ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಠಡಿಗಾಗಿ ಶಾಲಾ ಮಕ್ಕಳ ಪ್ರತಿಭಟನೆ

Last Updated 30 ಆಗಸ್ಟ್ 2017, 5:56 IST
ಅಕ್ಷರ ಗಾತ್ರ

ಬಾದಾಮಿ: ಸಮೀಪದ ರೈಲ್ವೆ ಸ್ಟೇಷನ್‌ ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಕೊಠಡಿಗಾಗಿ ಆಗ್ರಹಿಸಿ ಮಂಗಳವಾರ ವರ್ಗಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿದರು.
ನಮ್ಮ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಚಾವಣಿಯಿಂದ ಸಿಮೆಂಟ್‌ ಬೀಳುವುದರಿಂದ ಭಯ ಉಂಟಾಗಿದೆ. ಶಾಲೆಯ ಹಿಂದೆ ರೈಲ್ವೆ ಸ್ಟೇಷನ್‌ ಇದೆ. ಶಾಲೆಯ ಮುಂದೆ ಮುಖ್ಯ ರಸ್ತೆ ಇದೆ. ಶಾಲೆಗೆ ಬರುವುದೇ ಭಯ ಉಂಟಾಗಿದೆ. ನಾಲ್ಕು ಜನ ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ವಾಹನ ಹರಿದು ಗಾಯಗೊಂಡ ಘಟನೆಗಳು ಜರುಗಿವೆ. ಬೇರೆ ಸ್ಥಳದಲ್ಲಿ ಹೊಸ ಕೊಠಡಿಗಳನ್ನು ನಿರ್ಮಿಸಿ ಶಿಕ್ಷಣ ಕಲಿಯಲು ಸೌಲಭ್ಯ ಒದಗಿಸಬೇಕೆಂದು ವಿದ್ಯಾರ್ಥಿಗಳು ಹೇಳಿದರು.

ಶಾಲಾ ಕಟ್ಟಡ ದುರಸ್ತಿ ಬಗ್ಗೆ 2014ರಲ್ಲಿಯೇ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಧಿಕಾರಿಗಳು ಬಂದು ಭೇಟಿ ನೀಡಿದ್ದಾರೆ. ಯಾವುದೇ ಕ್ರಮ ಕೈಗೊಂಡಿಲ್ಲ ಸಮೀಪದಲ್ಲಿ ಗ್ರಾಮಠಾಣ ನಿವೇಶನ ಇದೆ. ಶಾಲಾ ಕಟ್ಟಡಕ್ಕೆ ಇದನ್ನು ಮಂಜೂರು ಮಾಡಬೇಕು ಎಂದು 2016ರಲ್ಲಿಯೇ ಜಿಲ್ಲಾಧಿಕಾರಿ, ಡಿಡಿಪಿಐ, ತಾಲ್ಲೂಕು ಪಂಚಾಯ್ತಿ  ಮತ್ತು ಗ್ರಾಮ ಪಂಚಾಯ್ತಿಗೆ ಮನವಿ ಕೊಟ್ಟಿದೆ. ಇದುವರೆಗೂ ಯಾರು ಶಾಲಾ ಕಟ್ಟಡದ ಬಗ್ಗೆ ಯಾವ ಅಧಿಕಾರಿಗಳೂ ಸೂಕ್ತ ಕ್ರಮವನ್ನು ಕೈಗೊಂಡಿಲ್ಲ ಎಂದು ವಿಠ್ಠಲ ಬೆಳ್ಳಿಗುಂಡಿ ಹೇಳಿದರು.

