ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ನಿಡದಿದ್ದರೆ ತೋಟದಲ್ಲಿಯೇ ಧರಣಿ

Last Updated 30 ಆಗಸ್ಟ್ 2017, 7:28 IST
ಅಕ್ಷರ ಗಾತ್ರ

ಅರಸೀಕೆರೆ: ಸತತ ಬರಗಾಲದ ಪರಿಣಾಮ ತಾಲ್ಲೂಕಿನಲ್ಲಿ ಸುಳಿ ಬಿದ್ದು ನಾಶವಾಗಿರುವ ತೆಂಗಿನ ಮರಗಳಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡದಿದ್ದಲ್ಲಿ ತೆಂಗಿನ ತೋಟದಲ್ಲಿಯೇ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಎಚ್ಚರಿಕೆ ನೀಡಿದ್ದಾರೆ.

ತೇವಾಂಶ ಕೊರತೆಯಿಂದ ಫಸಲು ಬಿಡುತ್ತಿದ್ದ ಸುಮಾರು 14ಲಕ್ಷಕ್ಕೂ ಅಧಿಕ ತೆಂಗಿನ ಮರಗಳು ಸುಳಿ ಬಿದ್ದು ನೆಲ ಕಚ್ಚಿವೆ. ಇದರಿಂದ ತೆಂಗು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥಹ ಕಷ್ಟ ಪರಿಸ್ಥಿಯಲ್ಲೂ ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸದೆ ಜಡ ನಿದ್ರೆಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಎಳೆಯಾಗಿ ಬಿಡಿಸಿ ವಿವರಿಸಿದ್ದೇನೆ. ಸಂಬಂಧಪಟ್ಟ ಸಚಿವರು ಜಿಲ್ಲಾಧಿಕಾರಿಗಳಿಂದ ಸಮಗ್ರ ಮಾಹಿತಿ ತರಿಸಿಕೊಂಡು ಸೂಕ್ತ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದರು.

ಆದರೆ ಅದು ಈಗ ಹುಸಿ ಆಗಿದೆ. ತಾಲ್ಲೂಕಿನಲ್ಲಿ ಸುಮಾರು 29 ಲಕ್ಷಕ್ಕೂ ಅಧಿಕ ತೆಂಗಿನ ಮರಗಳಿದ್ದು, ಅವುಗಳಲ್ಲಿ ಶೇಕಡ 70ಕ್ಕೂ ಹೆಚ್ಚು ನಾಶವಾಗಿವೆ. ಸರ್ಕಾರವಾಗಲಿ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳಾಗಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸದೇ ಅವರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೆಂಗಿನ ಬೆಳೆ ಸಮಗ್ರ ಸಮೀಕ್ಷೆ ನಡೆಸಿ ₨672 ಕೋಟಿ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ನಂತರ ಮತ್ತೆ ಜಿಲ್ಲಾಧಿಕಾರಿ ಕಳಿಸಿದ ವರದಿಯಲ್ಲಿ ನೈಜ ಸಮೀಕ್ಷೆ ದಾರಿ ತಪ್ಪಿಸಲು ಫಾರಂ ನಂ 11ರಲ್ಲಿ ಇಲಾಖೆಯ ಅಧಿಕಾರಿಗಳು ಪಿಎನ್‌ಡಿಆರ್‌ಎಫ್‌ ಮಾರ್ಗದರ್ಶನದಂತೆ ಸಮಿಕ್ಷಾ ವರದಿ ನಿಡಿದ್ದಾರೆ. ಇದೊಂದು ರೈತರ ಕಣ್ಣೊರೊಸುವ ತಂತ್ರ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ನುಡಿದರು.

ತೆಂಗಿನ ಸಸಿ ಬೆಳೆಸಲು ಸುಮಾರು 8ರಿಂದ 10 ವರ್ಷ ಬೇಕಾಗುತ್ತದೆ. ಅಂತಹ ಮರಗಳು ಪ್ರಕೃತಿಯ ವಿಕೋಪದಿಂದ ನಾಶವಾಗಿದ್ದು, ಪ್ರತಿ ವರ್ಷ ಸರ್ಕಾರಕ್ಕೆ ಬರುತ್ತಿದ್ದ ಮಾರುಕಟ್ಟೆ ತೆರಿಗೆ ಆದಾಯ ಕೂಡ ನಷ್ಟವಾಗುತ್ತಿದೆ. ಈ ವೇಳೆ ರೈತರ ನೆರವಿಗೆ ಬರುವುದು ಸರ್ಕಾರದ ಕರ್ತವ್ಯ.

ಸಂಸದ  ಎಚ್‌.ಡಿ. ದೇವೇಗೌಡರೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅವರೂ ಪರಿಹಾರ ಘೋಷಣೆ ಮಾಡದಿರುವುದು ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಮುಖ್ಯಮಂತ್ರಿ ಬಳಿ ತಾಲ್ಲೂಕಿನ ರೈತರ ನಿಯೋಗ ಕರೆದೊಯ್ಯುವುದಾಗಿ ತಿಳಿಸಿದ ಅವರು, ಇದಕ್ಕೂ ಸ್ಪಂದಿಸದಿದ್ದರೆ ನಾಶವಾಗಿರುವ ರೈತರ ತೆಂಗಿನ ತೋಟದಲ್ಲಿಯೇ ಅಹೋರಾತ್ರಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾಬಾಯಿ ಚಂದ್ರನಾಯಕ್‌, ಮುಖಂಡರಾದ ಯಳವಾರೆ ಕೇಶವಮೂರ್ತಿ, ಶೇಖರ್‌ ನಾಯಕ್‌, ಸತೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT