ಹಿಂಸೆಗೆ ಮೂಲವೇ ಭಯ

ಯಾವುದೇ ಸಿದ್ಧಾಂತ, ಮತ–ಧರ್ಮವಾಗಲೀ ಅಥವಾ ನಾಯಕರಾಗಲೀ ರಾಜಕೀಯ ಪಕ್ಷವಾಗಲೀ ಹಿಂಸೆಯನ್ನು ನಿಲ್ಲಿಸಲು ಆಗದು. ಇದು ಕೃಷ್ಣಮೂರ್ತಿಯವರ ಖಚಿತ ನಿಲುವು.

ಹಿಂಸೆಗೆ ಮೂಲವೇ ಭಯ

ತತ್ತ್ವಜ್ಞಾನಿ ಜೆ. ಕೃಷ್ಣಮೂರ್ತಿ ಅವರು ಭಾರತದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಹಲವು ಉಪನ್ಯಾಸಗಳನ್ನು ನೀಡಿದ್ದಾರೆ. 1969ರಿಂದ 1984ರವರೆಗಿನ ಹಲವು ಉಪನ್ಯಾಸಗಳು ಮತ್ತು ಪ್ರಶ್ನೋತ್ತರಗಳ ಸಂಗ್ರಹವು ಪುಸ್ತಕರೂಪದಲ್ಲಿಯೂ ಪ್ರಕಟವಾಗಿದೆ.

ಅಂಥ ಒಂದು ಕೃತಿಯ ಹೆಸರು: ‘Why Are You Being Educated?’. ಶೀರ್ಷಿಕೆಯೇ ಮಾರ್ಮಿಕವಾಗಿದೆ: ‘ನೀವು ಶಿಕ್ಷಣವನ್ನು ಪಡೆಯುತ್ತಿರುವುದಾದರೂ ಏಕೆ?’ ಅಥವಾ ‘ನೀವು ಶಿಕ್ಷಿತರಾಗುತ್ತಿರುವುದು ಏಕೆ?’ – ಎಂದೂ ಅನುವಾದಿಸಬಹುದೆನಿಸುತ್ತದೆ. ಇದು ಕೇವಲ ಪ್ರಶ್ನೆಯಷ್ಟೆ ಆಗಿದೆ ಎಂದೆನಿಸದು; ಯಾವುದೋ ಒಂದು ಗಹನವಾದ ಪ್ರಶ್ನೆಗೆ ನೀಡಿದ ಉತ್ತರವೇ ಆಗಿದೆ ಎಂದೆನಿಸದಿರದು. ಇಡಿಯ ಸಂದರ್ಭವನ್ನು ಮನಗಂಡು ಅದಕ್ಕೆ ಪ್ರತಿಕ್ರಿಯಿಸಿದ ಮಾತನ್ನಾಗಿಯೂ ಇದನ್ನು ತೆಗೆದುಕೊಳ್ಳಬಹುದು. ಶಿಕ್ಷಣವನ್ನು ಪಡೆದವರ ವರ್ತನೆಗಳನ್ನು ಕಂಡು, ಬೇಸತ್ತು, ಉದ್ಗರಿಸಿದ ವಿಷಾದಯೋಗದ ಸೂತ್ರವೇ ಈ ಮಾತು ಎಂದರೆ ಅದೇನೂ ಅತಿಯಾದ ಕಲ್ಪನೆ ಎನಿಸದೆನ್ನಿ!

ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯದಲ್ಲಿ 1969ರಲ್ಲಿ ನೀಡಿರುವ ಉಪನ್ಯಾಸ ಈ ಕೃತಿಯಲ್ಲಿ ಮೊದಲನೆಯದ್ದು. ಅದರ ಕೇಂದ್ರವಿಷಯ ನಮ್ಮ ಈಗಿನ ಕಾಲಕ್ಕೂ ಪ್ರಸ್ತುತವಾಗಿದೆ; ಅಷ್ಟೇಕೆ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆಯೆನ್ನಿ! ‘ಹಿಂಸೆ.’ ಇದೇ ಆ ವಿಷಯ. ಮನುಷ್ಯ ಏಕಾದರೂ ಹಿಂಸೆಗೆ ತೊಡಗುತ್ತಾನೆ? ಇದು ಮುಖ್ಯ ಪ್ರಶ್ನೆ.

ಪ್ರಪಂಚದುದ್ದಕ್ಕೂ ಮನುಷ್ಯ ಹಿಂಸೆಯನ್ನು ಹರಡುತ್ತಲೇ ಇದ್ದಾನೆ. ಹಿಂಸೆಯಲ್ಲಿ ಬದುಕುವುದನ್ನೇ ಅವನು ಏಕಾದರೂ ಇಷ್ಟಪಡುತ್ತಾನೆ? ಹಿಂಸೆಗೆ ಕಾರಣಗಳಾದರೂ ಏನು? – ಈ ಪ್ರಶ್ನೆಗಳಿಂದ ಉಪನ್ಯಾಸ ಆರಂಭ. ಜಗತ್ತಿನ ಹಲವರು ಚಿಂತಕರು ಹಿಂಸೆಗೆ ಕಾರಣಗಳೇನಿರಬಹುದು ಎಂದು ಆಲೋಚಿಸಿದ್ದಾರೆ. ಜನಸಂಖ್ಯೆಯ ಹೆಚ್ಚಳ, ಆಧುನಿಕ ಜೀವನಪದ್ಧತಿ, ಹೆಚ್ಚುತ್ತಿರುವ ಜನಸಾಂದ್ರತೆ, ಮನುಷ್ಯನ ಸಂಪೂರ್ಣವಿಕಾಸಕ್ಕೆ ನೆರವಾಗದ ತಾಂತ್ರಿಕ ಅಭಿವೃದ್ಧಿ, ಸಮಾಜದಲ್ಲಿ ಆಗುತ್ತಿರುವ ಬದಲಾವಣೆ, ಧಾರ್ಮಿಕ ಕ್ಷೇತ್ರದಲ್ಲಿಯ ಸ್ಥಿತ್ಯಂತರಗಳು, ವಿಜ್ಞಾನ, ಶಿಕ್ಷಣ – ಹೀಗೆ ಹಲವು ವಿವರಗಳನ್ನು ಗುರುತಿಸುತ್ತಾರೆ.

ಹೀಗೆಂದು ಇತಿಹಾಸದಲ್ಲಿ ಹಿಂಸೆಯ ಅನಾಹುತ ಪರಂಪರೆಯ ಬಗ್ಗೆ ಯಾರೂ ಗುರುತಿಸಿಯೇ ಇಲ್ಲ ಎಂದೇನೂ ಇಲ್ಲ. ಹಲವರು ಅದರ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದಾರೆ; ಹಲವು ಸಿದ್ಧಾಂತಗಳು ಅದನ್ನು ನಿಲ್ಲಿಸಲು ಹುಟ್ಟಿಕೊಂಡಿವೆ ಕೂಡ. ಆದರೂ ಹಿಂಸೆಯನ್ನು ನಿಲ್ಲಿಸಲಾಗಿಲ್ಲ. ಹಾಗಾದರೆ ಅದನ್ನು ನಿಲ್ಲಿಸುವ ಬಗೆ ಏನು? ಹೇಗೆ?

ಯಾವುದೇ ಸಿದ್ಧಾಂತ, ಮತ–ಧರ್ಮವಾಗಲೀ ಅಥವಾ ನಾಯಕರಾಗಲೀ ರಾಜಕೀಯ ಪಕ್ಷವಾಗಲೀ ಹಿಂಸೆಯನ್ನು ನಿಲ್ಲಿಸಲು ಆಗದು. ಇದು ಕೃಷ್ಣಮೂರ್ತಿಯವರ ಖಚಿತ ನಿಲುವು. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೆ? ಮನುಷ್ಯನ ಅಂತರಂಗದಲ್ಲಿ ಬದಲಾವಣೆ ಆಗದ ಹೊರತು ಅವನ ಹಿಂಸಾಪ್ರವೃತ್ತಿ ಕೊನೆಗೊಳ್ಳದು. ಮನುಷ್ಯನಲ್ಲಿ ಹತ್ತುಹಲವು ಒಡಕುಗಳು ನೆಲೆಯೂರಿವೆ. ಈ ಒಡಕುಗಳ ಕಾರಣದಿಂದಾಗಿಯೇ ಅವನಲ್ಲಿ ಸಂಘರ್ಷ ಹುಟ್ಟುತ್ತಿದೆ. ಈ ಸಂಘರ್ಷವೇ ಹಿಂಸೆಯಾಗಿ ಅಭಿವ್ಯಕ್ತವಾಗುತ್ತಿದೆ. ಆದುದರಿಂದ ಮನುಷ್ಯ ಮೊದಲು ಜೀವನವನ್ನು ಒಡಕುಗಳ ಮೂಟೆಯನ್ನಾಗಿ ನೋಡುವಂಥ ಅವಿವೇಕದಿಂದ ಹೊರಬರಬೇಕು. ಅವನ ಒಂದೊಂದು ಚಟುವಟಿಕೆಯಲ್ಲೂ ಪ್ರತ್ಯೇಕತೆಯ ಬುದ್ಧಿಯೇ ಕ್ರಿಯಾಶೀಲವಾಗಿರುವುದು. ಒಂದೊಂದಕ್ಕೂ ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಿಕೊಂಡಿದ್ದಾನೆ: ವ್ಯಾಪಾರಕ್ಕೆ ಪ್ರತ್ಯೇಕವಾದ ಜೀವನ, ಧರ್ಮಕ್ಕೆ ಪ್ರತ್ಯೇಕವಾದ ಜೀವನ, ಕುಟುಂಬಕ್ಕೆ ಪ್ರತ್ಯೇಕ ಜೀವನ, ಸಮಾಜಕ್ಕೆ ಪ್ರತ್ಯೇಕ ಜೀವನ, ಸುಖಕ್ಕೆ ಪ್ರತ್ಯೇಕ ಜೀವನ, ದುಃಖಕ್ಕೆ ಪ್ರತ್ಯೇಕ ಜೀವನ, ವಿಜ್ಞಾನಕ್ಕೆ ಪ್ರತ್ಯೇಕ ಜೀವನ, ಧರ್ಮಕ್ಕೆ ಪ್ರತ್ಯೇಕ ಜೀವನ, ಹೀಗೆ. ಈ ಒಂದೊಂದು ಕೋಣೆಯೂ ಪರಸ್ಪರ ವಿರುದ್ಧವಾದುದೆನ್ನುವಂತೆ ಅವನು ರೂಪಿಸಿಕೊಂಡಿರುವುದರಿಂದ ಅವನಲ್ಲಿ ಸಂಘರ್ಷ ಅನಿವಾರ್ಯ. ಈ ಪ್ರತ್ಯೇಕತೆ – ದ್ವೈತಬುದ್ಧಿಯೇ – ಹಿಂಸೆಗೆ ಮೂಲಪ್ರಚೋದಕವಾಗಿರುವಂಥದ್ದು.

ಮನುಷ್ಯನಲ್ಲಿ ಸಂಪೂರ್ಣ ಪರಿವರ್ತನೆ ಆಗದ ವಿನಾ ಹಿಂಸೆಯಿಂದ ಅವನಿಗೆ ಮುಕ್ತಿ ಇಲ್ಲ – ಎಂದು ಘೋಷಿಸುತ್ತಾರೆ, ಕೃಷ್ಣಮೂರ್ತಿ. ಮನುಷ್ಯನ ಅಂತರಂಗದಲ್ಲಿ ಮೂಡಿರುವ ಒಡಕುಗಳು ಅಳಿಯಬೇಕು. ಪ್ರತ್ಯೇಕತೆಯ ಭಾವದಿಂದ ಹುಟ್ಟಿಕೊಳ್ಳುವ ಭಯ ಅವನಲ್ಲಿ ಮಾಯವಾಗಬೇಕು. ಆಗಷ್ಟೆ ಹಿಂಸಾಪ್ರವೃತ್ತಿಯಿಂದ ಅವನು ವಿಮುಖನಾಗಲು ಆದೀತು, ಎನ್ನುತ್ತಾರೆ ಅವರು.

Comments
ಈ ವಿಭಾಗದಿಂದ ಇನ್ನಷ್ಟು

ವೈಶಾಖದ ಹುಣ್ಣಿಮೆ
ಬಾಲರು ಯಾರು?

ಶಿವರಾತ್ರಿಯಂದು ನಾವು ಜಾಗರಣೆ ಮಾಡುತ್ತೇವೆ, ಅಲ್ಲವೆ? ರಾತ್ರಿ ಮುಂದುವರೆದಂತೆ ನಮಗೆ ನಿದ್ರೆಯ ಸೆಳೆತ ಹೆಚ್ಚುತ್ತಹೋಗುವುದು ಸಹಜ. ಆಗ ‘ಈ ರಾತ್ರಿ ಇನ್ನೂ ಮುಗಿಯುತ್ತಲೇ ಇಲ್ಲ!...

20 Jan, 2018
ಗಾಯನಕ್ಕೆ ಸಿದ್ಧವಾದ ರಾಮಕಥೆ

ರಾಮಾಯಣ ರಸಯಾನ
ಗಾಯನಕ್ಕೆ ಸಿದ್ಧವಾದ ರಾಮಕಥೆ

20 Jan, 2018
’ನಮಗೆ ಕಾವೇರಿ ನೀರೇ ಬೇಡ! ’

ವಿಡಂಬನೆ
’ನಮಗೆ ಕಾವೇರಿ ನೀರೇ ಬೇಡ! ’

13 Jan, 2018

ಅಧ್ಯಯನ
ಸೂರ್ಯ: ಜಗತ್ತಿನ ಕಣ್ಣು

ಸೂರ್ಯನು ಹುಟ್ಟಿದ ಕೂಡಲೇ ಕತ್ತಲು ಸರಿಯುತ್ತದೆ; ಎಲ್ಲರ ಕಣ್ಣಿಗೂ ಕಾಣುವಂಥವನು ಅವನು; ಅವನ ಹುಟ್ಟಿಗೂ ಜಗತ್ತಿನ ಆಗುಹೋಗುಗಳಿಗೂ ನೇರ ಸಂಬಂಧವಿದೆ. ಇವೆಲ್ಲವೂ ಸೂರ್ಯನ ಭೌತಿಕ ವಿವರಗಳು. ...

13 Jan, 2018
ಕಲೆಗಾಗಿ ಕಲೆ ಅಲ್ಲ!

ರಾಮಾಯಣ ರಸಾಯನ 22
ಕಲೆಗಾಗಿ ಕಲೆ ಅಲ್ಲ!

13 Jan, 2018