ಶಾಲಾ ಕಟ್ಟಡದ ನಿವೇಶನಕ್ಕೆ  ಆಡಗಲ್‌ ಗ್ರಾಮ ಪಂಚಾಯ್ತಿಗೆ ಶಾಲಾ ಎಸ್‌ಡಿಎಂಸಿಯಿಂದ ಮನವಿ ಕೊಟ್ಟು ವರ್ಷವಾದರೂ ಸಹ ಅವರು ಗ್ರಾಮಠಾಣ ಜಾಗೆ ಸರ್ವೆ ನಂ. 75ರಲ್ಲಿ 19 ಗುಂಟೆ ಮಂಜೂರು ಮಾಡಿಲ್ಲ. ಅಧಿಕಾರಿಗಳು ಮುತುವರ್ಜಿ ವಹಿಸಿಲ್ಲ ಎಂದು ಪೋಷಕರು ಆರೋಪಿಸಿದರು.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 125 ಮಕ್ಕಳು 6 ಜನ ಶಿಕ್ಷಕರು ಇದ್ದಾರೆ. ಬೋಧನೆಗೆ 8 ಕೊಠಡಿಗಳು ಬೇಕು. ಆದರೆ ಈಗ ನಾಲ್ಕು ಕೊಠಡಿಗಳಲ್ಲಿ ವರ್ಗಗಳು ನಡೆಯುತ್ತವೆ. ಕೊಠಡಿಗಳು ಶಿಥಿಲ ಗೊಂಡಿರುವುದರಿಂದ ಬೆಳಿಗ್ಗೆ 1ರಿಂದ 4 ನೇ ತರಗತಿ ಮದ್ಯಾಹ್ನ 5ರಿಂದ 7ನೇ ತರಗತಿ ವರ್ಗಗಳು ನಡೆಯುತ್ತಿವೆ. ಕೊಠಡಿಗಳು ಶಿಥಿಲಗೊಂಡಿರುವ ಬಗ್ಗೆ ಬಿಆರ್‌ಸಿ ಮತ್ತು ಬಿಇಒ ಕಾರ್ಯಾಲಯಕ್ಕೆ ತಿಳಿಸಿರುವೆ ಎಂದು ಮುಖ್ಯ ಶಿಕ್ಷಕ ಮುರಲಿಧರ ಇನಾಂದಾರ ಹೇಳಿದರು.

ರೈಲ್ವೆ ಸ್ಟೇಷನ್‌ನಲ್ಲಿ ಸಾಮಾನ್ಯವಾಗಿ ಪರಿಶಿಷ್ಟಜಾತಿ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿನ ಬಡ ಮಕ್ಕಳು ಶಾಲೆಗೆ ಬಾರದಂತಾಗಿದೆ. ಇನ್ನೂರಕ್ಕೂ ಅಧಿಕ ಮನೆಗಳಿಗೆ ಇದನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸ ಬೇಕು ಎಂದು ರೈಲ್ವೆ ಸ್ಟೇಶನ್‌ ನಿವಾಸಿಗಳು ಒತ್ತಾಯಿಸಿದರು.

ಮಾರುತಿ ದಮ್ಮೂರ, ರಾಘವೇಂದ್ರ ಬೆಳ್ಳಿಗುಂಡಿ, ಕುಮಾರ ಚಿಕ್ಕೊಪ್ಪ, ಮಂಜುನಾಥ ಹಳೇಮಠ, ಅರ್ಜುನ ಬಾದಾಮಿ, ಪುಂಡಲೀಕ, ಮುಷ್ಟಿಗೇರಿ, ಮಂಜುನಾಥ ಬಂಡಿವಡ್ಡರ, ಸಿದ್ದಪ್ಪ ಬಾದಾಮಿ, ಕೋನಪ್ಪ ನೈನಾಪೂರ, ರಾಜು ಬಾದಾಮಿ ಪೋಷಕರು ಮತ್ತು ಯುವಕರು ಇದ್ದರು.

ಡಿಡಿಪಿಐ ಭೇಟಿ: ಕೆ.ಎಸ್‌. ಕರಿಚನ್ನವರ  ಸ್ಥಳಕ್ಕೆ ಭೇಟಿ ನೀಡಿ ರೈಲ್ವೆ ಸ್ಟೇಷನ್‌ ಸರ್ಕಾರಿ ಪ್ರಾಥಮಿಕ ಶಾಲೆಯ 6 ಕೊಠಡಿಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯ ಆಯುಕ್ತರಿಗೆ ತಿಳಿಸಲಾಗಿದೆ. ಮೂರು ತಿಂಗಳ ಒಳಗೆ ನಿವೇಶನ ಮಂಜೂರು ಮಾಡಿಸಿ ಕಟ್ಟಡವನ್ನು ಆರಂಭಿಸುವ ಕುರಿತು ಭರವಸೆ ನೀಡಿದಾಗ ಮಕ್ಕಳು ಧರಣಿಯನ್ನು ವಾಸಪ್‌ ಪಡೆದರೆಂದು ಬಿಇಒ ಎಂ.ಪಿ. ಮಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT