಿಸುವ ಅಧಿಕಾರ ಯಾರಿಗೆ ಸಂಬಂಧಪಟ್ಟಿರುತ್ತದೆ ಎಂಬುದು ಇಲ್ಲಿ ಚರ್ಚಾರ್ಹ ಸಂಗತಿ. ಯಾವುದೇ ವ್ಯಕ್ತಿ ಅಪರಾಧ ಅಥವಾ ಆಡಳಿತಾತ್ಮಕ ಲೋಪದೋಷಗಳನ್ನು ಎಸಗಿದಾಗ ಅಂತಹವರನ್ನು ವಿಚಾರಿಸುವ ಅಧಿಕಾರ ನ್ಯಾಯಾಂಗಕ್ಕಿದೆ. ಹೀಗಿರುವಾಗ ಪರಸ್ಪರರು ಒಬ್ಬರನ್ನೊಬ್ಬರು ಜೈಲಿಗೆ ಹಾಕುತ್ತೇವೆನ್ನುವ ಹೇಳಿಕೆಗಳು ನ್ಯಾಯಾಂಗವನ್ನು ಕಡೆಗಣಿಸುವ ಧೋರಣೆಯಾಗುತ್ತದೆ.

ತಮಗಿರುವ ಅಧಿಕಾರವನ್ನು ಬಳಸಿಕೊಂಡು ಅಭಿವೃದ್ಧಿಯನ್ನು ಸಾಧಿಸಲು ಮುಂದಾಗಬೇಕು. ಆಡಳಿತ ಪಕ್ಷವು ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ವಿರೋಧ ಪಕ್ಷವು ಆಡಳಿತ ಪಕ್ಷಕ್ಕೆ ಸಹಕರಿಸಬೇಕಾಗುತ್ತದೆ. ಇದನ್ನು ಬದಿಗೊತ್ತಿ ಸೇಡಿನ ರಾಜಕಾರಣಕ್ಕೆ ಮುಂದಾಗಿರುವುದು ಶೋಚನೀಯ. ಪರಸ್ಪರರು ಜಿದ್ದಾಜಿದ್ದಿಯನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನ ನೀಡುವಂತಾಗಲಿ. ಪ್ರತೀಕಾರದ ರಾಜಕಾರಣದಿಂದ ರಾಜ್ಯಕ್ಕೆ ಬಹಳಷ್ಟು ಅನ್ಯಾಯವಾಗಿದೆ. ರಾಜ್ಯಕ್ಕೆ ಸಿಗಬೇಕಾಗಿರುವ ನೀರಾವರಿ ಯೋಜನೆಗಳು ಭಿನ್ನಾಭಿಪ್ರಾಯದಿಂದಾಗಿ ನನೆಗುದಿಗೆ ಬಿದ್ದಿವೆ. ಸಾಲಮನ್ನಾದಂತಹ ರೈತಪರ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿಲ್ಲ. ಇದರಿಂದಾಗಿ ಕೃಷಿಕ ಸಮುದಾಯ ಸಂಕಷ್ಟ ಎದುರಿಸುತ್ತಿದೆ. ಹೊಸ ರೈಲ್ವೆಮಾರ್ಗಗಳು ರಾಜ್ಯಕ್ಕೆ ಮಂಜೂರಾಗುತ್ತಿಲ್ಲ. ಹೊಸ ಯೋಜನೆಗಳು ಜಾರಿ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ನೆರೆಯ ತಮಿಳುನಾಡು ಸರ್ಕಾರ, ಕೇಂದ್ರದೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಕೋಟಿಗಟ್ಟಲೆ ಅನುದಾನ ಅವರಿಗೆ ದೊರೆಯುತ್ತಿದೆ. ಕೇಂದ್ರದೊಂದಿಗೆ ಸಂಘರ್ಷ ಏರ್ಪಟ್ಟಾಗಲೆಲ್ಲ ರಾಜ್ಯಕ್ಕೆ ತೊಂದರೆ ಉಂಟಾಗಿರುವುದು ಸಹಜವಾಗಿದೆ. ಕೇಂದ್ರದಲ್ಲಿ ರಾಷ್ಟ್ರೀಯ ಪಕ್ಷವೊಂದು ಅಧಿಕಾರದಲ್ಲಿದ್ದಾಗ, ರಾಜ್ಯದಲ್ಲಿ ಮತ್ತೊಂದು ರಾಷ್ಟ್ರೀಯ ಪಕ್ಷ ಅಥವಾ ಸ್ಥಳೀಯ ಪಕ್ಷವನ್ನು ಆಯ್ಕೆ ಮಾಡುವ ಪರಿಪಾಠ ಮತದಾರರದ್ದಾಗಿದೆ. ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಪರಸ್ಪರ ವಿರೋಧ ಪಕ್ಷಗಳಿದ್ದಾಗ ಹೊಸ ಯೋಜನೆಗಳು ಮಂಜೂರಾಗುವುದಿಲ್ಲ. ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಕೂಡ ಸಲ್ಲದು.

ನಮ್ಮ ಮತದಾರರು ಇಲ್ಲಿ ತಮ್ಮ ಜಾಣ್ಮೆಯನ್ನು ಮೆರೆಯಬೇಕಾಗುತ್ತದೆ. ತಮಗೆ ಇಷ್ಟವೆನಿಸುವ ಪಕ್ಷಕ್ಕೆ ಮತ ಚಲಾಯಿಸುವ ಅಧಿಕಾರ ಪ್ರಜೆಗಳಿಗೆ ಇದೆ. ಈ ಹಿಂದೆ ಆಡಳಿತ ನಡೆಸಿದ ಪಕ್ಷಗಳು ತಮ್ಮ ಅಧಿಕಾರದ ಅವಧಿಯಲ್ಲಿ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುತ್ತ, ಸರ್ವಜನಾಂಗವನ್ನು ಸಮಾನ ದೃಷ್ಟಿಕೋನದಿಂದ ನೋಡಿವೆ. ಅದರಂತೆ ಸದ್ಯದಲ್ಲಿ ಆಡಳಿತ ನಡೆಸುತ್ತಿರುವವರು ಜನಪರವಾದ ಹೊಸಹೊಸ ಯೋಜನೆಗಳನ್ನು ಜಾರಿಗೊಳಿಸುತ್ತ, ಪಕ್ಷದೊಳಗೆ ಗುಂಪುಗಾರಿಕೆಯನ್ನು ನಿಯಂತ್ರಿಸುತ್ತ, ಐದು ವರ್ಷದ ಅಧಿಕಾರವನ್ನು ಸಾಂಗವಾಗಿ ಪೂರೈಸಿದ ಕೀರ್ತಿಗೆ ಒಳಗಾಗುತ್ತಿದ್ದಾರೆ.

ತಮಗಿರುವ ಅಧಿಕಾರವು ದ್ವೇಷ ಸಾಧನೆಗೆ ಬಳಕೆ ಆಗದೆ ಲಭ್ಯವಿರುವ ಬುದ್ಧಿ ಮತ್ತು ಸಾಮರ್ಥ್ಯಗಳನ್ನು ಉಪಯೋಗಿಸಿಕೊಂಡು ಜನಸಮುದಾಯಗಳ ಕುಂದು-ಕೊರತೆಗಳನ್ನು ನಿವಾರಿಸಲು ಮುಂದಾಗಬೇಕಿದೆ. ಪರಸ್ಪರ ಕೆಸರೆರಚಾಟ ಕೊನೆಗೊಳ್ಳಲಿ. ವಿಧಾಯಕ ವಿಚಾರಗಳತ್ತ ಮತ್ತಷ್ಟು ಗಮನಹರಿಸುವಂತಾಗಲಿ. ರಾಜಕೀಯ ಬದಿಗಿಟ್ಟು, ಅಭಿವೃದ್ಧಿ ಕಾರ್ಯಗಳು ಜಾರಿಗೊಳ್ಳುವುದೇ ಸದೃಢ ಪ್ರಜಾಪ್ರಭುತ್ವದ ಲಕ್ಷಣ ಎನ್ನುವುದನ್ನು ಎಲ್ಲ ಪಕ್ಷಗಳ ಧುರೀಣರು ನೆನಪಲ್ಲಿಟ್ಟುಕೊಳ್ಳಬೇಕೆಂಬುದೇ ಪ್ರಜೆಗಳ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT